ಮೂಡುಬಿದಿರೆಯ ಇರುವೈಲು ಕ್ಷೇತ್ರದ ಶ್ರೀ ಹೊಸಮರಾಯ ದೈವವು ಎಂಟು ಶತಮಾನಗಳ ಇತಿಹಾಸ ಹೊಂದಿರುವ ಅಪರೂಪದ ದೈವಶಕ್ತಿಯಾಗಿದೆ. ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅಭಿಮುಖವಾಗಿರುವ ಬಿಳಿಕಲ್ಲು ಗುಡ್ಡದಲ್ಲಿ ನೆಲೆಸಿರುವ ಈ ದೈವದ ಸನ್ನಿಧಿಯ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವವು ನಾಳೆ ನಡೆಯಲಿದೆ.

ಮೂಡುಬಿದಿರೆ: ತಾಲೂಕು ಕೇಂದ್ರ ಮೂಡುಬಿದಿರೆಯಿಂದ ಹನ್ನೊಂದು ಕಿ.ಮೀ ದೂರದಲ್ಲಿ ಹಸಿರ ಮಡಿಲಲ್ಲಿರುವ ಇರುವೈಲು ಕ್ಷೇತ್ರದ ಉದ್ಭವ ಲಿಂಗ ರೂಪಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಇತಿಹಾಸ ಪ್ರಸಿದ್ಧ. ಈ ಸನ್ನಿಧಿಗೆ ಅಭಿಮುಖವಾಗಿರುವ ಬಿಳಿಕಲ್ಲು ಗುಡ್ಡದಲ್ಲಿ ನೆಲೆನಿಂತಿರುವ ದೇವಿಯ ಸಪರಿವಾರ ದೈವ ಶಕ್ತಿಯೇ ಶ್ರೀ ಹೊಸಮರಾಯ ದೈವ.

ನಂಬಿಕೆಯ ನೆಲವಾದ ತುಳುನಾಡಿನಲ್ಲಿ ಇರುವೈಲನ್ನೇ ತನ್ನ ಮೂಲ ಕ್ಷೇತ್ರವಾಗಿಸಿಕೊಂಡು ಇಲ್ಲಿ ಮಾತ್ರ ಎಂಬಂತೆ ನೆಲೆ ನಿಂತಿರುವ ಅಪರೂಪದ ಹೊಸ ದೈವಶಕ್ತಿಯೇ ಈ ಹೊಸಮರಾಯ ದೈವ.

ಎಂಟು ಶತಮಾನಗಳ ಹಿಂದೆ ಇಲ್ಲಿನ ಕುವೆಸ್ಥಳ ಬಾಳಿಕೆಯ ಮನೆಯ ಯಜಮಾನನಿಗೆ ಗೋಚರಿಸಿ ತನ್ನ ಕಾರಣಿಕವನ್ನು ಪ್ರದರ್ಶಿಸುತ್ತಾ ಗುಡ್ಡದಲ್ಲಿ ಏಳು ಕೋಲು ಎತ್ತರದ ಮಾಡ ನಿರ್ಮಿಸಿಕೊಂಡು ಆರಾಧನೆಗೊಳ್ಳುತ್ತಿರುವ ದೈವ ಸಾನಿಧ್ಯವಿದು. ಜತೆಗೆ ಸಾರಮಣಿ ದೈವಗಳ ಸಾನಿಧ್ಯವೂ ಇದೆ. ಚೌಕಮೂಲೆಯ ಬಾವಿ, ಪಿಲಿಪಂಜರ, ನಾಗ ಸಾನಿಧ್ಯ ಕೆರೆ, ದೈವ ಕಾಣಿಸಿಕೊಂಡ ಬಂಡೆ, ಸಂಕುಮಜಲಿನ ಹೊಸಮಾರು ಗದ್ದೆ , ಮರಾಯಿ ಕಲ್ಲು ಹೀಗೆ ದೈವದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಅನೇಕ ಸ್ಥಳಗಳು ಹತ್ತಿರದಲ್ಲೇ ಇವೆ.

ಶತಮಾನಗಳ ಹಿನ್ನೆಲೆಯ ಈ ಶಕ್ತಿ ಸನ್ನಿಧಿಯ ಜೀರ್ಣೋದ್ಧಾರಕ್ಕೆ ಕಳೆದ ಫೆ 2026 ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ಇದೀಗ ಎ. 9 ಮತ್ತು 10 ರಂದು ದೈವ ಸನ್ನಿಧಿಯ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಪಂಚಪರ್ವ, ನೇಮ ನಡೆಯಲಿದೆ. ಎ 9 ರಂದು ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ಸಹಿತ ಧಾರ್ಮಿಕ ವಿಧಿ ವಿಧಾನಗಳ ಆರಂಭ, ಎ10 ರಂದು ಬೆಳಿಗ್ಗೆ 7 ರಿಂದ ದೈವ ಪ್ರತಿಷ್ಠೆ, ಅಪರಾಹ್ನ 11 ರಿಂದ ಕಲಶಾಭಿಷೇಕ, ಪಂಚ ಪರ್ವ , ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ, ರಾತ್ರಿ 8 ರಿಂದ ದೈವದ ನೇಮ ನಡೆಯಲಿದೆ.