ಚಂದ್ರಗ್ರಹಣ 2022: ನೀವು ತಿಳಿಯಬೇಕಾದ ಸಂಪೂರ್ಣ ವಿವರ ಇಲ್ಲಿದೆ..
ಮೇ 16ರಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಇದು ನಡೆವ ಸಮಯ, ನೋಡುವುದು ಹೇಗೆ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು, ಭಾರತದಲ್ಲಿ ಕಾಣುವುದೇ, ಸೂತಕ ಸಮಯವೇನು- ನೀವು ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ವರ್ಷದ ಮೊದಲ ಚಂದ್ರಗ್ರಹಣ(Lunar Eclipse) ಹೊಸ್ತಿಲಲ್ಲಿದೆ. ಈ ಅಪರೂಪದ ಖಗೋಳ ಘಟನೆಯು ಜನಸಾಮಾನ್ಯರ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುವುದರಿಂದ ಎಲ್ಲರ ಆಸಕ್ತಿ, ಕುತೂಹಲ ಚಂದ್ರಗ್ರಹಣದತ್ತ ನೆಟ್ಟಿದೆ. ಚಂದ್ರಗ್ರಹಣ ಎಂದರೇನು, ಈ ಬಾರಿ ಯಾವ ದಿನ ಸಂಭವಿಸಲಿದೆ, ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳೇನು, ಭಾರತದಲ್ಲಿ ಗೋಚರಿಸುವುದೇ, ಸೂತಕ ಸಮಯವೇನು- ಹೀಗೆ ಓದುಗರ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಚಂದ್ರಗ್ರಹಣ ಹೇಗಾಗುತ್ತದೆ?
ಭೂಮಿಯ ನೆರಳು ಚಂದ್ರನ ಮೇಲೆ ಬೀಳುವ ಅಪರೂಪದ ಖಗೋಳ ವಿದ್ಯಮಾನ ವೀಕ್ಷಿಸಲು ಸಾಕಷ್ಟು ಆಕಾಶ ವೀಕ್ಷಕ ಪ್ರಿಯರು ಕಾತರರಾಗಿದ್ದಾರೆ. ಹೌದು, ಚಂದ್ರಗ್ರಹಣಕ್ಕೆ ಇನ್ನೇನು ನಾಲ್ಕೇ ದಿನಗಳಿವೆ. ಮೇ 15-16ರಂದು ಪೂರ್ಣ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಸಮಾನ ರೇಖೆಯಲ್ಲಿ ಬರುವುದರಿಂದ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳದೆ, ಭೂಮಿಯ ನೆರಳಾಗಿ ಚಂದ್ರನಲ್ಲಿ ಕಾಣುತ್ತದೆ. ಇದನ್ನೇ ಚಂದ್ರಗ್ರಹಣ ಎನ್ನುವುದು. ಇದರಿಂದ ಚಂದ್ರನು ಕೆಂಪಾಗಿ ಕಾಣುತ್ತಾನೆ. ಹೀಗೆ ಕೆಂಪಾಗಿ ಕಾಣುವ ಚಂದ್ರನನ್ನು ಬ್ಲಡ್ ಮೂನ್ ಎನ್ನಲಾಗುತ್ತದೆ.
ಬ್ಲಡ್ ಮೂನ್(blood moon) ಎಂದರೇನು?
ಗ್ರಹಣ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದಿಂದ ಮಾತ್ರ. ಹೀಗಾಗಿ ಭೂಮಿಯ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚಿದ್ದಷ್ಟೂ ಚಂದ್ರನು ಕೆಂಪಾಗಿ ಕಾಣಿಸುತ್ತಾನೆ. ಈ ಕೆಂಪು ಮುಖದ ಚಂದ್ರನನ್ನು ಆಡು ಭಾಷೆಯಲ್ಲಿ ಬ್ಲಡ್ ಮೂನ್ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನು ಸಾಮಾನ್ಯವಾಗಿ ಕಾಣುವುದಕ್ಕಿಂತ ಶೇ.12ರಷ್ಟು ದೊಡ್ಡದಾಗಿ ಕಾಣುತ್ತಾನೆ.
ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!
ಗ್ರಹಣ ಸಮಯ(Eclipse timings)
ಈ ಬಾರಿ ಗ್ರಹಣದ ಸಂಪೂರ್ಣ ವಿದ್ಯಮಾನವು ಸುಮಾರು 5 ಗಂಟೆ 20 ನಿಮಿಷಗಳ ಕಾಲ ನಡೆಯಲಿದೆ. ಭಾರತೀಯ ಸಮಯ ತೆಗೆದುಕೊಂಡರೆ ಮೇ 15ರ ತಡರಾತ್ರಿ 9.40ಕ್ಕೆ ಗ್ರಹಣ ಆರಂಭವಾಗಿ ಮೇ 16ರಂದು ಬೆಳಗ್ಗೆ 12.20ರವರೆಗೆ ಗ್ರಹಣ ಇರಲಿದೆ. ರಾತ್ರಿ 10.23ರ ಹೊತ್ತಿಗೆ ಗ್ರಹಣ ತನ್ನ ಗರಿಷ್ಠ ಮಟ್ಟ ತಲುಪಲಿದೆ.
ಎಲ್ಲಿ ಗೋಚರಿಸುತ್ತದೆ?
ಉತ್ತರ ಅಮೆರಿಕದ ಬಹುತೇಕ ಭಾಗಗಳು, ಲ್ಯಾಟಿನ್ ಅಮೇರಿಕಾ, ಪಶ್ಚಿಮ ಯುರೋಪ್, ಆಫ್ರಿಕಾದ ಬಹುಪಾಲು ಮತ್ತು ಪೂರ್ವ ಪೆಸಿಫಿಕ್‌ನ ವೀಕ್ಷಕರು ಮೇ 15 ರ ತಡರಾತ್ರಿಯಿಂದ ಮೇ 16 ರ ಮುಂಜಾನೆಯವರೆಗೆ ಚಂದ್ರನು ಕಪ್ಪಾಗುವುದನ್ನು ಮತ್ತು ಕೆಂಪು ಬಣ್ಣವನ್ನು ಪಡೆದುಕೊಳ್ಳುವುದನ್ನು ನೋಡಬಹುದು.
ಗ್ರಹಣದ ಹಂತಗಳು ಎಲ್ಲರಿಗೂ ಏಕಕಾಲದಲ್ಲಿ ಸಂಭವಿಸುತ್ತವೆ. ಆದರೆ ಎಲ್ಲರೂ ಪೂರ್ಣ ಗ್ರಹಣವನ್ನು ನೋಡಲಾಗುವುದಿಲ್ಲ. ಹವಾಮಾನ ಅನುಕೂಲವಿದ್ದರೆ, ಉತ್ತರ ಅಮೆರಿಕಾದ ಪೂರ್ವಾರ್ಧದ ವೀಕ್ಷಕರು ಮೇ 15 ರ ಸಂಜೆ ಪ್ರಾರಂಭವಾಗುವ ಸಂಪೂರ್ಣ ಘಟನೆಗೆ ಸಾಕ್ಷಿಯಾಗುತ್ತಾರೆ. ಪೂರ್ವ ಕರಾವಳಿಗೆ ಸೂರ್ಯಾಸ್ತದ ಎರಡು ಗಂಟೆಗಳ ನಂತರ ಮತ್ತು ಮಧ್ಯಪಶ್ಚಿಮಕ್ಕೆ ಸೂರ್ಯಾಸ್ತದ ನಂತರ ಸುಮಾರು ಒಂದು ಗಂಟೆಯ ನಂತರ ಭಾಗಶಃ ಗ್ರಹಣ ಹಂತವು ಪ್ರಾರಂಭವಾಗುತ್ತದೆ. .
ಪಶ್ಚಿಮ ಕರಾವಳಿಯಲ್ಲಿ, ಸೂರ್ಯಾಸ್ತದ ನಂತರ ಉದಯಿಸುತ್ತಿರುವಾಗ ಚಂದ್ರನು ಸಂಪೂರ್ಣತೆಯನ್ನು ಪ್ರವೇಶಿಸಲಿದ್ದಾನೆ. ದಕ್ಷಿಣ ಅಮೆರಿಕಾವು ಮೇ 15 ರ ಸಂಜೆ ಪ್ರಾರಂಭವಾಗುವ ಸಂಪೂರ್ಣ ಪ್ರದರ್ಶನವನ್ನು ನೋಡುತ್ತದೆ, ಆದರೆ ಪಶ್ಚಿಮ ಯುರೋಪ್ ಮತ್ತು ಆಫ್ರಿಕಾದ ವೀಕ್ಷಕರು ಮೇ 16 ರಂದು ಮುಂಜಾನೆಯ ಗಂಟೆಗಳಲ್ಲಿ ಈವೆಂಟ್ ವೀಕ್ಷಿಸಬಹದಾಗಿದೆ. ಭಾರತದ ವಿಷಯಕ್ಕೆ ಬಂದರೆ, ಈ ಗ್ರಹಣವು ಇಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಭಾರತದಲ್ಲಿ ಸೂತಕ ಸಮಯವೂ ಇರುವುದಿಲ್ಲ.
Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?
ಹುಣ್ಣಿಮೆಯಂದೇ ನಡೆವುದು
ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆ(full moon day)ಯ ದಿನವೇ ಸಂಭವಿಸುವುದು. ಏಕೆಂದರೆ ಹುಣ್ಣಿಮೆ(Full moon) ಆಗುವುದೇ ಚಂದ್ರನು ಭೂಮಿಗೆ ವಿರುದ್ಧ ದಿಕ್ಕಿನಲ್ಲಿದ್ದಾಗ. ಆಗ ಸೂರ್ಯನು ಭೂಮಿಯ ದೃಷ್ಟಿಕೋನದಿಂದ ನೋಡಿದಂತೆ ಚಂದ್ರನ ಸಂಪೂರ್ಣ ಮುಖವನ್ನು ಬೆಳಗಿಸುತ್ತಾನೆ. ಚಂದ್ರನ ಕಕ್ಷೆಯು ಭೂಮಿಯದಕ್ಕಿಂತ ಸುಮಾರು 5 ಡಿಗ್ರಿಯಷ್ಟು ವಾಲಿರುತ್ತದೆ. ಹಾಗಾಗಿಯೇ ಸಾಮಾನ್ಯವಾಗಿ ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದಿಲ್ಲ. ಅದು ಅಪರೂಪಕ್ಕೆ ಬಿದ್ದಾಗ ಚಂದ್ರ ಗ್ರಹಣವೆನಿಸಿಕೊಳ್ಳುತ್ತದೆ.
ಬರಿಗಣ್ಣಿನಲ್ಲಿ ನೋಡಬಹುದೇ?
ನೀವಿರುವ ಪ್ರದೇಶದಲ್ಲಿ ಗೋಚರವಾದರೆ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಸೂರ್ಯನು ನಿಮ್ಮ ಬೆನ್ನಿಗಿರುವುದರಿಂದ ಬರಿಗಣ್ಣಿನ ವೀಕ್ಷಣೆ ಅಪಾಯವೇನೂ ಇಲ್ಲ. ಹಾಗಿದ್ದೂ, ಗ್ರಹಣ ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಜ್ಯೋತಿಷ್ಯ ಸಲಹೆ ಮಾಡುತ್ತದೆ.
ಹೇಗೆ ವೀಕ್ಷಿಸುವುದು?
ಈ ಬಾರಿ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲವಾದ ಕಾರಣ, ಚಂದ್ರಗ್ರಹಣ ನೋಡಬಯಸುವವರು ನಾಸಾವು ಈ ವಿದ್ಯಮಾನವನ್ನು ಲೈವ್ ಸ್ಟ್ರೀಮ್ ಮಾಡುವುದನ್ನು ವೀಕ್ಷಿಸಬಹುದು.