Asianet Suvarna News Asianet Suvarna News

Sringeri: ನಾಳೆ ಶೃಂಗೇರಿ ಮಹಾರಥೋತ್ಸವ!

ಶೃಂಗೇರಿಯ ಮಹಾರಥೋತ್ಸವ ಗುರುವಾರ ನಡೆಯಲಿದೆ. ಶೃಂಗೇರಿಯ ಭಾರತೀ ಬೀದಿಯಲ್ಲಿ ರಥೋತ್ಸವ ನಡೆಯಲಿದೆ. ಇದೇ ವೇಳೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಕೂಡ ನಡೆಯಲಿದೆ. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

tomorrow Sringeri Sri Sharadamba Maha Rathotsava san
Author
First Published Oct 5, 2022, 7:09 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು (ಅ.5) :
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಇಂದು ದೇವಿ ಗಜಲಕ್ಷ್ಮಿ ಅಲಂಕಾರದಲ್ಲಿ ಶೋಭಿಸುತ್ತಿದ್ದಾಳೆ. ಇಂದು ವಿಜಯದಶಮಿಯ ಪ್ರಯುಕ್ತ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ದೇವಿಯು ಪದ್ಮದ ಮೇಲೆ ಕುಳಿತು ಅಕ್ಕಪಕ್ಕದಲ್ಲಿ ಎರಡು ಗಜಗಳಿಂದ ನಮಸ್ಕರಿಸಲ್ಪಡುತ್ತಾ, ಭಕ್ತಾದಿಗಳಿಗೆ ಮಂದಸ್ಮಿತ ವದನೆಯಾಗಿ ವರಗಳನ್ನು ಕರುಣಿಸುವ ಮಾತೆಯಾಗಿ ಕಂಗೊಳಿಸುತ್ತಿದ್ದಾಳೆ ಜಗನ್ಮಾತೆ ಶಾರದೆ. ಇಂದು ಶೃಂಗೇರಿಯ ಕಾಳಿಕಾಂಬ ದೇವಸ್ಥಾನಕ್ಕೆ ಸಂಜೆಯ ಬೀದಿ ಉತ್ಸವ ತೆರಳಲಿದ್ದು, ಅಲ್ಲಿನ ಬನ್ನಿ ಮಂಟಪಕ್ಕೆ ಹಾಗೂ ಕಾಳಿಕಾಮಾತೆಯ ದೇಗುಲದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬನ್ನಿ ತರಲಾಗುವುದು.

ನಾಳೆ ಮಹಾರಥೋತ್ಸವ: ನಾಳೆ ಗಜಲಕ್ಷ್ಮಿ ಅಲಂಕಾರದಲ್ಲಿ ದೇವಿಯ ಮಹಾರಥೋತ್ಸವ ಶೃಂಗೇರಿಯ ಭಾರತೀ ಬೀದಿಯಲ್ಲಿ ಜರುಗಲಿದ್ದು, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಹ ನಡೆಯಲಿದೆ. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.ಪ್ರತೀ ವರ್ಷ ಇಲ್ಲಿನ ಪೀಠದಲ್ಲಿ ಸಂಪ್ರದಾಯದಂತೆ ನಡೆಯುವ ಉತ್ಸವಗಳಲ್ಲಿ ನವರಾತ್ರಿ ಉತ್ಸವ ಅತ್ಯಂತ ಪ್ರಮುಖವಾದದ್ದು. ಮೈಸೂರಿನ ನಾಡ ಹಬ್ಬ ದಸರಾದಂತೆ ಇಲ್ಲಿಯೂ 9 ದಿನಗಳ ಕಾಲ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ವೈಭವಯುತವಾಗಿ ನಡೆಯುತ್ತದೆ. ಪೀಠದ ಅಧಿ ದೇವತೆ ಶಾರದೆಗೆ ದಿನಕ್ಕೊಂದು ಅಲಂಕಾರದಂತೆ 9 ದಿನಗಳ ಕಾಲ ಹಂಸವಾಹಿನಿ, ಬ್ರಾಹ್ನಿ, ವೃಷಭ ವಾಹಿನಿ,ಮಯೂರ ವಾಹಿನಿ, ಗರುಡ ವಾಹಿನಿ, ಮೋಹಿನಿ, ವೀಣಾಪಾಣಿ, ಚಾಮುಂಡಿ, ರಾಜರಾಜೇಶ್ವರಿ, ಗಜಲಕ್ಷಮಿ ಅಲಂಕಾರಗಳಲ್ಲಿ ಅಲಂಕರಿಸಿ ಆರಾಧಿಸಲಾಗುತ್ತದೆ. ಸುಮಾರು 600 ವರ್ಷಗಳಿಂದ ಪೀಠಕ್ಕೆ ವಿವಿಧ ದೇಶ, ವಿದೇಶಗಳ, ಸಂಸ್ಥಾನಗಳ ರಾಜಮಹಾರಾಜರುಗಳು ನೀಡಿದ್ದ ವಿವಿಧ ಆಭರಣಗಳನ್ನು ಶಾರದೆಗೆ ಧರಿಸಿ ಅಲಂಕರಿಸಲಾಗುತ್ತದೆ

ನವರಾತ್ರಿಯ ಕೊನೆಯ ದಿನದಂದು ರಥಬೀದಿಯಲ್ಲಿ ಶಾರದಾಂಬಾ ಮಹಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮಹಾ ರಥೋತ್ಸವದೊಂದಿಗೆ ಮಲೆನಾಡಿನ ಜಾನಪದಕಲೆ, ಪರಂಪರೆ, ಸಾರುವ ವಿವಿಧ ಸ್ತಬ್ಧ ಚಿತ್ರಗಳು, ಹುಲಿ, ಕರಡಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ವೇಷಗಳು, ಕರಗ, ಮರಗಾಲು ಕುಣಿತ, ಭಜನೆ ತಂಡಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಹೊಸ ಮೆರಗನ್ನು ನೀಡುತ್ತವೆ.

ಶ್ರೀ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು: ಶ್ರೀಮಠದಲ್ಲಿ ಪ್ರತಿದಿನ ವಿಶೇಷ ಪೂಜೆಗಳು, ಋುಗ್ವೇದ, ಯಜುರ್ವೇದ, ಸಾಮವೇದಗಳು ಸೇರಿದಂತೆ ವೇದಗಲ ಪಾರಾಯಣ, ದೇವಿ ಭಾಗವತ, ಶಂಕರವಿಜಯ, ಸೂತಸಂಹಿತೆ, ಲಲಿತೋಪಾಖ್ಯಾನ, ಪ್ರಸ್ಥನ್ನತ್ರಯ ಭಾಷ್ಯಪಾರಾಯಣ, ಶತಚಂಡೀಯಾಗ, ಆಯುಧಪೂಜೆ, ಗಜಾಶ್ವಪೂಜೆ, ವಿವಿಧ ಜಪಗಳು ಸೇರಿದಂತೆ ನವರಾತ್ರಿಯ 9 ದಿನಗಳ ಕಾಲ ಧಾರ್ಮಿಕ ಆಚರಣೆ ನಡೆಯಿತು. ನವರಾತ್ರಿಯ 9 ದಿನಗಳ ಕಾಲ ಪ್ರತಿದಿನ ರಾತ್ರಿ ರಾಜಪೋಷಕು, ಕಿರೀಟತೊಟ್ಟು ಜಗದ್ಗುರುಗಳ ರಾತ್ರಿ ದರ್ಬಾರ್‌ ನಡೆಯಿತು. ನವರಾತ್ರಿಯ ಕೊನೆಯ ದಿನ ಜಗದ್ಗುರುಗಳ ಹಗಲು ದರ್ಬಾರ್‌ ನಡೆಯುತ್ತದೆ. ವಿಜಯ ದಶಮಿ ದಿನವಾದ ಇಂದು ಶಮೀಪೂಜೆ ವಿಜಯದ ಸಂಕೇತವಾಗಿದೆ. ಇದು ಮೈಸೂರು ಆರಂಭಿಕ ಒಡೆಯರ್‌ ವಂಶದ ಯದುವಂಶದ ಅರಸರಿಂದ ಬಂದ ಸಂಪ್ರದಾಯವಾಗಿದೆ.
 

Follow Us:
Download App:
  • android
  • ios