Asianet Suvarna News Asianet Suvarna News

ಕೊಡಗು: ನಾಳೆಯಿದ ವಯನಾಟ್‌ ಕುಲವನ್‌ ದೈವ ಕಟ್ಟು ಮಹೋತ್ಸವ

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್‌ ಕುಲವನ್‌ ದೈವಸ್ಥಾನ(Shree Vainat Kulavan Temple)ದ ವಯನಾಟ್‌ ಕುಲವನ್‌ ದೈವ ಕಟ್ಟು ಮಹೋತ್ಸವ ಮಾ.3ರಿಂದ 5ರ ವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. 50 ಲಕ್ಷ ರು.ವೆಚ್ಚದಲ್ಲಿ ಅದ್ಧೂರಿ ಮಹೋತ್ಸವ ಜರುಗಲಿದ್ದು ಈ ದೈವತಾ ಕಾರ್ಯದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Tomorrow is Wayanat Kulavan Deity Festival at napokllu kodagu rav
Author
First Published Mar 2, 2023, 1:26 PM IST | Last Updated Mar 2, 2023, 1:26 PM IST

ದುಗ್ಗಳ ಸದಾನಂದ

ನಾಪೋಕ್ಲು (ಮಾ.2) : ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್‌ ಕುಲವನ್‌ ದೈವಸ್ಥಾನ(Shree Vainat Kulavan Temple)ದ ವಯನಾಟ್‌ ಕುಲವನ್‌ ದೈವ ಕಟ್ಟು ಮಹೋತ್ಸವ ಮಾ.3ರಿಂದ 5ರ ವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. 50 ಲಕ್ಷ ರು.ವೆಚ್ಚದಲ್ಲಿ ಅದ್ಧೂರಿ ಮಹೋತ್ಸವ ಜರುಗಲಿದ್ದು ಈ ದೈವತಾ ಕಾರ್ಯದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನ(Sri Shastavu Temple Peraje)ದಿಂದ ಮಾ.3ರಂದು ಬೆಳಗ್ಗೆ 7.30 ಕ್ಕೆ ಹಸಿರು ವಾಣಿ ಮೆರವಣಿಗೆ ಹೊರಡಲಿದೆ. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಲಿದೆ. 11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 5 ಗಂಟೆಯಿಂದ ದೈವಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು ದೈವಗಳ ಕೂಡುವಿಕೆ, ಶ್ರೀಪೊಟ್ಟನ್‌ ದೈವ ಕಾರ್ಯಕ್ರಮ ನಡೆಯಲಿದೆ.

ಸಂಭ್ರಮ ಸಡಗರಿಂದ ಜರುಗಿದ ಕೊಟ್ಟೂರು ಗುರುಬಸವೇಶ್ವರ ಜಾತ್ರಾ ಮಹೋತ್ಸವ

ಮಾ.4ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಕೊರತಿಯಮ್ಮ ದೈವ, 8.30 ರಿಂದ ಚಾಮುಂಡಿ ದೈವ, 9.30ರಿಂದ ಶ್ರೀ ವಿಷ್ಣುಮೂರ್ತಿ ದೈವ, 12ರಿಂದ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 3 ಗಂಟೆಯಿಂದ ಶ್ರೀ ಕಾರ್ನೋನ್‌ ದೈವದ ವೆಳ್ಳಾಟಂ, 5ರಿಂದ ಶ್ರೀ ಕೊರಚನ್‌ ದೈವದ ವೆಳ್ಳಾಟಂ, 7 ರಿಂದ ಶ್ರೀ ಕಂಡನಾರ್‌ ಕೇಳನ್‌ ದೈವದ ವೆಳ್ಳಾಟಂ, ಲಾಟ ವಿಷ್ಣುಮೂರ್ತಿ ದೈವಗದ ಆರಂಭ, ವೈನಾಟ್‌ ಕುಲವನ್‌ ದೈವದ ವೆಳ್ಳಾಟಂ, ರಾತ್ರಿ12.30ರಿಂದ ಶ್ರೀವಿಷ್ಣುಮೂರ್ತಿ ದೈವದ ವೆಳ್ಳಾಟಂ ಆರಂಭ ಆಗಲಿದೆ. ಮಧ್ಯರಾತ್ರಿ 1 ಗಂಟೆಯಿಂದ ಶ್ರೀ ವಯನಾಟ್‌ ಕುಲವನ್‌ ದೈವದ ವೆಳ್ಳಾಟಂ ನಡೆಯಲಿದೆ.

ಮಾ.5ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಕಾರ್ನೋನ್‌ ದೈವ, 9 ರಿಂದ ಶ್ರೀ ಕೋರಚ್ಚನ್‌ ದೈವ, 11ರಿಂದ ಶ್ರೀ ಕಂಡನಾರ್‌ ಕೇಳನ್‌ ದೈವ, 2 ಗಂಟೆಯಿಂದ ಶ್ರೀ ವಯನಾಟ್‌ ಕುಲವನ್‌ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಲಿದೆ.

ಇತಿಹಾಸ: ಕೊಡಗು(Kodagu) ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶ ಶಕ್ತಿಯ ವಿವಿಧ ಅವತಾರ ಶಕ್ತಿಯನ್ನು, ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದೆ. ಅವುಗಳಲ್ಲಿ ವಯನಾಟ್‌ ಕುಲವನ್‌ ಸಹ ಒಂದು. ಚೈತನ್ಯ ಮೂರ್ತಿ ಶ್ರೀ ಪರಮಶಿವನ ಅಂಶಾವತಾರದ ಆದಿ ದಿವ್ಯನಾಗಿ ಶ್ರೀ ವಯನಾಟ್‌ ಕುಲವನ್‌ ಭೂಮಿಯಲ್ಲಿ ಅವತರಿಸಿ, ವೈನಾಡಿನಲ್ಲಿ ನೆಲೆಸಿದರು. ವೈನಾಡಿನ ರಕ್ಷಕನಾಗಿ ಶೈವಾಂಶ ಸಂಭೂತನಾದ ಶ್ರೀ ವಯನಾಟ್‌ ಕುಲವನ್‌ ಬೇಟೆಗಾರ ದೈವವೆಂದು ಕರೆಯಲ್ಪಡುತ್ತಿದೆ. ಮಲೆನಾಡಿಗೆ ಪ್ರವೇಶಿಸಿ ಶ್ರೀ ತೊಂಡಚ್ಚನ್‌ ಎಂದು ಕರೆಯಲ್ಪಟ್ಟು ಅನೇಕ ಪ್ರದೇಶಗಳಲ್ಲಿ ಸಂಚರಿಸಿ ತುಳುನಾಡಿಗೆ ಆಗಮಿಸಿ ಅಲ್ಲಲ್ಲಿ ನೆಲೆಸಿರುವ ಐತಿಹ್ಯವಿದೆ. ಆದಿಪರಂಬು ಕಣ್ಣನ ಆತಿಥ್ಯ ಮತ್ತು ಭಕ್ತಿಗೆ ಮೆಚ್ಚಿ ತನ್ನೊಡನೆ ಲೀನಗೊಳಿಸಿ ತೀಯರ ಕಾರ್ನವನನ್ನಾಗಿ ಸಂಭೋದಿಸಿ ಗೌರವಿಸಲಾಯಿತು. ಭಾಗಮಂಡಲ ಸೀಮೆಯ ಪೆರಾಜೆ ಶ್ರೀ ಶಾಸ್ತವು ಕ್ಷೇತ್ರ ಪರಿಧಿಯ ಕುಂಬಳಚೇರಿಯಲ್ಲಿ ನೆಲೆನಿಂತಿರುವುದಾಗಿ ಹೇಳಲಾಗಿದೆ.

ವರಾಹರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಪಂಜುರ್ಲಿ ದೈವ ಆವಾಹನೆ

ಧಾರ್ಮಿಕ ಸಭೆ: ಮಾ.3ರಂದು ಶುಕ್ರವಾರ ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪಸಿಂಹ, ಸಚಿವ ಅಂಗಾರ, ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್‌ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ವಯನಾಟ್‌ ಕುಲವನ್‌ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಕಣ್ಣ ಬೇಡಗಂತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಉಪಸ್ಥಿತರಿರುವರು ಎಂದು ದೇವಾಲಯದ ವಿವಿಧ ಸಮಿತಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

Latest Videos
Follow Us:
Download App:
  • android
  • ios