Mahashivratri 2022: ಶಿವನಿಗೆ ಇಷ್ಟದ ವಸ್ತುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ
ಮಹಾಶಿವರಾತ್ರಿ ದಿನ ಶಿವನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ಶುಭಫಲ ಸಿದ್ಧಿಯಾಗಲಿದೆ. ಆ ವಸ್ತುಗಳು ಯಾವುವು ಗೊತ್ತಾ?
ಮಾರ್ಚ್ 1 ಅಂದರೆ ನಾಳೆಯೇ ಮಹಾ ಶಿವರಾತ್ರಿ(Mahashivratri). ಇಂದು ಮಕರ(capricorn) ರಾಶಿಯಲ್ಲಿ ಪಂಚಗ್ರಾಹಿ ಯೋಗ ರೂಪುಗೊಳ್ಳುತ್ತಿದೆ. ಇಂದು ಶಿವಯೋಗ ಕೂಡಾ ಇರುತ್ತದೆ. ಇಂಥ ಅದ್ಭುತವಾದ ಶುಭ ದಿನದಂದು ಶಿವನ ನೆಚ್ಚಿನ ವಸ್ತುಗಳನ್ನು ಅವನಿಗೆ ಅರ್ಪಿಸುವುದರಿಂದ ಅವನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಹಾಗಾದರೆ ಮಹಾದೇವನ ಮೆಚ್ಚಿನ ವಸ್ತುಗಳು ಯಾವೆಲ್ಲ ನೋಡೋಣ.
ಬಿಲ್ವಪತ್ರೆ(Bilva)
‘ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ’ ಅಂದರೆ ಭಕ್ತಿಯಿಂದ ಒಂದು ಬಿಲ್ವಪತ್ರೆಯನ್ನು ಶಿವನಿಗೆ ನೀಡಿದರೂ ಮೂರು ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು. ಬಿಲ್ವಪತ್ರೆಯ ಮೂರು ದಳಗಳು ಸತ್ವ, ತಮ, ರಜೋಗುಣಗಳ ಸೂಚಕವಾಗಿ ಶಿವನ ಮೂರು ಕಣ್ಣುಗಳ ಸಂಕೇತವಾಗಿದೆ. ಬಿಲ್ವಪತ್ರೆ ಎಂದರೆ ಶಿವನಿಗೆ ಬಹಳ ಇಷ್ಟ. ಈಶ್ವರನ ದೇವಾಲಯವಿರುವಲ್ಲೆಲ್ಲ ಬಿಲ್ವಪತ್ರೆ ಗಿಡವೂ ಇರುವುದು ವಾಡಿಕೆ. ಇದನ್ನು ಪ್ರತಿ ದಿನ ಶಿವನಿಗೆ ಅರ್ಪಿಸುವುದು ಕೂಡಾ ಅತ್ಯಂತ ಶುಭ ಫಲಗಳನ್ನು ನೀಡುತ್ತದೆ.
ದತುರಾ(datura)
ಶಿವನಿಗೆ ಎಲ್ಲ ಕಾಡುಕುಸುಮಗಳು ಇಷ್ಟ. ಹಾಗಾಗಿ, ಆತನಿಗೆ ಸಾಮಾನ್ಯವಾಗಿ ಇತರೆ ದೇವರಿಗೇರಿಸುವ ಹೂವುಗಳಿಗಿಂತ ವಿಭಿನ್ನವಾದುವುಗಳನ್ನು ಅರ್ಪಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ದತುರದ ಹೂವು. ಸಮುದ್ರಮಂಥನದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಗಂಟಲಲ್ಲಿ ಅದನ್ನಿಟ್ಟುಕೊಂಡು ವಿಷಕಂಠನಾಗುತ್ತಾನೆ. ಆಗ ಅವನೆದೆಯಲ್ಲಿ ವಿಷಕಾರಕಗಳನ್ನೆಳೆದುಕೊಂಡು ಅರಳಿದ ಹೂವೇ ದತುರಾ. ಶಿವನಿಗೆ ದತುರಾ ಅರ್ಪಿಸುವುದರಿಂದ ನಮ್ಮ ಮನಸ್ಸಿನ ವಿಷ ಯೋಚನೆಗಳೆಲ್ಲ ನಾಶವಾಗುತ್ತವೆ.
Mahashivratri 2022: ಈ ದೇವಸ್ಥಾನದಲ್ಲಿ ಯಂತ್ರದ ಮೂಲಕ ನಡೆಯಲಿದೆ ಶಿವನ ಜಲಾಭಿಷೇಕ
ಎಕ್ಕ(ekka)
ಶಿವ ನಾಶ ಮಾಡುವವನು (destroyer). ಅದೇ ಕಾರಣಕ್ಕೆ ಅವನಿಗೆ ಬೇರೆಲ್ಲ ದೇವರಿಗಿಂತ ವಿಭಿನ್ನ ವಸ್ತುಗಳು ಹಾಗೂ ಹೂಗಳನ್ನು ಅರ್ಪಿಸಲಾಗುತ್ತದೆ. ಎಕ್ಕದ ಹೂವು, ಗಂಟೆ ಹೂವನ್ನು ಶಿವನಿಗೆ ಅರ್ಪಿಸುವುದರಿಂದ ಚಿನ್ನ ದಾನ ಮಾಡಿದಷ್ಟು ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಮಂದಾರ ಪುಷ್ಪ ಎಂದು ಕರೆಯಲ್ಪಡುವ ಎಕ್ಕದ ಹೂವು ಶಿವನ ಆತ್ಮಕ್ಕೆ ಹೋಲಿಸಲಾಗುತ್ತದೆ.
ಗಾಂಜಾ(ganja)
ಶಿವ ಹಾಲಾಹಲ ಸೇವಿಸಿ ನೀಲಕಂಠನಾದಾಗ ಪ್ರಜ್ಞಾಶೂನ್ಯನಾಗುತ್ತಾನೆ. ಆಗ ಅವನನ್ನು ಪ್ರಜ್ಞೆಗೆ ಮರಳಿಸಲು ಗಾಂಜಾ, ಬಿಲ್ವ ಹಾಗೂ ದತುರಾವನ್ನು ಶಿವನ ತಲೆಯ ಮೇಲಿಟ್ಟು ನೀರನ್ನು ಸುರಿಯುವ ಮೂಲಕ ಉಷ್ಣ ಕಡಿಮೆ ಮಾಡಲಾಗುತ್ತದೆ. ಅಂದಿನಿಂದ ಶಿವನಿಗೆ ಈ ವಸ್ತುಗಳನ್ನು ನೀಡುವ ಜೊತೆಗೆ ಜಲಾಭಿಷೇಕ ಮಾಡುವ ಆಚರಣೆ ನಡೆದು ಬಂದಿದೆ.
Mahashivratri 2022: ಈ ದಿನ ನಡೆಯಲಿದೆ ಪವಾಡ, ಪಂಚಗ್ರಾಹಿ ಯೋಗದಿಂದ ಬದಲಾಗಲಿದೆ ಕೆಲ ರಾಶಿಯವರ ಅದೃಷ್ಟ
ಭಸ್ಮ(Bhasma)
ಶಿವನು ಭಸ್ಮ ಪ್ರಿಯನಾಗಿದ್ದಾನೆ. ಮೈತುಂಬಾ ಭಸ್ಮ ಬಳಿದುಕೊಳ್ಳುವುದು ಆತನ ಅಲಂಕಾರ. ಆತ ಸಾವಿನ ಅಧಿಪತಿಯಾಗಿದ್ದಾನೆ. ಹಾಗೂ ಸುಟ್ಟ ದೇಹಗಳಿಂದ ಉದುರಿದ ಬೂದಿಯನ್ನು ಮೈಗೆ ಹಚ್ಚಿಕೊಳ್ಳುತ್ತಾನೆ. ಹೀಗಾಗಿ ಶಿವನಿಗೆ ಭಸ್ಮ ಅರ್ಪಿಸಿ. ಇದು ನಮ್ಮ ದೇಹ ನಶ್ವರ ಎಂಬುದನ್ನು ನಮಗೆ ನೆನಪಿಸುತ್ತದೆ.
ರುದ್ರಾಕ್ಷಿ(rudrakshi)
ರುದ್ರನ ಅಕ್ಷಿಯೇ ಅಂದರೆ ಶಿವನ ಕಣ್ಣೇ ರುದ್ರಾಕ್ಷಿ ಎಂಬ ನಂಬಿಕೆ ಇದೆ. ಹೀಗಾಗಿ, ರುದ್ರಾಕ್ಷಿಯನ್ನು ಶಿವರಾತ್ರಿಯಂದು ಶಿವನಿಗೆ ಅರ್ಪಿಸಿ. ರುದ್ರಾಕ್ಷಿ ಮಾಲೆ ಹಾಕಿ ಆತನನ್ನು ಅಲಂಕರಿಸಬಹುದು.
ಶಮಿ ಎಲೆಗಳು(Shami leaves)
ಶಿವನಿಗೆ ಶಮಿ ಎಲೆಗಳೆಂದರೆ ಪ್ರಿಯ. ಶಮಿ ಎಲೆಗಳನ್ನು ಆತನಿಗೆ ನೀಡುವುದರಿಂದ ಶನಿದೇವನ ಕಾಟದಿಂದ ತಪ್ಪಿಸಿಕೊಳ್ಳಬಹುದು.
ಅಶ್ವತ್ಥ ಎಲೆಗಳು(peepal tree leaves)
ಅಶ್ವತ್ಥ ವೃಕ್ಷದಲ್ಲಿ ಶಿವ ನೆಸಲೆಸಿರುತ್ತಾನೆ. ಅವನಿಗೆ ಈ ಮರ ಹಾಗೂ ಇದರ ಪ್ರತಿ ಭಾಗವೂ ಇಷ್ಟ. ಹಾಗಾಗಿ, ಶಿವರಾತ್ರಿಯಂದು ಆತನಿಗೆ ಅಶ್ವತ್ಥ ಎಲೆಗಳನ್ನು ಅರ್ಪಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.