Lord Hanuman: ಸೂರ್ಯ ನಮಸ್ಕಾರ ಮೊದಲು ಕಂಡು ಹಿಡಿದದ್ದೇ ಆಂಜನೇಯ! ಈತನ ಕುರಿತ ಆಸಕ್ತಿಕರ ಸಂಗತಿಗಳಿಲ್ಲಿವೆ..
ವಾಯುಪುತ್ರ ಹನುಮಾನ್‌ನನ್ನು ಹಿಂದೂಗಳು ದೇವರೆಂದೇ ಪೂಜಿಸುತ್ತೇವೆ. ಕಾಡಿನಲ್ಲಿದ್ದ ವಾನರ ಸಮುದಾಯಕ್ಕೆ ಸೇರಿದವನಾದ ಈತ ರಾಮಭಕ್ತನಾಗಿ ಮೆಚ್ಚುಗೆ ಗಳಿಸಿ ಕಡೆಗೆ ಈಶ್ವರನ ಅವತಾರವೆಂದೇ ಖ್ಯಾತನಾಗಿದ್ದಾನೆ. ಆಂಜನೇಯನ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ.
ವಾಯುಪುತ್ರ ಆಂಜನೇಯ ಎಂದರೆ ಅಪ್ರತಿಮ ಧೈರ್ಯವಂತ. ವಾನರ ಜನಾಂಗದಲ್ಲಿ ಬೆಳೆದು ರಾಮಭಕ್ತನಾಗಿ, ಭಕ್ತಿಯ ಪರಾಕಾಷ್ಠೆ ಮೆರೆದೇ ದೇವರ ಪಟ್ಟಕ್ಕೇರಿದವ. ರಾಮಾಯಣದಲ್ಲಿ ಆಂಜನೇಯನ ಪಾತ್ರ ದೊಡ್ಡದು. ಹಿಂದೂ ಪುರಾಣಗಳಲ್ಲಿ ಹನುಮಂತ(Hanuman)ನು ಶಿವನ ಅವತಾರವೆಂದು ಹೇಳಲಾಗುತ್ತದೆ. ಆರು ಶಾಸ್ತ್ರಗಳು ಹಾಗೂ ನಾಲ್ಕು ವೇದಗಳನ್ನು ಅರೆದು ಕುಡಿದ ಪರಮ ಪಂಡಿತ ಆಂಜನೇಯ. ಈತನ ಕುರಿತ ಆಸಕ್ತಿಕರ ಸಂಗತಿಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.
ಆಂಜನೇಯ ವಾನರ ಕುಲದಲ್ಲಿ ಜನಿಸಿದ್ದು ಹೀಗೆ
ಅಂಜನಾ(Anjana) ಎಂಬಾಕೆ ಅಪ್ಸರೆ, ಇಂದ್ರನಗರಿಯ ಅನುರೂಪ ಸುಂದರಿ. ಒಮ್ಮೆ ಆಕೆ ಭೂಮಿಯಲ್ಲಿ ಅಡ್ಡಾಡುವಾಗ ಬುದ್ಧಿವಂತ ಮಂಗವೊಂದು ಕಾಡಿನಲ್ಲಿ ಧ್ಯಾನನಿರತವಾಗಿತ್ತು. ಅದನ್ನು ನೋಡಿದ ಅಂಜನಾಗೆ ನಗು ತಡೆಯಲಾಗಲಿಲ್ಲ. ಆಕೆ ಮಂಗವನ್ನು ಸಾಕಷ್ಟು ಅಣಕಿಸಿದಳು. ಅದ್ಯಾವುದಕ್ಕೂ ಮಂಗ ಪ್ರತಿಕ್ರಿಯಿಸಲಿಲ್ಲ. ಆಗ ಆಕೆ ಮಂಗದತ್ತ ಕಲ್ಲೆಸೆದಳು. ಇದರಿಂದ ತಾಳ್ಮೆ ಕಳೆದುಕೊಂಡ ಮಂಗವು ಆಕೆಗೆ ಮಂಗವಾಗುವಂತೆ ಶಾಪವನ್ನಿಟ್ಟಿತು. ಆಕೆ ಬೇಡಿಕೊಂಡಾಗ, ಅವಳ ಹೊಟ್ಟೆಯಲ್ಲಿ ಶಿವನ ಸ್ವರೂಪ ಹುಟ್ಟಿದಾಗ ಮಾತ್ರ ಆಕೆಗೆ ತನ್ನ ಈ ರೂಪದಿಂದ ಮುಕ್ತಿ ಎಂದಿತು.
ನಂತರ ಅಂಜನಾ ಮಂಗವಾಗಿ ವಾನರರ ರಾಜ ಕೇಸರಿ(Kesari)ಯನ್ನು ವಿವಾಹವಾದಳು. ತನ್ನ ಶಾಪದಿಂದ ಮುಕ್ತಿ ಕೊಡಿಸುವಂತೆ ಶಿವ(Lord Shiva)ನನ್ನು ಬೇಡುತ್ತಲೇ ಇದ್ದಳು.
ಇತ್ತ ದಶರಥನಿಗೆ ಮಕ್ಕಳಾಗಲು ಅಗ್ನಿಯು ಆತನ ಪತ್ನಿಯರಿಗೆ ತಿನ್ನಿಸೆಂದು ಪಾಯಸ ಕೊಡುವಾಗ, ಅವುಗಳಲ್ಲೊಂದು ಪಾಯಸದ ಬಟ್ಟಲನ್ನು ಕದ್ದೊಯ್ಯುವ ಗರುಡವು ಅದನ್ನು ತಂದು ಅಂಜನಾ ಕೈಗೆ ಹಾಕುತ್ತದೆ. ಆ ಹಣ್ಣನ್ನು ತಿಂದ ಅಂಜನಾ ಹೊಟ್ಟೆಯಲ್ಲಿ ಶಿವ ಹನುಮಾನ್ ಆಗಿ ಜನ್ಮ ತಾಳುತ್ತಾನೆ. ಆಗ ತನ್ನ ಅಪ್ಸರೆಯ ರೂಪಕ್ಕೆ ಮರಳುವ ಅಂಜನಾ, ಸ್ವರ್ಗಕ್ಕೆ ಹಿಂದಿರುಗುವ ಮುನ್ನ ಹನುಮಂತನಿಗೆ ಆತ ಶಾಶ್ವತವಾಗಿರುವುದಾಗಿ ಹೇಳುತ್ತಾಳೆ. ಹಾಗೆ ಆಂಜನೇಯ ಅಷ್ಟ ಚಿರಂಜೀವಿಗಳಲ್ಲಿ ಒಬ್ಬನಾಗಿದ್ದಾನೆ.
ಆಂಜನೇಯನಿಗೆ ಐವರು ಸಹೋದರರು(brothers)
ಆಂಜನೇಯನ ತಂದೆ ಕೇಸರಿಗೆ ಆರು ಜನ ಮಕ್ಕಳು. ಆಂಜನೇಯನೇ ಹಿರಿಯವನು. ಉಳಿದ ಐವರೆಂದರೆ ಮತಿಮಾನ್, ಶೃತಿಮಾನ್, ಕೇತುಮಾನ್, ಗತಿಮಾನ್, ಧೃತಿಮಾನ್. ಇವರೆಲ್ಲರೂ ವಿವಾಹಿತರು. ಇವರ ವಂಶವೃಕ್ಷ ಇನ್ನೂ ಬೆಳೆಯುತ್ತಲೇ ಇದೆ ಎನ್ನಲಾಗುತ್ತದೆ.
Saraswati Birthday: ಬಂದೇ ಬಿಡ್ತು ವಸಂತ ಪಂಚಮಿ; ಎಲ್ಲ ಶುಭಕಾರ್ಯಕ್ಕೂ ಶುಭ ಗಳಿಗೆ
ಸಿಂಧೂರ(Vermilion)
ಒಮ್ಮೆ ಸೀತೆ ಸಿಂಧೂರ ಇಡುವುದು ನೋಡಿದ ಆಂಜನೇಯನು, ಅದನ್ನೇಕೆ ಧರಿಸುವುದು ಎಂದು ಕೇಳುತ್ತಾನೆ. ಆಗ ಸೀತೆಯು, ಹೀಗೆ ಮಾಡುವುದರಿಂದ ತನ್ನ ಪತಿಯ ಆಯಸ್ಸು ಹೆಚ್ಚುತ್ತದೆ ಎನ್ನುತ್ತಾಳೆ. ಇದನ್ನು ಕೇಳಿದ ಆಂಜನೇಯನು ಶ್ರೀರಾಮ ಚಿರಂಜೀವಿಯಾಗಿರಲಿ ಎಂದು ಮೈ ತುಂಬಾ ಸಿಂಧೂರ ಮೆತ್ತಿಕೊಳ್ಳುತ್ತಾನೆ. ಆಂಜನೇಯನ ಈ ನಡೆಯಿಂದ ರಾಮ(Lord Rama)ನಿಗೆ ಸಂತೋಷವಾಗುತ್ತದೆ. ಆಗ ಆತ, ಯಾರೆಲ್ಲ ಆಂಜನೇಯನನ್ನಿ ಸಿಂಧೂರದಿಂದ ಪೂಜಿಸುವರೋ ಅವರ ಕಷ್ಟಗಳೆಲ್ಲ ಕಳೆಯಲಿವೆ ಎಂದು ಆಶೀರ್ವದಿಸುತ್ತಾನೆ. ಕುಂಕುಮಕ್ಕೆ ಭಜರಂಗ್ ಎಂಬ ಹೆಸರೂ ಇರುವುದರಿಂದ ಅಂದಿನಿಂದ ಆಂಜನೇಯನಿಗೆ ಭಜರಂಗಬಲಿ ಎನ್ನಲಾಗುತ್ತದೆ.
ಹನುಮನ ಮಗ!
ಹೌದು, ಆಂಜನೇಯ ಬ್ರಹ್ಮಚಾರಿಯೇ. ಆದರೂ ಆತನಿಗೆ ಮಕರಧ್ವಜ(Makardhwaja) ಎಂಬ ಪುತ್ರನಿದ್ದ.
ಲಂಕೆಯನ್ನು ಸುಟ್ಟು ಬಂದ ಆಂಜನೇಯನು ತನ್ನ ದೇಹವನ್ನು ತಂಪಾಗಿಸಿಕೊಳ್ಳಲು ಸಮುದ್ರದಲ್ಲಿ ನಿಂತನಂತೆ. ಆಗ ಅವನ ದೇಹದ ಬೆವರನ್ನು ಮೀನೊಂದು ಕುಡಿಯಿತು. ಅದರ ಹೊಟ್ಟೆಯಲ್ಲಿ ಆಂಜನೇಯ ಪುತ್ರ ಮಕರಧ್ವಜ ಜನಿಸಿದ.
Zodiac sign and illness: ಯಾವ ರಾಶಿಗೆ ಯಾವ ಅನಾರೋಗ್ಯ ಹೆಚ್ಚಾಗಿ ಕಾಡುವುದು ನೋಡಿ..
ರಾಮನಿಂದ ಆಂಜನೇಯಗೆ ಮರಣದಂಡನೆ!
ಒಮ್ಮೆ ನಾರದ ಮುನಿಯ ಬೇಡಿಕೆಯಂತೆ ಆಂಜನೇಯನು ಎಲ್ಲ ಋಷಿವರ್ಯರನ್ನೂ ಆಹ್ವಾನಿಸುತ್ತಾನೆ. ಆದರೆ, ವಿಶ್ವಾಮಿತ್ರರಿಗೆ ಮಾತ್ರ ಆಹ್ವಾನ ಹೋಗುವುದಿಲ್ಲ. ಇದರಿಂದ ಕೋಪಗೊಂಡ ವಿಶ್ವಾಮಿತ್ರ(Vishwamitra)ರು ಆಂಜನೇಯನಿಗೆ ಮರಣದಂಡನೆ(death sentence) ವಿಧಿಸುವಂತೆ ರಾಮನಿಗೆ ಆಜ್ಞೆ ಮಾಡುತ್ತಾರೆ. ಗುರುಗಳ ಆಜ್ಞೆ ಮೀರಲಾಗದೆ ರಾಮ ಆಂಜನೇಯನಿಗೆ ಬಾಣದ ಮಳೆಯನ್ನೇ ಸುರಿಸುತ್ತಾನೆ. ಆದರೆ, ಆಂಜನೇಯ ರಾಮಸ್ಮರಣೆಯಲ್ಲಿ ನಿರತನಾಗಿರುತ್ತಾನೆ. ಒಂದು ಬಾಣವೂ ಆತನಿಗೆ ಏನೂ ಮಾಡುವುದಿಲ್ಲ. ಇದನ್ನು ನೋಡಿದ ರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಅದೂ ಕೂಡಾ ಆಂಜನೇಯನಿಗೆ ಏನೂ ಮಾಡುವುದಿಲ್ಲ. ಇದನ್ನು ಕಂಡ ವಿಶ್ವಾಮಿತ್ರರೇ ಆಂಜನೇಯನಿಗೆ ತಲೆ ಬಾಗುತ್ತಾರೆ.
ರಾಮಾಯಣ ಮೊದಲು ಬರೆದದ್ದು ಹನುಮ!
ರಾಮ ರಾವಣನನ್ನು ಗೆದ್ದ ಬಳಿಕ ಹಿಮಾಲಯದ ಪರ್ವತ ಏರುವ ಆಂಜನೇಯ ತನ್ನ ಉಗುರುಗಳಿಂದಲೇ ರಾಮಾಯಣದ ಕತೆ ಕೆತ್ತುತ್ತಾನೆ. ವಾಲ್ಮೀಕಿ ಮಹರ್ಷಿ(Maharishi Valmiki)ಯು ತಾವು ಬರೆದ ರಾಮಾಯಣದ ಕತೆಯನ್ನು ಆಂಜನೇಯನಿಗೆ ತೋರಿಸಲು ಬಂದಾಗ, ಹನುಮ ಬರೆದ ಕತೆಯು ತಾವು ಬರೆದುದಕ್ಕಿಂತಲೂ ಉನ್ನತವಾಗಿರುವುದನ್ನು ಕಂಡು ಬೇಜಾರಾಗುತ್ತಾರೆ. ಇದನ್ನು ಗಮನಿಸಿದ ಹನುಮ ತಾನು ಬರೆದ ರಾಮಾಯಣವನ್ನು ಅಳಿಸುತ್ತಾನೆ.
ಸೂರ್ಯ ನಮಸ್ಕಾರ ಕಂಡು ಹಿಡಿದವ
ಹನುಮಂತನು ದೊಡ್ಡ ಯೋಗ ಸಾಧಕ. ಆತ ತನ್ನ ಗುರುವಾದ ಸೂರ್ಯನಿಗೆ ನಮಸ್ಕರಿಸಲು ಕಂಡುಕೊಂಡ ಯೋಗ ವಿಧಾನವೇ ಸೂರ್ಯ ನಮಸ್ಕಾರ. ಅದನ್ನು ಮೊದಲು ಅನ್ವೇಷಿಸಿದ್ದು ಆಂಜನೇಯನೇ.