ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ವಿಷಯಗಳ ಆಧಾರದ ಮೇಲೆ ಮನುಷ್ಯನ ಗುಣ, ಲಕ್ಷಣಗಳು ಮತ್ತು ವ್ಯಕ್ತಿತ್ವವನ್ನು ಅರಿಯಬಹುದು. ಹಿಂದೆ ಘಟಿಸಿದ, ಮುಂದೆ ಘಟಿಸುವ ವಿಚಾರಗಳ ಬಗ್ಗೆ ಸಹ ಸೂಚನೆ ನೀಡುತ್ತದೆ ಜ್ಯೋತಿಷ್ಯ. ರಾಶಿ ಮತ್ತು ನಕ್ಷತ್ರಗಳನ್ನು ತಿಳಿದು ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು. ಜಾತಕದಿಂದ ಜೀವನದಲ್ಲಾಗುವ ಏರು-ಪೇರು ಮತ್ತು ಇನ್ನಿತರ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಕೆಲವೊಮ್ಮೆ ಗ್ರಹ ಹಾಗೂ ನಕ್ಷತ್ರಗಳ ಪರಿವರ್ತನೆಯು ರಾಶಿಯವರ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. 

ಪ್ರತಿ ರಾಶಿಗೆ ಅದರದ್ದೇ ಆದ ಭಿನ್ನ ಸ್ವಭಾವಗಳಿರುತ್ತವೆ. ರಾಶಿಗನುಗುಣವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವು ರಾಶಿಯವರು ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದರೆ, ಮತ್ತೆ ಕೆಲವು ರಾಶಿಯವರು ಗಟ್ಟಿಗರು. ಹಾಗಾಗಿ ಕೆಲವು ರಾಶಿಯವರಿಗೆ ಹೆದರಿಕೆಯೇ ಇರುದಿಲ್ಲವಂತೆ, ಎಂಥಹುದೇ ಸಂಧರ್ಭದಲ್ಲೂ ಧೈರ್ಯಗೆಡದೆ ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರಂತೆ. ಅವರಿಗೆ ಧೈರ್ಯವೇ ಅಸ್ತ್ರವಾಗಿರುತ್ತದೆ. ಹಾಗಾದರೆ ಆ ರಾಶಿಗಳು ಯಾವುವು..? ಎಂಬುದರ ಬಗ್ಗೆ ತಿಳಿಯೋಣ....  

ಇದನ್ನು ಓದಿ: ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಹೆಚ್ಚು ಧೈರ್ಯವಂಥರು ಮತ್ತು ಛಲವಾದಿಗಳು. ಈ ರಾಶಿಯ ಅಧಿಪತಿ ಮಂಗಳ ಗ್ರಹ. ಮಂಗಳ ಗ್ರಹವು ಧೈರ್ಯ, ಕೋಪ, ಸಾಹಸ ಮತ್ತು ವಿಜಯದ ಕಾರಕ ಗ್ರಹವಾಗಿರುವ ಕಾರಣ ಮೇಷ ರಾಶಿಯವರಿಗೆ ಧೈರ್ಯ ಹೆಚ್ಚು. ಹಾಗಾಗಿ ಈ ರಾಶಿಯವರಲ್ಲಿ ಮಂಗಳ ಗ್ರಹದ ಪ್ರಭಾವ ಕಾಣ ಸಿಗುತ್ತದೆ. ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಬೇರೆಯವರ ಮುಂದೆ ತಲೆಬಗ್ಗಿಸಲು ಇಷ್ಟಪಡುವುದಿಲ್ಲ. ಇವರ ಈ ಧೈರ್ಯದ ಸ್ವಭಾವವೇ ಇವರಿಗೆ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತದೆ. ಅದಕ್ಕೋಸ್ಕರವೇ ಯಾರಿಗೂ ಸಹ ಹೆದರದ ಸ್ವಭಾವವನ್ನು ಇವರದ್ದಾಗಿರುತ್ತದೆ. ಈ ರಾಶಿಯವರ ಈ ಗುಣಗಳೇ ಇವರ ಸಫಲತೆಗೆ ಕಾರಣವಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.ವೃಷಭ ರಾಶಿ
ವೃಷಭ ರಾಶಿಯವರು ಹೆಚ್ಚು ಧೈರ್ಯವಂತರೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ತಿಳಿದು ನಿಭಾಯಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯವರು ಎಲ್ಲ ಸಂಕಷ್ಟಗಳನ್ನು ಸುಲಭವಾಗಿ ನಿಭಾಯಿಸುವುದಲ್ಲದೆ, ಕಷ್ಟಕ್ಕೆ ಹೆದರದೇ ಧೈರ್ಯವಾಗಿ ಎದುರಿಸುವ ಗುಣ ಇವರಲ್ಲಿರುತ್ತದೆ. ಹಾಗೆಯೇ ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವ ಚತುರತೆಯನ್ನು ಸಹ ಹೊಂದಿರುತ್ತಾರೆ. 

ಇದನ್ನು ಓದಿ: ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!? 

ಸಿಂಹ ರಾಶಿ
ಈ ರಾಶಿಯವರು ಬಾಲ್ಯದಿಂದಲೂ ಧೈರ್ಯವಂತರಾಗಿರುತ್ತಾರೆ. ಬಾಲ್ಯದಲ್ಲಿ ಇವರ ಚಟುವಟಿಕೆ ಸಹ ಆಶ್ಚರ್ಯವನ್ನುಂಟು ಮಾಡುವ ರೀತಿ ಇರುತ್ತದೆ. ಇವರಿಗೆ ಯಾವುದೇ ರೀತಿಯ ಭಯ ಇದೆ ಎಂಬ ಅಂಶವೇ ಗೊತ್ತಾಗದಷ್ಟು ಇವರ ವರ್ತನೆ ಇರುತ್ತದೆ. ಈ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಸಾಹಸ – ನಿಯಮ – ಉಚ್ಛಪದವಿ – ಧೈರ್ಯ ಮತ್ತು ನಾಯಕತ್ವ ಗುಣಗಳ ಕಾರಕ ಗ್ರಹ. ಹಾಗಾಗಿ ಈ ರಾಶಿಯವರ ಗುಣವು ಸೂರ್ಯ ಗ್ರಹದಿಂದ ಪ್ರಭಾವಿತವಾಗಿ ಇನ್ನಷ್ಟು ಧೈರ್ಯವಂತವಾಗಿ ರೂಪುಗೊಂಡಿರುತ್ತದೆ. ಜೊತೆಗೆ ಸಿಂಹ ರಾಶಿಯವರು ಹೆಚ್ಚು ಬುದ್ಧಿವಂತರೂ ಆಗಿರುತ್ತಾರೆ. 

ಇದನ್ನು ಓದಿ: ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!?

ಧನು ರಾಶಿ
ಜಯ ಸಾಧಿಸುವಲ್ಲಿ ಧನು ರಾಶಿಯವರು ಬಹಳ ಮುಂದಿರುತ್ತಾರೆ. ಹಾಗಾಗಿ ಇವರಿಗೆ ಸೋಲು ಎಂಬುದನ್ನು ಅರಿಗಿಸಿಕೊಳ್ಳುವುದು ತುಸು ಕಷ್ಟ ಎಂಬ ಮನಸ್ಥಿತಿಯವರಾಗಿರುತ್ತಾರೆ. ಇದರಿಂದಾಗಿ ತಮ್ಮ ಜಯದತ್ತಲೇ ಹೆಚ್ಚು ಕೇಂದ್ರೀಕರಿಸಿರುತ್ತಾರೆ. ಇದಕ್ಕೋಸ್ಕರ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೂ ಸಹ ಇವರು ಹಿಂಜರಿಯುವುದಿಲ್ಲ. ನೋಡಲು ಕಠೋರ ಸ್ವಭಾವದವರಂತೆ ಕಂಡರೂ ಇವರು ಆಂತರ್ಯದಲ್ಲಿ ಮೃದುತ್ವವನ್ನು ಹೊಂದಿದವರಾಗಿರುತ್ತಾರೆ. ಇದರ ಜೊತೆಗೆ ಎಂಥ ಸಮಸ್ಯೆಗಳು ಎದುರಾದರೂ ದೃತಿಗೆಡದೆ ಅದನ್ನು ಸುಲಭ ಹಾಗೂ ಸರಳವಾಗಿ ಎದುರಿಸಿಕೊಂಡು ಹೋಗುವ ಚಾಕಚಕ್ಯತೆಯನ್ನು ಈ ಧನು ರಾಶಿಯವರು ಹೊಂದಿರುತ್ತಾರೆ. ಇವರ ಈ ಗುಣವೇ ಇವರಿಗೆ ಹೆಚ್ಚು ಧೈರ್ಯವನ್ನು ತಂದುಕೊಡುತ್ತದೆ.