Asianet Suvarna News Asianet Suvarna News

Chikkamagaluru: ಚಾರ್ಮಾಡಿ ಘಾಟ್ ರಹಸ್ಯ: ಘಾಟ್ ಕಾಯುವ ತಾಯಿ ಗುಳಿಗಮ್ಮ!

ಚಾರ್ಮಾಡಿ ಘಾಟ್‌ನ ರಸ್ತೆಯಲ್ಲಿ ಆಗೋಚರವಾದ ಶಕ್ತಿಯೊಂದು ಇದೆ. ಆ ಶಕ್ತಿ ಇಲ್ಲಿನ ಸಾಗುವ ಪ್ರಯಾಣಿಕರು, ಗ್ರಾಮಸ್ಥರಿಗೆ ಶ್ರೀ ರಕ್ಷೆಯಾಗಿದೆ. ಇದೀಗ ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆಯಾಗಿದ್ದು ಭಕ್ತರ ನಂಬಿಕೆ ಮುತ್ತಷ್ಟು ಹೆಚ್ಚಾಗಿದೆ.  

the secret of the goddess of the charmadi ghat guligamma gvd
Author
Bangalore, First Published May 11, 2022, 2:36 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.11): ಚಾರ್ಮಾಡಿ ಘಾಟ್ (Charmadi Ghat) ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ. ಒಂದೊಮ್ಮೆ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾದ್ರೆ ಕರಾವಳಿ ಮತ್ತು ಮಲೆನಾಡಿನ ಸಂಪರ್ಕವೇ ಕಟ್ ಆಗುತ್ತೆ, ಅಂತಹ ಚಾರ್ಮಾಡಿ ಘಾಟ್‌ನ ರಸ್ತೆಯಲ್ಲಿ ಆಗೋಚರವಾದ ಶಕ್ತಿಯೊಂದು ಇದೆ. ಆ ಶಕ್ತಿ ಇಲ್ಲಿನ ಸಾಗುವ ಪ್ರಯಾಣಿಕರು, ಗ್ರಾಮಸ್ಥರಿಗೆ ಶ್ರೀ ರಕ್ಷೆಯಾಗಿದೆ. ಇದೀಗ ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ (Idol) ಪತ್ತೆಯಾಗಿದ್ದು ಭಕ್ತರ (Devotees) ನಂಬಿಕೆ ಮುತ್ತಷ್ಟು ಹೆಚ್ಚಾಗಿದೆ.  

ಚಾರ್ಮಾಡಿ ಘಾಟಿಯ ಅಧಿನಾಯಕಿ ಗುಳಿಗಮ್ಮ ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆ: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಹೊರಟ್ಟಿ ಸಮೀಪದ ಇತಿಹಾಸ ಪ್ರಸಿದ್ಧ ಗುಳಿಗಮ್ಮ ದೇವಿಯ (Guligamma Devi) ಮೂಲ ವಿಗ್ರಹ ಆ ದೇವಿ ಹೇಳಿದ ಜಾಗದಲ್ಲೇ ಪತ್ತೆಯಾಗಿದ್ದು, ಸ್ಥಳಿಯರು ಹಾಗೂ ಈ ಭಾಗದ ಪ್ರವಾಸಿಗರಿಗೆ (Tourists) ಗುಳಿಗಮ್ಮ ದೇವಿಯ ಮೇಲಿದ್ದ ದೈವದ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ಏಪ್ರಿಲ್ 24ರಂದು ಗುಳಿಗಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಗುಳಿಗಮ್ಮ ದೇವಿಯ ದೈವದ ದರ್ಶನದಲ್ಲಿ ಕ್ಷೇತ್ರದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ಗುಳಿಗಮ್ಮ ದೇವಿಯ ಮೂಲ ವಿಗ್ರಹ ಇದೆ, ಹುಡುಕಿದರೆ ವಿಗ್ರಹ ಸಿಗಲಿದೆ ಎಂದು ದೈವದ ದರ್ಶನದಲ್ಲಿ ದೇವಿಯೇ ಹೇಳಿದ್ದಳು. 

ರಾಜ್ಯದಲ್ಲಿ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ದೇವೇಗೌಡ: ವೈ.ಎಸ್.ವಿ.ದತ್ತಾ

ಹಾಗಾಗಿ, ಗುಳಿಗಮ್ಮ ದೇವಿಯ ಕ್ಷೇತ್ರ ಅಭಿವೃದ್ಧಿಯ ಪದಾಧಿಕಾರಿಗಳು ಗುಳಿಗಮ್ಮ ದೇವಿಯ ದೇವಸ್ಥಾನದಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಆಲೇಖಾನ್ ಎಸ್ಟೇಟ್ ಒಂದರ ಮರದ ಬುಡದಲ್ಲಿ ದೇವಿಯ ಮೂಲ ವಿಗ್ರಹ ಪತ್ತೆಯಾಗಿದೆ. ದೇವಸ್ಥಾನದಿಂದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ನೋಡಿದಾಗ ದೇವಿನ ಕಂಚಿನಮೂರ್ತಿ, ಗಂಟೆ ಹಾಗೂ ಕತ್ತಿ ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಚಾಮುಂಡೇಶ್ವರಿ, ಗುಳಿಗಮ್ಮ, ಬಬ್ಬುಸ್ವಾಮಿಗೆ ಅತ್ಯಂತ ಭಯ-ಭಕ್ತಿಯಿಂದ ವಿಜೃಂಭಣೆಯಿಂದ ಪೂಜಾ-ವಿಧಿ-ವಿಧಾನಗಳು ನಡೆಯುತ್ತಿದ್ದವು. 

ಈಗ ಗುಳಿಗಮ್ಮ ದೇವಿ ಹೇಳಿರೋ ಜಾಗದಲ್ಲೇ ಪುರಾತನ ಮೂರ್ತಿಗಳು ಸಿಕ್ಕಿರೋದು ಕ್ಷೇತ್ರ ಹಾಗೂ ದೇವಿಯ ಮಹಿಮೆಯನ್ನ ಇಮ್ಮಡಿಗೊಳಿಸಿದೆ. ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆಯಾದ ಹಿನ್ನೆಲೆ ಭಕ್ತರು ದೇವಾಲಯವನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಈಗ ಸಿಕ್ಕಿರೋ ಪುರಾತನ ಮೂರ್ತಿಗಳನ್ನ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪಿಸಿ ದೇವಿಯ ಹಿಂದಿನ ಗತಕಾಲದ ವೈಭವನ್ನ ಮತ್ತೆ ಮರುಕಳಿಸಲು ಯೋಚಿಸಿದ್ದಾರೆ. ಆದರೆ, ಈಗ ಗುಳಿಗಮ್ಮ ದೇವಿ ಹೇಳಿರೋ ಜಾಗದಲ್ಲೇ ಮೂಲ ವಿಗ್ರಹ ಸಿಕ್ಕಿರೋದು ಮುಂದಿನ ದಿನಗಳಲ್ಲಿ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ. 

ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ-ವಾಹನ ಸವಾರರಿಗೆ ಅಮ್ಮನೇ ಶ್ರೀರಕ್ಷೆ: ಈ ಗುಳಿಗಮ್ಮ ದೇವಿ ಅಂದ್ರೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆದ್ರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ಯಾರಿಗೆ ತಾನೇ ಗೊತ್ತಿಲ್ಲ. ಕರ್ನಾಟಕದ ಊಟಿ ಎಂದೇ ಖ್ಯಾತಿಯಾಗಿರೋ ಬದುಕಿನ ಅನಿವಾರ್ಯತೆಯ ಹಾಸು ಹೊಕ್ಕಿರೋ ಮಾರ್ಗ. ಈ ಮಾರ್ಗದಲ್ಲಿ ನೆಲೆ ನಿಂತಿರುವವಳೇ ಗುಳಿಗಮ್ಮ ದೇವಿ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ದಟ್ಟಾರಣ್ಯದ ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಚಲಿಸಲು ಗಟ್ಟಿ ಗುಂಡಿಗೆ ಬೇಕು. 

ಈ ಮಾರ್ಗ ಎಷ್ಟು ಸೌಂದರ್ಯ-ಅನಿವಾರ್ಯವೋ ಅಷ್ಟೆ ಅಪಾಯ ಕೂಡ. ಆದರೆ, ಈಕೆ ಬಗ್ಗೆ ಗೊತ್ತಿರುವವರು ಈ ಮಾರ್ಗದಲ್ಲಿ ಸಂಚರಿಸುವಾಗ ಈ ದೇವಿಗೆ ಕೈಮುಗಿಯದೆ ಮುಂದೆ ಹೋಗಲ್ಲ. ಚಾರ್ಮಾಡಿ ರಸ್ತೆಯ ಅಲೇಖಾನ್ ಹೊರಟ್ಟಿ ಗ್ರಾಮದ ಆರಂಭದಲ್ಲೇ ಈ ದೇವಿ ವಿರಾಜಮಾನವಾಗಿ ನೆಲೆ ನಿಂತಿದ್ದಾಳೆ. ಅಂದು ಈಕೆಗೆ ಮೂರ್ತಿ ಇರಲಿಲ್ಲ. ಇಂದು ಈಕೆಯ ಪುರಾತನ ವಿಗ್ರಹ ಸಿಕ್ಕಿದೆ. ಅಂದು ಕಲ್ಲಿನ ಮೂರ್ತಿಗೆ ಕೈಮುಗಿಯುತ್ತಿದ್ದರು. ಇನ್ಮುಂದೆ ಮೂರ್ತಿ ರೂಪದಲ್ಲಿ ನೆಲೆ ನಿಲ್ಲುತ್ತಾಳೆ. ಈಕೆಯದ್ದು ಅಪಾರ ಶಕ್ತಿ ಅನ್ನೋದು ಭಕ್ತರ ನಂಬಿಕೆ. ವರ್ಷ ಪೂರ್ತಿ ಈ ಮಾರ್ಗದಲ್ಲಿ ಸಂಚರಿಸುವವರನ್ನ ಈಕೆಯೇ ಕಾಯುತ್ತಾಳೆ ಅನ್ನೋದು ಸಾವಿರಾರು ಜನರ ನಂಬಿಕೆ. 

ಪ್ರಾದೇಶಿಕ ಪಕ್ಷವನ್ನು ಉಳಿಸಿ ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಕೊನೆಯ ಆಸೆ: ಹೆಚ್.ಡಿ.ದೇವೇಗೌಡ

ಚಾರ್ಮಾಡಿ ಘಾಟಿಯೇ ಅಲ್ಲೋಲ-ಕಲ್ಲೋಲವಾಗಿದ್ರೂ ಈ ಪ್ರದೇಶ ಅಲುಗಾಡಿಲ್ಲ: ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಒಂದೇ ರಾತ್ರಿಗೆ 22 ಇಂಚಿನಷ್ಟು ಮಳೆ ಸುರಿದು ಮಲೆನಾಡೇ ಅಲ್ಲೋಲ-ಕಲ್ಲೋಲವಾಗಿತ್ತು. ಮಳೆಗಾಲದಲ್ಲಿ ಅತಿಹೆಚ್ಚು ಭೂ ಕುಸಿತ, ಗುಡ್ಡ ಕುಸಿತವಾದರೂ ಕೂಡ ಸಾವಿರಾರು ವಾಹನಗಳಲ್ಲಿ ಸಂಚರಿಸುವ ಯಾರೊಬ್ಬರಿಗೂ ಸಣ್ಣ ಅನಾಹುತ-ಅಪಾಯ ಕೂಡ ಆಗಿಲ್ಲ. ಚಾರ್ಮಾಡಿ ಘಾಟಿಯೇ ಅಲ್ಲೋಲ-ಕಲ್ಲೋಲವಾದರೂ ಈ ಪ್ರದೇಶ ಕಿಂಚಿತ್ತು ಅಲುಗಾಡಿರಲಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ರಸ್ತೆಯ ಎರಡು ಭಾಗ ಕುಸಿದಿದ್ದರೂ ಕೂಡ ಈಕೆ ಸ್ಥಳದ ಒಂದು ಹುಲ್ಲು ಕಡ್ಡಿಯೂ ಅಲುಗಾಡಿರಲಿಲ್ಲ. 

ಒಂದಿಂಚು ಭೂಮಿಯೂ ಕದಲಿರಲಿಲ್ಲ. ಚಾರ್ಮಾಡಿ ಘಾಟಿಗೆ ಅಂಟಿಕೊಂಡಂತಿರುವ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆಯ ಹಲವೆಡೆ ಬೃಹತ್ ಪ್ರಮಾಣದ ಬಂಡೆಗಳು ಬಿದ್ದರೂ ಗ್ರಾಮ, ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ಚಾರ್ಮಾಡಿ ಘಾಟಿಯನ್ನ ರಕ್ಷಿಸಿ-ಉಳಿಸಿ-ಜನರನ್ನೂ ಕಾಪಾಡ್ತಿರೋದೆ ಈಕೆ ಅನ್ನೋದು ಸ್ಥಳಿಯರು-ಸಾವಿರಾರು ಪ್ರವಾಸಿಗರ ನಂಬಿಕೆ. ಹಾಗಾಗಿ, ಸ್ಥಳಿಯರ ಜೊತೆ ಈ ಮಾರ್ಗದಲ್ಲಿ ಸಂಚರಿಸುವವರು ಕೂಡ ಈಕೆಗೆ ಪ್ರತಿವರ್ಷ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ. ಇಲ್ಲಿ ಮಳೆಯಲ್ಲಿ ಸಿಲುಕಿಕೊಂಡಿದ್ದ 10 ಜನ ಅಕ್ಷರಶಃ ಸಾವನ್ನೇ ಗೆದ್ದಿದ್ದರು. ನಮ್ಮನ್ನ ಬದುಕಿಸಿದ್ದು ಬೇರ್ಯಾರು ಅಲ್ಲ ಇದೇ ಗುಳಿಗಮ್ಮ ಅನ್ನೋದು ಜನರ ಬಲವಾದ ನಂಬಿಕೆ. ಆ ನಂಬಿಕೆ ಮತ್ತಷ್ಟು ಪುಷ್ಠಿ ಸಿಗುವಂತೆ ಈಗ ಆಕೆ ಹೇಳಿದ ಜಾಗದಲ್ಲೇ ಮೂಲ ವಿಗ್ರಹಗಳು ಪತ್ತೆಯಾಗಿರೋದು ದೈವದ ಮೇಲಿನ ನಂಬಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸಿದೆ.

Follow Us:
Download App:
  • android
  • ios