ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ವಿಶೇಷ ಆಚರಣೆಗಳಲ್ಲಿ ಹೋಳಿ ಸುಗ್ಗಿ ಕುಣಿತ ಸಹ ಒಂದು. ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸದ್ದು ಸಡಗರದ ಸಂಭ್ರಮ ಕಾಣುತ್ತದೆ. ಈ ಬಾರಿ ಸಹ ವಿವಿಧ ಸಮುದಾಯಗಳ ಹೋಳಿ ಸುಗ್ಗಿ ಕುಣಿತ ಆರಂಭಗೊಂಡಿದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

Add Asianetnews Kannada as a Preferred SourcegooglePreferred

ಉತ್ತರ ಕನ್ನಡ (ಮಾ.04): ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ವಿಶೇಷ ಆಚರಣೆಗಳಲ್ಲಿ ಹೋಳಿ ಸುಗ್ಗಿ ಕುಣಿತ ಸಹ ಒಂದು. ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ, ಗುಮಟೆ ಪಾಂಗಿನ ಸದ್ದು ಸಡಗರದ ಸಂಭ್ರಮ ಕಾಣುತ್ತದೆ. ಈ ಬಾರಿ ಸಹ ವಿವಿಧ ಸಮುದಾಯಗಳ ಹೋಳಿ ಸುಗ್ಗಿ ಕುಣಿತ ಆರಂಭಗೊಂಡಿದೆ. ಭಿನ್ನ ವಿಭಿನ್ನವಾದ ತುರಾಯಿಗಳನ್ನು ಹೊತ್ತವರು ಸಮುದಾಯದ ಮನೆಗಳ ಬಳಿ ತೆರಳಿ ಕುಣಿಯುವ ಮೂಲಕ ತಮ್ಮ ಸಂಪ್ರದಾಯವನ್ನು ಪ್ರದರ್ಶನ ಮಾಡುತ್ತಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

ಹೋಳಿ ಹುಣ್ಣಿಮೆ ಹತ್ತಿರವಾದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಗುನಗಿ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಹಿನ್ನಲೆ ಪ್ರಾರಂಭಿಸುತ್ತಾರೆ. ಹಬ್ಬಕ್ಕೂ ಏಳೆಂಟು ದಿನಗಳ ಮುನ್ನ ಸುಗ್ಗಿ ಕುಣಿತ ಪ್ರಾರಂಭಿಸಿ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನ ಪ್ರದರ್ಶಿಸುತ್ತಾರೆ. ಈ ಬಾರಿ ಕೂಡಾ ಕಾರವಾರ ತಾಲೂಕಿನ ಗುನಗಿ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ಸಿಕ್ಕಿದ್ದು, ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನ ಪ್ರದರ್ಶಿಸುತ್ತಿದ್ದಾರೆ. 

ಯಡಿಯೂರಪ್ಪ ಸವಾಲು ಹಾಕಿದರೆ ಏನಾಗುತ್ತೆ ಎಂದು ನಮಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು: ಬಿ.ವೈ.ವಿಜಯೇಂದ್ರ

ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸುವುದು ಗುನಗಿ ಸಮಾಜದವರಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ತಮ್ಮ ಜನಾಂಗದವರು ನೆಲೆಸಿರುವ ಮನೆಗಳ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡುವುದರಿಂದ ಜನರಿಗೆ ಎದುರಾಗಿರುವ ಸಮಸ್ಯೆ, ತೊಂದರೆಗಳು ಬಗೆಹರಿಯುವುದರ ಜೊತೆಗೆ ಯಾವುದೇ ರೋಗಗಳೂ ಮನೆಯವರಿಗೆ ಬರದಂತೆ ತಡೆಯುತ್ತದೆ ಅನ್ನೋದು ಹಾಲಕ್ಕಿ ಸಮುದಾಯದವರ ನಂಬಿಕೆ. 

ಇನ್ನು ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ, ಪೇಟವನ್ನು ಕಟ್ಟಿ, ಪೊಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನ ಸೆಳೆಯುತ್ತದೆ. ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ಏಳು ದಿನದವರೆಗೂ ವಾಪಾಸ್ ಮನೆಗೆ ತೆರಳುವಂತಿಲ್ಲ. ಜೊತೆಗೆ ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. 

ಸುಗ್ಗಿ ಆಡುವ ತಂಡದವರು ಒಂದು ತಿಂಗಳ ಮೊದಲೇ ತಯಾರಿಯನ್ನು ಆರಂಭಿಸುತ್ತಾರೆ. ಸುಗ್ಗಿ ಆಡುವಾಗ ತಲೆಯ ಮೇಲೆ ಹೊರುವ ತುರಾಯಿಗಳು ಎಷ್ಟಿರಬೇಕು ಎಂದು ನಿಗದಿಪಡಿಸಿಕೊಂಡು ಬಳಿಕ ಅವುಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದಾದ ಬಳಿಕ ಹೋಳಿಗೆ ಎಂಟು ದಿನಗಳಿಗೆ ಮುನ್ನ ಸುಗ್ಗಿ ತಂಡದೊಂದಿಗೆ ಹೊರಟು ಸಮುದಾಯದ ಮನೆಗಳವರು ತಮ್ಮನ್ನು ಆಹ್ವಾನಿಸಿದಲ್ಲಿಗೆ ತೆರಳಿ ಕುಣಿತವನ್ನು ಪ್ರದರ್ಶನ ಮಾಡಲಾಗುತ್ತದೆ. ಹೋಳಿಯ ದಿನದಂದು ಸುಗ್ಗಿ ಪ್ರಾರಂಭಿಸಿದಲ್ಲಿಗೇ ವಾಪಸ್ಸಾಗಿ ಕರಿ ದೇವರಿಗೆ ಪೂಜೆ ಸಲ್ಲಿಸಿ, ತುರಾಯಿಗಳನ್ನು ದೇವರಿಗೆ ಅರ್ಪಿಸಿದ ಬಳಿಕವೇ ಸುಗ್ಗಿ ಕುಣಿತವನ್ನು ಕೊನೆಗೊಳಿಸಲಾಗುತ್ತದೆ. 

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಒಟ್ಟಿನಲ್ಲಿ ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿರುವ ಈ ದಿನಗಳಲ್ಲಿ ತಲೆ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸುಗ್ಗಿಯಲ್ಲಿ ಮಕ್ಕಳು, ಯುವಕರೂ ಸಹ ಹಿರಿಯರೊಂದಿಗೆ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಮುಂದಿನ ಪೀಳಿಗೆಗೂ ಆಚರಣೆಗಳನ್ನ ತಿಳಿಸಿಕೊಡುವಲ್ಲಿ ಸುಗ್ಗಿ ಕುಣಿತ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ.