Asianet Suvarna News Asianet Suvarna News

ಅಯೋಧ್ಯೆಗೆ ಬಂತು ಶ್ರೀರಂಗಂನ ಸೀರೆ ಅಲಿಗಢದ 50 ಕೇಜಿ ಬೀಗ, ಹೈದರಾಬಾದ್‌ನ ಪಾದುಕೆ

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ವಿವಿಧೆಡೆಯಿಂದ ಭಕ್ತರು ತಮ್ಮ ಆರಾಧ್ಯ ದೈವ ರಾಮಲಲ್ಲಾನಿಗೆ ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ. ಅದೇ ರೀತಿ ಈಗ ಅಲಿಢದಿಂದ 50 ಕೆಜಿ ಬೀಗ, ಶ್ರೀರಂಗಂನಿಂದ ಸೀರೆ, ಹೈದರಾಬಾದ್‌ನಿಂದ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಪಾದುಕೆ ಅಯೋಧ್ಯೆ ತಲುಪಿದೆ.

Srirangam saree, Aligarh 50 kg lock, Hyderabad's gold shoe came to Ayodhya for Lord Ram Mandir Inauguration akb
Author
First Published Jan 21, 2024, 11:28 AM IST

ಅಯೋಧ್ಯೆ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ವಿವಿಧೆಡೆಯಿಂದ ಭಕ್ತರು ತಮ್ಮ ಆರಾಧ್ಯ ದೈವ ರಾಮಲಲ್ಲಾನಿಗೆ ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ. ಅದೇ ರೀತಿ ಈಗ ಅಲಿಢದಿಂದ 50 ಕೆಜಿ ಬೀಗ, ಶ್ರೀರಂಗಂನಿಂದ ಸೀರೆ, ಹೈದರಾಬಾದ್‌ನಿಂದ ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಪಾದುಕೆ ಅಯೋಧ್ಯೆ ತಲುಪಿದೆ.

ಅಲಿಗಢ:  ಬೀಗಗಳ ತಯಾರಿಕೆಗೆ ಖ್ಯಾತಿ ಪಡೆದಿರುವ ಅಲಿಗಢದ ಬೀಗ ತಯಾರಕರೊಬ್ಬರು ರಾಮ ಮಂದಿರಕ್ಕೆಂದೇ ವಿಶೇಷವಾದ 50 ಕೇಜಿ ತೂಕದ ಬೃಹತ್‌ ಬೀಗವನ್ನು ಸಿದ್ಧಪಡಿಸಿ ಶನಿವಾರ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. ಅಲಿಗಢದ ಹ್ಯಾರಿಸ್ಸನ್‌ ಲಾಕ್ಸ್‌ ಕಂಪನಿ ತಯಾರಿಸಿದ ಈ ಬೀಗದ ಕೀಲಿಗಳು ಬರೋಬ್ಬರಿ 2 ಕೇಜಿ ತೂಕವಿದ್ದು, ಸತು ಹಾಗೂ ಕಬ್ಬಿಣ ಬಳಸಿ ಇದನ್ನು ತಯಾರಿಸಿದ್ದು, ಇದನ್ನು 6 ಜನ ಕಾರ್ಮಿಕರು ಸತತ 6 ತಿಂಗಳು ಕಾಲ ಸತತ ಪರಿಶ್ರಮ ಪಟ್ಟು ತಯಾರಿಸಿದ್ದಾರೆ. ಇದನ್ನು ರಾಮ ಮಂದಿರಕ್ಕೆ ಸಮರ್ಪಿಸಲಾಗಿದೆ.

ಮೋದಿ ಮೂಲಕ ಅಯೋಧ್ಯೆಗೆ ಶ್ರೀರಂಗಂನಿಂದ ಸೀರೆ ಕಾಣಿಕೆ

ಶ್ರೀರಂಗಂ: ತಮಿಳುನಾಡಿನ ರಾಮಾಯಣ ಐತಿಹ್ಯದ ಶ್ರೀರಂಗಂ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಗುಲದ ಪರವಾಗಿ ತರಹೇವಾರಿ ಸೀರೆಗಳು ಹಾಗೂ ಕುಪ್ಪುಸಗಳನ್ನು ಕಾಣಿಕೆಯಾಗಿ ನೀಡಿ, ಈ ಕಾಣಿಕೆಗಳನ್ನು ಅಯೋಧ್ಯೆಯ ರಾಮಮಂದಿರಕ್ಕೆ ತಲುಪಿಸುವಂತೆ ಕೋರಲಾಯಿತು. ಹೀಗಾಗಿ ಪ್ರಧಾನಿ ಮೂಲಕ ಶ್ರೀರಂಗಂನ ಸೀರೆ ಅಯೋಧ್ಯೆಯ ಶ್ರೀರಾಮನ ಸಾನಿಧ್ಯ ತಲುಪಿದೆ. 

ಅಯೋಧ್ಯೆಯ ರಾಮ ಮಂದಿರಕ್ಕೆ ಪದ್ಮನಾಭಸ್ವಾಮಿ ದೇಗುಲದಿಂದ 'ಒನವಿಲ್ಲು' ಉಡುಗೊರೆ

ಹೈದರಾಬಾದ್ ಭಕ್ತನಿಂದ ಬಂಗಾರ ಲೇಪಿತ ಪಾದುಕೆ

ಹೈದರಾಬಾದ್: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೆ ದೇಶಾದ್ಯಂತ ಭಕ್ತಾದಿಗಳು ಹಲವು ರೀತಿಯ ಉಡುಗೊರೆಗಳನ್ನು ಸಮರ್ಪಿಸುತ್ತಿದ್ದಾರೆ. ಹಾಗೆಯೇ ಹೈದರಾಬಾದ್ ಮೂಲದ ಚಲ್ಲ ಶ್ರೀನಿವಾಸ್‌ ಶಾಸ್ತ್ರಿ ಅವರು ಶ್ರೀರಾಮನಿಗೆ ಚಿನ್ನಲೇಪಿತ ಬೆಳ್ಳಿ ಪಾದುಕೆಗಳನ್ನು ದೇಣಿಗೆ ನೀಡಿದ್ದಾರೆ. ಪಾದುಕೆಗಳನ್ನು ಏಳು ಕೆಜಿ ಬೆಳ್ಳಿ ಮತ್ತು ಒಂದು ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ. ಚಲ್ಲ ಶ್ರೀನಿವಾಸ ಶಾಸ್ತ್ರಿ ಅವರು, ತಮಿಳುನಾಡಿನ ರಾಮೇಶ್ವರದಿಂದ ಪ್ರಾರಂಭಿಸಿ ಎರಡು ವರ್ಷಗಳ ಕಾಲ ದೇಶದ ಬಹುತೇಕ ಎಲ್ಲ ಹಿಂದೂ ಧಾರ್ಮಿಕಕೇಂದ್ರಗಳನ್ನು ಸಂದರ್ಶಿಸಿ ಅಯೋಧ್ಯೆಗೆ ತಲುಪಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಜೈಷ್‌ ಬೆದರಿಕೆ

ಅಯೋಧ್ಯೆ: ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೇವಲ ಎರಡು ದಿನ ಬಾಕಿ ಉಳಿದಿರುವ ನಡುವೆಯೇ ಸಾವಿರಾರು ಮುಗ್ಧ ಮುಸ್ಲಿಮರನ್ನು ಕೊಲ್ಲುವ ಮೂಲಕ ಕಟ್ಟಲಾದ ರಾಮಮಂದಿರದ ಮೇಲೆ ದಾಳಿ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದಾಗಿ ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆ ಬೆದರಿಕೆ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ನೇಪಾಳದಿಂದ ಅಯೋಧ್ಯೆ ತಲುಪಿದ 3 ಸಾವಿರ ಉಡುಗೊರೆ: ಸಂಭ್ರಮಕ್ಕೆ ಸಾಥ್ ಕೊಟ್ಟ ಸೀತೆಯ ತವರು ನೇಪಾಳ..!

ಶುಕ್ರವಾರ ರಾತ್ರಿ ರವಾನೆಯಾದ ಸಂದೇಶದಲ್ಲಿ, ರಾಮಮಂದಿರ ಕಟ್ಟುವ ಉದ್ದೇಶದಿಂದ ಅಮಾಯಕ ಮುಸಲ್ಮಾನರನ್ನು ಕೊಂದು ಕ್ರೌರ್ಯ ಮೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಜೋರ್ಡಾನ್‌ನಲ್ಲಿರುವ ಆಲ್‌ ಅಕ್ಸಾ ಮಸೀದಿಯಲ್ಲಿ ಉಂಟಾದ ಕೋಮು ಸಂಘರ್ಷದ ರೀತಿಯಲ್ಲೇ ರಾಮಮಂದಿರದ ಮೇಲೆ ದಾಳಿ ನಡೆಸಿ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ಅರ್ಥಹೀನ ಸಂದೇಶ- ಗುಪ್ತಚರ ಮೂಲಗಳು:

ಆದರೆ ಇದೊಂದು ಅರ್ಥಹೀನ ಸಂದೇಶ. ಜೈಷ್‌ ಎ ಮೊಹಮ್ಮದ್‌ ಬೆದರಿಕೆಯಲ್ಲಿ ಯಾವುದೇ ಹುರುಳಿಲ್ಲ. ಜೈಷ್‌ ಎ ಮೊಹಮ್ಮದ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈಗೊಂಬೆಯಾಗಿ ಈ ರೀತಿಯ ಸಂದೇಶ ಕಳುಹಿಸುತ್ತಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.

ಕಟ್ಟೆಚ್ಚರ:

ಆದಾಗ್ಯೂ ಅಯೋಧ್ಯೆಯಲ್ಲಿ ಭಾರೀ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ನಗರಾದ್ಯಂತ ಎಲ್ಲ ಚಟುವಟಿಕೆಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಗಣರಾಜ್ಯೋತ್ಸವದ ನಿಮಿತ್ತ ಭಾರತದ ಉದ್ದಗಲಕ್ಕೂ ಈಗಾಗಲೇ ಭಾರೀ ಕಟ್ಟಚ್ಚರ ವಹಿಸಲಾಗಿದೆ.

Follow Us:
Download App:
  • android
  • ios