Asianet Suvarna News Asianet Suvarna News

ಶೃಂಗೇರಿಯಲ್ಲಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ, ನವರಾತ್ರಿ ಸಂಪನ್ನ

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಂಭ್ರಮದ ರಥೋತ್ಸವ
ಶ್ರೀಗಳಿಂದ ಅಡ್ಡ ಪಲ್ಲಕ್ಕಿ ಉತ್ಸವ 
ಶೃಂಗೇರಿ ನವರಾತ್ರಿ  ಸಂಪನ್ನ

Sringeri Navratri celebrations end with Addapallakki utsava skr
Author
First Published Oct 6, 2022, 5:24 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಶಂಕರಾಚಾರ್ಯರಿಂದ ಸ್ಥಾಪನೆಗೊಂಡ ಚಿಕ್ಕಮಗಳೂರಿನ  ಶೃಂಗೇರಿಯ ಶ್ರೀ ಶಾರದಾಂಬೆಯ ಸನ್ನಿದಿಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವಿಜಯ ದಶಮಿಯ ಮರುದಿನವಾದ ಇಂದು ಕ್ಷೇತ್ರದಲ್ಲಿ ರಥೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವಗಳು ನೆರವೇರಿತು. ಶ್ರೀಶಾರದಾ ಮಠದ ಕಿರಿಯ ಜಗದ್ಗುರುಗಳಾದ ವಿಧುಶೇಖರ ಭಾರತೀ ತೀರ್ಥ ಶ್ರೀಪಾದರಿಗೆ ರತ್ನ ಖಚಿತ ಕಿರೀಟವನ್ನು ತೊಡಿಸಿ, ರಾಜಪೋಷಾಕಿನೊಂದಿಗೆ ರತ್ನ ಖಚಿತವಾದ ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು.

ಅಡ್ಡಪಲ್ಲಕ್ಕಿ ಉತ್ಸವ, ಶಾರದಾಂಬಾ ರಥೋತ್ಸವದಲ್ಲಿ ಭಕ್ತ ಸಾಗರ 
ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದಲ್ಲಿ ನಡೆದುಕೊಂಡು ಬಂದಿರುವ ನವರಾತ್ರಿ ಉತ್ಸವ ಇಂದು ಜಗದ್ಗುರುಗಳಾದ ವಿಧುಶೇಖರ ಭಾರತೀ ತೀರ್ಥ  ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ, ಶಾರದಾಂಬಾ ರಥೋತ್ಸವದ ಮೂಲಕ ಸಂಪನ್ನವಾಯಿತು. ನವರಾತ್ರಿ ಉತ್ಸವದ ದಿನಗಳಲ್ಲಿ ತನ್ನದೇ ಆದ ವಿಶಿಷ್ಯ ತೆ ಹೊಂದಿರುವ ಶೃಂಗೇರಿ ಶಾರದಾ ಪೀಠದಲ್ಲಿ ಇಂದು ನಡೆದ ರಥೋತ್ಸವ ಹಾಗು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಭಾರೀ ಮಹತ್ವನ್ನು ಪಡೆದುಕೊಂಡಿದೆ. ವಿಶೇಷ ಪೋಷಾಕು, ರತ್ನಖಚಿತ ಕಿರೀಟ ಧಾರಣೆ ಮಾಡಿದ ಶ್ರೀಗಳು ಸ್ವರ್ಣ ಪಲ್ಲಕ್ಕಿಯನ್ನು ಏರಿದ ಬಳಿಕ ಮಠದ ಸಂಪ್ರದಾಯ, ಬಿರುದು ಬಾವಲಿ, ಜಾನಪದ ನೃತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಬಿಂಬಿಸುವ ಸ್ಥಬ್ದ ಚಿತ್ರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಾಗಿತ್ತು.\

Mysuru Dasara 2022: ಅದ್ಧೂರಿ ಜಂಬೂಸವಾರಿಗೆ ಲಕ್ಷಾಂತರ ಜನ ಸಾಕ್ಷಿ

ಗಮನ ಸೆಳೆದ ಸ್ತಬ್ಧಚಿತ್ರಗಳು
ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವ ಹಾಗು ಶ್ರೀಗಳ ಪಲ್ಲಕ್ಕಿ ಉತ್ಸವ ಒಂದೇ ಸಂದರ್ಭದಲ್ಲಿ ನಡೆಯುವುದು ಇನ್ನೊಂದು ವಿಶೇಷವಾಗಿದೆ. ಹೀಗಾಗಿ ಈ ಸಂಭ್ರಮದ ಕ್ಷಣಗಳನ್ನು ಸಾಕ್ಷೀಕರಿಸಲು ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸೇರಿದ್ರು.ಪಲ್ಲಕ್ಕಿ ಉತ್ಸವ ಶೃಂಗೇರಿಯ ರಾಜಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಭಜನಾ ಕಾರ್ಯಕ್ರಮ, ಹೋಳಿನೃತ್ಯ, ಕೋಲಾಟ ,ಉತ್ತಮ ಕಲಾಕಾರ, ಶೃಂಗೇರಿಯ ಕಾಂಚೀನಗರದ ನಿವಾಸಿ ಸಂದೇಶ್ ನಿರ್ಮಾಣ ಮಾಡಿದ ಕಿಂಕಿಣಿ ಎಂಬ ರಾಕ್ಷಸೀ ಬಾಯಿಂದ ಹನುಮಂತ ಹೊರಬರುವ ಸ್ತಬ್ಧಚಿತ್ರ ,ಅಡಿಕೆ ಬಂದಿರುವ ಕೊಳೆರೋಗ, ಚುಕ್ಕೆರೋಗ ಟ್ಯಾಬ್ಲೋಗಳು ಎಲ್ಲರ ಗಮನ ಸೇಳೆಯಿತು. ಪಲ್ಲಕಿ ಉತ್ಸವದ ಬಳಿಕ ಶ್ರೀಗಳು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಹಗಲು ದಬಾರ್ ನಡೆಸಿದ್ರು.ಒಟ್ಟಾರೆ  ಶ್ರೀ ಶಾರದಾ ಪೀಠದಲ್ಲಿ ನಡೆದ ರಥೋತ್ಸವ ಮತ್ತು ವಿಧುಶೇಖರ್  ಭಾರತೀ ತೀರ್ಥ ಶ್ರೀಗಳ ಅಡ್ಡ  ಪಲ್ಲಕ್ಕಿ  ಉತ್ಸವದೊಂದಿಗೆ ಶೃಂಗೇರಿ ಕಳೆದ ಹತ್ತು ದಿನ ಕಾಲ ನಡೆದ ಈ ಭಾರೀಯ  ನವರಾತ್ರಿ ಉತ್ಸವ ಸಂಪನ್ನಗೊಂಡಿತು.

Follow Us:
Download App:
  • android
  • ios