Asianet Suvarna News Asianet Suvarna News

Valmiki Jayanti 2022: ಅಂತರಂಗದ ವಲ್ಮಿಯೊಳಗೆ ರೂಪುಗೊಂಡ ಋುಷಿ

ರಾಮ-ರಾವಣರ ಯುದ್ಧದಲ್ಲಿ ಲಂಕಾಧಿಪತಿ ರಾವಣ ಹತನಾದ. ಅಷ್ಟೊತ್ತಿಗೆ 14 ವರ್ಷಗಳ ವನವಾಸದ ಅವಧಿಯೂ ಪೂರ್ಣಗೊಂಡಿದ್ದರಿಂದ, ಲಂಕೆಯ ಗೆಲುವು ಮತ್ತು ಪಿತೃವಾಕ್ಯ ಪರಿಪಾಲನೆಯ ಸಂತಸದಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಆಗಮಿಸುತ್ತಾನೆ. 

special article by mallikarjuna siddannavara on valmiki jayanti 2022 gvd
Author
First Published Oct 9, 2022, 7:16 AM IST

ಮಲ್ಲಿಕಾರ್ಜುನ ಸಿದ್ದಣ್ಣವರ, ಹುಬ್ಬಳ್ಳಿ

ಅಹಿಂಸೆಯ ಸೆಲೆಯಿಂದ ಹುಟ್ಟಿದ ಕೃತಿ ರಾಮಾಯಣ. ಕ್ರೌಂಚ ಪಕ್ಷಿಯ ರೋದನೆ ನೋಡಲಾಗದೆ ಬೇಡನಿಗೆ ಶಾಪ ನೀಡುವ ಸಲುವಾಗಿ ವಾಲ್ಮೀಕಿಯ ಬಾಯಿಯಿಂದ ಆಶುವಾಗಿ ಬಂದ ಸಾಲುಗಳೇ ರಾಮಾಯಣದ ರಚನೆಗೆ ಮೂಲ ಕಾರಣವಾದವು. ಮುಂದೆ ಇದೇ ಅಂಹಿಸಾ ಮಾರ್ಗದಲ್ಲಿ ಬುದ್ಧ, ಬಸವ, ಯೇಸು, ಗಾಂಧೀಜಿ, ಅಂಬೇಡ್ಕರ್‌ ಸಾಗಿದರು. ಇಂದಿನ ಜಗತ್ತಿಗೆ ಇಂಥ ತಾಯಿಗುಣದ ಅಹಿಂಸೆಯ ಅಗತ್ಯತೆ ಇದೆ.

ರಾಮ-ರಾವಣರ ಯುದ್ಧದಲ್ಲಿ ಲಂಕಾಧಿಪತಿ ರಾವಣ ಹತನಾದ. ಅಷ್ಟೊತ್ತಿಗೆ 14 ವರ್ಷಗಳ ವನವಾಸದ ಅವಧಿಯೂ ಪೂರ್ಣಗೊಂಡಿದ್ದರಿಂದ, ಲಂಕೆಯ ಗೆಲುವು ಮತ್ತು ಪಿತೃವಾಕ್ಯ ಪರಿಪಾಲನೆಯ ಸಂತಸದಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಆಗಮಿಸುತ್ತಾನೆ. ಶ್ರೀರಾಮನ ಆಗಮನದಿಂದ ಇಡೀ ಅಯೋಧ್ಯೆಯೇ ಸಂಭ್ರಮದಲ್ಲಿ ಮುಳುಗಿರುತ್ತದೆ. ಪ್ರಜೆಗಳ ಆನಂದಕ್ಕೆ ಪಾರವೇ ಇರುವುದಿಲ್ಲ. ಕೈಕೇಯಿ, ಭರತ, ಸುಮಿತ್ರೆಯರು ಮುಂದೆ ನಿಂತು ಇವರನ್ನು ಅರಮನೆಗೆ ಆದರದಿಂದ ಬರಮಾಡಿಕೊಳ್ಳುತ್ತಾರೆ.

ಆದರೆ, ರಾಜಮಾತೆ ಕೌಸಲ್ಯೆಯ ಮುಖದಲ್ಲಿ ಮಾತ್ರ ಎಂಥದೋ ಪಶ್ಚಾತ್ತಾಪದ ಛಾಯೆ. ಪಾದಕ್ಕೆ ಎರಗಿದ ಪುತ್ರನನ್ನು ಹಿಡಿದೆತ್ತಿ, ‘ರಾಮಾ, ಪರಮ ಶಿವಭಕ್ತನಾದ ರಾವಣೇಶ್ವರರನ್ನು ನೀನೇ ಕೊಂದೆಯಾ?’ ಎಂದು ವ್ಯಾಕುಲಗೊಂಡು ಕೇಳುತ್ತಾಳೆ. ತಾಯಿಯ ಈ ಪ್ರಶ್ನೆಯಿಂದ ವಿಚಲಿತನಾಗದ ಶ್ರೀರಾಮ, ‘ಅಮ್ಮಾ, ರಾವಣೇಶ್ವರನನ್ನು ಕೊಲ್ಲಲು ನಾನ್ಯಾರು? ಅವನಲ್ಲಿನ ‘ನಾನು’ ಕೊಲ್ಲಿಸಿತು. ಈ ನಿನ್ನ ಕುವರ ನಿಮಿತ್ತ ಮಾತ್ರ’ ಎಂದು ಮುಗುಳ್ನಗುತ್ತಾನೆ. ಆಗ ಪುತ್ರನನ್ನು ಬಿಗಿದಪ್ಪಿ ಮುದ್ದಿಸುತ್ತ ಆನಂದಬಾಷ್ಪ ಸುರಿಸುತ್ತಾಳೆ ಕೌಸಲ್ಯಾ. ‘ರಾಮಾಯಣ’ ಮಹಾಕಾವ್ಯದಲ್ಲಿ ಬರುವ ಈ ಸಣ್ಣ ಪ್ರಸಂಗ ಹಿಂಸೆಯ ಬಗೆಗಿನ ಮಹರ್ಷಿ ವಾಲ್ಮೀಕಿಯ ಅಂತರಂಗದ ತಳಮಳವನ್ನು ಎತ್ತಿ ಹೇಳುತ್ತದೆ.

Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌

ಇಡೀ ಮಹಾಕಾವ್ಯದ ಆಶಯವೇ ಇದು. ಅದಮ್ಯ ಮಾನವ ಪ್ರೀತಿ, ಸಕಲ ಜೀವಿಗಳ ಲೇಸು, ಮಾನವೀಯ ಅನುಕಂಪ, ದ್ವೇಷರಹಿತ ಮತ್ತು ಅಸಮಾನತೆ ರಹಿತ ಸಮಾಜ ನಿರ್ಮಾಣದ ಕನಸುಗಳು ಪ್ರತಿ ಶ್ಲೋಕದಲ್ಲೂ ಬುಗ್ಗೆಯಾಗಿವೆ. ಹಾಗಾಗಿ ಇಂದು ಜಗತ್ತು ಎದುರಿಸುತ್ತಿರುವ ಬಹುತೇಕ ತಲ್ಲಣಗಳಿಗೆ ಈ ಆದರ್ಶಗಳಲ್ಲಿ ಸಮರ್ಪಕ ಉತ್ತರವಿದೆ. ಇವು ಆ ನೋವಿಗೆ ಮುಲಾಮು ಆಗಬಲ್ಲವು ಎನ್ನುವುದನ್ನು ಇಂದು ‘ವಾಲ್ಮೀಕಿ ಜಯಂತಿ’ ಆಚರಣೆಗೆ ನಿಂತವರು ಮನಗಾಣಬೇಕಿದೆ.

ಒಂದು ಲಕ್ಷ ರಾಮಾಯಣ: ಒಂದು ಸಮೀಕ್ಷೆಯ ಪ್ರಕಾರ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಭಾಷೆ, ದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರಾಮಾಯಣಗಳು ರಚನೆಯಾಗಿವೆ. ವಾಲ್ಮೀಕಿಯ ಮೂಲ ಅಥವಾ ರೂಪಾಂತರಗೊಂಡ ರಾಮಾಯಣವನ್ನು ಆಧಾರವಾಗಿ ಇಟ್ಟುಕೊಂಡು ತಮ್ಮಲ್ಲಿನ ಸಂಸ್ಕೃತಿ, ನಂಬಿಕೆ, ಇತಿಹಾಸ, ಪರಂಪರೆ, ಚಾಲ್ತಿ ಮೌಲ್ಯಗಳನ್ನು ಸೇರಿಸಿ ತಮ್ಮದೇ ಆದ ರಾಮಾಯಣವನ್ನು ಅಲ್ಲಿನ ಲೇಖಕರು ಬರೆದಿದ್ದಾರೆ. ಥಾಯ್ಲೆಂಡ್‌ ರಾಮಾಯಣದ ನಾಯಕ ಲಕ್ಷ್ಮಣ. ಮಲೇಷ್ಯಾ ರಾಮಾಯಣದ ನಾಯಕ ಹನೂಮಂತ. ಶ್ರೀಲಂಕಾ ರಾಮಾಯಣದ ನಾಯಕ ರಾವಣ! ರಾಮಾಯಣದಂತೆ ಸೀತಾಯಣವೂ ರಚನೆಯಾಗಿರುವುದು ಗಮನೀಯ.

ಒಂದು ಕೃತಿಯಲ್ಲಿ ಹೀರೋ ಆಗಿದ್ದ ಪಾತ್ರ ಮತ್ತೊಂದರಲ್ಲಿ ವಿಲನ್‌ ಆಗುವುದುಂಟು. ಈ ಗೊಂದಲದ ಮಧ್ಯೆ ವಾಲ್ಮೀಕಿಯ ಮೂಲ ರಾಮಾಯಣವೇ ಕಳೆದುಹೋದಂತೆ ಭಾಸವಾಗುತ್ತಿದ್ದರಿಂದ ಅಗಸನ ಮಾತು ಕೇಳಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ, ಬಂಡೆಯ ಮರೆಗೆ ನಿಂತು ವಾಲಿಯ ಸಂಹಾರ ಮಾಡಿದ... ಇತ್ಯಾದಿ ಅಂಶಗಳು ಮಾತ್ರ ಮುನ್ನೆಲೆಗೆ ಬಂದು ವಾಲ್ಮೀಕಿಯ ಮೂಲ ಆಶಯ ಮಸುಕು ಮಸುಕಾಗಿ ಭಾರತೀಯರೇ ಮುಂದಾಗಿ ನಿಂತು ರಾಮಾಯಣವನ್ನು ತಿರಸ್ಕಾರದಿಂದ ನೋಡಿದ ಪ್ರಸಂಗಗಳು ನಡೆದಿವೆ. ಕೆಲವರು ಶ್ರೀರಾಮನನ್ನು ಅತಿಯಾಗಿ ವೈಭವೀಕರಣ ಮಾಡಿರುವುದು ಕೂಡ ಈ ತಿರಸ್ಕಾರಕ್ಕೆ ಕಾರಣ ಆಗಿರಲೂಬಹುದು. ಪರ-ವಿರೋಧ, ವಾದ-ವಿವಾದ ಏನೇ ಇದ್ದರೂ ಕವಿಯ ಆಶಯ, ಕನಸು, ಉದಾತ್ತ ಧ್ಯೇಯ ಮುಖ್ಯ. ಮತ್ತು ಅವು ಸಾರ್ವಕಾಲಿಕ ಮೌಲ್ಯಗಳು.

ಅಹಿಂಸಾವಾದದಲ್ಲಿ ಹುಟ್ಟಿದ ಕೃತಿ
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ಕೌ್ರಂಚಮಿಥುನಾದೇಕಮವಧೀಃ ಕಾಮಮೋಹಿತಮ್‌

ಹೀಗೆ ರಾಮಾಯಣದ ಹುಟ್ಟು ಇರುವುದೇ ಅಹಿಂಸಾವಾದದ ನೆಲೆಯಲ್ಲಿ. ಪ್ರಣಯ ಜೋಡಿ ಕ್ರೌಂಚಪಕ್ಷಿಗಳಲ್ಲಿ ಬೇಡನ ಬಾಣದಿಂದ ಹತವಾದ ಗಂಡು ಕ್ರೌಂಚದ ಸಾವಿನಿಂದಾಗಿ ರೋದಿಸುತ್ತಿದ್ದ ಹೆಣ್ಣು ಕ್ರೌಂಚವನ್ನು ಕಂಡು ಮುಮ್ಮಲ ಮರುಗಿದ ಮಹರ್ಷಿ ವಾಲ್ಮೀಕಿ, ‘ಈ ದೇಶದಲ್ಲಿ ನಿರಪರಾಧಿಗಳ ದುಃಖ ಅಡಗಿದೆ. ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಎಂದಾದರೂ ಸತ್ಯಕ್ಕೆ ಜಯ ಕಟ್ಟಿಟ್ಟಬುತ್ತಿ. ನಿರಪರಾಧಿಗಳಿಗೆ ಮುಂದೊಂದು ದಿನ ಒಳ್ಳೆಯದಾಗುತ್ತದೆ’ ಎಂದು ಬಲವಾಗಿ ನಂಬಿ ರಾಮಾಯಣಕ್ಕೆ ಮುನ್ನುಡಿ ಬರೆದಿದ್ದಾರೆ.

ಕಾಡಿನ ಹಕ್ಕಿಯಾದರೇನು, ಆ ಪಕ್ಷಿಯು ಅನುಭವಿಸುತ್ತಿದ್ದ ನೋವು-ಸಂಕಟ ನಿಜದಲ್ಲಿ ಲೋಕದ ನೋವು. ಕವಿಯ ಮಾತೃಹೃದಯ ತನ್ನದೇ ನೋವು ಎಂಬಂತೆ ಮರುಗಿದೆ. ಮುಂದೆ ಇದೇ ಅಂಹಿಸಾ ಮಾರ್ಗದಲ್ಲಿ ಬುದ್ಧ, ಬಸವ, ಯೇಸು, ಗಾಂಧೀಜಿ, ಅಂಬೇಡ್ಕರ್‌ ಸಾಗಿದರು. ಅವರ ನಡೆ-ನುಡಿ, ವ್ಯಕ್ತಿತ್ವದಲ್ಲೂ ಮಾನವ ಪ್ರೀತಿ-ಅಹಿಂಸಾ ಮಾರ್ಗವನ್ನು ಕಾಣುತ್ತೇವೆ. ಅಂದಂದಿನ ಹಿಂಸೆ, ದ್ವೇಷ, ಅಸಹಾಯಕತೆಗೆ ಇವರೆಲ್ಲ ಅಹಿಂಸಾ ಮಾರ್ಗವನ್ನು ಗುರಾಣಿಯಂತೆ ಬಳಸಿದರು. ಇಂದಿನ ಜಗತ್ತಿಗೆ ಇಂಥ ತಾಯಿಗುಣದ ಅಹಿಂಸೆಯ ಅಗತ್ಯತೆ ಇದೆ.

ಅಂತರಂಗದ ವಲ್ಮಿ: ವಾಲ್ಮೀಕಿಯ ಕುರಿತು ಒಂದಷ್ಟುಮಾತುಗಳು ಚಾಲ್ತಿಯಲ್ಲಿವೆ. ಅವುಗಳನ್ನು ಮಿಥ್ಯೆ ಎಂತಲೂ ಅಥವಾ ರೂಪಕ ಎಂತಲೂ ಪರಿಭಾವಿಸಬಹುದಾಗಿದೆ. ಪರರನ್ನು ಹಿಂಸಿಸುತ್ತಿದ್ದ ಬೇಡ ನಾರದ ಮುನಿಯ ಭೇಟಿಯಿಂದ ಮನಃಪರಿವರ್ತನೆಗೊಂಡು ತನ್ನ ದೇಹದ ಸುತ್ತ ಹುತ್ತ (ವಲ್ಮಿ) ಬೆಳೆಯುವಷ್ಟುಸುದೀರ್ಘ ಕಾಲ ತಪಸ್ಸು ಮಾಡಿ ಮಹರ್ಷಿ ವಾಲ್ಮೀಕಿಯಾದ ಎನ್ನುವುದು ಚಾಲ್ತಿಯಲ್ಲಿದೆ.

ಆದರೆ, ವಾಲ್ಮೀಕಿಯ ವಿದ್ಯಾಭ್ಯಾಸದ ಬಗ್ಗೆ ಕುವೆಂಪು ಹೀಗೆ ಹೇಳಿದ್ದಾರೆ: ‘ಶ್ರೀರಾಮನ ಪ್ರಿಯ ಸ್ನೇಹಿತನಾದ ಗುಹನು ಬೇಡರ ನಿಷಾದರ ದೊರೆ. ಆ ನಿಷಾದರಿಗೂ ಅವರದೇ ಆದ ನೆಲದ, ಕುಲದ, ಸಂಸ್ಕೃತಿ, ವಿದ್ಯೆ, ಬುದ್ಧಿ ಎಲ್ಲವೂ ಇದ್ದವು. ಆದಿಕವಿಯಾಗುವ ತನ್ನ ಮೆಚ್ಚಿನ ಕಂದನನ್ನು ವ್ಯಾಧನನ್ನಾಗಿ ಹುಟ್ಟಿಸುವಂತೆ ವಾಗ್ದೇವಿ ಪತಿಯನ್ನು ಪ್ರೇರೇಪಿಸಿದಳು.’

ಫ.ಗು.ಹಳಕಟ್ಟಿ, ಡಾ.ಎಂ.ಎಂ. ಕಲಬುರ್ಗಿ ಅವರಂತೆ ಶರಣರ ‘ವಚನ’ಗಳನ್ನು ವಾಸ್ತವಿಕ ನೆಲೆಯಲ್ಲಿ ಪರಿಶೋಧಿಸಿದಂತೆ ರಾಮಾಯಣ ಕೃತಿಗಳ ಶೋಧನೆಯಾಗಿಲ್ಲ. ಹಾಗಾಗಿ ಅದಾರೋ ಹೇಳಿದರೆಂದು ನಮ್ಮ ಕೈಗೆ ಸಿಗುವ ಕೃತಿಯನ್ನೇ ಮೂಲ ರಾಮಾಯಣ ಎಂದು ನಂಬುವುದರಿಂದ ವಾಲ್ಮೀಕಿಯ ಪೂರ್ವಾಪರಗಳ ಬಗ್ಗೆ ನಿಖರ ಮಾಹಿತಿ ನಮಗೆ ಲಭಿಸುತ್ತಿಲ್ಲ. ಹಾಗಾಗಿ ಕ್ರೂರ ವ್ಯಾಧ, ಕೃಪೆ, ಆಶೀರ್ವಾದ ಎನ್ನುತ್ತ ಮಹಾಕವಿಯ ಕಠಿಣ ಪರಿಶ್ರಮ, ಸಾಧನೆ, ಚಿಂತನೆಗಳ ಬಗ್ಗೆ ಕುರುಡರೂ, ಕಿವುಡರೂ ಆಗಿದ್ದೇ ಹೆಚ್ಚು. ಇಂಥದೊಂದು ಮಹಾಕಾವ್ಯವು ಕೃಪೆ, ಆಶೀರ್ವಾದದಿಂದ ರಚನೆಯಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಮನದ ಮೂಲೆಯಲ್ಲಿ ಮೊಳೆತರೆ ಸಾಧಕ, ಸ್ವಾಭಿಮಾನಿ, ಮಾನವಪರ ಚಿಂತಕ ವಾಲ್ಮೀಕಿ ನಮಗೆ ಲಭಿಸಲು ಸಾಧ್ಯವಿದೆ.

ಮೈಮೇಲೆ ಬೆಳೆದ ವಲ್ಮಿ (ಹುತ್ತ) ಅಂತರಂಗದ ವಲ್ಮಿಯೂ ಆಗಿರಬಹುದಲ್ಲ? ಸದ್ವಿಚಾರದ ಹುತ್ತ, ಶ್ರೇಷ್ಠ ಜೀವನ ಮೌಲ್ಯದ ವಲ್ಮಿ ಎಂದು ಆ ರೂಪಕವನ್ನು ಮರುವಿಶ್ಲೇಷಣೆಗೆ ಒಳಪಡಿಸಬಹುದಲ್ಲ? ಹುಟ್ಟಿನಿಂದ ಎಲ್ಲರೂ ಸಮಾನರೇ, ನಿಸರ್ಗಕ್ಕೆ ಯಾವುದೇ ಅಸಮಾನತೆಯ ಅಥರ್‌ಗಳಿಲ್ಲ. ‘ಶ್ರಮ’ ಎಲ್ಲದರ ಮೂಲ ಸೆಲೆ ಮತ್ತು ಅದು ಸಾಮಾನ್ಯ, ಸಹಜ, ಸರಳ ಮತ್ತು ವೈಜ್ಞಾನಿಕ ಸತ್ಯ. ಮಹರ್ಷಿಯಾಗಿ ರೂಪುಗೊಂಡ ವಾಲ್ಮೀಕಿ ಇಂಥ ಶ್ರಮ-ಸ್ವಾಭಿಮಾನದ ಪ್ರತೀಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜೀವನ ಮೌಲ್ಯಕ್ಕೆ ಹೆಚ್ಚಿನ ಒತ್ತು: ವಾಲ್ಮೀಕಿಯ ಸಮಗ್ರ ಆಶಯವನ್ನು ಗಮನಿಸಿದರೆ ಮನುಷ್ಯ ತನ್ನ ಸದಾಚಾರ, ಸನ್ನಡತೆ, ಜೀವಪರ ನಿಲುವು, ಸಮಾನ ಗೌರವದಲ್ಲಿ ನಂಬಿಕೆ ಇಟ್ಟರೆ ಪುರುಷೋತ್ತಮ ಆಗಲು ಸಾಧ್ಯವಿದೆ ಎಂಬುದು ಕಣ್ಣಿಗೆ ರಾಚುತ್ತಿದೆ. ಇದನ್ನು ರಾಮಾಯಣದಲ್ಲಿ ವಾಲ್ಮೀಕಿ ಸಾರಿ ಹೇಳಿರುವುದು ವೇದ್ಯವಾಗದೇ ಇರದು.

24 ಸಾವಿರ ಶ್ಲೋಕಗಳನ್ನು ಹೊಂದಿರುವ ರಾಮಾಯಣದಲ್ಲಿ ದೇವರು, ಪವಾಡ, ಅದೃಷ್ಟ, ಹಣೆಬರಹ, ಕರ್ಮ ಇತ್ಯಾದಿಗಳಿಗಿಂತ ಜೀವನ ಮೌಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಸಲು ಮಾತೆಂದರೆ ವಾಲ್ಮೀಕಿ ಶ್ರೀರಾಮನನ್ನು ಎಲ್ಲೂ ಅವತಾರ ಪುರುಷ, ದೇವರು ಎಂದು ಹೇಳುವುದಿಲ್ಲ. ಮಾನವನಾಗಿದ್ದ ಶ್ರೀರಾಮ ತನ್ನ ಉತ್ತಮ ನಡೆ, ಮಾನವೀಯ ಗುಣ, ತ್ಯಾಗ, ಸಹೋದರತೆ, ಕರುಣೆಯಿಂದ ಪುರುಷೋತ್ತಮನಾದ ಮತ್ತು ಎಲ್ಲರಿಗೂ ಇದು ಸಾಧ್ಯವಿದೆ ಎನ್ನುವ ತನ್ನ ನಂಬಿಕೆಯನ್ನು ರಾಮಾಯಣದ ಮೂಲಕ ಋುಜುವಾತು ಮಾಡಿದ್ದಾನೆ.

Vishwakarma Jayanti 2022: ವಿಶ್ವಕರ್ಮ ಪೂಜೆಯಂದು 5 ಮಂಗಳಕರ ಯೋಗ!

ಶ್ರೀರಾಮನ ಸತ್ಯಸಂಧತೆ, ಪಿತೃವಾಕ್ಯ ಪರಿಪಾಲನೆ ಮತ್ತು ಏಕಪತ್ನೀವ್ರತ, ಸೀತೆಯ ಪಾತಿವ್ರತ್ಯ, ಕಾಡಿನಲ್ಲಿ ಒಂಟಿಯಾಗಿ ಸಿಕ್ಕ ಮಹಿಳೆಯನ್ನು ಮಗಳಂತೆ ಸಲುಹಿದ ಮಹರ್ಷಿ ವಾಲ್ಮೀಕಿ ಮುಂತಾದ ಪ್ರಸಂಗಗಳು ಈ ಕೃತಿಯ ಸಾರ್ವಕಾಲಿಕ ಶ್ರೇಷ್ಠ ಮೌಲ್ಯಗಳಾಗಿವೆ. ಹಾಗಾಗಿ ರಾಮಾಯಣ ಸರಯೂ ನದಿಯಂತೆ ನಿತ್ಯ ಹೊಸತಾಗುವ ಒಂದು ಚಿರಂತನ ಮಹಾಕಾವ್ಯವಾಗಿ ಜಾಗತಿಕ ಸಾಹಿತ್ಯದಲ್ಲಿ ಮನ್ನಣೆ ಪಡೆದಿದೆ.

ಇದೇ ಕಾರಣಕ್ಕಾಗಿ ಖ್ಯಾತ ಗ್ರೀಕ್‌ ಸಾಹಿತಿ ಹೋಮರ್‌ನ ‘ಇಲಿಯಡ್‌’ ಮತ್ತು ‘ಓಡಿಸ್ಸಿ’ ಮಹಾಕಾವ್ಯಕ್ಕೆ ರಾಮಾಯಣವನ್ನು ಹೋಲಿಕೆ ಮಾಡಲಾಗುತ್ತದೆ. ವಾಸ್ತವದಲ್ಲಿ ಅವುಗಳಿಗಿಂತ ಹತ್ತಾರು ಪಟ್ಟು ಉತ್ತಮ ಅಂಶಗಳನ್ನು ರಾಮಾಯಣ ಹೊಂದಿದೆ ಎನ್ನುವುದನ್ನು ಭಾರತೀಯರಾದ ನಾವು ಎದೆಯುಬ್ಬಿಸಿ ಹೇಳಬೇಕಿದೆ.

ಈ ಕಾರಣಕ್ಕಾಗಿ ಮಹಾಮಾನವತಾವಾದಿ, ಪ್ರಾತಃಸ್ಮರಣೀಯ ಸರ್ವಶ್ರೇಷ್ಠ ಚಿಂತಕ ವಾಲ್ಮೀಕಿಗೆ...
‘ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ

- ಕವಿತೆಯ ಟೊಂಗೆಯ ಮೇಲೆ ಕುಳಿತು ರಾಮ ರಾಮ ಎಂಬ ಮಧುರ ಅಕ್ಷರಗಳನ್ನು ಉಲಿಯುತ್ತಿರುವ ವಾಲ್ಮೀಕಿಯೆಂಬ ಕೋಗಿಲೆಗೆ ನಮಸ್ಕಾರ... ಎಂದು ವಂದಿಸುವ ಜತೆಗೆ ಮನೆ ಮನೆಯಲ್ಲಿ ರಾಮಾಯಣ ಮಹಾಕಾವ್ಯ ಇರುವಂತೆ, ಮನ ಮನದಲ್ಲೂ ವಾಲ್ಮೀಕಿಯ ಆದರ್ಶಗಳು ಝೇಂಕರಿಸುವಂತೆ ಮಾಡುವ ಕ್ರಿಯಾತ್ಮಕ ಕಾರ್ಯಗಳು ಜಾರಿಗೆ ಬರಬೇಕಿದೆ.

Follow Us:
Download App:
  • android
  • ios