Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌

ಗಾಂಧೀಜಿ ಜನಿಸಿದ ಇಂದಿನ ದಿನ ನಮ್ಮನ್ನು, ನಮ್ಮ ಯುವ ಪೀಳಿಗೆಯನ್ನು ಸತ್ಯದ, ಅಹಿಂಸೆಯ, ಕಾಯಕನಿಷ್ಠೆಯ, ಸ್ವಾವಲಂಬನೆಯ ದಾರಿಯಲ್ಲಿ ನಡೆಸಲಿ. ಈ ದೇಶವು ಇಡೀ ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲುವಂತೆ ಆಗಲಿ. ಎಲ್ಲರೂ ಖಾದಿ ಖರೀದಿಸೋಣ. ಗುಡಿಕೈಗಾರಿಕೆಗಳಿಗೆ ಬಲ ತುಂಬೋಣ.

Special Article by Minister Dr CN Ashwath Narayan on Gandhi Jayanti 2022 gvd

ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಆತ ಆಗಿನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ಶಾಲೆಗೆ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮಾಡಲು ತನಿಖಾಧಿಕಾರಿ ಬಂದಿದ್ದರು. ವಿದ್ಯಾರ್ಥಿಗಳಿಗೆ ಐದು ಇಂಗ್ಲಿಷ್‌ ಶಬ್ದ ಬರೆಯಲು ಹೇಳಿದರು. ಆ ಪೈಕಿ Kettle ಎನ್ನುವುದೂ ಒಂದು ಶಬ್ದವಾಗಿತ್ತು. ಅದನ್ನು ಒಬ್ಬ ವಿದ್ಯಾರ್ಥಿ ಸರಿಯಾಗಿ ಬರೆದಿರಲಿಲ್ಲ. ಶಿಕ್ಷಕರು ಬಂದು ಅವನ ಕಾಲು ತುಳಿದು, ‘ಪಕ್ಕದ ವಿದ್ಯಾರ್ಥಿಯನ್ನು ನೋಡಿ ಸರಿಯಾಗಿ ಬರೆ’ ಎಂದು ಸೂಚನೆ ಕೊಟ್ಟರೂ ಆ ವಿದ್ಯಾರ್ಥಿ ಒಪ್ಪಲಿಲ್ಲ. ತಾನು ನಕಲು ಮಾಡಲಾರೆ ಎಂಬುದು ಆತನ ನಿಲುವಾಗಿತ್ತು. ಮುಂದೆ ಆ ವಿದ್ಯಾರ್ಥಿಯೇ ಮಹಾತ್ಮ ಗಾಂಧೀಜಿ ಆದರು. 

‘ಬೆಳೆಯ ಸಿರಿ ಮೊಳಕೆಯಲ್ಲಿ ನೋಡು’ ಎನ್ನುವಂತೆ ಗಾಂಧೀಜಿಯವರು ಬದುಕಿನುದ್ದಕ್ಕೂ ಪರಿಪಾಲಿಸಿಕೊಂಡು ಬಂದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ರೂಢಿಸಿಕೊಂಡಿದ್ದರು. ಅವರು ನುಡಿದಂತೆ ನಡೆದರು. ಒಬ್ಬ ಶಿಕ್ಷಣ ಸಚಿವನಾಗಿ ನನಗೆ ಅವರ ಈ ನಿಲುವು ಬಹಳ ಮುಖ್ಯ ಎನಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಈ ಹಟವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಾವು ನಂಬಿದ ಮೌಲ್ಯಗಳು ನಮ್ಮನ್ನು ಯಾವಾಗಲೂ ಕಾಪಾಡುತ್ತವೆ. ಅವು ನಮ್ಮನ್ನು ಕೈಹಿಡಿದು ನಡೆಸುತ್ತವೆ.

ಸುಧಾಮನ ಊರಿನ ಸರಳ ವ್ಯಕ್ತಿ: ಮೋಹನದಾಸ ಕರಮಚಂದ ಗಾಂಧಿ ಗುಜರಾತ್‌ನ ಪೋರಬಂದರಿನ ಕರಮಚಂದ ಮತ್ತು ಪುತಳಿಬಾಯಿಯವರ ನಾಲ್ಕನೇ ಪುತ್ರನಾಗಿ 1869ರ ಅಕ್ಟೋಬರ್‌ 2ರಂದು ಜನಿಸಿದರು. ಪೌರಾಣಿಕವಾಗಿ ಪೋರಬಂದರ ಊರು ಕೃಷ್ಣನ ಆತ್ಮೀಯ ಗೆಳೆಯನಾದ ಸುಧಾಮನ ಊರು ಎಂದೂ ಪ್ರಸಿದ್ಧವಾಗಿದೆ. ಆ ಸುಧಾಮನ ಸರಳತೆ ಗಾಂಧೀಜಿಯವರ ಬದುಕಿನ ಉದ್ದಕ್ಕೂ ಎದ್ದು ಕಾಣುತ್ತದೆ. ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಗಳೂ ಅವರಿಗೆ ಹುಟ್ಟಿನಿಂದಲೇ ಬಂದ ಬಳುವಳಿಗಳಾಗಿದ್ದುವು.

ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್‌

ವಿಶಾಲ ಹಣೆಯ ಮೋಹನದಾಸ ತುಂಬಾ ಜಾಣ ಎಂದು ಆತನನ್ನು ಬೆಳೆಸಿದ ದಾದಿ ರಂಭಾ ಯಾವಾಗಲೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಳು. ಅದನ್ನು ಮೋಹನದಾಸ ಕೇಳಿಸಿಕೊಂಡು ನಾಚುತ್ತಿದ್ದ. ಎಲ್ಲ ಬಾಲಕರ ಹಾಗೆ ಅವರೂ ತಪ್ಪುಗಳನ್ನು ಮಾಡಿದರು. ಬಾಲ್ಯದಲ್ಲಿಯೇ ಮದುವೆ ಆಯಿತು. ಎಳೆಯ ವಯಸ್ಸಿನ ಆಕಾಂಕ್ಷೆಗಳು ಅವರಲ್ಲಿ ತಲ್ಲಣ ಎಬ್ಬಿಸುತ್ತಿದ್ದುವು. ಆದರೆ, ತನ್ನ ತಪ್ಪುಗಳನ್ನು ಅವರು ಬಚ್ಚಿಡುತ್ತಿರಲಿಲ್ಲ. ತಾವು ಮಾಡಿದ ಎಲ್ಲ ತಪ್ಪುಗಳನ್ನು ಪಟ್ಟಿಮಾಡಿ ತಂದೆಗೆ ಒಂದು ಪತ್ರ ಬರೆದು ಪಶ್ಚಾತ್ತಾಪ ಪಟ್ಟಿದ್ದರು. ಮಗ ಬರೆದ ಪತ್ರವನ್ನು ಓದುತ್ತ ಅವರ ತಂದೆ ಕರಮಚಂದರ ಕಣ್ಣುಗಳಲ್ಲಿ ಧಾರಾಕಾರ ನೀರು ಸುರಿದಿದ್ದುವು. ಮಗನನ್ನು ಅವರು ಮನಸಾರೆ ಕ್ಷಮಿಸಿದ್ದರು.

ಅಡೆತಡೆ ಮೀರಿ ವಿದೇಶಿ ಶಿಕ್ಷಣ: ತಂದೆಯ ಸಾವಿನ ನಂತರ ವಿದೇಶದಲ್ಲಿ ಬ್ಯಾರಿಸ್ಟರ್‌ ಪದವಿ ಪಡೆಯಲು ಗಾಂಧೀಜಿ ಹಣ ಹೊಂದಿಸಲು ಪರದಾಡಬೇಕಾಯಿತು. ಅವರ ಅಣ್ಣ ಹಣ ಕೊಡಲು ಕೊನೆಗೂ ಒಪ್ಪಿದರು. ಆದರೆ, ಗಾಂಧೀಜಿಯವರ ಮೋದ್‌ ಬನಿಯಾ ಸಮುದಾಯದವರು, ‘ಸಮುದ್ರವನ್ನು ದಾಟುವುದು ಧರ್ಮ ಬಾಹಿರ, ನಿನಗೆ ಬಹಿಷ್ಕಾರ ಹಾಕಬೇಕಾದೀತು’ ಎಂದು ತಾಕೀತು ಮಾಡಿದರು. ಆದರೆ, ಗಾಂಧೀಜಿ ಅಳುಕಲಿಲ್ಲ. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್‌ ಪದವಿ ಪಡೆದು ಬಂದರು. ಬಹುಶಃ ಅವರ ಮುಂದಿನ ದಾರಿಯನ್ನು ಸಂಪೂರ್ಣವಾಗಿ ಬದಲಿಸಿದ ಪದವಿಯಿದು. 

ಅವರು ಮೊದಲು ಅಂದುಕೊಂಡಿದ್ದಂತೆ ವೈದ್ಯಕೀಯ ಓದಿದ್ದರೆ ಅವರ ಬದುಕು ಈಗಿನ ಹಾಗೆ ಆಗುತ್ತಿತ್ತೋ ಇಲ್ಲವೋ. ಏಕೆಂದರೆ ಇಂಗ್ಲೆಂಡಿನಿಂದ ಬರುತ್ತಿದ್ದಂತೆಯೇ ಅವರು ವಕೀಲಿ ವೃತ್ತಿಗಾಗಿ ದಕ್ಷಿಣ ಆಫ್ರಿಕಾದ ದಾರಿ ಹಿಡಿದರು. ಅಲ್ಲಿನ ಜನಾಂಗೀಯ ತಾರತಮ್ಯ, ಆ ದೇಶವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷರ ದೌರ್ಜನ್ಯ ಅವರಲ್ಲಿ ಸುಪ್ತವಾಗಿದ್ದ ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ಬೆಳಕಿಗೆ ತಂದುವು. ಡರ್ಬನ್‌ನಿಂದ ಪೀಟರ್‌ ಮಾರಿಟ್ಜ್‌ಬಗ್‌ರ್‍ವರೆಗಿನ ಪ್ರಯಾಣದಲ್ಲಿ ಪ್ರಥಮ ದರ್ಜೆಯ ಬೋಗಿಯಿಂದ ಬಿಳಿಯರು ಪೊಲೀಸರ ಸಹಾಯದಿಂದ ತಮ್ಮನ್ನು ತಮ್ಮ ಸಾಮಾನು, ಸರಂಜಾಮು ಸಮೇತ ಹೊರಗೆ ಹಾಕಿದ ಅವಮಾನವನ್ನು ಅವರು ಎಂದೂ ಮರೆಯಲಿಲ್ಲ.

ಮುಂದೆ ತಾಯ್ನಾಡಿಗೆ ಬಂದ ಗಾಂಧೀಜಿ ಭಾರತವನ್ನು ಬ್ರಿಟಿಷರ ಪಾರತಂತ್ರ್ಯದಿಂದ ಬಿಡುಗಡೆಗೊಳಿಸಲು ನಡೆಸಿದ ಸ್ವಾತಂತ್ರ್ಯ ಸಮರ ಈಗ ಇತಿಹಾಸದಲ್ಲಿ ದಾಖಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಲೇ ಸತ್ಯಾಗ್ರಹ ಎಂಬ ಅಸ್ತ್ರವನ್ನು ಗಾಂಧೀಜಿ ಬಳಕೆಗೆ ತಂದರು. ಸತ್ಯ ಮತ್ತು ಆಗ್ರಹದಿಂದ ಕೂಡಿದ್ದು ಸತ್ಯಾಗ್ರಹ. ಪರಕೀಯ ಆಡಳಿತದ ವಿರುದ್ಧ ಸತ್ಯದ ದಾರಿಯಲ್ಲಿಯೇ ಹೋರಾಟ ಮಾಡಬೇಕು, ಅದು ಶಾಂತಿಯುತವಾಗಿರಬೇಕು ಮತ್ತು ಅದು ಅಹಿಂಸಾತ್ಮಕವಾಗಿರಬೇಕು ಎಂದು ಗಾಂಧೀಜಿ ನಂಬಿದ್ದರು.

ಹೋರಾಟಕ್ಕೆ ಅಹಿಂಸೆಯ ಮಾದರಿ: ಅವರ ಹೋರಾಟದ ಹಾದಿಯೇ ಹಾಗಿತ್ತು. ಅದು ಅನನ್ಯ. ಅತ್ಯಂತ ಬಲಿಷ್ಠವಾಗಿದ್ದ, ಸೂರ್ಯ ಉದಯಿಸುವ ನಾಡಿನಿಂದ ಸೂರ್ಯ ಅಸ್ತಮಿಸುವ ನಾಡಿನವರೆಗೆ ವಿಸ್ತರಿಸಿಕೊಂಡಿದ್ದ, ಒಂದು ಸಾಮ್ರಾಜ್ಯವನ್ನು ಅಹಿಂಸೆಯ ಮಾರ್ಗದಲ್ಲಿ ಅಲುಗಾಡಿಸಬಹುದೇ ಎಂಬ ಪ್ರಶ್ನೆ ಯಾರಿಗಾದರೂ ಹುಟ್ಟಬಹುದಿತ್ತು. ಆದರೆ, ಸಣಕಲು ಶರೀರದ, ಮೈಮೇಲೆ ತುಂಡು ಬಟ್ಟೆಮಾತ್ರ ಧರಿಸಿದ್ದ, ಕೈಯಲ್ಲಿ ಆಸರೆಗೆ ಒಂದು ಊರುಗೋಲು ಹಿಡಿದಿರುತ್ತಿದ್ದ ಗಾಂಧೀಜಿ ಅದು ಸಾಧ್ಯ ಎಂದು ಉತ್ತರ ಕೊಟ್ಟರು. ಮತ್ತು ಆ ಉತ್ತರ ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಒಂದು ಮಾದರಿ ಎನಿಸುವಂತೆ ಮಾಡಿದರು.

ಗಾಂಧೀಜಿ ಜನಿಸಿ ಈಗ 153 ವರ್ಷಗಳು ಆಗಿಹೋಗಿವೆ. ಅವರು ನಿಧನರಾಗಿಯೇ 74 ವರ್ಷವಾಗಿದೆ. ಆದರೆ, ಈಗಲೂ ಅವರು ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರಸ್ತುತರಾಗಿದ್ದಾರೆ. ಹಾಗೆ ನೋಡಿದರೆ ಅವರ ಹೋರಾಟದ ಹಾದಿಗಳು ಅಮೆರಿಕದ ನಾಗರಿಕ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್‌ ಲೂಥರ್‌ ಕಿಂಗ್‌ (ಜ್ಯೂ) ಮತ್ತು ದಕ್ಷಿಣ ಆಫ್ರಿಕಾದ ಜನಾಂಗೀಯ ನೀತಿ ಮತ್ತು ಪಾರತಂತ್ರ್ಯದ ವಿರುದ್ಧ ಹೋರಾಟ ಮಾಡಿದ ನೆಲ್ಸನ್‌ ಮಂಡೇಲಾ ಅವರಿಗೆ ಪ್ರೇರಣೆಯಾಗಿದ್ದುವು ಎಂಬುದು ಸಣ್ಣ ಮಾತಲ್ಲ. ಗಾಂಧೀಜಿ ತಮ್ಮ ಜೀವನದ ಉದ್ದಕ್ಕೂ ಸ್ವಾವಲಂಬನೆಯ ಬಗ್ಗೆ, ಹಳ್ಳಿಗಳ ಉದ್ಧಾರದ ಬಗ್ಗೆ ಮಾತನಾಡಿದರು. ಸ್ತ್ರೀಯರ ಸಬಲೀಕರಣದ ಬಗ್ಗೆ, ಖಾದಿ ಮತ್ತು ಗುಡಿ ಕೈಗಾರಿಕೆಗಳ ಉದ್ಧಾರದ ಬಗ್ಗೆ, ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.

ಗಾಂಧಿ ಸಂದೇಶಕ್ಕೆ ಮೋದಿ ಮಹತ್ವ: ಗಾಂಧೀಜಿಯವರನ್ನು ಈ ದೇಶ ಮರೆತು ಹೋಗಿತ್ತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಕೂಡಲೇ ಮೊತ್ತಮೊದಲ ಗಾಂಧಿ ಜಯಂತಿ ದಿನವೇ ಅವರ ಸ್ವಚ್ಛ ಭಾರತ ಪರಿಕಲ್ಪನೆಯ ಅನುಷ್ಠಾನದ ಘೋಷಣೆ ಮಾಡಿ ತಾವೇ ಮಾದರಿ ಹಾಕಿದರು. ಈ ಅಭಿಯಾನದ ಗುರುತಾಗಿ ಗಾಂಧೀಜಿಯವರ ಕನ್ನಡಕವನ್ನು ಬಳಸಿದ್ದುದು ಅವರ ಬೋಧನೆಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇದ್ದ ನಂಬಿಕೆಯ ಪ್ರತೀಕದಂತಿತ್ತು.

ಹಾಗೆ ನೋಡಿದರೆ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳ ಪ್ರಸ್ತುತತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸುವ ಮೂಲಕ ಈ ದೇಶವನ್ನು ಆತ್ಮನಿರ್ಭರ ಮಾಡುವ, ಸ್ವಾವಲಂಬಿ ಭಾರತ ಮಾಡುವ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಕೋವಿಡ್‌ ಮಹಾಮಾರಿಯು ಈ ದೇಶವನ್ನು ಆಕ್ರಮಿಸಿದ ಸಂದರ್ಭದಲ್ಲಿ ಮೋದಿಯವರು ಪರದೇಶದಿಂದ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿದ್ದ ಆಟಿಕೆಗಳ ಬದಲು ನಮ್ಮ ದೇಶದ ಆಟಿಕೆಗಳನ್ನು ನಮ್ಮ ಮಕ್ಕಳಿಗೆ ಆಡಲು ಕೊಡಬೇಕು ಎಂದು ಹೇಳಿದ್ದು ಗಾಂಧೀಜಿಯವರ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಮಾತಿನ ಮಾರ್ದನಿಯೇ ಆಗಿತ್ತು. 

ನಮ್ಮ ಚನ್ನಪಟ್ಟಣದ ಆಟಿಕೆಗಳು, ಕಿನ್ನಾಳದ ಗೊಂಬೆಗಳು ಅಂದದಲ್ಲಿ, ಚೆಂದದಲ್ಲಿ ಯಾರಿಗೆ ಕಡಿಮೆಯಿವೆ? ಮಹಾತ್ಮರ 150ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು, ‘ಗಾಂಧೀಜಿಯ ಆದರ್ಶಗಳು ಮತ್ತು ತತ್ವಗಳು ಇಡೀ ಜಗತ್ತಿಗೆ ಶಕ್ತಿ ತುಂಬುತ್ತವೆ. ನಮಗೆ ಇದು ಕೇವಲ ಒಂದು ವರ್ಷದ ಆಚರಣೆಯಲ್ಲ. ಜಗತ್ತಿನಾದ್ಯಂತದ ಕೋಟ್ಯಂತರ ಜನರಿಗೆ ಸ್ಫೂರ್ತಿದಾಯಕವಾಗಿರುವ ಗಾಂಧಿ ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಹೋಗಲು ಪ್ರೇರೇಪಿಸುವ ದಿನವಿದು’ ಎಂದು ಟ್ವೀಟ್‌ ಸಂದೇಶದಲ್ಲಿ ತಿಳಿಸಿದ್ದರು.

ಇಷ್ಟಪಟ್ಟು ಮತಾಂತರವಾಗಲು ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶ್ವಥ ನಾರಾಯಣ್‌

ಆಡಳಿತದಲ್ಲಿ ಗಾಂಧೀಜಿಯ ನೀತಿಗಳು: ಮೋದಿಯವರ ‘ಮೇಕ್‌ ಇನ್‌ ಇಂಡಿಯಾ’ ಕರೆ ಗಾಂಧೀಜಿಯವರ ಸ್ವಾವಲಂಬಿ ಭಾರತದ ಕನಸನ್ನು ನನಸು ಮಾಡುವ ಕರೆಯೇ ಆಗಿದೆ. ಮೋದಿಯವರು ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟಿಸಿದರು. ಅದರಲ್ಲಿ ಬಹಳ ಮುಖ್ಯವಾದುದು ಗಾಂಧೀಜಿ ಪ್ರತಿಪಾದಿಸಿದ್ದ ಮಾತೃಭಾಷಾ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಿರುವುದು. ಕೇಂದ್ರದ ಗೃಹ ಸಚಿವರಾದ ಅಮಿತ್‌ ಶಾ ತಮ್ಮ ಟ್ವೀಟ್‌ ಸಂದೇಶದಲ್ಲಿ, ಗಾಂಧೀಜಿ ತೋರಿಸಿದ ದಾರಿಯಿಂದ ನಾವು ದೂರ ಹೋಗಿದ್ದೆವು. ಆದರೆ, ಪ್ರಧಾನಿ ಮೋದಿಯವರು ಗಾಂಧೀಜಿಯವರು ಪ್ರತಿಪಾದಿಸಿದ ಮಾತೃಭಾಷಾ ಶಿಕ್ಷಣದ ಮಹತ್ವವನ್ನು ಮತ್ತೆ ನಮ್ಮ ಶಿಕ್ಷಣ ನೀತಿಯಲ್ಲಿ ಅಳವಡಿಸಿದರು. ಮಾತ್ರವಲ್ಲ ಉದ್ಯೋಗಾವಕಾಶ ಸೃಷ್ಟಿಸಲು ಪೂರಕವಾದ ನೀತಿಗಳನ್ನೂ ಇದರಲ್ಲಿ ಅಳವಡಿಸಿದರು ಎಂದು ಶ್ಲಾಘಿಸಿದ್ದರು. ನಮ್ಮ ಹೆಮ್ಮೆ ಏನು ಎಂದರೆ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಡೀ ದೇಶದಲ್ಲಿ ಅಕ್ಷರಶಃ ಜಾರಿಗೆ ತಂದ ಮೊದಲ ರಾಜ್ಯ ನಮ್ಮದು.

ಗಾಂಧೀಜಿ ಪ್ರತಿಪಾದಿಸಿದ ಎಲ್ಲ ಮೌಲ್ಯಗಳನ್ನು, ತತ್ವಗಳನ್ನು ಮತ್ತು ಆದರ್ಶಗಳನ್ನು ನಮ್ಮ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಮತ್ತು ಕರ್ನಾಟಕದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಅನುಷ್ಠಾನಕ್ಕೆ ತರುತ್ತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಗಾಂಧೀಜಿ ಜನಿಸಿದ ಇಂದಿನ ದಿನ ನಮ್ಮನ್ನು, ನಮ್ಮ ಯುವ ಪೀಳಿಗೆಯನ್ನು ಸತ್ಯದ, ಅಹಿಂಸೆಯ, ಕಾಯಕನಿಷ್ಠೆಯ, ಸ್ವಾವಲಂಬನೆಯ ದಾರಿಯಲ್ಲಿ ನಡೆಸಲಿ. ಈ ದೇಶವು ಇಡೀ ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲುವಂತೆ ಆಗಲಿ ಎಂದು ಹಾರೈಸುತ್ತೇನೆ. ಬನ್ನಿ ಖಾದಿ ಖರೀದಿಸೋಣ. ಗುಡಿಕೈಗಾರಿಕೆಗಳಿಗೆ ಬಲ ತುಂಬೋಣ.

Latest Videos
Follow Us:
Download App:
  • android
  • ios