Solar Eclipse 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು?
ಏಪ್ರಿಲ್ 20 ಅಮಾವಾಸ್ಯೆಯಂದು ಸೂರ್ಯ ಗ್ರಹಣ
2023ರ ಮೊದಲ ಕಂಕಣ ಸೂರ್ಯ ಗ್ರಹಣ
ಭಾರತದಲ್ಲಿ ಗೋಚಾರವಿಲ್ಲದ್ದರಿಂದ ಆಚರಣೆ ಇಲ್ಲ
ದ್ವಾದಶ ರಾಶಿಗಳ ಮೇಲೆ ಗ್ರಹಣದ ಪರಿಣಾಮಗಳೇನು?
ಶ್ರೀ ವಿಠ್ಠಲ್ ಭಟ್
ಇನ್ನೆರಡು ದಿನಗಳಲ್ಲಿ ಸೂರ್ಯಗ್ರಹಣವಿದೆ. ಏಪ್ರಿಲ್ 20 ಅಮಾವಾಸ್ಯೆಯಂದು ಈ ವರ್ಷದ ಮೊದಲ ಹಾಗೂ ಕಂಕಣ ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಈ ದಿನ ಬೆಳಗ್ಗೆ 7.04 ರಿಂದ ಮಧ್ಯಾಹ್ನ 12.29 ವರೆಗೆ ಮೇಷ ರಾಶಿಯಲ್ಲಿ, ಅಶ್ವಿನಿ ನಕ್ಷತ್ರದಲ್ಲಿ ಗ್ರಹಣ ಸಂಭವಿಸುತ್ತಿದೆ. ಆದರೆ, ಭಾರತದಲ್ಲಿ ಗ್ರಹಣ ಗೋಚಾರವಿಲ್ಲ. ಆದ್ದರಿಂದ ಇಲ್ಲಿ ಸೂತಕ ಆಚರಣೆಯೂ ಇಲ್ಲ. ಕಾಂಬೋಡಿಯಾ, ಚೈನಾ, ಅಮೇರಿಕಾ, ಮಲೇಷಿಯಾ, ಜಪಾನ್, ಸಿಂಗಾಪುರ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳಲ್ಲಿ ಗ್ರಹಣ ಗೋಚಾರವಿದೆ.
ಗ್ರಹಣ ಕಾರಣದಿಂದ ಶುಭ ಫಲ ಪಡೆಯುವ ರಾಶಿಗಳು
ಮಿಥುನ ರಾಶಿ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ
ಅಶುಭ ಫಲದ ರಾಶಿಗಳು
ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಮಕರ ರಾಶಿ
ದ್ವಾದಶ ರಾಶಿಗಳ ಮೇಲೆ ಗ್ರಹಣ ಪರಿಣಾಮ
ಮೇಷ: ಈ ರಾಶಿಯಲ್ಲೇ ಸಂಭವಿಸುವ ಗ್ರಹಣದಿಂದ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ. ಮೂಳೆ ಸಂಬಂಧಿ ಹಾಗೂ ನರ ಸಂಬಂಧಿ ತೊಂದರೆಗಳುಂಟಾಗಬಹುದು. ನಿಮ್ಮ ಮಕ್ಕಳ ವಿಚಾರದಲ್ಲಿ ಅಸಮಾಧಾನ. ಸ್ತ್ರೀಯರಿಗೆ ಉದರ ಸಂಬಂಧಿ ತೊಂದರೆ ಸಾಧ್ಯತೆ. ರಾಜಕಾರಣಿಗಳಿಗೆ ಅತಂತ್ರ ಸ್ಥಿತಿ.
ಪರಿಹಾರ: ಗೋಧಿ-ಉದ್ದು ದಾನ ಮಾಡಿ.
ವೃಷಭ: ನಿಮ್ಮ ರಾಶಿಯಿಂದ ವ್ಯಯದಲ್ಲಿ ಸಂಭವಿಸುವ ಗ್ರಹಣದಿಂದ ಹೆಚ್ಚು ವ್ಯಯ ಫಲವಿದೆ. ವ್ಯಕ್ತಿ ಹಾಗೂ ವಸ್ತು ನಷ್ಟಫಲವನ್ನು ಹೇಳಿದೆ. ಆಪ್ತರು ದೂರಾಗುತ್ತಾರೆ. ಕಾಲಿನ ಭಾಗದಲ್ಲಿ ತೊಂದರೆ ಸಾಧ್ಯತೆ. ಶತ್ರುಗಳ ಬಾಧೆ ಹೆಚ್ಚಾಗಲಿದೆ.
ಪರಿಹಾರ: ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ದುರ್ಗಾ ಪ್ರಾರ್ಥನೆ ಮಾಡಿ.
Surya Grahan: ಯಂತ್ರ ಮಂತ್ರ ಸೇರಿದಂತೆ ಸೂರ್ಯ ರಾಹು ಗ್ರಹಣ ದೋಷಕ್ಕಿದೆ ಹಲವು ಪರಿಹಾರ..
ಮಿಥುನ: ಲಾಭ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಅಷ್ಟಾಗಿ ಕೆಡುಕುಗಳಿಲ್ಲ. ಆದರೆ ಎಚ್ಚರವಾಗಿರಿ. ವೃತ್ತಿಯಲ್ಲಿ, ವ್ಯವಹಾರದಲ್ಲಿ ಲಾಭವಿದೆ. ಮನೆಯಲ್ಲಿ ಹಿರಿಯರ ಸಹಕಾರ ಸಿಗಲಿದೆ. ಆದರೆ ಜವಾಬ್ದಾರಿ ಹೆಚ್ಚಲಿದೆ.
ಪರಿಹಾರ: ವಿಷ್ಣು ಸಹಸ್ರನಾಮ ಪಠಿಸಿ.
ಕರ್ಕಾಟಕ: ನಿಮ್ಮ ವೃತ್ತಿ ಸ್ಥಳದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಹೆಚ್ಚಿನ ಶುಭಫಲವಿದೆ. ಆತಂಕ ಬೇಡ. ನಿಮ್ಮ ಧನ ಸ್ಥಾನದ ಅಧಿಪತಿ ರವಿ. ಹೀಗಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಿರುವವರು ಹಾಗೂ ಫೈನಾನ್ಸ್ ಕ್ಷೇತ್ರಗಳಲ್ಲಿರುವವರು ಹಾಗೂ ರಾಜಕಾರಣದಲ್ಲಿರುವವರು ಸ್ವಲ್ಪ ಜಾಗ್ರತೆಯಿಂದ ಇರಬೇಕು.
ಪರಿಹಾರ: ಅಮ್ಮನವರ ಸನ್ನಿಧಾನಕ್ಕೆ ಗೋಧಿ ಹಾಗೂ ಉದ್ದು ದಾನ ಮಾಡಿ.
ಸಿಂಹ: ರಾಶಿಯ ಅಧಿಪತಿಯೇ ಆದ ರವಿ ಗ್ರಹಣಕ್ಕೆ ಒಳಪಡುತ್ತಿರುವ ಕಾರಣ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಇರಲಿದೆ. ಮೂಳೆ ಸಂಬಂಧಿ ಹಾಗೂ ಕಣ್ಣಿನ ಸಮಸ್ಯೆಗಳು ಕಾಡಲಿವೆ. ಮುಖ್ಯವಾಗಿ ರಾಜಕಾರಣದಲ್ಲಿರುವವರಿಗೆ ಅಗಂತುಕ ಸಮಸ್ಯೆಗಳು ಉಂಟಾಗುತ್ತವೆ. ತಂದೆ-ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳು ಬರಬಹುದು. ಜಾಗ್ರತೆ ಇರಲಿ.
ಪರಿಹಾರ: ಈಶ್ವರ ದೇವಸ್ಥಾನಕ್ಕೆ ಉದ್ದು ಹಾಗೂ ಗೋಧಿ ಸಮರ್ಪಣೆ ಮಾಡಿ.
ಕನ್ಯಾ: ನಿಮ್ಮ ರಾಶಿಯಿಂದ ಅಷ್ಟಮ ಸ್ಥಾನದಲ್ಲಿ ಸಂಭವಿಸುತ್ತಿರುವ ಗ್ರಹಣದಿಂದ ಆರೋಗ್ಯ ವ್ಯತ್ಯಾಸವಾಗಲಿದೆ. ಮುಖ್ಯ ವಸ್ತುಗಳು ಕಾಣೆಯಾಗಲಿದ್ದಾವೆ. ಸೋಲನ್ನು ಅನುಭವಿಸಬೇಕಾಗುತ್ತದೆ. ಮನಸ್ಸಿಗೆ ವ್ಯಥೆ ಉಂಟಾಗಲಿದೆ. ತುಂಬ ಎಚ್ಚರವಾಗಿರಿ.
ಪರಿಹಾರ: ವಿಷ್ಣು ಸಹಸ್ರನಾಮ ಪಠಿಸಿ ಹಾಗೂ ಗೋಧಿ-ಉದ್ದು ದಾನ ಮಾಡಿ.
Surya Grahan 2023: ಸೇಡಿನಿಂದ ಸೂರ್ಯ ಚಂದ್ರರನ್ನು ನುಂಗುವ ರಾಹುಕೇತು, ಕಾರಣವೇನು?
ತುಲಾ: ಗ್ರಹಣ ನಿಮ್ಮ ಪಾಲಿಗೆ ಮಧ್ಯಮ ಫಲವನ್ನು ತರಲಿದೆ. ಆದರೆ ದಾಂಪತ್ಯ ಜೀವನದಲ್ಲಿ ಏರುಪೇರಾಗಬಹುದು. ವ್ಯಾಪಾರ ವಹಿವಾಟಿನಲ್ಲಿ ಕಾಣದ ಕೈಗಳ ತಂತ್ರ ನಿಮ್ಮನ್ನು ಕಂಗಾಲಾಗಿಸುತ್ತದೆ. ವಿದೇಶ ಪ್ರಯಾಣಗಳನ್ನು ಮುಂದೂಡುವುದು ಒಳ್ಳೇದು. ವೃತ್ತಿಯಲ್ಲೂ ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಆದರೆ ಆರೋಗ್ಯ ಕೊರತೆ ಇಲ್ಲ. ನಷ್ಟವೂ ಇಲ್ಲ. ಅಷ್ಟರಮಟ್ಟಿಗೆ ಸಮಾಧಾನವಿದೆ.
ಪರಿಹಾರ: ಅಮ್ಮನವರ ಸನ್ನಿಧಾನಕ್ಕೆ ಗೋಧಿ ಹಾಗೂ ಉದ್ದು ದಾನ ಮಾಡಿ.
ವೃಶ್ಚಿಕ: ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಶತ್ರುಗಳಿಂದಲೂ ಅನುಕೂಲಗಳಾಗುವ ಸಾಧ್ಯತೆ ಇದೆ. ಗ್ರಹಣದಿಂದ ನಿಮಗೆ ತೊಡಕಿಲ್ಲ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಾಲಿನ ಭಾಗದಲ್ಲಿ ತೊಂದರೆ ಸಾಧ್ಯತೆ ಇದೆ. ವೃತ್ತಿಯಲ್ಲಿ ಎಚ್ಚರವಹಿಸಿ.
ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಧನಸ್ಸು: ನಿಮ್ಮ ರಾಶಿಯಿಂದ ಪಂಚಮ ಸ್ಥಾನದಲ್ಲಿ ಸಂಭವಿಸುವ ಗ್ರಹಣ ನಿಮ್ಮ ಬುದ್ಧಿಬಲವನ್ನು ಕಳೆಯಲಿದೆ. ಮಕ್ಕಳ ವಿಚಾರದಲ್ಲಿ ಅಸಮಧಾನ ತರಲಿದೆ. ಉದರ ಸಂಬಂಧಿ ತೊಡಕುಗಳಾಗಬಹುದು. ಉನ್ನತ ಶಿಕ್ಷಣದವರಿಗೆ ತೊಂದರೆ ಸಾಧ್ಯತೆ.
ಪರಿಹಾರ: ಈಶ್ವರ ಸನ್ನಿಧಾನದಲ್ಲಿ ಅರ್ಚನೆ ಮಾಡಿಸಿ.
ಮಕರ: ಗ್ರಹಣ ನಿಮ್ಮ ಪಾಲಿಗೆ ಹೆಚ್ಚು ತೊಡಕನ್ನು ತರಲಿದೆ. ಬಂಧು-ಮಿತ್ರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಹೃದಯ ಭಾಗದಲ್ಲಿ ತೊಂದರೆ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರವಹಿಸಿ. ಕೃಷಿಕರು ಜಾಗ್ರತೆಯಿಂದ ಇರಿ. ವಿಷ ಜಂತುಗಳ ಭಯ ನಿಮ್ಮನ್ನು ಕಾಡಲಿದೆ.
ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಕುಂಭ: ಗ್ರಹಣ ನಿಮ್ಮ ಪಾಲಿಗೆ ಶುಭಫಲವನ್ನು ತರಲಿದೆ. ನಿಮ್ಮ ಕಾರ್ಯ ಸ್ಥಳದಲ್ಲಿ ಅನುಕೂಲವಾಗಲಿದೆ. ವ್ಯವಹಾರಗಳಲ್ಲಿ ಅನುಕೂಲಗಳಿವೆ. ಆದರೆ ಸಹೋದರರ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ. ಸೇವಕರು-ಸಹಾಯಕರ ವಿಚಾರದಲ್ಲಿ ಗಮನವಿರಲಿ.
ಪರಿಹಾರ: ಓಂ ನಮೋ ನಾರಾಯಣಾಯ ಮಂತ್ರ ಪಠಿಸಿ.
ಮೀನ: ನಿಮ್ಮ ರಾಶಿಯಿಂದ ಧನ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಹಣಕಾಸಿನ ವಿಚಾರಗಳಲ್ಲಿ ಎಚ್ಚರ ವಹಿಸಿ. ಕುಟುಂಬ ವಿಚಾರದಲ್ಲಿ ಘರ್ಷಣೆಗಳಾಗುವ ಸಾಧ್ಯತೆ ಇದೆ. ಸಾಲ-ಶತ್ರುಗಳ ತೊಡಕು ಸಾಧ್ಯತೆ ಇದೆ. ಎಚ್ಚರವಾಗಿರಿ.
ಪರಿಹಾರ: ಈಶ್ವರ ಸನ್ನಿಧಾನಕ್ಕೆ ಗೋಧಿ-ಉದ್ದು ದಾನ ಮಾಡಿ.