ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!
ಶ್ರೀಕ್ಷೇತ್ರ ಧರ್ಮಸ್ಥಳ, ನಂಭಿದ ಭಕ್ತರಿಗೆ ಇಂಬು ನೀಡುವ ಕ್ಷೇತ್ರ ಎಂದೇ ನಂಬಿಕೆ. ಇಂಥ ಕ್ಷೇತ್ರದಲ್ಲಿ ನೆಲೆಸಿರುವ ಅಣ್ಣಪ್ಪ ದೈವದ ಗುಡಿಗೆ ಭೇಟಿ ಕೊಡೋದನ್ನು ಮರೆಯಬೇಡಿ.
ದಕ್ಷಿಣ ಕನ್ನಡದ ನೇತ್ರಾವತಿ ನದಿಯ ತೀರದಲ್ಲಿ ನೆಲೆಸಿರುವ ಶ್ರೀ ಮಂಜುನಾಥನ ಕ್ಷೇತ್ರ ಧರ್ಮಸ್ಥಳ. ರಾಜ್ಯದ, ದೇಶದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಮಂಜುನಾಥನ ದರ್ಶನ ಪಡೆದು ಪುನೀತರಾದೆವು ಎಂದು ಭಾವಿಸುತ್ತಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿದರೆ ನೀವು ಮರೆಯದೆ ಭೇಟಿ ನೀಡಬೇಕಾದ ಇನ್ನೊಂದು ಜಾಗ ಅಂದರೆ ಶ್ರೀ ಅಣ್ಣಪ್ಪ ದೈವದ ಗುಡಿ. ವಿಶೇಷ ಏನ್ ಗೊತ್ತಾ? ಶ್ರೀ ಮಂಜುನಾಥ ದೇವರ ಲಿಂಗ ಈ ತಾಣದಲ್ಲಿ ನೆಲೆಯಾಗಲು ಕಾರಣ ಈ ಅಣ್ಣಪ್ಪ ದೈವವೇ!
ಆ ಕತೆ ಹೀಗಿದೆ.
ಒಮ್ಮೆ ಈಶ್ವರ ದೇವರಿಗೆ, ಭೂಮಿಯ ಮೇಲೆ ಧರ್ಮ ನಾಶವಾಗುತ್ತಿದೆ ಎಂದು ಅರಿವು ಉಂಟಾಯಿತು. ಇದು ಹೌದೇ ಎಂಬುದನ್ನು ಪರೀಕ್ಷೆ ಮಾಡಲು ಅವರು ನಾಲ್ವರು ಪ್ರಮಥ ಗಣಗಳನ್ನು ಕಳಿಸಿದರು. ಇವರೇ ಕಾಳರಾಹು, ಕುಮಾರಸ್ವಾಮಿ, ಕಾಳರ್ಕಾಯ್ ಹಾಗೂ ಕನ್ಯಾಕುಮಾರಿ. ಈ ಐವರೂ ಮಾರುವೇಷದಲ್ಲಿ ಭೂಮಿಯಲ್ಲಿ ತಿರುಗಾಡುತ್ತ, ಧರ್ಮ ಕರ್ಮ ಮಾನವೀಯತೆಗಳನ್ನು ಮರೆತವರನ್ನು ಶಿಕ್ಷಿಸುತ್ತ, ದಕ್ಷಿಣ ಕನ್ನಡದ ನೇತ್ರಾವತಿ ನದಿ ತೀರದ ಕುಡುಮ ಎಂಬಲ್ಲಿಗೆ ಬಂದರು. ಅಲ್ಲಿದ್ದ ನೆಲ್ಯಾಡಿ ಬೀಡಿನ ಒಡೆಯರಾದ ಬಿರ್ಮಣ್ಣ ಹೆಗ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ದಂಪತಿಗಳನ್ನೂ ಹೀಗೇ ಪರೀಕ್ಷಿಸಿದರು. ಬಿರ್ಮಣ್ಣ ಹೆಗ್ಗಡೆ ದಂಪತಿಯ ದಾನ- ಧರ್ಮಶೀಲತೆಗಳನ್ನು ಕಂಡು ಸಂತುಷ್ಟರಾದರು. ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲೇ ಮಲಗಿದರು.
ನೀವು ಹೇಗೆ ಸಾಯುತ್ತೀರಿ? ನಿಮ್ಮ ಜನ್ಮರಾಶಿ ಆ ಬಗ್ಗೆ ಏನು ಹೇಳುತ್ತೆ?
ಆ ದಿನ ರಾತ್ರಿ ಹೆಗ್ಗಡೆಯವರಿಗೆ ಕನಸು ಬಿತ್ತು. ತಾವು ಪ್ರಮಥ ಗಣಗಳೆಂದೂ, ತಮಗಿಲ್ಲಿ ನೆಲೆಸಲು ಇಷ್ಟವೆಂದೂ, ಈ ಮನೆಯನ್ನು ತಮಗೆ ಬಿಟ್ಟುಕೊಟ್ಟು ಬೇರೆ ಮನೆ ಕಟ್ಟಿಕೊಳ್ಳುವಂತೆಯೂ ಆದೇಶಿಸಿದರು. ಮರುದಿನ ಬೆಳಗ್ಗೆ ಎದ್ದು ನೋಡುವಾಗ ದೈವಗಳು ಮಾಯವಾಗಿ, ಆಯುಧಗಳು ಉಳಿದುಕೊಂಡಿದ್ದವು. ಹೆಗ್ಗಡೆಯವರು ದೈವಗಳ ಆದೇಶದಂತೆ ನಾಲ್ಕೂ ದೈವಗಳಿಗೆ ನಾಲ್ಕು ಗುಡಿ ಕಟ್ಟಿಸಿದರು. ನೆಲ್ಯಾಡಿ ಬೀಡನ್ನು ಬಿಟ್ಟುಕೊಟ್ಟರು. ಈ ನಡುವೆ, ಶಿವನ ಪ್ರಮಥ ಗಣಗಳಲ್ಲಿ ಒಬ್ಬನಾದ ಗಣಮಣಿ ಎಂಬಾತ ಕೂಡ ಶಿವನಿಂದ ನಿರ್ದೇಶಿತನಾಗಿ ಭೂಮಿಗೆ ಬಂದವನು, ನೆಲ್ಯಾಡಿ ಬೀಡಿನಲ್ಲಿ ಅಣ್ಣಪ್ಪ ಎಂಬ ಹೆಸರಿನಲ್ಲಿ ಸೇವಕನ ರೂಪದಲ್ಲಿ ವೇಚ ಮರೆಸಿಕೊಂಡು ನೆಲೆಸಿದ್ದನು.
ಇದಾದ ಬಳಿಕ ಒಮ್ಮೆ ಶಿವಯೋಗಿಗಳು ಹೆಗ್ಗಡೆಯವರ ಬೀಡಿಗೆ ಭೇಟಿ ನೀಡಿದರು. ಇವರು ಶಿವನೇ ಎಂದೂ ಹೇಳುತ್ತಾರೆ. ಶಿವಪೂಜೆಯಿಲ್ಲದೆ ತಾನು ಭೋಜನ ಸ್ವೀಕರಿಸುವುದಿಲ್ಲವೆಂದು ಅವರು ಹೇಳಿದಾಗ, ಹತ್ತಿರದಲ್ಲೆಲ್ಲೂ ಶಿವ ಸಾನಿಧ್ಯವಿಲ್ಲದುದರಿಂದ ಜೈನ ಮೂಲದವರಾದ ಹೆಗ್ಗಡೆ ದಂಪತಿಗಳು ಸಹಜವಾಗಿಯೇ ಚಿಂತಿತರಾದರು. ಅಂದು ರಾತ್ರಿ, ಧರ್ಮದೇವತೆಗಳು ಹೆಗ್ಗಡೆ ಕನಸಿನಲ್ಲಿ ಬಂದು, ಅಣ್ಣಪ್ಪನನ್ನು ಕದ್ರಿಗೆ ಕಳಿಸಿ ಶಿವಲಿಂಗವನ್ನು ತರಿಸುವಂತೆ ಪ್ರೇರಣೆ ನೀಡಿದರು. ಹಾಗೆಯೇ ಹೆಗ್ಗಡೆಯವರು ಅಣ್ಣಪ್ಪನನ್ನು ಕದ್ರಿಗೆ ಕಳಿಸಿದರು. ಕದ್ರಿಯಲ್ಲಿ ಕಾವಲಿದ್ದ ನೂರಾರು ಪ್ರಮಥ ಗಣಗಳು ಲಿಂಗವನ್ನು ಒಯ್ಯುವ ಅಣ್ಣಪ್ಪನ ಉದ್ದೇಶಕ್ಕೆ ತಡೆಯೊಡ್ಡಿದರು. ಅವರನ್ನೆಲ್ಲ ಬಗ್ಗು ಬಡಿದ ಅಣ್ಣಪ್ಪ, ರಾತ್ರಿ ಬೆಳಗಾಗುವುದರೊಳಗೆ ಶಿವಲಿಂಗವನ್ನು ತಂದು ನೆಲ್ಯಾಡಿ ಬೀಡಿನಲ್ಲಿ ಪ್ರತಿಷ್ಠಾಪಿಸಿದನು.
ಚೈನೀಸ್ ವರ್ಷದ ಪ್ರಕಾರ ನಿಮ್ಮ ಈ ವರ್ಷದ ಭವಿಷ್ಯ ಹೇಗಿರುತ್ತೆ?
ಹಾಗೆ ಅಣ್ಣಪ್ಪ ತಂದ ಶಿವಲಿಂಗವೇ ಇಂದು ಶ್ರೀ ಮಂಜುನಾಥ ಎಂಬುದಾಗಿ ಪ್ರಸಿದ್ಧವಾಗಿದೆ. ಶಿವನು ಸ್ವತಃ ಬಂದು ನೆಲೆ ನಿಲ್ಲಲು ತನ್ನ ಸೇವಕನಾಗಿ ಅಣ್ಣಪ್ಪನನ್ನು ಆರಿಸಿಕೊಂಡಿದ್ದ. ಇದಾದ ಬಳಿಕ, ಹೆಗ್ಗಡೆಯವರು ಅಣ್ಣಪ್ಪ ಸಾಮಾನ್ಯನಲ್ಲ ಎಂಬುದನ್ನು ಅರಿತು ಅವನಲ್ಲಿ ಪ್ರಶ್ನಿಸಿದರು. ಆಗ ತನ್ನ ನಿಜರೂಪವನ್ನು ತೋರಿಸಿದ ಗಣಮಣಿ, ತನಗೂ ಒಂದು ಗುಡಿ ಕಟ್ಟಿಸುವಂತೆಯೂ, ನಿರಂತರವಾಗಿ ನೆಲ್ಯಾಡಿ ಬೀಡನ್ನೂ ಹೆಗ್ಗಡೆ ಕುಟುಂಬವನ್ನೂ ಕಾಪಾಡಿಕೊಂಡು ಬರುವುದಾಗಿಯೂ ಹೇಳಿದನು. ಹಾಗೆಯೇ ಅಣ್ಣಪ್ಪ ದೈವ ಎಂಬ ರೂಪದಲ್ಲಿ ಅಲ್ಲಿ ನೆಲೆಸಿದನು.
ಈಗ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಜೊತೆಗೆ ಅಣ್ಣಪ್ಪ ದೈವದ ಗುಡಿ, ನಾಲ್ವರು ಧರ್ಮದೇವತೆಗಳ ಗುಡಿಯಿಂದಾಗಿಯೂ ಪ್ರಸಿದ್ಧವಾಗಿದೆ. ಬಾಹುಬಲಿಯ ಮೂರ್ತಿ ಕೂಡ ಇಲ್ಲಿ ಈಗ ನೆಲೆಯಾಗಿದೆ. ಸರ್ವಧರ್ಮಗಳ ಸಹಿಷ್ಣುತೆಯ ಸಂಗಮ ಸ್ಥಾನವಾಗಿರುವ ಇಲ್ಲಿಗೆ ಭೇಟಿ ನೀಡಿದವರು ಮಂಜುನಾಥ ಸ್ವಾಮಿಯ ಜೊತೆಗೆ ಅಣ್ಣಪ್ಪ ಸ್ವಾಮಿಯ ಆಶೀರ್ವಾದವನ್ನೂ ಪಡೆದರೆ ಅವರ ಯಾತ್ರೆ ಸಂಪೂರ್ಣ ಆದಂತೆ.