Asianet Suvarna News Asianet Suvarna News

Sankranti Health: ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಕೆ ಸಾಧ್ಯ!

ಎಳ್ಳು ಮತ್ತು ಬೆಲ್ಲ ಸೇವಿಸುವುದು ಸಂಕ್ರಾಂತಿಯ ಸಂಪ್ರದಾಯ. ಎಳ್ಳು-ಬೆಲ್ಲದಿಂದ ಮಾಡಿದ ಲಡ್ಡು ಅಥವಾ ಹಾಗೆಯೇ ಸೇವಿಸುವುದನ್ನು ಕಾಣಬಹುದು. ಯಾವುದೇ ರೂಪದಲ್ಲಿರಲಿ, ಎಳ್ಳು ಮತ್ತು ಬೆಲ್ಲ ಆರೋಗ್ಯಕ್ಕೆ ಅತ್ಯುತ್ತಮ. 

Sesame and Jaggery benefits to health
Author
Bangalore, First Published Jan 14, 2022, 6:44 PM IST

ಮಕರ ಸಂಕ್ರಾಂತಿ(Pongal)ಯ ಈ ಶುಭ ಸಂದರ್ಭದಲ್ಲಿ ಎಲ್ಲರೂ ಎಳ್ಳು(Til or Sesame) -ಬೆಲ್ಲ (Jaggery) ಸೇವಿಸಿ ಒಳ್ಳೊಳ್ಳೆಯ ಮಾತನಾಡುವ ಭರವಸೆ ಹೊತ್ತಿದ್ದೇವೆ. ಈ ಸಮಯದಲ್ಲಿ ಎಳ್ಳು ಮತ್ತು ಬೆಲ್ಲದ ಸೇವನೆ ಆರೋಗ್ಯಕ್ಕೆ ಅತ್ಯಂತ ಸಹಕಾರಿ. 
ಎಳ್ಳಿನ ಲಡ್ಡು (Ladoo) ಎಷ್ಟು ಸ್ವಾದಿಷ್ಟವಾಗಿರುತ್ತದೆಯೋ ಅಷ್ಟೇ ಪೌಷ್ಟಿಕಾಂಶ(Nutrition)ವನ್ನೂ ಹೊಂದಿರುತ್ತದೆ. ಎಳ್ಳಿನಲ್ಲಿ ರೋಗನಿರೋಧಕ ಶಕ್ತಿ (Immunity Power) ಹೆಚ್ಚಿಸುವ ಅನೇಕ ಅಂಶಗಳಿವೆ.

ನಿಯಮಿತವಾಗಿ ಎಳ್ಳಿನ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಎಳ್ಳಿನಲ್ಲಿ ಉತ್ತಮ ಪ್ರಮಾಣದಲ್ಲಿ ಝಿಂಕ್ (Zinc) ಇರುತ್ತದೆ. ಕಬ್ಬಿಣಾಂಶ, ಸೆಲೆನಿಯಂ, ತಾಮ್ರ, ವಿಟಮಿನ್ ಬಿ6 ಹಾಗೂ ವಿಟಮಿನ್ ಈ ಇರುತ್ತದೆ. ಇವೆಲ್ಲವೂ ರೋಗ ನಿರೋಧಕ ಶಕ್ತಿಯ ಬಲವರ್ಧನೆಗೆ ಸಹಾಯ ಮಾಡುತ್ತವೆ. ಪ್ರತಿದಿನ 30 ಗ್ರಾಮ್ ನಷ್ಟು ಎಳ್ಳನ್ನು ತಿಂದರೆ, ನಮ್ಮ ದೇಹಕ್ಕೆ ಅಗತ್ಯವಿರುವ ಶೇ.20ರಷ್ಟು ಝಿಂಕ್ ದೊರೆತಂತಾಗುತ್ತದೆ. ಇದರೊಂದಿಗೆ ಬೆಲ್ಲವೂ ದೇಹಕ್ಕೆ ದೇಹಕ್ಕೆ ಅತ್ಯುತ್ತಮ.

ದೇಹ ಬೆಚ್ಚಗಿರಲು ಸಹಕಾರಿ

ಎಳ್ಳು ಮತ್ತು ಬೆಲ್ಲದ ಎರಡೂ ಅಂಶಗಳು ದೇಹವನ್ನು ಬೆಚ್ಚಗಿಡಬಲ್ಲವು.  ಮಳೆಗಾಲಕ್ಕಂತೂ ಎಳ್ಳು-ಬೆಲ್ಲದ ಉಂಡೆ ಅತಿ ಉಪಯುಕ್ತ. ನಿಯಮಿತವಾಗಿ ಈ ಲಡ್ಡು ಸೇವನೆ ಮಾಡಿದರೆ ಚಳಿಯ ಅನುಭವವಾಗುವುದಿಲ್ಲ. ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಅಧಿಕ ರಕ್ತದ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ.

ರಕ್ತದ ಸಕ್ಕರೆ ಮಟ್ಟ (Blood Sugar Level) ನಿಯಂತ್ರಣ

ಎಳ್ಳಿನಲ್ಲಿ ಕಾರ್ಬೋಹೈಡ್ರೇಟ್ ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬು ಇದರಲ್ಲಿರುತ್ತದೆ. ಇದರಿಂದಾಗಿ ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿ ಪಿನೊರೆಸಿನಾಲ್ ಎನ್ನುವ ಸಂಯುಕ್ತ ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ. 

ಮಂಡಿನೋವಿಗೆ ಪರಿಹಾರ

ಎಳ್ಳಿನಲ್ಲಿರುವ ಸೆಸಾಮಿನ್ ಎನ್ನುವ ಅಂಶದಲ್ಲಿ ಉರಿಯೂತ ಕಡಿಮೆಗೊಳಿಸುವ ಗುಣವಿದೆ. ಆಂಟಿಆಕ್ಸಿಡಂಟ್ ಗಳಿಂದ ಕೂಡಿರುವ ಎಳ್ಳಿನ ಸೇವನೆಯಿಂದ ಮಂಡಿಗಳ ನೋವು ಕಡಿಮೆಯಾಗುತ್ತದೆ. ಮುಖ್ಯವಾಗಿ, ಚಳಿಗಾಲದಲ್ಲಿ ಹೆಚ್ಚಾಗುವ ಸಂಧಿವಾತ ಕಡಿಮೆಯಾಗುತ್ತದೆ. ಆಸ್ಟಿಯೋ ಆರ್ಥ್ರೈಟಿಸ್ ನಿಂದಾಗಿ ಕಂಡುಬರುವ ನೋವು ಕಡಿಮೆಯಾಗುತ್ತದೆ. 

ಥೈರಾಯ್ಡ್ (thyroid) ಸಮಸ್ಯೆ

ಮೊದಲೇ ಹೇಳಿದಂತೆ ಎಳ್ಳಿನಲ್ಲಿ ಸೆಲೆನಿಯಂ ಅಂಶ ಅತ್ಯುತ್ತಮ ಪ್ರಮಾಣದಲ್ಲಿರುತ್ತದೆ. ಇದರಿಂದ ಥೈರಾಯ್ಡ್ ಹಾರ್ಮೋನ್ ಸ್ರವಿಕೆ ಸರಿಯಾಗಿ ಆಗುತ್ತದೆ. ಎಳ್ಳು ಥೈರಾಯ್ಡ್ ಹಾರ್ಮೋನ್ ಉತ್ತೇಜನಕ್ಕೆ ಅಮೂಲ್ಯ ಕೊಡುಗೆ ನೀಡುತ್ತದೆ. ಇನ್ನು, ಎಳ್ಳಿನ ಸೇವನೆಯಿಂದ ಮೂಳೆಗಳು ದೃಢವಾಗುತ್ತವೆ. ರಕ್ತದೊತ್ತಡ ಕಡಿಮೆಗೊಳಿಸುತ್ತದೆ. ಎಳ್ಳು ಪ್ಲಾಂಟ್ ಪ್ರೊಟೀನ್ ನ ಉತ್ತಮ ಮೂಲವಾಗಿದೆ. ಜೀರ್ಣಾಂಗಗಳ ಕಾರ್ಯ ನಿರ್ವಹಣೆ ಉತ್ತಮಗೊಳ್ಳುತ್ತದೆ.

ಅಧ್ಯಯನಗಳ ಪ್ರಕಾರ, ಎಳ್ಳಿನಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ ಡಿಎಲ್ ಕಡಿಮೆಯಾಗುತ್ತದೆ. ಉತ್ತಮ ಪ್ರಮಾಣದ ಬಹುಅಪರ್ಯಾಪ್ತ ಕೊಬ್ಬಿನ ಆಮ್ಲ (polyunsaturated fatty acids) ಮತ್ತು ಏಕ ಅಪರ್ಯಾಪ್ತ ಕೊಬ್ಬಿನ ಆಮ್ಲ(monounsaturated fatty acids)ವನ್ನು ಹೊಂದಿರುವ ಅಪರೂಪದ ಪದಾರ್ಥ ಎಳ್ಳು. ಇತರ ದ್ವಿದಳ ಧಾನ್ಯಗಳಲ್ಲಿ ಇಲ್ಲದೇ ಇರುವ ಅಮೈನೋ ಆಮ್ಲಗಳನ್ನು ಸಹ ಎಳ್ಳು ಹೊಂದಿರುತ್ತದೆ. 

ಬಹೂಪಯೋಗಿ ಬೆಲ್ಲ

ಇನ್ನು, ಬೆಲ್ಲದ ಸೇವನೆಯಿಂದ ಅನೇಕ ಲಾಭಗಳಿವೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬೆಲ್ಲವು ದೇಹದಲ್ಲಿರುವ ಕೊಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ ವಿಷಕಾರಿ ಅಂಶ ಸೇರ್ಪಡೆಯಾಗುವುದನ್ನು ತಪ್ಪಿಸುತ್ತದೆ. ಬೆಲ್ಲವು ಡಿಟಾಕ್ಸ್ ನಂತೆ ಕೆಲಸ ಮಾಡುತ್ತದೆ. ಪಚನಕ್ರಿಯೆಯಲ್ಲಿ ಭಾಗವಹಿಸುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿಯೇ ತಿನ್ನುವ ಆಹಾರ ಜೀರ್ಣವಾಗುತ್ತದೆ. ಹಲವಾರು ಬಗೆಯ ವಿಟಮಿನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ ಮೊದಲಾದವುಗಳನ್ನು ಹೊಂದಿದೆ. ಸತು, ಸೆಲೆನಿಯಂ ಅಂಶಗಳನ್ನು ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ಹಿಮೋಗ್ಲೋಬಿನ್ (Hemoglobin) ಕೊರತೆ ನಿವಾರಿಸಿ, ಮಹಿಳೆಯರಲ್ಲಿ ಸುಸ್ತು ಕಡಿಮೆ ಮಾಡುತ್ತದೆ.  

Follow Us:
Download App:
  • android
  • ios