ಶನಿವಾರ ಈ ವಸ್ತು ಖರೀದಿಸಿದರೆ ಶನಿ ದೇವರಿಗೆ ಸಿಟ್ಟು ಬರುತ್ತೆ..!
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶನಿ ದೇವರನ್ನು ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಶಾಸ್ತ್ರಗಳ ಅನುಸಾರ ಶನಿಯು ವ್ಯಕ್ತಿಯ ಕರ್ಮಕ್ಕೆ ಅನುಸಾರ ಫಲವನ್ನು ಕೊಡುತ್ತಾನೆ. ಶನಿದೇವರ ಕೃಪೆ ಇದ್ದರೆ ಅದೃಷ್ಟ ಬರುತ್ತದೆ. ಅದೇ ರೀತಿ ಕೆಟ್ಟ ದೃಷ್ಟಿ ಬಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿವೆ. ಶನಿವಾರವನ್ನು ಶನಿದೇವರ ವಾರ ಎಂದೇ ಹೇಳಲಾಗುತ್ತದೆ. ಆ ದಿನ ಶನಿಯ ಆರಾಧನೆ ಮಾಡಬೇಕು. ಜೊತೆಗೆ ಕೆಲವು ಕೆಲವು ವಸ್ತುಗಳ ಕೊಳ್ಳುವಾಗ ಎಚ್ಚರ ವಹಿಸಬೇಕು. ಆ ವಸ್ತುಗಳು ಯಾವುವು ಎಂಬುದರ ಬಗ್ಗೆ ಗಮನಹರಿಸೋಣ…
ನಮ್ಮ ಪ್ರತಿ ಹೆಜ್ಜೆಯಲ್ಲಿಯೂ ನಾವು ನಂಬಿಕೆಗಳಿಗೆ ಪ್ರಾಶಸ್ತ್ಯ ಕೊಡುತ್ತೇವೆ. ಮನೆ ಕಟ್ಟುವುದಿರಲಿ, ಮದುವೆ-ಮುಂಜಿ ಇರಲಿ, ನಾಮಕರಣ ಇರಲಿ, ಯಾವುದೇ ಶುಭ ಕಾರ್ಯವಾಗಲಿ, ಒಳ್ಳೆಯ ದಿನ ಹಾಗೂ ಘಳಿಗೆಯನ್ನು ನೋಡುತ್ತೇವೆ. ಅದೇ ರೀತಿ ಹೊಸ ವಸ್ತುಗಳ ಖರೀದಿಯಲ್ಲಿಯೂ ದಿನವನ್ನು ನಾವು ನೋಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಕೆಲವೊಂದು ದಿನದಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅದೇ, ಇನ್ನು ಕೆಲವು ದಿನದಲ್ಲಿ ಕೆಲವು ವಸ್ತುಗಳನ್ನು ಕೊಂಡರೆ ಸಂಕಷ್ಟವನ್ನು ನಾವೇ ಮೈಮೇಲೆ ಎಳೆದುಕೊಂಡಂತೆ ಎಂದು ಹೇಳಲಾಗುತ್ತದೆ. ಈ ವಿಷಯ ನಮ್ಮ ಏಳು ವಾರಗಳಿಗೂ ಅನ್ವಯವಾಗುತ್ತದೆ. ಅದರಲ್ಲೂ ಶನಿವಾರ ಕೊಳ್ಳುವಾಗ ಸ್ವಲ್ಪ ಎಚ್ಚರವಹಿಸುವುದು ಮುಖ್ಯವಾಗುತ್ತದೆ.
ಇದನ್ನು ಓದಿ: ನಿದ್ರಿಸುವ ದಿಕ್ಕು ಸರಿ ಇದ್ದರೆ, ಹಣ ಹರಿವಿನ ದಿಕ್ಕನ್ನು ಬೇಕಾದರೂ ಬದಲಾಯಿಸಬಹುದು!
ಶನಿವಾರದ ಸಮಯದಲ್ಲಿ ಯಾವ ವಸ್ತುಗಳನ್ನು ಕೊಳ್ಳಬೇಕು, ಯಾವುದನ್ನು ಕೊಳ್ಳಬಾರದು ಎಂಬ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ದಿನದಂದು ಕೆಲವು ವಸ್ತುಗಳನ್ನು ಕೊಂಡರೆ ಶನಿದೇವರ ಅವಕೃಪೆಗೆ ಪಾತ್ರರಾಗಬೇಕು. ಇದರಿಂದ ಪಾರಾಗಲು ಶನಿವಾರ ಶನಿದೇವರನ್ನು ಆರಾಧಿಸುವುದರ ಜೊತೆಗೆ ಎಳ್ಳೆಣ್ಣೆ, ದೀಪವನ್ನು ಹಚ್ಚಬೇಕು. ಕಪ್ಪು ವಸ್ತ್ರವನ್ನು ದಾನ ಮಾಡುವುದರಿಂದ ಶನಿದೋಷವಿದ್ದಲ್ಲಿ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ, ಶನಿವಾರ ಯಾವ ವಸ್ತುಗಳನ್ನು ಕೊಳ್ಳಬಾರದು ಎಂಬುದರ ಬಗ್ಗೆ ನೋಡೋಣ ಬನ್ನಿ….
ಸಾಸಿವೆ ಎಣ್ಣೆ
ಶನಿವಾರ ಸಾಸಿವೆ ಎಣ್ಣೆಯನ್ನು ಖರೀದಿ ಮಾಡುವುದರಿಂದ ಶನಿದೇವರ ಅವಕೃಪೆಗೆ ಪಾತ್ರರಾಗಬೇಕಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶನಿವಾರ ಎಣ್ಣೆಯನ್ನು ಖರೀದಿ ಮಾಡುವುದರಿಂದ ಯಾವುದಾದರೂ ದೊಡ್ಡ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
ಉಪ್ಪು
ಶನಿವಾರದಂದು ಉಪ್ಪು ಖರೀದಿ ಮಾಡುವುದರಿಂದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಇದರಿಂದ ವ್ಯಾಪಾರದಲ್ಲಿ ನಷ್ಟ, ಸಾಲ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ.
ಕತ್ತರಿ
ಶನಿವಾರ ಯಾವುದೇ ಕಾರಣಕ್ಕೂ ಕತ್ತರಿಯನ್ನು ಖರೀದಿ ಮಾಡಬಾರದು. ಇದಲ್ಲದೆ, ಅಂದು ಕೂದಲು ಕತ್ತರಿಸುವುದಕ್ಕೆ ಕತ್ತರಿಯನ್ನು ಕೈಗೆ ತೆಗೆದುಕೊಳ್ಳಲೂ ಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಕಲಹಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೆ, ಸ್ನೇಹಿತರ ಮಧ್ಯೆಯೂ ಜಗಳಗಳು ಆಗುವ ಸಂಭವ ಹೆಚ್ಚಾಗಿರುತ್ತದೆ.
ಇದನ್ನು ಓದಿ: ವೃಷಭಕ್ಕೆ ಸೂರ್ಯನ ಪ್ರವೇಶ, ಈ 5 ರಾಶಿಯವರಿಗೆ ಸಂಕಷ್ಟದ ಪ್ರವೇಶ..!
ಲೋಹದ ವಸ್ತುಗಳು
ಶನಿವಾರ ಲೋಹ ಅಥವಾ ಲೋಹದಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಖರೀದಿಸುವುದು ಅಶುಭ. ಇದರಿಂದಾಗಿ ಮನೆಯಲ್ಲಿ ಕಲಹಗಳು ಆಗುವುದಲ್ಲದೆ, ಸಂಬಂಧಗಳಲ್ಲೂ ಭಿನ್ನಾಭಿಪ್ರಾಯ ಮೂಡುತ್ತದೆ.
ಕಪ್ಪು ಎಳ್ಳು
ಶನಿದೇವರಿಗೆ ದಾನಕ್ಕೆ ಕೊಡುವುದಕ್ಕೆ ಕಪ್ಪು ಎಳ್ಳು ಶ್ರೇಷ್ಠ. ಹೀಗಿದ್ದರೂ ಇದನ್ನು ಶನಿವಾರ ಮಾತ್ರ ಖರೀದಿ ಮಾಡಬಾರದು. ಹೀಗೆ ಮಾಡಿದಲ್ಲಿ, ಅದೃಷ್ಟದ ಬಾಗಿಲು ನಿಮ್ಮ ಪಾಲಿಗೆ ಮುಚ್ಚಿಕೊಳ್ಳಲಿದೆ. ಅನೇಕ ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಂತಾಗುತ್ತದೆ.
ಪೊರಕೆ
ಮನೆಯಲ್ಲಿ ಕಸ ಗುಡಿಸುವುದರಿಂದ ಋಣಾತ್ಮಕ ಅಂಶಗಳು ತೊಲಗಿ, ಧನಾತ್ಮಕ ಶಕ್ತಿಯು ಬರುತ್ತದೆ. ಆದರೆ, ಮರೆತೂ ಶನಿವಾರದಂದು ಪೊರಕೆಯನ್ನು ಖರೀದಿ ಮಾಡಬಾರದು. ಇದರಿಂದ ದರಿದ್ರವನ್ನು ಆಹ್ವಾನಿಸಿದಂತಾಗುವುದಲ್ಲದೆ, ಮನೆಯಲ್ಲಿ ಬಡತನ ಆವರಿಸುತ್ತದೆ.
ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು, ಇವರಿಗಿದೆ ಶನಿ ಕೃಪೆ!
ಕಪ್ಪು ಬಣ್ಣದ ಚಪ್ಪಲಿ
ಶನಿವಾರದಂದು ಕಪ್ಪು ಬಣ್ಣದ ಚಪ್ಪಲಿಯನ್ನು ನಿಮಗಾಗಿ ಖರೀದಿ ಮಾಡಬಾರದು. ಹಾಗೇ ಯಾರಿಗೂ ಕೊಡಿಸಲೂ ಬಾರದು. ಇದರಿಂದ ಆ ಚಪ್ಪಲಿಯನ್ನು ಧರಿಸಿದವರಿಗೆ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಅಲ್ಲದೆ, ಉದ್ಯೋಗವನ್ನೂ ಕಳೆದುಕೊಳ್ಳುವ ಸಂಭವವೂ ಇರುತ್ತದೆ.
ಇಂಕು
ಶನಿವಾರ ಇಂಕ್ ಖರೀದಿ ಮಾಡುವುದರಿಂದ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನಕ್ಕೆ ಅಶುಭ ಎಂದು ಹೇಳಲಾಗುತ್ತದೆ. ಇದರಿಂದಾಗಿ ಶಿಕ್ಷಣದಲ್ಲಿ ತೊಡಕಾಗಿ ಪರೀಕ್ಷೆಯಲ್ಲಿ ಕಷ್ಟವಾಗಲಿದೆ ಎಂದು ಹೇಳಲಾಗುತ್ತದೆ.