ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ ಹಗಲು ತೇರು
ಉಡುಪಿಯ ಕೃಷ್ಣ ಭಕ್ತರು ದುಪ್ಪಟ್ಟು ಉತ್ಸಾಹದಲ್ಲಿದ್ದಾರೆ. ಒಂದೆಡೆ ಪುತ್ತಿಗೆ ಪರ್ಯಾಯ ಮಹೋತ್ಸವದ ಸಂಭ್ರಮವಾದರೆ, ಮತ್ತೊಂದೆಡೆ ಸಪ್ತೋತ್ಸವ ಪೂರ್ಣಗೊಂಡಿದೆ.
ಉಡುಪಿ (ಜ.15): ಉಡುಪಿಯ ಕೃಷ್ಣ ಭಕ್ತರು ದುಪ್ಪಟ್ಟು ಉತ್ಸಾಹದಲ್ಲಿದ್ದಾರೆ. ಒಂದೆಡೆ ಪುತ್ತಿಗೆ ಪರ್ಯಾಯ ಮಹೋತ್ಸವದ ಸಂಭ್ರಮವಾದರೆ, ಮತ್ತೊಂದೆಡೆ ಸಪ್ತೋತ್ಸವ ಪೂರ್ಣಗೊಂಡಿದೆ. ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿದಿನ ರಾತ್ರಿ ಉತ್ಸವ ನಡೆದರೂ ವರ್ಷದಲ್ಲಿ ಒಂದೇ ಬಾರಿ ಬೆಳಗಿನ ಹೊತ್ತು ನಡೆಯುವ ಹಗಲು ಉತ್ಸವಕ್ಕೆ ಇಂದು ಸಾವಿರಾರು ಭಕ್ತರು ಸಾಕ್ಷಿಯಾದರು.
ಇವತ್ತು ಮಕರ ಸಂಕ್ರಾಂತಿ. ಇದೇ ದಿನ ಉಡುಪಿ ಕೃಷ್ಣನನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ವರ್ಷಂ ಪ್ರತಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸಪ್ತೋತ್ಸವ ನಡೆಯುತ್ತದೆ. 6 ರಾತ್ರಿ ಒಂದು ಹಗಲು ನಡೆಯುವ ಈ ಉತ್ಸವದ ವಿಶೇಷತೆ ಏನಂದರೆ, ಸಂಕ್ರಾಂತಿಯ ದಿನ ನಡೆಯುವ ಹಗಲು ಉತ್ಸವ. ಈ ದಿನ ಬ್ರಹ್ಮ ರಥದಲ್ಲಿ ಕಡಗೋಲು ಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಇರಿಸಿ ವಿಶೇಷ ಆರಾಧನೆ ಮಾಡಲಾಗುತ್ತದೆ.
ತಮಿಳುನಾಡಲ್ಲಿ ಸಂಕ್ರಾಂತಿ ಸಂಭ್ರಮ, ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ದಾಳಿಗೆ 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಗರ್ಭಗಡಿಯ ಮುಂಭಾಗದಲ್ಲಿ ಉತ್ಸವ ಮೂರ್ತಿಯ ಪೂಜೆ ನಡೆಸಿ ಪರ್ಯಾಯ ಮಠಾಧೀಶರು ಕೃಷ್ಣಮೂರ್ತಿಯನ್ನು ಬ್ರಹ್ಮ ರಥದಲ್ಲಿ ಇರಿಸುತ್ತಾರೆ. ಈ ವೇಳೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಕೃಷ್ಣನನ್ನು ಎದುರುಗೊಳ್ಳುತ್ತಾರೆ. ಉತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ರಥದಿಂದಲೇ ಪ್ರಸಾದವನ್ನು ನೀಡುವ ಅಪರೂಪದ ಪದ್ಧತಿ ಇವತ್ತಿಗೂ ಚಾಲ್ತಿಯಲ್ಲಿದೆ.
ಕೃಷ್ಣದೇವರನ್ನು ಅಷ್ಟಮಠಾಧೀಶರು ಮಾತ್ರ ಪೂಜೆ ಕೈಗೊಳ್ಳಲು ಅರ್ಹರು. ಜೀವಮಾನವಿಡಿ ಕೃಷ್ಣ ಪೂಜೆಯಲ್ಲಿ ನೆಮ್ಮದಿ ಕಾಣುವ ಅಷ್ಟಮಠಾಧೀಶರು ಇವತ್ತಿನ ಉತ್ಸವದಲ್ಲಿ ಭಾಗಿಯಾಗುತ್ತಾರೆ. ತಾವೇ ಮುಂದೆ ನಿಂತು ರಥವನ್ನು ಭಕ್ತರ ಜೊತೆಗೂಡಿ ಎಳೆಯುತ್ತಾರೆ. ಪ್ರತೀತಿಯಂತೆ ಗರುಡ ದೇವರು ರಥಕ್ಕೆ ಪ್ರದಕ್ಷಿಣೆ ಬಂದ ನಂತರವೇ ಉತ್ಸವ ಆರಂಭವಾಗಬೇಕು. ಇವತ್ತಿಗೂ ಕಾಕತಾಳಿವೋ ಎಂಬಂತೆ ಪಕ್ಷಿ ಎಂದು ರಥಕ್ಕೆ ಪ್ರದಕ್ಷಿಣೆ ಬರುತ್ತದೆ. ರಥೋತ್ಸವ ಮುಗಿದ ಬಳಿಕ ಕೃಷ್ಣದೇವರ ಉತ್ಸವ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಇರಿಸಿ ಅವಭೃತ ಸ್ನಾನ ಕೈಗೊಳ್ಳಲಾಗುತ್ತದೆ. ಈ ಮೂಲಕ ಸಪ್ತೋತ್ಸವ ಸಂಪನ್ನಗೊಳ್ಳುತ್ತದೆ.
ದೂಧಗಂಗಾ ನದಿಯ ಕೆಸರಿನಲ್ಲಿ ಹಳೆಯ ಸೀತಾರಾಮ ದೇವಾಲಯ ಪತ್ತೆ: ಪಾದುಕೆಗಳು ಲಭ್ಯ
ಈ ಬಾರಿ ಪುತ್ತಿಗೆ ಮಠದ ಪರ್ಯಾಯೋತ್ಸವ ನಡೆಯುತ್ತಿರುವುದರಿಂದ ಸಪ್ತೋತ್ಸವ ಹಾಗೂ ಹಗಲುತೇರಿಗೆ ವಿಶೇಷ ಮೆರುಗು ಬಂದಿದೆ. ಎರಡು ಬಗೆಯ ಖುಷಿಯಲ್ಲಿ ಭಕ್ತರು ಸಂಭ್ರಮಿಸುತ್ತಿದ್ದಾರೆ.