ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದು ದೀಪ. ದೇವರ ಮುಂದೆ ಪ್ರತಿ ದಿನ ನಾವು ದೀಪ ಬೆಳಗ್ತೇವೆ. ಆದ್ರೆ ದೀಪವನ್ನು ಎಲ್ಲಿ? ಹೇಗೆ ಹಚ್ಚಬೇಕೆಂಬ ಸರಿಯಾದ ಮಾಹಿತಿ ನಮಗಿರೋದಿಲ್ಲ.  

ದೇವರ ಮನೆಯಲ್ಲಿ ದೀಪ (Llighting) ಸದಾ ಬೆಳಗುತ್ತಿರುತ್ತದೆ. ದೀಪ ಉನ್ನತಿಯ ಸಂಕೇತ. ದೀಪ ಧನಾತ್ಮಕತೆ (Positivity) ಯ ಸಂಕೇತ. ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವದ ಸ್ಥಾನವಿದೆ. ಭಾರತೀಯರ ಮನೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ದೀಪವನ್ನು ಹಚ್ಚಲಾಗುತ್ತದೆ. ದೇವರ ಮನೆಯಲ್ಲಿ, ದೇವಸ್ಥಾನ (Temple) ಗಳಲ್ಲಿ ಮಾತ್ರವಲ್ಲ ವಿಶೇಷ ಕಾರ್ಯಗಳ ಸಂದರ್ಭದಲ್ಲಿಯೂ ದೀಪ ಬೆಳಗಲಾಗುತ್ತದೆ. ದೀಪವು ಶುಭ ಸಂಕೇತವಾಗಿದೆ. ಹಾಗಾಗಿಯೇ ಯಾವುದೇ ಸಮಾರಂಭವನ್ನು ದೀಪ ಬೆಳಗಿ ಶುರು ಮಾಡಲಾಗುತ್ತದೆ. ದೀಪ ಬೆಳಗುವುದ್ರಿಂದ ದೇವಾನುದೇವತೆಗಳು ಸಂತುಷ್ಟರಾಗ್ತವೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಕುಟುಂಬ (Family) ಸದಸ್ಯರ ಮನಸ್ಸಿನಲ್ಲಿ ಶಾಂತಿ ಮನೆ ಮಾಡುತ್ತದೆ. ದೀಪ ಬೆಳಗಬೇಕು ಎನ್ನುವ ಕಾರಣಕ್ಕೆ ಅನೇಕರು ಕಾಟಾಚಾರಕ್ಕೆ ದೀಪ ಹಚ್ಚುತ್ತಾರೆ. ಮತ್ತೆ ಕೆಲವರಿಗೆ ದೀಪದ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ. ಹಿರಿಯರು ಜಾರಿಗೆ ತಂದ ಪದ್ಧತಿ ಎಂಬ ಕಾರಣಕ್ಕೆ ದೀಪ ಹಚ್ಚುತ್ತಾರೆ. ಆದ್ರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪವನ್ನು ಬೆಳಗಿಸಲು ಕೆಲವು ನಿಯಮಗಳಿವೆ. ದೀಪ ಹಚ್ಚುವಾಗ ಆ ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ನಾವು ಹಚ್ಚಿದ ದೀಪ ಪ್ರತಿಫಲ ನೀಡಲು ಸಾಧ್ಯ. ನಮ್ಮ ಮನೆ ಬೆಳಗಲು ಸಾಧ್ಯ. ಇಂದು ನಾವು ದೀಪ ಬೆಳಗುವು ಸರಿಯಾದ ವಿಧಾನಗಳ ಬಗ್ಗೆ ಹೇಳ್ತೇವೆ.

ದೀಪ ಬೆಳಗುವ ಮೊದಲು ನಿಮಗೆ ಈ ಸಂಗತಿ ತಿಳಿದಿರಲಿ :

ದೀಪ ಹಚ್ಚಲು ಸರಿಯಾದ ಸಮಯ ಯಾವುದು ? : ಬೆಳಿಗ್ಗೆ ದೇವರಿಗೆ ಪೂಜೆ ಮಾಡಿ, ದೀಪ ಬೆಳಗಲು ಸೂಕ್ತ ಸಮಯ 5 ಗಂಟೆ. ಬೆಳಗಿನ ಜಾವ ಐದು ಗಂಟೆಯಿಂದ 10 ಗಂಟೆಯೊಳಗೆ ನೀವು ದೇವರಿಗೆ ದೀಪ ಹಚ್ಚಬೇಕು. ಬೆಳಗಿನ ಸಮಯ ಪ್ರಶಾಂತವಾಗಿರುತ್ತದೆ. ದೇವರ ಪೂಜೆಯನ್ನು ಏಕಾಗ್ರತೆಯಿಂದ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎಷ್ಟು ಬೇಗ ನೀವು ದೇವರ ಪೂಜೆ ಮಾಡ್ತೀರೋ ಅಷ್ಟು ಒಳ್ಳೆಯದು. ಹಾಗೆಯೇ ಸಂಜೆ ಐದು ಗಂಟೆಯಿಂದ 7 ಗಂಟೆಯೊಳಗೆ ನೀವು ದೇವರ ಮುಂದೆ ದೀಪವನ್ನು ಬೆಳಗಬೇಕು. 

ನಿರ್ಜಲ ಏಕಾದಶಿ ವ್ರತ 2022: ಈ ವ್ರತ ಮಾಡಿದರೆ ತುಂಬುವುದು ಪುಣ್ಯದ ಖಾತೆ

ದೀಪ ಇಡುವ ಸರಿಯಾದ ದಿಕ್ಕು : ಪೂರ್ವ ಮತ್ತು ಉತ್ತರ ದಿಕ್ಕನ್ನು ದೀಪವನ್ನು ಇಡುವ ಮಂಗಳಕರ ದಿಕ್ಕೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ದೀಪ ಇಡುವುದರಿಂದ ಅನಗತ್ಯ ಹಣ ವ್ಯರ್ಥವಾಗುತ್ತದೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಪೂರ್ವಜರಿಗೆ ದೀಪವನ್ನು ಬೆಳಗಿಸಬೇಕು.

ದೀಪವನ್ನು ಇಡುವ ಸ್ಥಳ : ಪೂಜೆ ಮಾಡುವಾಗ ದೇವರ ಮುಂದೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುತ್ತೇವೆ. ಪೂಜೆ ಮಾಡುವಾಗ ನಾವು ತುಪ್ಪದ ದೀಪವನ್ನು ಹಚ್ಚುತ್ತಿದ್ದರೆ ಅದನ್ನು ನಮ್ಮ ಎಡಗಡೆ ದೇವರ ಮುಂದೆ ಇಡಬೇಕು ಮತ್ತು ತುಪ್ಪದ ದೀಪದಲ್ಲಿ ಯಾವಾಗಲೂ ಹತ್ತಿಯ ಬತ್ತಿಯನ್ನು ಬಳಸಬೇಕು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಮತ್ತೊಂದೆಡೆ ನಾವು ಎಣ್ಣೆಯ ದೀಪವನ್ನು ಹಚ್ಚುತ್ತಿದ್ದರೆ, ಅದನ್ನು ಯಾವಾಗಲೂ ದೇವರ ಮುಂದೆ ನಮ್ಮ ಬಲಭಾಗದಲ್ಲಿ ಇಡಬೇಕು. ಎಣ್ಣೆ ದೀಪವನ್ನು ಬೆಳಗಿಸುವಾಗ ಕೆಂಪು ದಾರವನ್ನು ಬಳಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ವಾದಿರಾಜರ ಪಾದುಕೆಗೆ 500 ವರ್ಷ, ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ?

ದೀಪದ ಆಯ್ಕೆ : ಮಣ್ಣಿನ ಹಣತೆಯಲ್ಲಿ ನೀವು ದೀಪ ಹಚ್ಚುತ್ತಿದ್ದರೆ ಹಣತೆ ಬಗ್ಗೆ ಗಮನವಿರಲಿ. ಹಾಳಾದ ಅಥವಾ ಒಡೆದ ಹಣತೆಯನ್ನು ನೀವು ಬಳಸಬಾರದು. ಹಾಗೆಯೇ ಲೋಹದ ದೀಪದಲ್ಲಿ ನೀವು ಎಣ್ಣೆ ಅಥವಾ ತುಪ್ಪ ಎರಡರಲ್ಲಿ ಒಂದನ್ನು ಬಳಸಬಹುದು. ಒಂದೇ ಬತ್ತಿಯನ್ನು ಅನೇಕ ಬಾರಿ ಬಳಕೆ ಮಾಡಲಾಗುತ್ತದೆ. ಅದು ತಪ್ಪು. ಒಮ್ಮೆ ಹಾಕಿದ ಬತ್ತಿಯಲ್ಲಿ ಒಮ್ಮೆ ಮಾತ್ರ ದೀಪ ಬೆಳಗಬೇಕು. ಹಾಗೆಯೇ ದೀಪವನ್ನು ಎಂದಿಗೂ ಆರಿಸಬಾರದು.