Republic Day 2023: ಮಹಾಕಾಳೇಶ್ವರಗೆ ತಿರಂಗ ಅಲಂಕಾರ, ದೈವಭಕ್ತಿಯೊಂದಿಗೆ ದೇಶಭಕ್ತಿಯ ಅನಾವರಣ
ಉಜ್ಜಯನಿಯ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಾಲಯದಲ್ಲಿ ಇಂದು ಗಣರಾಜ್ಯೋತ್ಸವ ಪ್ರಯುಕ್ತ ಮಹಾಕಾಳನಿಗೆ ತಿರಂಗದಿಂದ ಅಲಂಕರಿಸುವ ಮೂಲಕ ದೈವಭಕ್ತಿ ಹಾಗೂ ದೇಶಭಕ್ತಿಯ ಮೇಳೈಸುವಿಕೆಯ ಚೆಂದದ ಅಭಿವ್ಯಕ್ತಿ ಕಂಡು ಬಂತು.
ಉಜ್ಜಯನಿಯ ಮಹಾಕಾಳೇಶ್ವರ ದರ್ಶನವೇ ಅಪ್ರತಿಮ ಆನಂದ ತರುವಂಥದ್ದು. ಅಂಥದರಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಮಹಾಕಾಳೇಶ್ವರನನ್ನು ಭಾರತ ಧ್ವಜದ ತ್ರಿವರ್ಣಗಳಿಂದ ಅಲಂಕರಿಸಿದರೆ ಹೇಗಿರಬಹುದು ಆ ಮಹಾರೂಪ?
ಇದಲ್ಲವೇ ದೈವಭಕ್ತಿಯೊಂದಿಗೆ ದೇಶಭಕ್ತಿಯೂ ಬೆರೆತ ಅಪರೂಪದ ಸಂಗಮ?
ಹೌದು, ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಮಧ್ಯಪ್ರದೇಶದ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಗವಾನ್ ಮಹಾಕಾಲನ ಮೇಲೆ ತ್ರಿವರ್ಣದ ಬಣ್ಣವು ಗೋಚರಿಸಿತು. ಗಣರಾಜ್ಯೋತ್ಸವದ 74ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಉಜ್ಜಯಿನಿಯಲ್ಲಿ ಮಹಾಕಾಲನ ವಿಶೇಷ ಅಲಂಕಾರ ನಡೆಯಿತು. ಗಣರಾಜ್ಯೋತ್ಸವದಂದು ಪುರೋಹಿತರು ಮಹಾಕಾಲ ದೇವರನ್ನು ತ್ರಿವರ್ಣ ಧ್ವಜದಿಂದ ಅಲಂಕರಿಸಿದರು.
ಮಹಾಕಾಲ ದೇವರ ಮೇಲೆ ತಿರಂಗ ಅಲಂಕಾರ
ಉಜ್ಜಯನಿಯ ಪ್ರಸಿದ್ಧ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಂದು ಮಹಾಕಾಲ ದೇವರ ಭಕ್ತಾದಿಗಳಿಗೆ ಅಚ್ಚರಿ ಕಾದಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ, ದಿನವಿಡೀ ಮಹಾಕಾಲ ಭಗವಾನ್ ಮೇಲೆ ದೇಶಭಕ್ತಿಯ ಬಣ್ಣವು ಗೋಚರಿಸುತ್ತದೆ. ಈ ಅದ್ಭುತ ಅಲಂಕಾರವನ್ನು ನೋಡಲು ಭಕ್ತರು ಸಹ ಉತ್ಸುಕರಾಗಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ ನಿಮಿತ್ತ ಗುರುವಾರ ಬೆಳಗ್ಗೆ ಮಹಾಕಾಲ ದೇವರ ಆಸ್ಥಾನದಲ್ಲಿ ಭಸ್ಮಾರತಿಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Vasant Panchami 2023: ಇಂದು ವಿದ್ಯಾರಂಭಕ್ಕೆ ಅತ್ಯುತ್ತಮ ದಿನ, ಪುಟ್ಟ ಮಕ್ಕಳಿಗೆ ಮಾಡಿಸಿ ಅಕ್ಷರಾಭ್ಯಾಸ
ಮಹಾಕಾಳೇಶ್ವರ ದೇವಸ್ಥಾನದ ಪುರೋಹಿತರಾದ ಆಶೀಶ್ ಪೂಜಾರಿ ಮಾತನಾಡಿ, 'ದೇವಸ್ಥಾನದಲ್ಲಿ ಧಾರ್ಮಿಕ ಹಬ್ಬಗಳ ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪಂಡಿತರು ಮತ್ತು ಪುರೋಹಿತರು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಭಗವಾನ್ ಮಹಾಕಾಲನನ್ನು ವಿಶೇಷವಾಗಿ ತ್ರಿವರ್ಣದಿಂದ ಅಲಂಕರಿಸುತ್ತಾರೆ. ಇದಕ್ಕಾಗಿ ಸೆಣಬು, ಶ್ರೀಗಂಧ, ಗುಲಾಲ್, ಡ್ರೈ ಫ್ರೂಟ್ಸ್, ಅಷ್ಟಗಂಧ, ಸುಗಂಧ ಇತ್ಯಾದಿಗಳನ್ನು ಬಳಸಲಾಗುತ್ತದೆ,' ಎಂದು ತಿಳಿಸಿದರು. ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಭಗವಾನ್ ಮಹಾಕಾಲ ದಿನವಿಡೀ ದೇಶಭಕ್ತಿಯ ಬಣ್ಣದಲ್ಲಿ ಕಾಣುತ್ತಾನೆ. ಇಲ್ಲಿಗೆ ಬರುವ ಭಕ್ತರು ಇಂದು ವಿಶೇಷ ದರ್ಶನ ಪಡೆಯಲಿದ್ದಾರೆ.
ಧರ್ಮ ಮತ್ತು ದೇಶಭಕ್ತಿಯ ಅದ್ಭುತ ಒಕ್ಕೂಟ
ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮುಂಜಾನೆ 4:00 ಗಂಟೆಗೆ ಭಗವಾನ್ ಮಹಾಕಾಲನ ಆಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಇದರ ನಂತರ ದೇವರಿಗೆ ನೀರು, ಹಾಲು, ಮೊಸರು, ಜೇನುತುಪ್ಪ, ಹಣ್ಣಿನ ರಸಗಳು, ತುಪ್ಪ ಇತ್ಯಾದಿಗಳಿಂದ ಅಭಿಷೇಕ ಮಾಡಲಾಗುತ್ತದೆ. ಇದರ ನಂತರ, ಧಾರ್ಮಿಕ ಅಥವಾ ರಾಷ್ಟ್ರೀಯ ಹಬ್ಬದ ಪ್ರಕಾರ, ಭಗವಾನ್ ಮಹಾಕಾಲನ ಅಲಂಕಾರ ಪ್ರಾರಂಭವಾಗುತ್ತದೆ. ಈ ಅಲಂಕಾರದಲ್ಲಿ ಮಾಲೆಗಳು, ಗಾಂಜಾ, ಒಣ ಹಣ್ಣುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಬಳಸಲಾಗುತ್ತದೆ.
Kal Sarp Dosh: ಹರಿಯುವ ನೀರಲ್ಲಿ ಈ ವಸ್ತು ಹರಿಬಿಟ್ಟರೆ ಕಾಳಸರ್ಪ ದೋಷ ನಿವಾರಣೆ
ಇದೇನು ಮೊದಲ ಬಾರಿಯಲ್ಲ, ಕಳೆದ ವರ್ಷ ಸ್ವತಂತ್ರ ದಿನಾಚರಣೆಯಿಂದು ಮಹಾಕಾಲನಿಗೆ ತಿರಂಗ ವಸ್ತ್ರದಿಂದ ಅಲಂಕಾರ ಮಾಡಲಾಗಿತ್ತಲ್ಲದೆ, ದೇವಾಲಯವನ್ನೇ ಕೇಸರಿ, ಬಿಳಿ, ಹಸಿರು ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು.
ಬ್ರಹ್ಮ ಸ್ಥಾಪಿಸಿದ ಮಹಾಕಾಳೇಶ್ವರ ದೇವಾಲಯ
ಮಹಾಕಾಳೇಶ್ವರ ದೇವಾಲಯವನ್ನು ಮೊದಲು ಪ್ರಜಾಪಿತ ಬ್ರಹ್ಮ ಸ್ಥಾಪಿಸಿದನೆಂದು ಪುರಾಣಗಳು ಹೇಳುತ್ತವೆ. 6ನೇ ಶತಮಾನದಲ್ಲಿ ರಾಜ ಚಂಡ ಪ್ರದ್ಯೋತನು ಈ ದೇವಾಲಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳಲು ರಾಜಕುಮಾರ ಕುಮಾರಸೇನನನ್ನು ನೇಮಿಸಿದ ಉಲ್ಲೇಖವಿದೆ. ಮಹಾಕಾಳೇಶ್ವರನ ವಿಗ್ರಹವು ದಕ್ಷಿಣಾಭಿಮುಖವಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಕೇವಲ ಮಹಾಕಾಳೇಶ್ವರ ಮಾತ್ರ ದಕ್ಷಿಣಕ್ಕೆ ತಿರುಗಿದ್ದಾನೆ. ಇದು ಇಲ್ಲಿನ ತಾಂತ್ರಿಕ ಆಚರಣೆಗಳಿಗೆ ಕನ್ನಡಿ ಹಿಡಿಯುತ್ತದೆ. ಇದೀಗ ಮಹಾಕಾಳೇಶ್ವರ ದೇವಾಲಯವನ್ನು ಕೇಂದ್ರ ಸರ್ಕಾರ ಪುನರುಜ್ಜೀವನಗೊಳಿಸಿದ್ದು, ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.