ಯತಿ ಸಾರ್ವಭೌಮ ರಾಮಾನುಜಾಚಾರ್ಯರು ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದರು. ಗುರುಗಳಿಂದ ಪಡೆದ ರಹಸ್ಯ ಮಂತ್ರವನ್ನು ಸಮಾಜದ ಎಲ್ಲ ವರ್ಗದವರಿಗೂ ಉಪದೇಶಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಶ್ರೀವೈಷ್ಣವ ಸಿದ್ಧಾಂತವನ್ನು ಪ್ರತಿಪಾದಿಸಿದರು. ,

-ಯಶುಪ್ರಸಾದ್, ಮೈಸೂರು

ಯತಿ ಸಾರ್ವಭೌಮರಾಗಿದ್ದ ರಾಮಾನುಜಾಚಾರ್ಯರು ತಮಿಳುನಾಡಿನ ಶ್ರೀಪೆರಂಬದೂರು ಕ್ಷೇತ್ರದಲ್ಲಿ ಕ್ರಿಸ್ತಶಕ 1017ರ ಚಂದ್ರಮಾನ ಚೈತ್ರಮಾಸ ಶುಕ್ಲಪಕ್ಷದ ಆರಿದ್ರಾ ನಕ್ಷತ್ರದಲ್ಲಿ ಜನಿಸುತ್ತಾರೆ. ಸೋಮಯಾಜಿ ಮತ್ತು ಕಾಂತಿಮತಿ ಇವರ ಮಾತಾಪಿತರು. ಬಹುಕಾಲ ಮಕ್ಕಳಿಲ್ಲದ ದಂಪತಿ ಪುತ್ರಕಾಮೇಷ್ಠಿ ಯಾಗ ಮಾಡಿ ಭಗವಂತ ಪಾರ್ಥಸಾರಥಿಯನ್ನು ಪ್ರಾರ್ಥಿಸಿ ಮನೋಭಿಷ್ಟೇಗಾಗಿ ಕಾಯುತ್ತಾ ಶ್ರೀಪೆರಂಬದೂರುಗೆ ಬರುತ್ತಾರೆ. ಅದಾದ ನಂತರ ಆಚಾರ್ಯರ ಜನನವಾಗುತ್ತದೆ. ಮಗುವಿಗೆ ಇಳೆಯ ಪೆರುಮಾಳ್ ಎಂಬ ಹೆಸರಿಡಲಾಗುತ್ತದೆ. ನಂತರ ಸೋದರ ಮಾವ ತಿರುಮಲೆಯನಂಬಿ ಎಂದು ಪ್ರಸಿದ್ಧರಾದ ಶ್ರೀಶೈಲಪೂರ್ಣರು ರಾಮಾನುಜ ಎಂದು ಕರೆದು ಭಾರತದ ಶ್ರೇಷ್ಠ ಮಾರ್ಗದರ್ಶಕರಾಗುತ್ತಾನೆ ಎಂದು ಭವಿಷ್ಯ ನುಡಿಯುತ್ತಾರೆ. ರಾಮಾನುಜ ಎಂದರೆ ರಾಮನಿಗೆ ಅನುಜನಾದವನು ಲಕ್ಷ್ಮಣ ಎಂದರ್ಥ.

ರಾಮಾನುಜರು ಆ ಕಾಲಘಟ್ಟದಲ್ಲಿ ಚೌಲ ಉಪನಯನಗಳು, ವಿದ್ಯಾಭ್ಯಾಸ, ವೇದಭ್ಯಾಸ, ವೇದ-ವೇದಾಂಗಗಳನ್ನು ಕಲಿತು ಚಿಕ್ಕವಯಸ್ಸಿಗೆ (16 ವರ್ಷಕ್ಕೆ) ಎಲ್ಲ ಅಧ್ಯಯನಗಳನ್ನು ಪೂರ್ಣವಾಗಿ ಕರತಲಾಮಲಕ ಮಾಡಿಕೊಂಡಿರುತ್ತಾರೆ. ಚಿಕ್ಕಂದಿನಲ್ಲಿಯೇ ಆಚಾರ್ಯ ರಾಮಾನುಜರ ಗುರುಗಳಾದ ಯಾದವ ಪ್ರಕಾಶರ ವ್ಯಾಖ್ಯಾನದಲ್ಲಿ ಸರಿ-ತಪ್ಪುಗಳನ್ನು ಗುರುತಿಸಿ ಹೇಳಿದಾಗ ಯಾದವ ಪ್ರಕಾಶರಿಗೆ ಅದು ಇಷ್ಟವಾಗುವುದಿಲ್ಲ. ಆಗ ರಾಮಾನುಜರು ಅವರ ಬಳಿ ಅಧ್ಯಯನ ಮಾಡುವುದನ್ನು ನಿಲ್ಲಿಸುತ್ತಾರೆ.

ಶ್ರೀವೈಷ್ಣವ ಸನ್ಯಾಸ ದೀಕ್ಷೆ:

ಮುಂದೆ ರಾಮಾನುಜರು ಕಂಚಿಯ ಯಾಮುನಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸುತ್ತಾರೆ. ಗುರುಗಳು ದೈವಾಧೀನರಾದ ನಂತರ ಆಚಾರ್ಯ ರಾಮಾನುಜರು ಪಂಚಸಂಸ್ಕಾರ ಮತ್ತು ಶ್ರೀವೈಷ್ಣವ ಸನ್ಯಾಸ ದೀಕ್ಷೆಯನ್ನು ಕಂಚಿಯ ವರದರಾಜಸ್ವಾಮಿಯ ಬಳಿ ಸ್ವೀಕರಿಸಿ ಶ್ರೀರಂಗದೆಡೆಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀರಂಗನಾಥನ ಕೈಂಕರ್ಯವನ್ನು ಮಾಡುತ್ತಾ ಅಲ್ಲಿಯೇ ನೆಲೆಸುತ್ತಾರೆ. ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಆಚಾರ್ಯ ರಾಮಾನುಜರಿಗೆ ಕೇವಲ 24 ವರ್ಷಗಳು ಮಾತ್ರ ಆಗಿತ್ತು. ಅನೇಕ ತತ್ವ ರಹಸ್ಯಗಳನ್ನು ಕಲಿತ ರಾಮಾನುಜಾಚಾರ್ಯರು ಮಂತ್ರ ರಹಸ್ಯಗಳನ್ನು ತಿಳಿದುಕೊಳ್ಳಲು ಗೋಷ್ಠಿಪೂರ್ಣರ ಬಳಿ ಹೋಗುತ್ತಾರೆ. ಆದರೆ 17 ಬಾರಿ ಹೋದರೂ ಭೇಟಿಯಾಗದೆ ಕಳಿಸುತ್ತಾರೆ. ಒಂದು ರಾತ್ರಿ ರಾಮಾನುಜರಿಗೆ ತಾವು ಉಪದೇಶ ಮಾಡಲೇಬೇಕೆಂದು ನಿರ್ಧರಿಸಿ ಸನ್ಯಾಸ ಧರ್ಮದಲ್ಲಿ ದಂಡ ಪವಿತ್ರಗಳನ್ನು ತೆಗೆದುಕೊಂಡು ನೀವೊಬ್ಬರು ಮಾತ್ರ ಬರಬೇಕೆಂದು ಹೇಳುತ್ತಾರೆ. ಆದರೆ ತಮ್ಮ ಶಿಷ್ಯರಾದ ದಾಶರತಿ ಮತ್ತು ಕೂರತ್ತಾಳ್ವಾನ್ ಎಂಬ ಇಬ್ಬರು ಶಿಷ್ಯರ ಜೊತೆಗೆ ರಾಮಾನುಜರು ಗೋಷ್ಠಿ ಪೂರ್ಣರನ್ನು ನೋಡಲು ಹೋಗುತ್ತಾರೆ.

ಸಾಮಾನ್ಯರಿಗೆ ಮಂತ್ರೋಪದೇಶ:

ಗುರುನಿಷ್ಠೆ ಮತ್ತು ಅವರಿಬ್ಬರ ಶಿಷ್ಯನಿಷ್ಠೆ ನೋಡಿ ಸಂತೋಷಗೊಂಡ ಗೋಷ್ಠಿಪೂರ್ಣರು ರಾಮಾನುಜರಿಗೆ ಮಂತ್ರೋಪದೇಶ ಮಾಡುತ್ತಾರೆ. ಯಾ‘ವುದೇ ಕಾರಣಕ್ಕೂ ಸಾಮಾನ್ಯ ಜನರಿಗೆ, ಕೆಳವರ್ಗದವರಿಗೆ ಈ ಮಂತ್ರವನ್ನು ಉಪದೇಶಿಸಿಸಬಾರದು. ಹಾಗೇನಾದರೂ ಆದರೆ ನೀನು ರೌರವ ನರಕಕ್ಕೆ ಹೋಗುತ್ತಿಯ’ ಎಂದು ಹೇಳಿ ‘ಓಂ ನಮೋ ನಾರಾಯಣಾಯ’ ಎಂಬ ಪ್ರಣವ ಮಂತ್ರ ಅಷ್ಟಾಕ್ಷರಿ ಮಂತ್ರದ ಉಪದೇಶವನ್ನು ಹಾಗೂ ಮಂತ್ರರಾಜ ಎಂದೇ ಕರೆಯಲ್ಪಡುವ ದ್ವಯಮಂತ್ರವನ್ನು ಅರ್ಥದೊಡನೆ ಉಪದೇಶಿಸುತ್ತಾರೆ. ಆದರೆ, ಸಾಮಾಜಿಕ ಸಮಾನತೆಯ ಪರಿಕಲ್ಪನೆ ಹೊಂದಿದ್ದ ರಾಮಾನುಜಾಚಾರ್ಯರು ಮೇಲ್ವರ್ಗದ ಧೋರಣೆಯನ್ನು ಖಂಡಿಸಿ ತಿರುಕ್ಕೊಟ್ಟಿಯೂರ್ ದೇವಸ್ಥಾನದ ಮೇಲ್ಭಾಗಕ್ಕೆ ಹೋಗಿ ಎಲ್ಲಾ ಜಾತಿಯ ಸದ್ಭಕ್ತರೆಲ್ಲರಿಗೂ ಕೇಳಿಸುವಂತೆ ರಹಸ್ಯ ಮಂತ್ರಗಳನ್ನೆಲ್ಲಾ ಉಪದೇಶಿಸುತ್ತಾರೆ. ಗುರುವಾಕ್ಯ ಉಲ್ಲಂಘನೆಗಾಗಿ ತಾನೊಬ್ಬ ನರಕಕ್ಕೆ ಹೋದರೂ ಪರವಾಗಿಲ್ಲ. ಭಗವಂತ ಎಲ್ಲರಿಗೂ ಸುಖವನ್ನು ನೀಡಲಿ ಎಂಬ ಉದಾತ್ತ ಮನಸ್ಸಿನ ಭಾವನೆ ಆಚಾರ್ಯ ರಾಮಾನುಜರಲ್ಲಿ ನೆಲೆಯೂರಿತ್ತು.

ವಿಷ ಹಾಕಿ ಹತ್ಯೆಗೆ ಸಂಚು:

ಭಗವಂತ ಶ್ರೀರಂಗನಾಥನ ಹೆಸರಲ್ಲಿ ನಡೆಯುತ್ತಿದ್ದ ದುರಾಚಾರಗಳಿಗೆ ಕಡಿವಾಣ ಹಾಕಿದ ರಾಮಾನುಜಾಚಾರ್ಯರು ಶ್ರೀರಂಗಂ ದೇವಸ್ಥಾನದ ಆಡಳಿತವನ್ನು ಸುಧಾರಣೆ ಮಾಡುತ್ತಾರೆ. ತಾವಿದ್ದ ಮಠದಲ್ಲಿ ಸಾಮಾಜಿಕ ಸುಧಾರಣೆ ಮಾಡುತ್ತಾರೆ. ಕೇವಲ ಕೆಲವೇ ಮೇಲ್ವರ್ಗದ ಜಾತಿಯವರಿಗೆ ಪ್ರವೇಶ ನೀಡುತ್ತಿದ್ದ ದೇವಾಲಯಕ್ಕೆ ಸರ್ವ ಮತದವರು ಪ್ರವೇಶ ಮಾಡಲು ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆಯನ್ನು ಬದಲಿಸುತ್ತಾರೆ. ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಸಾಮರಸ್ಯದ ಸುಧಾರಣೆಗಳು ಆಚರಣೆಗೆ ಬರುವುದೆಂದರೆ ಕಷ್ಟಸಾಧ್ಯವಾಗಿತ್ತು. ಆದರೂ ಎಲ್ಲ ವಿರೋಧಗಳನ್ನು ಮೆಟ್ಟಿನಿಂತ ರಾಮಾನುಜರು ಜಾತಿ ವ್ಯವಸ್ಥೆಗಳನ್ನು ಸುಧಾರಣೆ ಮಾಡುತ್ತಾರೆ. ಇದರಿಂದಾಗಿ ಆಚಾರ್ಯರನ್ನು ಮುಗಿಸಿಬಿಡುವ ಹುನ್ನಾರದಲ್ಲಿ ರಾಮಾನುಜರಿಗೆ ಭಿಕ್ಷೆಯಲ್ಲಿ ವಿಷವನ್ನು ನೀಡಿ ಕೊಲ್ಲಲು ಪಟ್ಟಭದ್ರರು ವಿಫಲಯತ್ನ ನಡೆಸುತ್ತಾರೆ. ಇದಾದ ನಂತರ ರಾಮಾನುಜರು ಯಾರ ಮನೆಗೂ ಭಿಕ್ಷೆಗೆ ಹೋಗದೆ ನೀರನ್ನು ಮಾತ್ರ ಕುಡಿದು ನೀರಾಹಾರರಾಗಿರುತ್ತಾರೆ.

ಶ್ರೀರಂಗಂನಲ್ಲಿ ಆಚಾರ್ಯರನ್ನು ಕೊಲ್ಲುವ ತೀರ್ಮಾನ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಅವರನ್ನು ಕೊಲ್ಲಲು ಬಂದಂತಹ ಅರ್ಚಕರೇ ಶರಣಾಗತರಾಗಿ ಅವರ ಶಿಷ್ಯರಾಗುತ್ತಾರೆ. ಆ ನಂತರ ಯಾವುದೇ ತೊಂದರೆಗಳಿಲ್ಲದೆ ಶ್ರೀರಂಗಂ ದೇವಸ್ಥಾನದ ನಿರ್ವಹಣೆ, ಪ್ರಮುಖ ಸಾಧನೆ, ಪವಾಡ ಮತ್ತು ಸುಧಾರಣೆಗಳನ್ನು ಮಾಡುತ್ತಿದ್ದ ರಾಮಾನುಜರು ಮತ್ತೇ ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಮಾನತೆಯ ತಳಹದಿಯೊಂದಿಗೆ ಆಚಾರ್ಯ ರಾಮಾನುಜರು ಶ್ರೀವೈಷ್ಣವ ಸಿದ್ಧಾಂತವನ್ನು ಪ್ರವರ್ತಿಸುತ್ತಿದ್ದರಿಂದ ಶೈವಪಂಥ ಮತ್ತು ಅದರ ಪ್ರಾಧಾನ್ಯತೆ ಕಳೆಗುಂದುವ ಹಂತದಲ್ಲಿತ್ತು. ಅಲ್ಲಿ ಆಳ್ವಿಕೆಯಲ್ಲಿದ್ದ ಕ್ರಿಮಿಕಂಠ ಚೋಳ ಮತ್ತು ಅದಿರಾಜೇಂದ್ರಚೋಳ ಶೈವನಾಗಿದ್ದು, ರಾಮಾನುಜರ ಉಪಕ್ರಮದಿಂದ ಕೋಪಗೊಂಡ ಆ ಚೋಳರಾಜ ರಾಮಾನುಜರನ್ನು ‘ಶೈವ ಪರವಾಗಿರಬೇಕು. ಇಲ್ಲವೇ ಅವರ ಕಣ್ಣು ಕಿತ್ತುಹಾಕಿ’ ಎಂದು ಆದೇಶಿಸುತ್ತಾನೆ. ರಾಮಾನುಜರ ಶಿಷ್ಯ ಕುರತ್ತಾಳ್ವಾನ್ ಆಚಾರ್ಯರ ಪರವಾಗಿ ತಾನೇ ರಾಮಾನುಜ ಎಂದು ಹೇಳಿ ಕಣ್ಣು ಕಳೆದುಕೊಂಡು ಆಚಾರ್ಯರನ್ನು ಪಾರು ಮಾಡಿ ಕರ್ನಾಟಕಕ್ಕೆ ಕಳುಹಿಸುತ್ತಾರೆ.

ಕರ್ನಾಟಕದಲ್ಲಿ ಹೊಯ್ಸಳರ ಆಶ್ರಯ:

ರಾಮಾನುಜರು ಆರಾಧ್ಯದೈವ ಶ್ರೀರಂಗದ ರಂಗನಾಥನನ್ನು ಬಿಟ್ಟು ವಿಧಿಯಿಲ್ಲದೆ ಕರ್ನಾಟಕಕ್ಕೆ ಬಂದಾಗ ಹೊಯ್ಸಳ ದೊರೆಗಳು ಆಶ್ರಯ ನೀಡುತ್ತಾರೆ. ತಮ್ಮ ಪ್ರಾಣವನ್ನೇ ಒತ್ತೆಯಾಗಿಟ್ಟು ರಾಮಾನುಜರನ್ನು ರಕ್ಷಿಸಲು ನಿಂತ 4 ಕುಟುಂಬಗಳು ಆಚಾರ್ಯರೊಡನೆ ಬರುತ್ತವೆ. ಇದೇ ಪ್ರಿಯ ಶಿಷ್ಯರನ್ನು ಇಂದಿಗೂ ಮೇಲುಕೋಟೆಯಲ್ಲಿ ಸ್ಥಾನಿಕರು ಎಂದೇ ಕರೆಯಲಾಗುತ್ತದೆ. ಅಂದು ರಾಮಾನುಜರು ಈ ಶಿಷ್ಯರಿಂದ ಮಾತ್ರ ಭಿಕ್ಷೆ ಸ್ವೀಕರಿಸುತ್ತಿದ್ದರು. ಈ ಐತಿಹಾಸಿಕ ಕಾರಣಕ್ಕಾಗಿಯೇ ರಾಮಾನುಜಾಚಾರ್ಯರ ತಿರುನಕ್ಷತ್ರದ ಸಮಯದಲ್ಲಿ ನಾಲ್ಕೂ ಮಂದಿ ಸ್ಥಾನೀಕರು ಭಿಕ್ಷಾ ಕೈಂಕರ್ಯವನ್ನು ನೆರವೇರಿಸುವುದನ್ನು ಇಂದಿಗೂ ಕಾಣಲಾಗುತ್ತದೆ.

ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ:

ರಾಮಾನುಜರು ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ, ಶ್ರೀಭಾಷ್ಯ ವೇದಾಂತ, ವೇದಾಂತ ಸಂಗ್ರಹ ಗೀತಾಭಾಷ್ಯ, ವೇದಾಂತ ದೀಪ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಶರಣಾಗತಿ ಗದ್ಯ, ಶ್ರೀರಂಗ ಗದ್ಯ ವೈಕುಂಠ ಗದ್ಯ, ಸ್ತೋತ್ರಗಳನ್ನು ಗದ್ಯತ್ರಯಗಳೆಂದು ಹೆಸರಿಸಲಾಗುತ್ತದೆ. ರಾಮಾನುಜರು ಭಕ್ತಿ ಸಿದ್ಧಾಂತಕ್ಕೆ ಪ್ರತಿನಿಧಿಯಾಗಿ ದೇಶದಲ್ಲಿದ್ದ ಗೊಂದಲಗಳನ್ನು ಪರಿಹರಿಸಿ, ಎಲ್ಲರಿಗೂ ಭಕ್ತಿ ಮೂಲಕ ಸಮಾನತೆ ಎಂಬ ಭಾವವನ್ನು ಬೆಳೆಸಿ, ಸನಾತನ ಧರ್ಮದ ಆಚರಣೆಗಳನ್ನು ಉಳಿಸಿ ಬೆಳೆಸುವ ಜೊತೆಗೆ, ಭಗವಂತ ಎಲ್ಲರಿಗೂ ಒಲಿಯುತ್ತಾನೆ ಎಂಬ ಆತ್ಮಸ್ಥೈರ್ಯವನ್ನು ತುಂಬಿದರು.

ಅಸ್ಪೃಶ್ಯತೆ ನಿವಾರಿಸಲು ದಲಿತರಿಗೂ ದೀಕ್ಷೆ:

ಅಸ್ಪೃಶ್ಯತೆ ನಿವಾರಿಸುವ ನಿಟ್ಟಿನಲ್ಲಿ ರಾಮಾನುಜರು ತಮ್ಮ ಜೀವಿತಾವಧಿಯಲ್ಲಿ ಅನೇಕ ದಲಿತರಿಗೂ ಪ್ರವೇಶ ನೀಡಿ, ಮಂತ್ರೋಪದೇಶ, ದೀಕ್ಷೆ ನೀಡಿ, ಸಮಾನತೆಯನ್ನು ಪ್ರತಿಪಾದಿಸಿ ಸಾಮಾಜಿಕ ಕ್ರಾಂತಿ ಮಾಡಿದರು. ಕೇವಲ ಇಂತಿಷ್ಟೇ ರಾಜ್ಯಗಳಿಗೆ ಸೀಮಿತವಾಗದೇ ಭಾರತದ್ಯಾಂತ ಸಂಚರಿಸಿ ತಮ್ಮೆಲ್ಲ ಸಿದ್ಧಾಂತವನ್ನು ಎಲ್ಲ ಕಡೆಯೂ ಪಸರಿಸಿ ಎಲ್ಲ ರಾಜ್ಯಗಳಲ್ಲಿಯೂ ಭಗವಂತನಿಗೆ ದೇವಾಲಯಗಳನ್ನು ನಿರ್ಮಿಸಿ, ಕೆರೆಕಟ್ಟೆಗಳು, ಗೋಶಾಲೆ, ಪರಿಸರ ರಕ್ಷಣೆ, ದೇವಾಲಯದ ಆಡಳಿತದ ಸುಧಾರಣೆ, ಸಾವಿರ ವರ್ಷಗಳು ಕಳೆದರೂ ಕೂಡ ಯಾವುದೇ ಲೋಪ ಬರದಂತಹ ಆಡಳಿತ ನಿರ್ವಹಣೆಯನ್ನು ಮಾಡಿ, ಯತಿ ಸಾರ್ವಭೌಮರೆನಿಸಿಕೊಂಡಿದ್ದಾರೆ.

120 ವರ್ಷ ತುಂಬು ಜೀವನ:

ರಾಮಾನುಜರ ಅವಧಿಯಲ್ಲಿ ಭಾರತದ ಕಲೆ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಪ್ರೋತ್ಸಾಹ ದೊರೆಯಿತು. ಕರ್ಣಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಭಾರತದ ಎಲ್ಲ ಸಾವಿರಾರು ಶ್ರೀವೈಷ್ಣವ ದೇವಾಲಯಗಳಲ್ಲಿ ಇಂದಿಗೂ ಅವರ ತತ್ವ ಪ್ರೇರಿತವಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಡೆದಾಡುತ್ತ ಎಲ್ಲರ ದುಃಖ ಕಳೆಯುತ್ತಾ ಮಹಿಳೆಯರಿಗೂ ಸಮಾನವಾದ ಸ್ಥಾನ ನೀಡಿದರು. ಇಡೀ ಭಾರತಿಯರಿಗೆ ಆತ್ಮವಿಶ್ವಾಸ, ಭಕ್ತಿ ಪ್ರಾಧಾನ್ಯವನ್ನು ನೀಡಿದ ರಾಮಾನುಜರು 120 ವರ್ಷ ತುಂಬುಜೀವನ ಜೀವಿಸಿ 1137ರಲ್ಲಿ ಭಗವಂತನಲ್ಲಿ ಲೀನವಾಗುತ್ತಾರೆ.

ಭಾರತದ ಮಹಾನ್ ಭಕ್ತಿ ಸಿದ್ಧಾಂತದ ಪ್ರತಿಪಾದಕತ್ವವನ್ನು ಸಾಮಾಜಿಕ ಸಾಮರಸ್ಯದ ನೆಲೆಗಟ್ಟಿನಲ್ಲಿ ಭದ್ರಗೊಳಿಸಿದವರು ರಾಮಾನುಜರು. ಆದ್ದರಿಂದಲೇ ಅವರನ್ನು ‘ರಾಮಾನುಜೋ ವಿಜಯತೇ ಯತಿರಾಜ ರಾಜ’ ಅಂದರೆ ಯತಿಗಳಲ್ಲೇ ಶ್ರೇಷ್ಠರಾದ ಯತಿರಾಜ ಎಂದು ಕರೆಯಲಾಗುತ್ತದೆ.