ಸೋದರ, ಸೋದರಿ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನ: ಈ ಹಬ್ಬ ಶುರುವಾಗಿದ್ದು ಮಹಾಭಾರತದ ದ್ರೌಪದಿಯಿಂದ!
ಭಾರತದ ಭ್ರಾತೃತ್ವದ ಮಹತ್ವ ಸಾರುವ ಹಬ್ಬವು ಅಕ್ಕ ತಮ್ಮ, ಅಣ್ಣ ತಂಗಿ ನಡುವಿನ ಪ್ರೀತಿ, ಮಮಕಾರ, ವಾತ್ಸಲ್ಯವನ್ನು ಗಟ್ಟಿಗೊಳಿಸುತ್ತದೆ. ಒಡೆದು ಹೋಗಿರುವ ಸಂಬಂಧಗಳ ಜೋಡಿಸುವ ಕೆಲಸವನ್ನು ರಾಖಿ ಹಬ್ಬ ಮಾಡುತ್ತಿದೆ.
ಗವಿಸಿದ್ದೇಶ್.ಕೆ ಕಲ್ಲುಡಿ, ಗಂಗಾವತಿ
ಶ್ರಾವಣ ಮಾಸ ಬಂತೆಂದರೆ ಸಾಕು, ನಾಡಿನಲ್ಲಿ ಹಬ್ಬಗಳದ್ದೇ ಸಂಭ್ರಮ, ಸಡಗರ, ಪರಸ್ಪರರಲ್ಲಿ ಸುಖ, ಸಂತೋಷ, ನೆಮ್ಮದಿ, ಭಾವೈಕ್ಯತೆಯನ್ನು ಬೆಸೆಯುವ ಹಬ್ಬಗಳು, ಭಾರತೀಯ ಸಂಸ್ಕೃತಿಯ ಕುರುಹುಗಳಾಗಿವೆ. ವರ್ಷವಿಡೀ ನಾನಾ ರೀತಿಯ ಒತ್ತಡಗಳಿಂದ ನೊಂದು ಬೆಂದು ಹೋದ ಮನಸ್ಸುಗಳಿಗೆ ಈ ಹಬ್ಬಗಳು ತುಸು ನೆಮ್ಮದಿಯ ತಾಣಗಳಾಗಿವೆ. ಭಾರತದಲ್ಲಿ, ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ಅದು ರಕ್ಷಾಬಂಧನ', ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವನ್ನು ಯಜುರ್ ಉಪಾಕರ್ಮ, ನೂಲು ಹುಣ್ಣಿಮೆ ಹಾಗೂ ರಕ್ಷಾಬಂಧನ ಎಂದೆಲ್ಲಾ ಕರೆಯುತ್ತಾರೆ. ಇಂದು ವಿಶೇಷವಾಗಿ ನಾಡಿನ ಸಹೋದರಿಯರು ತಮ್ಮ ತಮ್ಮ ಸಹೋದರರ
ಮುಂಗೈಗೆ ರಾಖಿಯನ್ನು ಕಟ್ಟಿ, ಆರತಿ ಮಾಡಿ, ಅವರಿಂದ ಆಶೀರ್ವಾದ ಪಡೆಯುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆತಂಗಿಯಿಂದಎಂಬಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ಹಾಗಾಗಿ ಇಂದಿನ ದಿನ ಅಣ್ಣ-ತಂಗಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ, ಒಂದಾಗುತ್ತಾರೆ ಪರಸ್ಪರ ಸ್ನೇಹ ಪ್ರೀತಿಗಳಿಂದ ಮುದ್ದಾಡುತ್ತಾರೆ. ಇಂತಹ ಪವಿತ್ರ ದಿನವೇ ನೂಲು ಹುಣ್ಣಿಮೆ. ಹಾಗಾಗಿಯೇ ನಮ್ಮ ಸಾಹಿತಿಗಳು 'ರಕ್ಷಾಬಂಧನ ರಕ್ಷೆಯ ದ್ಯೋತಕ ನಮ್ಮ ನಾಡಿನಾಗ, ಅಣ್ಣ ತಂಗಿಯರ ಪ್ರೇಮದ ಸ್ಪಂದನ ನೂಲಿನ ಎಳಿಯಾಗ'. ಎಂದು ಹಾಡುವ ಮೂಲಕ ಸಂಭ್ರಮಿಸಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ
ರಕ್ಷಾಬಂಧನದ ಮಹತ್ವ: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ನೂಲು ಹುಣ್ಣಿಮೆ ಆಚರಣೆಯಲ್ಲಿತ್ತು ಎನ್ನುವುದಕ್ಕೆ ಹಲವು ಉದಾಹರಣೆಗಳು ನಮಗೆ ದೊರೆಯುತ್ತವೆ. ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಕುರುಹು ಮತ್ತು ಬೆಸುಗೆಯಾದ ಈ ಹಬ್ಬಕ್ಕೆ, ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗಿದೆ. ಹೆಣ್ಣನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಆ ತಾಯಿಯ ರಕ್ಷಣೆ ಭಾರ ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬ ಸಹೋದರನದ್ದಾಗಿದೆ. ಎನ್ನುವ ಜವಾಬ್ದಾರಿತನವನ್ನು ಪದೇ ಪದೇ ಸಮಾಜಕ್ಕೆ ನೆನಪಿಸುವ ಕೆಲಸವನ್ನು 'ರಕ್ಷಾಬಂಧನ' ಉತ್ಸವ ಮಾಡುತ್ತದೆ.
ಈ ನಿಟ್ಟಿನಲ್ಲಿ ನೂಲು ಹುಣ್ಣಿಮೆಯ ಆಚರಣೆ ತುಂಬಾ ವೈಶಿಷ್ಟ್ಯಪೂರ್ಣವೆನಿಸುತ್ತದೆ. ಕಟ್ಟುವ ದಾರ ಚಿಕ್ಕದಾದರೇನಂತೆ! ಅದಕ್ಕೆ ಭಾವನೆಗಳ ಸ್ಪರ್ಶ ನೀಡಿದಾಗ ಅದು ಹೆಚ್ಚು ತೂಕ ಪಡೆಯುತ್ತದೆ. ಎಂತಹ ಕಲ್ಲು ಹೃದಯವೂ ಕ್ಷಣದಲ್ಲಿ ಕರಗಿ ನೀರಾಗಿ ಬಿಡುತ್ತದೆ. ಅಸಾಧ್ಯವಾದದ್ದೂ ಸಾಧ್ಯವಾಗಿಬಿಡುತ್ತದೆ. ಇದು ಶ್ರೀರಕ್ಷೆಗೆ ಇರುವ ಶಕ್ತಿ. ರಕ್ಷಾಬಂಧನವೆಂದರೆ, ಕೇವಲ ಔಪಚಾರಕ್ಕಾಗಿ ಕೇಸರಿ ದಾರವನ್ನು ಕಟ್ಟಿ, ಉಡುಗೊರೆ ನೀಡಿ ಸಂಭ್ರಮಿಸುವುದಲ್ಲದೇ, ಪ್ರೀತಿ, ಮಮತೆಯನ್ನು ತುಂಬಿ, ನಾನು ಬದುಕಿರುವವರೆಗೂ ನನ್ನ ಅಣ್ಣ ಖುಷಿಯಾಗಿರಬೇಕು, ಶ್ರೀರಕ್ಷೆ ಅಣ್ಣನನ್ನು ರಕ್ಷಿಸಬೇಕು ಎಂಬ ತಂಗಿಯ ಪವಿತ್ರ ಮಾನಸಿಕ ಪ್ರಾರ್ಥನೆಯಿದು.
ಮಹಾಭಾರತದ ಹಿನ್ನಲೆ: ಹಿಂದೂ ಸಂಸ್ಕೃತಿಯಲ್ಲಿ ಹಿನ್ನಲೆಯಿಲ್ಲದೇ ಯಾವುದೇ ಆಚರಣೆಗಳು ನಡೆಯುವುದಿಲ್ಲ. ಹಾಗೆಯೇ, ರಕ್ಷಾಬಂಧನವೂ ಕೂಡ. ರಕ್ಷಾಬಂಧನಕ್ಕೆ ಮಹಾಭಾರತದ ಈ ಘಟನೆ ಪುಷ್ಟಿ ನೀಡುತ್ತದೆ. ಶ್ರೀಕೃಷ್ಣ ಸುದರ್ಶನ ಚಕ್ರ ಹಿಡಿದ ಸಂದರ್ಭದಲ್ಲಿ, ಕೃಷ್ಣನ ಕೈಗೆ ಚಕ್ರ ತಾಗಿ ರಕ್ತಸ್ರಾವವಾಗುತ್ತದೆ. ಆಗ ಕೃಷ್ಣನ ಬಳಿಯೇ ಇದ್ದ ಸಹೋದರಿ ದ್ರೌಪದಿ ತಾನುಟ್ಟ ಸೀರೆಯ ತುದಿಯನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ಸಹೋದರಿ ದೌಪದಿಯ ಕಾಳಜಿಯಿಂದ ಸಂತಸಗೊಂಡ ಕೃಷ್ಣ, ದ್ರೌಪದಿಯನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಮುಂದೊಂದು ದಿನ ದುಶ್ಯಾಸನ ಸಭೆಯಲ್ಲಿ ವಸ್ತ್ರಾಪಹರಣ ಮಾಡಿದಾಗಸಾಕ್ಷಾತ್ ಭಗವಂತನೇ ಬಂದು ಬ್ರೌಪದಿಗೆ ಅಕ್ಷಯ ವಸ್ತ್ರರವನ್ನು ನೀಡಿ ಕಾಪಾಡುವುದನ್ನೂ ನಾವು ನೋಡಿದ್ದೇವೆ. ಅಂದು ದೌಪದಿಯನ್ನು ಕಾಪಾಡಿದ್ದು ಕೃಷ್ಣನ ಕೈಗೆ ಕಟ್ಟಿದ ಆ ಸಣ್ಣ 'ನೂಲಿನ' ಎಳೆಯೇ! ಎನ್ನುವುದು ಇಲ್ಲಿ ಉಲ್ಲೇಖನೀಯ.
ಪೌರಾಣಿಕ ಹಿನ್ನಲೆ ಹಿಂದೆ ದೇವ-ದಾನವರಿಗೆ ಯುದ್ಧವಾಯಿತು. ಯುದ್ಧದಲ್ಲಿ ಸೋತ ದೇವತೆಗಳನ್ನು ದಾನವರು ಸ್ವರ್ಗದಿಂದ ಹೊರ ದೂಡಿದರು. ದಿನನಿತ್ಯದ ಯಜ್ಞಯಾಗಾದಿಗಳು ನಿಂತು ಹೋದವು. ಚಿಂತಿತನಾದ ಇಂದ್ರ ಬೃಹಸ್ಪತಿಗಳಲ್ಲಿ ಬೇಡಿಕೊಂಡ. ಬೃಹಸ್ಪತಿಗಳು, ಮತ್ತೆ ಜಯವಾಗಲು, ಶ್ರಾವಣಪೂರ್ಣಿಮೆಯ ದಿನ ರಕ್ಷಾವಿಧಿಯನ್ನು ಮಾಡಲು ಸೂಚಿಸಿದರು. ಗುರುಗಳ ಆಜ್ಞೆಯ ಮೇರೆಗೆ ಇಂದ್ರಾಣಿ ಶಚೀದೇವಿ ಬೃಹಸ್ಪತಿಗಳಿಂದ ಇಂದ್ರನಿಗೆ ಶ್ರಾವಣಪೂರ್ಣಿಮೆಯ ದಿನ ಸ್ವಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು, ಇಂದ್ರನ ಬಲಗೈಗೆ ರಕ್ಷಾಸೂತ್ರವನ್ನು ಕಟ್ಟಿದಳು. ಆಗ ಇಂದ್ರ ದಾನವರನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಕೊಂಡ ಎಂದು ಭವಿಷ್ಯತ್ ಪುರಾಣದಲ್ಲಿ ಉಲ್ಲೇಖವಿದೆ. ಹಾಗೂ ಇಂದೇ ಭಗವಂತನಾದ ವಾಮನ ಬಲಿರಾಜನಿಗೆ ರಕ್ಷೆಯನ್ನು ಕಟ್ಟಿ, ದಕ್ಷಿಣೆ ಬೇಡಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ಜಾತಿ ಲೇಪನ ಬೇಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮೊದಮೊದಲು ಉತ್ತರಭಾರತದಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸಲ್ಪಡುತ್ತಿದ್ದ ರಕ್ಷಾಬಂಧನ, ನಂತರ ದಿನಗಳಲ್ಲಿ ಭಾರತಾದ್ಯಂತ ಆಚರಿಸಲ್ಪಡುತ್ತಿದೆ. ವಿಶೇಷವಾಗಿ ಉತ್ತರಕರ್ನಾಟಕ ಭಾಗದಲ್ಲಿ ಈ ಹಬ್ಬದ ಮೆರಗನ್ನು ನಾವು, ನೋಡಲೇಬೇಕು. ಮನೆಯಲ್ಲಿ ಭಕ್ಷ್ಯಭೋಜ್ಯಗಳನ್ನು ತಯಾರಿಸಿ, ದೂರದೂರಿನ ಅಣ್ಣನನ್ನು ಮನೆಗೆ ಕರೆಸಿಕೊಂಡು, ಅವನಿಗೆ ಆರತಿ ಮಾಡಿ ರಕ್ಷೆಯನ್ನು ಕಟ್ಟಿ, ಸಿಹಿಯನ್ನು ತಿನ್ನಿಸಿ ಸಂಭ್ರಮಿಸುತ್ತಾರೆ. ಅಕಸ್ಮಾತ್ ಮನೆಯಲ್ಲಿ ಒಬ್ಬಳೇ ಹೆಣ್ಣು ಮಗಳಿದ್ದರೆ ಸಂಬಂಧಿಗಳನ್ನು ಮನೆಗೆ ಕರೆಸಿಕೊಂಡು ಮಗಳಿಂದ ರಾಖಿ ಕಟ್ಟಿಸುತ್ತಾರೆ. ಹೀಗೆ ಚಿಕ್ಕ ರೇಷ್ಠದಾರವೊಂದು ಸಮಾಜದಲ್ಲಿ ಅನೇಕ ಮನಸ್ಸುಗಳನ್ನು ಬೆಸೆಯುವ ಮೂಲಕ, ಪರಸ್ಪರಲ್ಲಿ ಸಂಬಂಧಗಳನ್ನು ಗಟ್ಟಿಗಳಿಸುವ ಮೂಲಕ, ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುತ್ತಿದೆ. ಈ ನಿಟ್ಟಿನಲ್ಲಿ ರಕ್ಷಾಬಂಧನ ವಿಶಿಷ್ಠವೆನಿಸುತ್ತದೆ.