Asianet Suvarna News Asianet Suvarna News

ಮಂತ್ರಾಲಯದಲ್ಲಿ ‌ರಾಯರ ಆರಾಧನಾ ಸಂಭ್ರಮ

ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ. ಮಧ್ಯಾರಾಧನೆಗೆ ನಿರೀಕ್ಷೆಗೆ ಮೀರಿ ಭಕ್ತರು ಆಗಮನ. ಶ್ರೀಮಠದಲ್ಲಿ ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರ ದಂಡ. 

Raghavendra Swamy worship in mantralaya gow
Author
Bengaluru, First Published Aug 13, 2022, 7:54 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.13): ತುಂಗಭದ್ರಾ ದಡದಲ್ಲಿ ಭಕ್ತರ ಮಹಾಪೂರವೇ ನೆರೆದಿತ್ತು. ಕಲಿಯುಗದ ಕಾಮಧೇನು ಶ್ರೀರಾಘವೇಂದ್ರ ಸ್ವಾಮೀಜಿಗಳ ಆರಾಧನಾ ಮಹೋತ್ಸವ ನಿಮಿತ್ಯ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ತುಂಗಭದ್ರಾ ನದಿ ತೀರದಲ್ಲಿ ಪುಣ್ಯ ಸ್ನಾನಗೈದು ರಾಯರ ಮೂಲ ಬೃಂದಾವನ ದರ್ಶನ ಪಡೆದರು. ಕಲಿಯುಗದಲ್ಲಿ ಭಕ್ತರು ಬೇಡಿದ ವರವನ್ನು ನೀಡುವ ಗುರು ಅಂದ್ರೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳು. ಹೀಗಾಗಿ ರಾಯರ ಆರಾಧನಾ ಮಹೋತ್ಸವಕ್ಕೆ ಭಕ್ತರ ದಂಡೆ ಹರಿದು ಬರುತ್ತೆ. ಹೀಗಾಗಿ ‌ಮಧ್ಯಾರಾಧನೆ ನಿಮಿತ್ಯ ಬೆಳಗ್ಗೆಯಿಂದ ವಿಶೇಷ ಪೂಜೆ-ಪುನಸ್ಕಾರಗಳಿಂದ ಮಂತ್ರಾಲಯದಲ್ಲಿ ವೈಭವದ ಕಳೆಕಟ್ಟಿತು. ಮಧ್ಯಾರಾಧನೆಯ ದಿನವಾದ ಇಂದು ಭಕ್ತರಿಂದ ಶ್ರೀಮಠದ ಪ್ರಾಂಗಣ ತುಂಬಿ ತುಳುಕುತ್ತಿತ್ತು. ವೇದ ಘೋಷ, ಮಂತ್ರ ಪಠಣ ಅನುರಣಿಸಿತು. ಮುಂಜಾನೆಯಿಂದಲೇ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪ್ರಹ್ಲಾದರಾಜರ ಪಾದಪೂಜೆ ನಡೆಯಿತು. ಆ ಬಳಿಕ ತಿರುಪತಿಯಿಂದ ಬಂದ ಶೇಷ ವಸ್ತ್ರ ವನ್ನು ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಮೊದಲ ಬಾರಿ ಗೃಹ ಅರಗ ಜ್ಞಾನೇಂದ್ರ ಸ್ವಾಗತಿಸಿದರು. ಆ ಬಳಿಕ ಶೇಷ ವಸ್ತ್ರ ವನ್ನು ಮೊದಲ ಬಾರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಲೆಮೇಲೆ ಹೊತ್ತುಕೊಂಡು ಸಾಗಿದ್ದು ವಿಶೇಷವಾಗಿತ್ತು. 

ಆ ಬಳಿಕ ಮಂತ್ರಾಲಯ ‌ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಶೇಷ ವಸ್ತ್ರ ಅರ್ಪಿಸಿ ಆದರು. ನಂತರ ಪ್ರಾಂಗಣದಲ್ಲಿ ವೇಶವಸ್ತ್ರ ತೆಗೆದುಕೊಂಡು ಬಂದ ಟಿಟಿಡಿ ಸದಸ್ಯರಿಗೆ ಸನ್ಮಾನಿಸಲಾಯಿತು. ಈ ವೇಳೆ ಬೆಂಗಳೂರು ಮೂಲದ ಎಂ.ಎಸ್. ರಾಮಯ್ಯ ಸಂಸ್ಥೆಯ ಎಂ.ಎಸ್. ಪಟ್ಟಾಭಿ ಮತ್ತು ಪತ್ನಿ ಅನಿತಾ ಪಟ್ಟಾಭಿ ಸಿದ್ದಪಡಿಸಿದ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಾಸಿ ಸರವನ್ನು ಮಂತ್ರಾಲಯ ಮಠದ ಪೀಠಾಧಿಪತಿಗಳಿಗೆ ಹಸ್ತಾಂತರ ಮಾಡಿದ್ರು. ಶ್ರೀಗಳು ಚಿನ್ನದ ಸರವನ್ನು ಭಕ್ತರ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಅಲ್ಲದೆ ಈ ಸರವನ್ನು ಮೂಲ ರಾಮದೇವರಿಗೆ ಹಾಕವುದಾಗಿ ಶ್ರೀಗಳು ಸ್ಪಷ್ಟಪಡಿಸಿದರು.

ಮಧ್ಯಾರಾಧನೆ ‌ನಿಮಿತ್ಯ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ: 
ಮಧ್ಯಾರಾಧನೆ ಪ್ರಯುಕ್ತ ಶ್ರೀಮಠದಲ್ಲಿ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ‌ನಡೆಯಿತು.ರಾಯರ  ಬೃಂದಾವನಕ್ಕೆ ಕ್ಷೀರ ಹಾಗೂ ಪಂಚಾಮೃತ ಅಭಿಷೇಕದ ಬಳಿಕ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹಾ ಮಂಗಳಾರತಿ ಮಾಡಿದರು. ನಂತರ ಶ್ರೀಗಳು ಮೂಲ ರಾಮದೇವರ ಪೂಜೆ ನೆರವೇರಿಸಿ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಮಧ್ಯಾರಾಧನೆ ‌ವಿಶೇಷ ಅಂದ್ರೆ ರಾಯರ ಮೂಲ ಬೃಂದಾವನಕ್ಕೆ ನಾಲ್ಕು ಕಡೆ ಒಂದೇ ರೀತಿಯಲ್ಲಿ ಅಲಂಕಾರ ‌ಮಾಡುವುದು ವಿಶೇಷವಾಗಿದೆ.  ನದಿ ದಂಡೆ, ಶ್ರೀಮಠದ ಆವರಣ, ಪ್ರಾಕಾರ, ಮಂಚಾಲಮ್ಮ ದೇವಸ್ಥಾನ, ಸೇವಾ ಮತ್ತು ಪರಿಮಳ ಪ್ರಸಾದ ಕೌಂಟರ್ ಹೀಗೆ ಎಲ್ಲಿ ನೋಡಿದರೂ ಜನರಿಂದ ಕಿಕ್ಕಿರಿದಿತ್ತು.

ಶರವಣ ನಿವಾಸದಲ್ಲಿ 10 ಸಾವಿರ ಗೋಲ್ಡ್‌ ಕಾಯಿನ್ ಬಳಸಿ ಲಕ್ಷ್ಮೀಗೆ ಸಿಂಗಾರ!

 ಸ್ವಚ್ಚತೆಗೆ ಒತ್ತು ನೀಡಿದ ಶ್ರೀಮಠ: ಆರಾಧನಾ ‌ಮಹೋತ್ಸವ ನಿಮಿತ್ಯ ಮಂತ್ರಾಲಯ ಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಮಂತ್ರಾಲಯ ಮಠದಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೊರೊನಾದಿಂದ ಶ್ರೀಮಠಕ್ಕೆ ಎರಡು ವರ್ಷಗಳಿಂದ ಭಕ್ತರು ಬಂದಿರಲಿಲ್ಲ. ಹೀಗಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬರುತ್ತಿದ್ದಾರೆ.ಜನರ ಗಿಜಿಗುಡುತ್ತಿದ್ದರೂ ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಆದ್ಯತೆ. ಸ್ವಯಂ ಸೇವಕರು, ಶ್ರೀಮಠದ ಸಿಬ್ಬಂದಿ ಟೊಂಕ ಕಟ್ಟಿ ನಿಂತಿದ್ದರು.

ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!

ಪ್ರಾಧಿಕಾರ, ಆವರಣ ಚೊಕ್ಕಟವಾಗಿದ್ದವು. ವಸತಿ ಗೃಹಗಳ ಆವರಣ, ಕೊಠಡಿಗಳ ಶುಚಿತ್ವಕ್ಕೂ ಅಷ್ಟೇ ಒತ್ತು ನೀಡಲಾಗಿತ್ತು. ನದಿ ದಂಡೆಯಲ್ಲಿ ಅಪಾರ ಸಂಖ್ಯೆ ಭಕ್ತರು ನಲ್ಲಿ ನೀರಿನಲ್ಲಿ ಪುಣ್ಯ ಸ್ನಾನ ಮಾಡಿ ಮಂಚಾಲಮ್ಮ ದೇವಿಯ ದರ್ಶನದ ಜೊತೆಗೆ ರಾಯರ ದರ್ಶನ ಪಡೆದರು. ಕೊರೊನಾ ನಂತರ ಮಂತ್ರಾಲಯದ ಅಭಿವೃದ್ದಿ ಕಂಡು ಮಧ್ಯಾರಾಧನೆಗೆ ಅಗಮಿಸಿದ ಭಕ್ತರು ಹಾಗೂ ಗೃಹ ಸಚಿವರು ಮಂತ್ರಾಲಯ ಮಠದ ರಾಯರ ನನಗೆ ರಾಜ್ಯದ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಬೇಡಿಕೊಂಡರು‌. ಒಟ್ಟಿನಲ್ಲಿ ಕಲಿಯುಗದ ‌ಕಾಮಧೇನು ಶ್ರೀರಾಘವೇಂದ್ರ ಮಠಕ್ಕೆ ಸಾವಿರಾರು ಭಕ್ತರು ಆಗಮಿಸಿ, ಬೆಳಗ್ಗೆ ಉರುಳು ಸೇವೆ ಮಾಡಿ ರಾಯರ ದರ್ಶನ ಪಡೆದು ತೀರ್ಥ, ಪ್ರಸಾದ, ಸ್ವೀಕರಿಸಿ ಸಂಭ್ರಮಿಸಿದರು‌. ನಾಳೆ ರಾಯರ ಉತ್ತರಾಧನೆ ‌ನಡೆಯಲಿದ್ದು, ಪ್ರಲ್ಹಾದ್ ಮಹಾರಾಜರ ರಥೋತ್ಸವ ‌ನಡೆಯಲಿದೆ.

Follow Us:
Download App:
  • android
  • ios