ಮನೆಯ ಸದಸ್ಯರೆಲ್ಲರೂ ಉತ್ತಮ ಬಾಂಧವ್ಯ ಹೊಂದಿದ್ದರೆ ಸಂಬಂಧವು ಗಟ್ಟಿಗೊಳ್ಳುತ್ತದೆ. ಅದೇ ಎಲ್ಲದಕ್ಕೂ ತಕರಾರು ಇಲ್ಲವೇ ಜಗಳವನ್ನು ಮಾಡಿಕೊಳ್ಳುತ್ತಿದ್ದರೆ ಯಾವುದೂ ಸರಿಹೋಗದೆ ಮನೆಯ ಇಡೀ ವಾತಾವರಣವೇ ಹಾಳಾಗುತ್ತದೆ. ಜೊತೆಗೆ ಮನೆಯವರ ನೆಮ್ಮದಿಯೂ ಕೆಡುತ್ತದೆ. ಸಂಬಂಧಗಳು ಹಾಳಾಗಲು ಗ್ರಹಗತಿಗಳೂ ಕಾರಣವಾಗಿರುತ್ತವೆ. ಪ್ರತಿ ಸಂಬಂಧಕ್ಕೂ ಕೆಲವು ಗ್ರಹಗಳ ನೀಚಸ್ಥಿತಿಯೂ ಕಾರಣವಾಗಿರುತ್ತದೆ.

ಕೆಲವೊಮ್ಮೆ ಮನೆಯಲ್ಲಾಗುವ ಮನಸ್ಥಾಪಗಳಿಗೆ ಕಾರಣವೇ ಇರುವುದಿಲ್ಲ. ಆದರೂ, ವಿವಾದಗಳು ಮೈಮೇಲೆ ಬಂದೆರುಗುತ್ತವೆ. ಇದಕ್ಕೆ ಕಾರಣವೇ ತಿಳಿದಿಲ್ಲವೆಂದಾದಲ್ಲಿ ಜಾತಕದಲ್ಲಿ ಏನಾದರೂ ದೋಷವಿದೆಯೇ ಎಂಬ ಬಗ್ಗೆ ನೋಡಿದರೆ ಒಳಿತು. ಈ ಸಂದರ್ಭದಲ್ಲಿ ನಿಮ್ಮ ಗ್ರಹಗತಿಗಳು ಯಾವ ಪರಿಣಾಮವನ್ನು ಬೀರುತ್ತಿರುತ್ತವೆ ಎಂಬುದನ್ನು ಸರಿಯಾಗಿ ತಿಳಿದುಕೊಂಡರೆ ಮುಂದೆ ಏನು ಮಾಡಬಹುದು ಎಂಬುದನ್ನು ನೋಡಬಹುದು. ಅಂದರೆ, ಆ ದೋಷವುಳ್ಳ ಗ್ರಹಗಳಿಗೆ ತಕ್ಕ ಶಾಂತಿಯನ್ನು ಕೈಗೊಂಡರೆ ಸೂಕ್ತ ಪರಿಹಾರೋಪಾಯಗಳು ಲಭಿಸಲಿದೆ. ಸಂಬಂಧಗಳಿಗೆ ಒಂದೊಂದು ಗ್ರಹಗಳಿದ್ದು, ಅವು ಯಾವುವು..? ಏನು ಮಾಡಬೇಕು ಎಂಬ ಬಗ್ಗೆ ತಿಳಿಯೋಣ.

ಇದನ್ನು ಓದಿ: ಈ ನಾಲ್ಕು ರಾಶಿಯವರು ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಲ್ವಂತೆ! 

ತಂದೆಯ ಸಂಬಂಧಕ್ಕೆ ಸೂರ್ಯ ಗ್ರಹ
ಸೂರ್ಯನ ಸಂಬಂಧ ತಂದೆಯೊಂದಿಗೆ ಬೆಸೆದುಕೊಂಡಿರುತ್ತದೆ. ಯಾವುದಾದರೂ ವ್ಯಕ್ತಿ ತನ್ನ ತಂದೆಗೆ ಗೌರವ ಕೊಡುವುದಿಲ್ಲವೋ, ಮಾತು ಮಾತಿಗೂ ಜಗಳ ಮಾಡುವುದು, ವೈಚಾರಿಕವಾಗಿ ವಿರುದ್ಧ ದಿಕ್ಕಿನಲ್ಲಿದ್ದು, ಸಂಬಂಧದಲ್ಲಿ ಬಿರುಕು ಮೂಡಿಸಿಕೊಳ್ಳುತ್ತಿದ್ದರೆ ಅವರ ಸಂಬಂಧದ ಗ್ರಹವಾದ ಸೂರ್ಯ ನೀಚ ಸ್ಥಾನದಲ್ಲಿದೆ ಎಂಬುದನ್ನು ಅರಿಯಬಹುದು. ಜಾತಕದಲ್ಲಿ ಸೂರ್ಯನ ಸ್ಥಿತಿ ನೋಡಿಕೊಂಡರೆ, ಅವರ ತಂದೆ ಜೊತೆಗಿನ ಸಂಬಂಧ ಹೇಗಿದೆ ಹಾಗೂ ಹೇಗಿರಲಿದೆ ಎಂಬುದನ್ನೂ ತಿಳಿದುಕೊಳ್ಳಬಹುದು. ಇಲ್ಲಿ ತೊಂದರೆಯಾದರೆ ಪರಿಹಾರವೂ ಇದೆ. ಪ್ರತಿ ದಿನ ಸೂರ್ಯನಿಗೆ ಅರ್ಘ್ಯ ನೀಡಬೇಕು. ಏಕಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ತಾಯಿಯ ಸಂಬಂಧಕ್ಕೆ ಚಂದ್ರ ಗ್ರಹ
ತಾಯಿ ಜೊತೆಗಿನ ಬಾಂಧವ್ಯಕ್ಕೆ ಚಂದ್ರ ಗ್ರಹ ಮುಖ್ಯ ಕಾರಣವಾಗಿರುತ್ತದೆ. ಅಂದರೆ, ಒಂದು ವೇಳೆ ಚಂದ್ರ ಗ್ರಹವು ನೀಚ ಸ್ಥಾನದಲ್ಲಿದ್ದರೆ ಜ್ಯೋತಿಷ್ಯದ ಪ್ರಕಾರ ತಾಯಿಯೊಂದಿಗಿನ ಸಂಬಂಧ ಹಾಳಾಗಿ, ಮನಸ್ತಾಪ ಉಂಟಾಗಲಿದೆ. ಹೀಗಾಗಿ ಇಂಥ ಪರಿಸ್ಥಿತಿ ಎದುರಾದರೆ ಚಂದ್ರ ಗ್ರಹಕ್ಕೆ ಸೂಕ್ತ ಶಾಂತಿ ಮಾಡಿಸಿ ಪರಿಹಾರ ಕಂಡುಕೊಳ್ಳಬಹುದು. ಇನ್ನು ತಾಯಿಯ ಸೇವೆ ಮಾಡಿದರೂ ಬಹಳವೇ ಉತ್ತಮ. ಸೋಮವಾರ ಶಿವನ ಪೂಜೆ ಮಾಡುವುದಲ್ಲದೆ, ಶ್ವೇತ ವಸ್ತ್ತ ಧರಿಸಬೇಕು. ಹೀಗೆ ಮಾಡುವುದರಿಂಧ ಚಂದ್ರನ ಸ್ಥಿತಿ ಬಲಗೊಳ್ಳಲಿದೆ. 

ಮನೆಯ ಸದಸ್ಯರೊಂದಿಗಿನ ಸಂಬಂಧಕ್ಕೆ ಮಂಗಳ ಗ್ರಹ
ಮನೆಯ ಸದಸ್ಯರೊಂದಿಗೆ ಸಂಬಂಧ ಚೆನ್ನಾಗಿರಬೇಕೆಂದರೆ ಮಂಗಳ ಗ್ರಹದ ಸ್ಥಿತಿ ಉತ್ತಮವಾಗಿರಬೇಕು. ಮುಖ್ಯವಾಗಿ ಅಣ್ಣ-ತಂಗಿಯ ಸಂಬಂಧವು ಮಂಗಳ ಗ್ರಹದ ಪ್ರಭಾವದ ಮೇಲೆ ನಿಂತಿರುತ್ತದೆ. ಮಂಗಳ ಗ್ರಹವು ಬಲವಾಗಿದ್ದರೆ ಇವರ ಸಂಬಂಧವು ಚೆನ್ನಾಗಿರುತ್ತದೆ. ಸ್ನೇಹಿತರೊಂದಿಗಿನ ಸಂಬಂಧವು ಸಹ ಮಂಗಳ ಗ್ರಹಕ್ಕೆ ಸಂಬಂಧಿಸಿರುತ್ತದೆ. ಈ ಸಂಬಂಧಗಳು ಸರಿಯಿಲ್ಲದೇ ಹೋದರೆ ಸಹೋದರ ಮತ್ತು ಸಹೋದರಿ ಒಟ್ಟಿಗೆ ಕೂತು ಭೋಜನ ಮಾಡುವುದರಿಂದ ಸಂಬಂಧ ಸರಿ ಹೋಗುವ ಸಾಧ್ಯತೆ ಇರುತ್ತದೆ. ಮಂಗಳವಾರದಂದು ಕೆಂಪು ವಸ್ತ್ರವನ್ನು ಧರಿಸಿ, ಹನುಮಂತನನ್ನು ಆರಾಧಿಸುವುದರಿಂದ ಮಂಗಳ ಗ್ರಹದಿಂದ ಉಂಟಾಗುವ ದೋಷ ನಿವಾರಣೆಯಾಗುತ್ತದೆ.

ತಾಯಿ ಮನೆಯವರೊಂದಿಗಿನ ಸಂಬಂಧಕ್ಕೆ ಬುಧ
ಬುಧ ಗ್ರಹದ ಸ್ಥಿತಿ ಉತ್ತಮವಾಗಿದ್ದರೆ ತಾಯಿಯ ಸಂಬಂಧಿಕರೊಡನೆ ಅಂದರೆ ಮಾವ, ಅತ್ತೆ ಹೀಗೆ ಎಲ್ಲರೊಡನೆ ಸಂಬಂಧ ಚೆನ್ನಾಗಿರುತ್ತದೆ. ತಾಯಿ ಮನೆಯವರನ್ನು ಗೌರವದಿಂದ ಕಂಡರೆ ಬುಧ ಗ್ರಹದ ಪ್ರಭಾವ ಉತ್ತಮವಾಗಿರುತ್ತದೆ. ಬುಧನ ಸ್ಥಿತಿ ನೀಚವಾಗಿದ್ದರೆ ಸಂಬಂಧ ಹದಗೆಡುತ್ತದೆ. ಹೀಗಾದ ಪಕ್ಷದಲ್ಲಿ ಹಸಿರು ವಸ್ತುಗಳನ್ನು ದಾನವಾಗಿ ನೀಡಬೇಕು. ಗಣಪತಿಗೆ ಪೂಜೆ ಸಲ್ಲಿಸಬೇಕು. ಬುಧವಾರದಂದು ಹಸಿರು ವಸ್ತ್ರವನ್ನು ಧರಿಸಬೇಕು.

ಇದನ್ನು ಓದಿ: ಇಂಥ ಜಾಗಗಳಲ್ಲಿ ಪೊರಕೆಯನ್ನಿಟ್ಟರೆ ನಷ್ಟ ತಪ್ಪಿದ್ದಲ್ಲ.. 

ಅಜ್ಜ-ಅಜ್ಜಿ ಮತ್ತು ಹಿರಿಯರೊಂದಿಗಿನ ಸಂಬಂಧಕ್ಕೆ ಗುರು ಗ್ರಹ
ಮನೆಯ ಹಿರಿಯರೊಡನೆ ಸಂಬಂಧ ಉತ್ತಮವಾಗಿದ್ದರೆ ಅದು ಗುರುಗ್ರಹ ಕೃಪೆಯಿಂದಾಗಿರುತ್ತದೆ. ಗುರುಗ್ರಹವು ಉತ್ತಮ ಸ್ಥಿತಿಯಲ್ಲಿದ್ದರೆ ಅಜ್ಜಿ-ಅಜ್ಜ ಮತ್ತು ಹಿರಿಯರೊಡನೆ ಸಂಬಂಧ ಚೆನ್ನಾಗಿರುತ್ತದೆ. ಜಾತಕದಲ್ಲಿ ಗುರುಗ್ರಹದ ಸ್ಥಿತಿ ನೀಚವಾಗಿದ್ದರೆ ಹಿರಿಯರೊಂದಿಗಿನ ಸಂಬಂಧ ಹಾಳಾಗುತ್ತದೆ. ಹಾಗಾಗಿ ಹಿರಿಯರಿಗೆ ಗೌರವ ಕೊಡಬೇಕು. ಗುರುವಾರದಂದು ಹಳದಿ ವಸ್ತ್ರ ಧಾರಣೆ ಮಾಡಿದರೆ ಶುಭವಾಗುತ್ತದೆ. ಗುರುವಿನ ಆರಾಧನೆಯು ಗುರುಗ್ರಹವನ್ನು ಮತ್ತಷ್ಟು ಬಲಪಡಿಸುತ್ತದೆ.

ಸಂಗಾತಿಯ ಸಂಬಂಧಕ್ಕೆ ಶುಕ್ರ ಗ್ರಹ
ಜ್ಯೋತಿಷ್ಯದಲ್ಲಿ ಸಂಗಾತಿಯೊಂದಿಗಿನ ಸಂಬಂಧವನ್ನು ತಿಳಿಯಲು ಶುಕ್ರ ಗ್ರಹದ ಸ್ಥಿತಿಯನ್ನು ನೋಡುತ್ತಾರೆ. ದಂಪತಿಗಳ ಬಾಂಧವ್ಯ ಮಧುರವಾಗಿದೆ ಎಂದಾದರೆ ಶುಕ್ರನ ಸ್ಥಿತಿ ಉತ್ತಮವಾಗಿದೆ ಎಂದರ್ಥ. ಶುಕ್ರನ ಸ್ಥಿತಿ ಉತ್ತಮವಾಗಿದ್ದರೆ ವಿವಾಹಿತರು ಹೆಚ್ಚು ಅನ್ಯೋನ್ಯವಾಗಿರುತ್ತಾರೆ, ಹೀಗಿರುವುದರಿಂದ ಮನೆಯಲ್ಲಿ ಧನ-ಧಾನ್ಯ, ಸುಖ-ಸಮೃದ್ಧಿ ವೃದ್ಧಿಸುತ್ತದೆ. ದಂಪತಿಗಳಲ್ಲಿ ಪರಸ್ಪರ ಸಂಬಂಧ ಹಾಳಾಗಿದ್ದರೆ ಅದಕ್ಕೆ ಪರಿಹಾರವಾಗಿ ವಿಷ್ಣು ಮತ್ತು ಲಕ್ಷ್ಮೀ ಸಂಯುಕ್ತ ಪೂಜೆಯನ್ನು ಮಾಡಬೇಕು, ಲಕ್ಷ್ಮೀ ನಾರಾಯಣನನ್ನು ಆರಾಧಿಸಬೇಕು. ಶುಕ್ರವಾರದಂದು ಬಿಳಿ ಅಥವಾ ಗುಲಾಬಿ ಬಣ್ಣವನ್ನು ಬಳಸಿ.

ಇದನ್ನು ಓದಿ: ನೌಕರಿ ಪಡೆಯಬೇಕೇ…? ವಾಸ್ತು ಪ್ರಕಾರ ಹೀಗೆ ಮಾಡಿ…! 

ಕಾರ್ಮಿಕರು ಅಥವಾ ಕೆಲಸಗಾರರೊಂದಿಗಿನ ಸಂಬಂಧಕ್ಕೆ ಶನಿದೇವ
ಜಾತಕದಲ್ಲಿ ಶನಿಗ್ರಹದ ಸ್ಥಿತಿ ಉತ್ತಮವಾಗಿದ್ದರೆ ಕೆಲಸಗಾರರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಶನಿಯು ನೀಚವಾಗಿದ್ದರೆ ಇವರೊಂದಿಗಿನ ಸಂಬಂಧದಲ್ಲಿ ಜಗಳ, ಮನಸ್ತಾಪಗಳು ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ಶನಿವಾರದಂದು ಕಪ್ಪು ಬಣ್ಣವನ್ನು ಉಪಯೋಗಿಸಬೇಕು.