Asianet Suvarna News Asianet Suvarna News

ಉತ್ತರಕನ್ನಡ: ಪಂಚಮಿಯಂದು ನೈಜ ನಾಗನಿಗೆ ಹಾಲೆರೆದು ಪೂಜೆ

ಪ್ರತಿ ವರ್ಷದಂತೆ ಈ ಬಾರಿ ಕೂಡ ನೈಜ ನಾಗರ ಹಾವಿಗೆ ಹಾಲೆರೆದು ಪಂಚಮಿ ಪೂಜೆ ಆಚರಿಸಿದ ಉತ್ತರಕನ್ನಡ ಜಿಲ್ಲೆ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು 

People Performed Pooja to Real Snake During Naga Panchami in Uttara Kannada grg
Author
Bengaluru, First Published Aug 2, 2022, 9:33 PM IST

ಉತ್ತರಕನ್ನಡ(ಆ.02):  ಉತ್ತರಕನ್ನಡ ಜಿಲ್ಲೆ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ಬಾರಿ ಕೂಡ ನೈಜ ನಾಗರ ಹಾವಿಗೆ ಹಾಲೆರೆದು ಪಂಚಮಿ ಪೂಜೆ ಆಚರಿಸಿದ್ದಾರೆ. ಪ್ರತಿ ವರ್ಷ ಒಂದು ನಾಗರ ಹಾವನ್ನು ಪೂಜೆ ಮಾಡುತ್ತಿದ್ದ ಪ್ರಶಾಂತ್ ಕುಟುಂಬ, ಈ ಬಾರಿ ಅದರ ಜತೆಗೆ ಎರಡು ನಾಗರ ಹಾವಿನ ಮರಿಯನ್ನೂ ತಂದು ಪೂಜೆ ಸಲ್ಲಿಸಿರೋದು ವಿಶೇಷ.  ಕಳೆದ ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತಾ ಬಂದಿರುವ ಪ್ರಶಾಂತ್ ಹುಲೇಕಲ್ ಕುಟುಂಬ ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ. ಕುಟುಂಬದ ಹಿರಿಯ ಸುರೇಶ ಎಂಬವರ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ, ಪ್ರಕಾಶ ಹಾಗೂ ಪ್ರಣವ ನೈಜ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ. ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಈ ನೈಜ ಹಾವಿಗೆ ಹಾಲೆರೆದು ಪೂಜೆ ಮಾಡುವ ಪದ್ದತಿ ಅನುಸರಿಸುತ್ತಿದ್ದಾರೆ. 

ಯಾದಗಿರಿ: ನಾಗರಪಂಚಮಿಯಂದು ಇಲ್ಲಿ ಚೇಳಿನ ಜಾತ್ರೆ..!

ಇನ್ನು ಪ್ರಶಾಂತ್ ಪತ್ನಿ, ಮಗಳು ಹಾಗೂ ಮಗ ಕೂಡ ನೈಜ ಹಾವನ್ನು ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ ಪಡುವಂತದ್ದು. ಮನೆಯ ಸದಸ್ಯರೆಲ್ಲ ಸೇರಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ನಾಗಪಂಚಮಿ ಆಚರಿಸುತ್ತಾರೆ. ಹುಲೇಕಲ್ ಕುಟುಂಬದ ಪ್ರಶಾಂತ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಾವುಗಳನ್ನು ಹಾಗೂ ಅಪಾಯದಲ್ಲಿರುವ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಿ, ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ದೌಡಾಯಿಸಿ ಎಂತಹ ಘಟಸರ್ಪವನ್ನಾದರೂ ಸರಾಗವಾಗಿ ಚೀಲದಲ್ಲಿ ತುಂಬಿ ಕಾಡಿಗೆ ಮರಳಿಸುತ್ತಾರೆ. 

ಅರಣ್ಯ ಇಲಾಖೆಯವರೂ ಹೆಚ್ಚಾಗಿ ಹಾವಿನ ರಕ್ಷಣೆ ಸನ್ನಿವೇಶ ಎದುರಾದರೆ ನೆನಪಿಸಿಕೊಳ್ಳುವುದು ಪ್ರಶಾಂತ ಅವರನ್ನೇ. ಕೆಲವು ವರ್ಷದಿಂದಲೂ ಕಾಡಿಗೆ ಹೋಗಿ ಹಾವು ಹಿಡಿದು ಪೂಜೆ ಸಲ್ಲಿಸುತ್ತಿದ್ದ ಬರುತ್ತಿದ್ದ ಪ್ರಶಾಂತ್ ಕುಟುಂಬ ಇದೀಗ ಮನೆಯಲ್ಲೇ ಹಾವು ತಂದು ಪೂಜೆ ಮಾಡಿದ್ದಾರೆ. ಅಲ್ಲದೇ, ನೈಜ ನಾಗನಿಗೆ ಪೂಜೆ ಮಾಡೋದನ್ನು ಕಂಡು ಸ್ಥಳೀಕರು ಕೂಡಾ ಸಂತೋಷ ಪಟ್ಟಿದ್ದಾರೆ. 
 

Follow Us:
Download App:
  • android
  • ios