Puri Jagannath Ratha Yatra: ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ!
ಪುರಿ ಜಗನ್ನಾಥ ಹಲವು ಕೌತುಕಗಳನ್ನು ಬಚ್ಚಿಟ್ಟುಕೊಂಡ ಭಾರತೀಯ ಪುಣ್ಯ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು. ಚಾರ್‌ಧಾಮ್ ಕ್ಷೇತ್ರಗಳಲ್ಲಿ ಒಂದಾಗ ಈ ಕ್ಷೇತ್ರದಲ್ಲೊಂದು ಸುತ್ತು ಹಾಕಿದಾಗ ಅನಿಸಿದ್ದು...
- ರಜನಿ ಎಂ.ಜಿ., ಏಷ್ಯಾನೆಟ್ ಸುವರ್ಣ ನ್ಯೂಸ್
ಜಗನ್ನಾಥ ಪುರಿ.. ಪುರಿ ಜಗನ್ನಾಥ.. ಈ ಹೆಸರು ಕೇಳಿದಾಗಲೆಲ್ಲಾ ಕಣ್ಮುಂದೆ ಬರುತ್ತಿದ್ದುದು ದೊಡ್ಡ ರಥದ ಸುತ್ತ ನೆರೆದಿರುವ ಲಕ್ಷಾಂತರ ಭಕ್ತರ ದಂಡು. ಒಬ್ಬ ಪತ್ರಕರ್ತೆಯಾಗಿ ನನಗೆ ಜನಜಾತ್ರೆ ಹೊಸದೇನೂ ಆಗಿರಲಿಲ್ಲ. ಆದರೂ 25 ಲಕ್ಷ ಜನ ಒಂದೆಡೆ ಸೇರುತ್ತಾರೆ ಅಂದ್ರೆ ಅದರಲ್ಲೇನೋ ಅಂಥ ಚುಂಬಕಶಕ್ತಿ ಇರಲೇಬೇಕು ಅನ್ನೋ ಕುತೂಹಲ ಇದ್ದೇ ಇತ್ತು. ಈ ಬಾರಿ ಆಷಾಡದ ಎರಡvs ದಿನ ರಥಯಾತ್ರೆ ಶುರುವಾಯಿತು ಅನ್ನೋ ಸುದ್ದಿ ಬಂದಾಗಲೇ ಕಾತುರ ಹೆಚ್ಚಾಗಿತ್ತು! ರಥ ಯಾತ್ರೆ ಶುರುವಾದ 7ನೇ ದಿನಕ್ಕೆ ಸರಿಯಾಗಿ ನಾನು ಪುರಿಗೆ ಕಾಲಿಟ್ಟಿದ್ದೆ.
ಪುರಿ.. ಒರಿಸ್ಸಾದ ರಾಜಧಾನಿ ಭುವನೇಶ್ವರದಿಂದ ಕೇವಲ 60 ಕಿ.ಮೀ ದೂರದ ಜಿಲ್ಲಾಕೇಂದ್ರ. ಸಾಕ್ಷಾತ್ ಭಗವಂತ ನೆಲೆಸಿದ್ದಾನೆ ಎಂದು ನಂಬುವ ಚಾರ್‌ಧಾಮ್ ಕ್ಷೇತ್ರಗಳಲ್ಲಿ ಪುರಿಯೂ ಒಂದು. ಅದಕ್ಕೇ ಏನೋ ಪುರಿಗೆ ಕಾಲಿಟ್ಟಾಗಲೇ ದೇವಸ್ಥಾನದ ಆವರಣದಲ್ಲಿದ್ದೇನೆ ಎಂಬಂಥ ಭಾವ ಮನತುಂಬಿತು.
ನಾನು ಅಲ್ಲಿಗೆ ಹೋದಾಗ ಪುರಿಯ ಮುಖ್ಯ ದೇವಸ್ಥಾನ ಶ್ರೀಮಂದಿರದಲ್ಲಿ ಜಗನ್ನಾಥ ಮೂರ್ತಿ ಇರಲಿಲ್ಲ. ಅದನ್ನು ಕೇಳಿಯೇ ನನಗೆ ಅಚ್ಚರಿ. ನಮ್ಮಲ್ಲೆಲ್ಲ ರಥಯಾತ್ರೆ ಎಂದರೆ ದೇವಸ್ಥಾನದ ಮೂಲ ವಿಗ್ರಹಕ್ಕೆ ಪೂಜೆಯಾಗುತ್ತದೆ. ಉತ್ಸವ ಮೂರ್ತಿಯನ್ನು ರಥೋತ್ಸವಕ್ಕೆ ಕರೆ ತರಲಾಗುತ್ತದೆ. ಆದರೆ ಪುರಿಯಲ್ಲಿ ರಥೋತ್ಸವಕ್ಕೆ ಗರ್ಭಗುಡಿಯ ದೇವರನ್ನೇ ತರಲಾಗುತ್ತದೆ. ಹಾಗಾಗಿ ರಥೋತ್ಸವದ 9 ದಿನ ಮೂಲ ದೇಗುಲ ಶ್ರೀ ಮಂದಿರದಲ್ಲೇ ಜಗನ್ನಾಥನೇ ಇರುವುದಿಲ್ಲ!
ಇದನ್ನೂ ಓದಿ: Jagannath Rath Yatra 2023: ಮೂಳೆಗಳಿಂದ ಮಾಡಲ್ಪಟ್ಟಿವೆಯೇ ಜಗನ್ನಾಥ ದೇವಾಲಯದ ವಿಗ್ರಹಗಳು?
ಪುರಿಯ ಅಧಿದೇವತೆ ಜಗನ್ನಾಥ ಕೃಷ್ಣನೇ ಆದರೂ ನಮ್ಮ ಉಡುಪಿ ಕೃಷ್ಣನಂತಲ್ಲ. ಶಿಷ್ಟಾಚಾರದ ಹಂಗಿಲ್ಲ. ಆತ ಯಾವುದೇ ಕಟ್ಟುಪಾಡುಗಳಿಲ್ಲದ ಗೊಲ್ಲ. ಗರ್ಭಗುಡಿಯಲ್ಲಿಯೂ ಅಣ್ಣ ಬಲರಾಮ, ತಂಗಿ ಸುಭದ್ರೆ ಜೊತೆ ನಿಂತ ಸೀದಾ ಸಾದ ಹುಡುಗ. ಪುರಿ ರಥಯಾತ್ರೆ ಎನ್ನುವುದು ಭಕ್ತರ ಪಾಲಿಗೆ ಉತ್ಸವವಾದರೂ, ಜಗನ್ನಾಥನ ಪಾಲಿಗೆ ಅಣ್ಣ, ತಂಗಿಯೊಂದಿಗೆ ಚಿಕ್ಕಮ್ಮನ ಮನೆಗೆ ವರ್ಷಕ್ಕೊಮ್ಮೆ ಹೋಗುವ ಪ್ರವಾಸ. ಶ್ರೀಮಂದಿರದಿಂದ ಕೇವಲ 3 ಕಿ.ಮೀ ದೂರವಿರುವ ಗುಂಡಿಚಾ ದೇಗುಲಕ್ಕೆ ಆಷಾಢ ಶುಕ್ಲ ಬಿದಿಗೆ ದಿನ ರಥ ಬರುತ್ತದೆ. ಅಂದಿನಿಂದ 9ನೇ ದಿನದವರೆಗೂ ಜಗನ್ನಾಥ, ಬಲರಾಮ, ಸುಭದ್ರಾ ವಿಗ್ರಹಗಳು ಇಲ್ಲೇ ಇರುತ್ತವೆ. ಭಕ್ತರು ಇಲ್ಲಿಯೇ ದರ್ಶನ ಮಾಡಬೇಕು. ಗುಂಡಿಚಾ ದೇಗುಲ ಶ್ರೀ ಮಂದಿರದಷ್ಟು ವೈಭವಯುತವಾಗಿಲ್ಲದಿದ್ದರೂ ಕೃಷ್ಣನಿಗೆ ಇಲ್ಲಿಗೆ ಬರುವುದು ತುಂಬಾ ಪ್ರಿಯವಂತೆ. ಎಷ್ಟೆಂದರೂ ಚಿಕ್ಕಮ್ಮನ ಮನೆಯಲ್ಲವೇ!
NON HINDUS NOT ALLOWED
ನಾನು 7ನೇ ದಿನ ಸಂಜೆಯ ವೇಳೆಗೆ ಗುಂಡಿಚಾ ದೇಗುಲದ ಬಳಿ ದರ್ಶನಕ್ಕೆ ಬಂದಾಗ ಅಲ್ಲಿ ಜನಜಾತ್ರೆಯೇ ನೆರೆದಿತ್ತು. ಒಳಹೋಗುವಾಗ ಪ್ರತಿಯೊಬ್ಬರೂ ಚಪ್ಪಲಿಯನ್ನು ಬಿಟ್ಟು ಹೋಗುವಂತೆ ಮೊಬೈಲನ್ನೂ ಹೊರಗಡೆಯೇ ಇಟ್ಟು ಹೋಗಬೇಕು. ಅದಕ್ಕಾಗಿ ಕೌಂಟರ್ಗಳು ಇರುತ್ತವೆ. ದೇವಸ್ಥಾನದ ಹೊರಗೆ ‘ವಿದೇಶಿಯರಿಗೆ ದೇಗುಲದ ಒಳಗೆ ಪ್ರವೇಶವಿಲ್ಲ. ಸಾಂಪ್ರದಾಯಿಕ ಹಿಂದೂಗಳಿಗೆ ಮಾತ್ರ ಪ್ರವೇಶ’ ಹಾಕಿದ್ದ ಬೋರ್ಡ್ ನನ್ನ ಗಮನ ಸೆಳೆಯಿತು. ವಿದೇಶಿಯರಿಗೆ ಪ್ರವೇಶ ನೀಡದ ಕೆಲವೇ ಕೆಲವು ಭಾರತದ ದೇಗುಲಗಳಲ್ಲಿ ಪುರಿಯೂ ಒಂದು. ವಿಶೇಷವೆಂದರೆ ಪುರಿ ಜಗನ್ನಾಥನಿಗೆ ಹಿಂದೂಯೇತರ ಭಕ್ತರೂ ಇದ್ದಾರೆ. ಅವರು ಜಗನ್ನಾಥನ ದರ್ಶನ ಮಾಡಬೇಕೆಂದರೆ ಪ್ರತಿ ವರ್ಷ ರಥಯಾತ್ರೆವರೆಗೂ ಕಾಯಬೇಕು. ಅದಕ್ಕೇ ಏನೋ ಗರ್ಭಗುಡಿಯ ದೇವರೇ ರಥದ ಮೇಲೇರಿ ರಸ್ತೆಗೆ ಬಂದು ಎಲ್ಲರಿಗೂ ದರ್ಶನ ನೀಡುತ್ತಾನೆ !
ಇದನ್ನೂ ಓದಿ: Chappan Bhog: ಪುರಿ ಜಗನ್ನಾಥನಿಗೆ 56 ಬಗೆಯ ಭೋಗ; ಮಣ್ಣಿನ ಮಡಿಕೆಯಲ್ಲೇ ತಯಾರಾಗುತ್ತೆ 'ಮಹಾಪ್ರಸಾದ'