ಸಮುದ್ರದಲ್ಲಿ ನಡೆದು ನಿಷ್ಕಳಂಕ ಶಿವನ ದರ್ಶನ ಮಾಡಿ, ಪುನೀತರಾಗಿ..!
ಅದು ಗುಜಾರತ್‌ನಲ್ಲಿರುವ ಅರಬ್ಬೀ ಸಮುದ್ರ. ಅಲ್ಲಿನ ಸಮುದ್ರದಲ್ಲಿ ನಡೆದು ಸ್ವಲ್ಪ ದೂರ ಕ್ರಮಿಸಿದರೆ ಸಾಕ್ಷಾತ್ ಶಿವನನ್ನು ದರ್ಶನ ಪಡೆಯಬಹುದು. ನಮ್ಮೆಲ್ಲ ಪಾಪಗಳನ್ನು ತೊಡೆದುಹಾಕಬಹುದು ಎಂಬುದು ನಂಬಿಕೆ. ಇದಕ್ಕೋಸ್ಕರ ಸಾವಿರಾರು ಭಕ್ತರು ಭೇಟಿ ಕೊಡುತ್ತಲೇ ಇರುತ್ತಾರೆ. ಅದರಲ್ಲೂ ಅಮಾವಾಸ್ಯೆಯೆಂದು ಹೆಚ್ಚು ಮಂದಿ ಭಕ್ತರು ಬರುತ್ತಾರೆ. ಇಲ್ಲಿ ಶಿವನ ಲಿಂಗಗಳು ಉದ್ಭವವಾಗಿವೆ ಎಂದು ಹೇಳಲಾಗುತ್ತದೆ. ಜೊತೆಗೆ ಬೇಕೆಂದಾಗಲೆಲ್ಲ ದರ್ಶನವೂ ಸಿಗುವುದಿಲ್ಲ, ಅಲ್ಲಿಗೆ ಹೋಗಲೂ ಆಗುವುದಿಲ್ಲ. ಅಲೆಗಳ ಉಬ್ಬರ ಇಳಿದು ಶಾಂತವಾದಾಗ ಮಾತ್ರ ಅಲ್ಲಿಗೆ ಹೋಗಬಹುದಾಗಿದೆ. ಹೀಗಾಗಿ ಶಿವಲಿಂಗದ ಬಳಿ ಹೋಗುವುದೇ ಒಂದು ರೋಮಾಂಚನ ಎಂದು ಹಲವು ಭಕ್ತರು ಹೇಳುತ್ತಾರೆ. ಹಾಗಾದರೆ ಇದು ಏನು..? ಎತ್ತ..? ಎಂಬುದನ್ನು ನೋಡೋಣ ಬನ್ನಿ…
ಶಿವ ಎಂದರೆ ಲಯಕರ್ತ ಮಾತ್ರವಲ್ಲ, ಕರುಣಾಮಯಿ, ಕೇಳಿದ್ದನ್ನು ಕೊಡುವ ದಯಾಮಯಿ. ರಾವಣ ದುಷ್ಟ ಎಂದು ಗೊತ್ತಿದ್ದರೂ ಅವನ ತಪಸ್ಸಿಗೆ ಮೆಚ್ಚಿ ತನ್ನ ಪ್ರಾಣವಾಗಿರುವ ಆತ್ಮಲಿಂಗವನ್ನೇ ಕೊಡಲಿಲ್ಲವೇ. ಅದಕ್ಕೇ ಅಲ್ಲವೇ ಅವನನ್ನು ಬೋಳೇಶಂಕರ ಎನ್ನುವುದು. ಶಿವನನ್ನು ಆರಾಧಿಸದೇ ಇರುವವರು ಬಹಳ ವಿರಳ ಎನ್ನಬಹುದು. ನಮ್ಮ ಭಾರತದಲ್ಲಿ ಅನೇಕ ಶಿವನ ದೇಗುಲಗಳಿವೆ. ಕೆಲವು ಕಡೆ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದ್ದರೆ, ಮತ್ತೆ ಕೆಲವು ಕಡೆ ಜ್ಯೋತಿರ್ಲಿಂಗವೇ ಸೃಷ್ಟಿಯಾಗಿವೆ. ಹೀಗೆ ಸೃಷ್ಟಿಯಾದ ಜ್ಯೋತಿರ್ಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಶ್ರೇಷ್ಠ ಎಂದು ನಂಬಲಾಗಿದೆ. ಜೊತೆಗೆ ಪುಣ್ಯ ಪ್ರಾಪ್ತಿಯೂ ಆಗಲಿದೆ.
ಹೀಗೆ ಜ್ಯೋತಿರ್ಲಿಂಗವು ಸೃಷ್ಟಿಯಾದ ಪುಣ್ಯಕ್ಷೇತ್ರವು ಗುಜರಾತ್ ಭಾವನಗರದ ಕೋಲಿಯಾಕ್ ಸಮುದ್ರ ತಟದಿಂದ 3 ಕಿ,ಮೀ. ಒಳಭಾಗದಲ್ಲಿ ಇದೆ ಎಂದರೆ ನೀವು ನಂಬಲೇಬೇಕು. ಇಲ್ಲಿ ಒಟ್ಟು 5 ಸ್ವಯಂಭೂ ಲಿಂಗ (ಸ್ವಉದ್ಭವ) ವಿದ್ದು, 5 ಸಾವಿರ ವರ್ಷ ಪುರಾತನದ್ದಾಗಿದೆ. ಇದನ್ನು ನಿಷ್ಕಳಂಕ ಮಹಾದೇವ ಮಂದಿರ ಎಂದು ಕರೆಯಲಾಗುತ್ತದೆ. ಇಲ್ಲಿ ಒಮ್ಮೆ ಭೇಟಿ ಕೊಟ್ಟವರು ಅದೆಷ್ಟು ಮಂತ್ರಮುಗ್ದರಾಗುತ್ತಾರೆಂದರೆ ಅಲ್ಲಿಂದ ಹೊರಬರಲೇ ಇಷ್ಟಪಡದಷ್ಟು. ಅಂದರೆ, ಸುಮುದ್ರದ ಅಲೆಗಳ ನಡುವೆ ತಣ್ಣಗೆ ಶಿವಲಿಂಗ ಪ್ರತಿಷ್ಠಾಪಿತವಾಗಿದ್ದರೆ, ದಿನವೂ ಆ ಅಲೆಗಳು ಶಿವನ ಲಿಂಗಕ್ಕೆ ತಾಕುವ ಮೂಲಕ ಜಲಾಭಿಷೇಕವನ್ನು ಮಾಡಿಹೋಗುತ್ತದೆ ಎಂದರೆ ಅದರ ಶಕ್ತಿಯನ್ನು ಅರಿಯಲೇಬೇಕು.
ಇದನ್ನು ಓದಿ: ಶ್ರಾವಣಕ್ಕೆ ಉಜ್ಜಯಿನಿ ಮಹಾಕಾಳೇಶ್ವರನಿಂದ ಆನ್‌ಲೈನ್ ದರ್ಶನ..!
ಅಲೆ ಉಬ್ಬರ ತಗ್ಗಬೇಕು
ನೀರಿನಲ್ಲೇ ಬರಲಿಗಾಲಲ್ಲಿ ನಡೆದು ದರ್ಶನ ಪಡೆದರೆ ಪುಣ್ಯ ಪ್ರಾಪ್ತಿ ಎಂದು ಪುರಾಣ ಹೇಳುವುದರಿಂದ ಬಹುತೇಕ ಎಲ್ಲರೂ ದೇಗುಲದ ವರೆಗೆ ನೀರಿನ ಮಧ್ಯೆ ನಡೆದೇ ಸಾಗುತ್ತಾರೆ. ಈ ಸಂದರ್ಭದಲ್ಲಿ ಆಗುವ ಅನುಭವವಿದೆಯೆಲ್ಲ ಅದು ಧನ್ಯತೆಯನ್ನು ಸೃಷ್ಟಿಸುತ್ತದೆ. ಇಲ್ಲಿ ಅಲೆಗಳ ಉಬ್ಬರ ತುಂಬಾ ಹೆಚ್ಚಿದ್ದಾಗ ಇದ್ದಾಗ ಅಲ್ಲೊಂದು ದೇವಸ್ಥಾನ ಇದೆ ಎಂಬುದೇ ಕಾಣುವುದಿಲ್ಲ. ಅಲ್ಲಿ ಕಾಣುವುದು ಬಾವುಟ ಹಾಗೂ ಮಂದಿರದ ಕಂಬಗಳೂ ಮಾತ್ರ. ಯಾವಗ ಉಬ್ಬರ ತಗ್ಗುತ್ತದೋ ಆಗ ಶಿವಲಿಂಗ ದರ್ಶನ ಸಾಧ್ಯವಾಗುತ್ತದೆ. ಜೊತೆಗೆ ನಡೆದೂ ಹೋಗಬಹುದಾಗಿದೆ.
ಪಾಂಡವರಿಗೆ ಇಲ್ಲಾಗಿತ್ತು ದರ್ಶನ
ದ್ವಾಪರಯುಗದಲ್ಲಿ ಪಾಂಡವರು ಈ ಭಾಗದಲ್ಲಿ ಸಂಚರಿಸುತ್ತಿದ್ದಾಗ ಸಾಕ್ಷತ್ ಶಿವ ಇಲ್ಲೇ ದರ್ಶನ ನೀಡಿದ್ದ ಎಂದು ಪುರಾಣ ಹೇಳುತ್ತದೆ. ಇಲ್ಲಿ ಐದು ಶಿವಲಿಂಗದ ಎದುರು ನಂದಿ ವಿಗ್ರಹ ಇದೆ. ಚೌಕಾಕಾರದಲ್ಲಿ ಐದೂ ಶಿವಲಿಂಗಗಳಿವೆ. ಇಲ್ಲೊಂದು ಸಣ್ಣ ಕೊಳವಿದ್ದು, ಇದಕ್ಕೆ ಪಾಂಡವ ಕೊಳ ಎಂದು ಕರೆಯಲಾಗುತ್ತದೆ. ಭಕ್ತರು ಮೊದಲು ಇಲ್ಲಿ ಕೈ-ಕಾಲುಗಳನ್ನು ತೊಳೆದು ಶುದ್ಧಗೊಂಡ ಬಳಿಕ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ.
ಇದನ್ನು ಓದಿ: ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!...
ಭಾದ್ರಪದ ಮಾಸದ ಅಮಾವಾಸ್ಯೆ ಪೂಜೆ
ಭಾದ್ರಪದ ಮಾಸದ ಅಮಾವಾಸ್ಯೆಯ ವೇಳೆ ಜಾತ್ರೆ ನಡೆಯಲಿದ್ದು, ಇದಕ್ಕೆ ಭಾದ್ರವೀ ಎಂದು ಕರೆಯಲಾಗುತ್ತದೆ. ಅಲ್ಲದೆ, ಪ್ರತಿ ಅಮಾವಾಸ್ಯೆಗೆ ವಿಶೇಷ ಪೂಜೆಗಳೂ ಇಲ್ಲಿ ನಡೆಯುತ್ತವೆ. ಹೀಗಾಗಿ ಈ ದಿನಗಳಲ್ಲಿ ಬಹಳ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಇನ್ನೊಂದು ವಿಶೇಷ ಸಂಗತಿ ಎಂದರೆ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯೆಂದು ಅಲೆಗಳ ಉಬ್ಬರ ಎಂದಿನಕ್ಕಿಂತ ಹೆಚ್ಚಿದ್ದರೂ ಜನ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಅಲೆ ಇಳಿಯುವವರೆಗೂ ಕಾದು ದೇವರ ದರ್ಶನ ಪಡೆದು ಹೋಗುತ್ತಾರೆ. ಈ ಮಂದಿರಕ್ಕೆ ಬರುವವರ ಪಾಪಗಳಿಗೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಸಹ ಇದೆ.
ಇದನ್ನು ಓದಿ: ಭಾಗ್ಯಶಾಲಿ ಹುಡುಗಿಯರಲ್ಲಿ ಇರುತ್ತೆ ಈ ಚಿಹ್ನೆಗಳು!...
ಪಾಂಡವರ ಪಾಪಕ್ಕೆ ಇಲ್ಲಿಯೇ ಮುಕ್ತಿ
ಕುರುಕ್ಷೇತ್ರದಲ್ಲಿ ಹೋರಾಡಿ ಸಹೋದರರನ್ನು ಸದೆಬಡಿದು ತಮ್ಮ ರಾಜ್ಯವನ್ನು ಮರಳಿ ಪಡೆದ ಪಾಂಡವರಿಗೆ ಸಹೋದರರನ್ನು ಹತ್ಯೆ ಮಾಡಿದ ಪಾಪವನ್ನು ಎದುರಿಸುತ್ತಿದ್ದರು. ಇದು ಪಾಂಡವರನ್ನು ಅತೀವ ದುಃಖಕ್ಕೀಡು ಮಾಡಿತ್ತು. ಇದಕ್ಕೋಸ್ಕರ ಭಗವಾನ್ ಶ್ರೀಕೃಷ್ಣನ ಸೂಚನೆಯಂತೆ ಕೋಲಿಯಾಕ್ ತಟಕ್ಕೆ ಬಂದು ಶಿವನ ಧ್ಯಾನ ಮಾಡಿ ತಪಸ್ಸು ಮಾಡುತ್ತಾರೆ. ಇದಕ್ಕೆ ಪ್ರಸನ್ನವಾದ ಶಿವನು ಐವರಿಗೂ ಪ್ರತ್ಯೇಕವಾಗಿ ಲಿಂಗರೂಪದಲ್ಲಿ ದರ್ಶನ ಕೊಟ್ಟು ಪಾಪದಿಂದ ಮುಕ್ತಿ ಮಾಡಿದ್ದಾನೆಂದು ಪುರಾಣ ಹೇಳುತ್ತದೆ.