Asianet Suvarna News Asianet Suvarna News

ಬೆಂಗಳೂರು: ದಶಕದ ಬಳಿಕ ಕೆಂಪಾಂಬುಧಿಯಲ್ಲಿ ನಂದಿ ತೆಪ್ಪೋತ್ಸವ..!

ತೆಪ್ಪೋತ್ಸವಕ್ಕೆ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಚಾಲನೆ, ಕಡಲೆಕಾಯಿ ಪರಿಷೆ ನಿಮಿತ್ತ ದೇವರಿಗೆ ವಿಶೇಷ ಪೂಜೆ, ಕಡಲೆಕಾಯಿ ಅಭಿಷೇಕ

Nandi Teppotsava at Kempambudhi After Decade in Bengaluru grg
Author
First Published Nov 22, 2022, 7:00 AM IST | Last Updated Nov 22, 2022, 7:00 AM IST

ಬೆಂಗಳೂರು(ನ.22):  ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಅಂಗವಾಗಿ ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಭಕ್ತಿಭಾವದಿಂದ ಜರುಗಿತು. ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಜಿಂಕೆ ಪಾರ್ಕ್ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪವನ್ನು ಹೂವು, ವಿದ್ಯುತ್‌ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬಳಿಕ ತೆಪ್ಪದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಅರ್ಚಕರು, ಗಣ್ಯರು ಕರೆಯಲ್ಲಿ ತೆಪ್ಪವನ್ನು ಸುತ್ತು ಹಾಕಿಸಿದರು.

ತೆಪ್ಪೋತ್ಸವಕ್ಕೆ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಚಾಲನೆ ನೀಡಿದರು. ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಅಧಿಕಾರಿಗಳಾದ ಧರಣೇಂದ್ರ ಕುಮಾರ, ಎಇಇ ರಾಜೇಶ್‌ ಸೇರಿ ಇದ್ದರು. ಇನ್ನು, ಕಡಲೆಕಾಯಿ ಪರಿಷೆ ನಿಮಿತ್ತ ದೊಡ್ಡ ಗಣಪತಿ ದೇವಸ್ಥಾನ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಡಲೆಕಾಯಿ ಅಭಿಷೇಕ ನೆರವೇರಿಸಲಾಯಿತು.

Basavanagudi Kadalekai Parishe: ನೋಡ ಬನ್ನಿ ಬಸವನಗುಡಿ ಪರಿಷೆಯಾ..

ಕಡ್ಲೆಕಾಯಿ ಬಿಸಿ:

ಮಳೆಯಿಂದ ಬೆಳೆ ನಾಶವಾಗಿರುವ ಕಾರಣ ಗ್ರಾಹಕರಿಗೆ ಕಡ್ಲೆಕಾಯಿ ದರದ ಬಿಸಿ ತಟ್ಟಿದೆ ಒಂದು ಸೇರು ಕಡಲೆಕಾಯಿಗೆ 50-60ರು. ಇದ್ದರೆ, ಹುರಿದ ಕಡಲೆ 80ರು.ವರೆಗೆ ವ್ಯಾಪಾರಸ್ಥರು ಮಾರಿದರು. ಪರಿಷೆಗೆ ಆಗಮಿಸಿದ್ದ ಜನತೆ ಬಗೆಬಗೆಯ ಕಡ್ಲೆಕಾಯಿ ಕೊಂಡು ಮನೆಗೊಯ್ಯುತ್ತಿರುವುದು ಸಾಮಾನ್ಯವಾಗಿತ್ತು. ಅಗತ್ಯದಷ್ಟುಲಭ್ಯವಿಲ್ಲದ ಕಾರಣದಿಂದಲೆ ಕುರುಕಲು ತಿನಿಸು, ವಿವಿಧ ಪರಿಕರಗಳ ಮಳಿಗೆಗಳೆ ಪರಿಷೆಯಲ್ಲಿ ಹೆಚ್ಚಾಗಿ ಕಂಡುಬಂದವು.

Bengaluru: ಕಡಲೆಕಾಯಿ ಪರಿಷೆಗೆ ಜನಸಾಗರ: ಜಗಮಗಿಸುವ ವಿದ್ಯುತ್‌ ಅಲಂಕಾರ

ಜನಜಂಗುಳಿ:

ಪರಿಷೆಗೆ ಸೋಮವಾರವೂ ಜನಜಂಗುಳಿ ಇತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ಲಕ್ಷಾಂತರ ಜನತೆ ಆಗಮಿಸಿದ್ದರು. ಕಡಲೆಕಾಯಿ ಸೇರಿ ಬಗೆಬಗೆಯ ತಿನಿಸುಗಳು, ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು. ದೇವಸ್ಥಾನದ ಸುತ್ತಲೂ ಇರುವ ರಸ್ತೆಗಳ ಬದಿಯಲ್ಲಿ ಕಡಲೆಕಾಯಿ, ಆಟಿಕೆ, ಬಟ್ಟೆಬರೆ, ಗೃಹೋಪಯೋಗಿ ವಸ್ತು ಸೇರಿದಂತೆ ಹತ್ತಾರು ಬಗೆ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಪರಿಷೆ ನಿಮಿತ್ತ ಸನಿಹದ ಬ್ಯೂಗಲ್‌ ರಾಕ್‌ ಉದ್ಯಾನದಲ್ಲಿ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಜನ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದರು. ಪರಿಷೆ ಹಿನ್ನೆಲೆಯಲ್ಲಿ ಜನಸಂದಣಿ ಇರುವೆಡೆ ವಿಶೇಷವಾಗಿ ಸಿಸಿ ಕ್ಯಾಮೆರಾ, ಹೆಚ್ಚಿನ ಪೊಲೀಸ್‌ ಭದ್ರತೆ, ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮ

ಕಾರ್ತಿಕ ಸೋಮವಾರ ಪ್ರಯುಕ್ತ ನಗರದ ಬಳೇಪೇಟೆ ವೃತ್ತದಲ್ಲಿನ ಕಾಶೀ ವಿಶ್ವನಾಥಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ, ಅಲಸೂರು ಸೋಮೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವ ಸಂಭ್ರಮದಿಂದ ಜರುಗಿತು. ಸಂಜೆ ವೇಳೆ ಸುತ್ತಮುತ್ತಲಿನ ಜನತೆ ಆಗಮಿಸಿ ಹಣತೆ ಬೆಳಗಿದರು. ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಾಲಯ, ಕೆ.ಆರ್‌. ರಸ್ತೆಯ ಶ್ರೀ ಉಮಾಮಹೇಶ್ವರಿ ದೇವಾಲಯ, ಪದ್ಮನಾಭನಗರದ ಈಶ್ವರಿ ದೇವಾಲಯ ಸೇರಿ ಹಲವೆಡೆ ದೀಪೋತ್ಸವ ಭಕ್ತಿಯಿಂದ ನಡೆಯಿತು.
 

Latest Videos
Follow Us:
Download App:
  • android
  • ios