Asianet Suvarna News Asianet Suvarna News

Bengaluru: ಕಡಲೆಕಾಯಿ ಪರಿಷೆಗೆ ಜನಸಾಗರ: ಜಗಮಗಿಸುವ ವಿದ್ಯುತ್‌ ಅಲಂಕಾರ

ಕಾಲಿಡಲೂ ಆಗದಷ್ಟು ಕಿಕ್ಕಿರಿದ ಜನಸಾಗರ, ರಸ್ತೆಯ ಇಕ್ಕೆಲಗಳಲ್ಲಿ ಬಗೆ ಬಗೆಯ ಮಾರಾಟ ಮಳಿಗೆಗಳು, ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್‌ ಅಲಂಕಾರ, ಬಿಸಿಬಿಸಿ ಕಡಲೆಕಾಯಿ, ಕುರುಕಲು ತಿಂಡಿ ಬಾಯಿಗಿಳಿಸುತ್ತ ತಿರುಗುವ ಸಂಭ್ರಮ, ತರಹೇವಾರಿ ಪರಿಕರಗಳ ಖರೀದಿ, ದೊಡ್ಡಗಣಪತಿ, ಬಸವಣ್ಣನ ದರ್ಶನಕ್ಕೆ ಉದ್ದನೆ ಸರದಿಸಾಲು.

Peoples Visit Basavanagudi Kadalekai Parishe In Bengaluru gvd
Author
First Published Nov 21, 2022, 7:14 AM IST

ಬೆಂಗಳೂರು (ನ.21): ಕಾಲಿಡಲೂ ಆಗದಷ್ಟು ಕಿಕ್ಕಿರಿದ ಜನಸಾಗರ, ರಸ್ತೆಯ ಇಕ್ಕೆಲಗಳಲ್ಲಿ ಬಗೆ ಬಗೆಯ ಮಾರಾಟ ಮಳಿಗೆಗಳು, ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್‌ ಅಲಂಕಾರ, ಬಿಸಿಬಿಸಿ ಕಡಲೆಕಾಯಿ, ಕುರುಕಲು ತಿಂಡಿ ಬಾಯಿಗಿಳಿಸುತ್ತ ತಿರುಗುವ ಸಂಭ್ರಮ, ತರಹೇವಾರಿ ಪರಿಕರಗಳ ಖರೀದಿ, ದೊಡ್ಡಗಣಪತಿ, ಬಸವಣ್ಣನ ದರ್ಶನಕ್ಕೆ ಉದ್ದನೆ ಸರದಿಸಾಲು. ಇದು ಸಿಲಿಕಾನ್‌ಸಿಟಿಯ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನಾ ದಿನದ ಚಿತ್ರಣ. ವಾರಾಂತ್ಯದಲ್ಲಿ ಮಾಲ್‌, ಪಾರ್ಕ್, ಶಾಪಿಂಗ್‌ ಖರೀದಿ ಇಲ್ಲವೇ ಐಷಾರಾಮಿ ಸ್ಥಳಗಳಿಗೆ ಸುತ್ತಾಟಕ್ಕೆ ಹೋಗುತ್ತಿದ್ದ ಯುವ ಜನತೆಯಿಂದ ಹಿಡಿದು ಹಿರಿ ಕಿರಿಯರು ಭಾನುವಾರ ಅಪ್ಪಟ ದೇಶಿ ಸಂಸ್ಕೃತಿಯ ಪರಿಷೆಗೆ ಆಗಮಿಸಿ ಸಂಭ್ರಮಿಸಿದರು. 

ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆಗಳಿಂದ ಬರುತ್ತಿದ್ದ ಜನರು, ಸಂಜೆಯಾಗುತ್ತಲೇ ಭಾರಿ ಸಂಖ್ಯೆಯಿಂದಲೇ ಆಗಮಿಸಿ ಪರಿಷೆಗೆ ಆಗಮಿಸಿ, ದೇವರ ದರ್ಶನ ಪಡೆದು ಕಡಲೆಕಾಯಿ ಮೆಲ್ಲುತ್ತಾ ಸಂತಸ ಪಟ್ಟರು. ಬುಲ್‌ ಟೆಂಪಲ್‌ ಮುಖ್ಯರಸ್ತೆಯ ಇಕ್ಕೆಲದಲ್ಲಿ ಸಾವಿರಕ್ಕೂ ಹೆಚ್ಚಿನ ತರಹೇವಾರಿ ಮಳಿಗೆಗಳು ತೆರೆದುಕೊಂಡಿದ್ದವು. ಕಹಳೆ ಬಂಡೆ ರಸ್ತೆ, ಪಶ್ಚಿಮ ಆಂಜನೇಯ ಗುಡಿ ರಸ್ತೆ, ಮೌಂಟ್‌ ರಾಯ್‌ ರಸ್ತೆಗಳಲ್ಲೂ ಪರಿಷೆ ಕಳೆಗಟ್ಟಿತ್ತು. ಸರಿಸುಮಾರು 2 ಕಿಮೀವರೆಗೂ ಮರ, ಕಟ್ಟಡಗಳಿಗೆ ಮಾಡಲಾಗಿದ್ದ ವಿದ್ಯುತ್‌ ಅಲಂಕಾರ ಕಣ್ಣು ಕೋರೈಸಿತು.

Dharmasthala Laksha Deepotsava: ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ

ಕಡ್ಲೆಕಾಯಿ ಜಾತ್ರೆ: ನಾಟಿ, ಮರಲು, ಬೆಳ್ಳಿಕಾಯಿ, ಗಡಂಗ್‌, ಕೆಂಪುಗಡಲೆ, ಕಪ್ಪುಕಡಲೆ, ದೊಡ್ಡ ಗಾತ್ರದ ಬೋಂಡಾ ಕಡಲೆಕಾಯಿ ರಾಶಿಗಳು ರಸ್ತೆಯ ಎರಡು ಬದಿಯಲ್ಲಿ ಸೆಳೆಯುತ್ತಿದ್ದವು. ಚಿಂತಾಮಣಿ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ವ್ಯಾಪಾರಿಗಳು, ರೈತರು ಕಡಲೆಕಾಯಿಯನ್ನು ಮಾರಾಟಕ್ಕೆ ತಂದಿದ್ದಾರೆ.

ಇದಲ್ಲದೆ, ಬೇಯಿಸಿದ ಜೋಳ, ಮಸಾಲಾ ಪಾಪಡ್‌, ಕಡ್ಲೆಪುರಿ, ಟ್ವಿಸ್ಟೆಡ್‌ ಪೊಟಾಟೋ, ಪ್ರೂಟ್‌ ಸಲಾಡ್‌ಗಳಿಗೆ ಜನತೆ ಮುಗಿಬಿದ್ದಿದ್ದರು. ಇನ್ನು, ಮಕ್ಕಳ ಆಟಿಕೆ ವಸ್ತುಗಳು, ಮಹಿಳೆಯರ ನೆಚ್ಚಿನ ಬಳೆ, ಕಿವಿಯೋಲೆ, ಸರ, ಬಟ್ಟೆಬರೆ, ಗೃಹೋಪಯೋಗಿ ಪರಿಕರ, ಅಲಂಕಾರಿಕ ಸಾಮಗ್ರಿ, ಟೆರ್ರಾಕೋಟಾ ಮೂರ್ತಿಗಳು, ಸೇರಿ ಹತ್ತಾರು ಬಗೆಯ ವಸ್ತುಗಳ ಮಳಿಗೆಗಳು ಪರಿಷೆಯಲ್ಲಿವೆ.

ಥೀಮ್‌ ಪಾರ್ಕ್: ದೊಡ್ಡ ಬಸವಣ್ಣ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲುಗಳ ಪಕ್ಕದ ಸ್ಥಳದಲ್ಲಿ ಮಕ್ಕಳಿಗಾಗಿ ವಿವಿಧ ಬಗೆಯ ಆಟಗಳು, ತೊಟ್ಟಿಲುಗಳು ಆಗಮಿಸಿವೆ. ಇದರ ಪಕ್ಕದಲ್ಲಿ ನೂತನವಾಗಿ ಕಡಲೆಕಾಯಿ ಪರಿಷೆಯ ಥೀಮ್‌ ಪಾರ್ಕ್ ರೂಪಿಸಲಾಗಿದೆ. ಕಡಲೆಕಾಯಿ ಮಾರುವ ಮಹಿಳೆ, ದೋಟಿ ಹಿಡಿದು ಸೊಪ್ಪು ಕೀಳುವ ಹಳ್ಳಿಯ ವಾತಾವರಣ, ಎತ್ತುಗಳನ್ನು ಕರೆದೊಯ್ಯುತ್ತಿರುವ ರೈತ ಸೇರಿ ಹಲವು ಬಗೆಯ ಪ್ರತಿಕೃತಿಗಳು ಜನರ ಗಮನ ಸೆಳೆಯುತ್ತಿವೆ.

ಪ್ಲಾಸ್ಟಿಕ್‌ ಜಾಗೃತಿ: ಈ ಬಾರಿಯೂ ಬಿಬಿಎಂಪಿ ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್‌ ವಿರುದ್ಧ ಜನಜಾಗೃತಿ ಕಾರ್ಯವನ್ನು ಮಾಡಿದೆ. ಕಡಲೆಕಾಯಿ ಸೇರಿ ಇತರೆ ಮಳಿಗೆಗಳಿಗೆ ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸುವ ಫಲಕವನ್ನು ವಿತರಣೆ ಮಾಡಲಾಗಿದೆ. ‘ಪರಿಷೆಗೆ ಬನ್ನಿ ಕೈ ಚೀಲ ತನ್ನಿ’, ‘ಕೇಳಿ ಪ್ಲಾಸ್ಟಿಕ್‌ ಜಾತಕ, ಇದು ಪರಿಸರಕ್ಕೆ ಮಾರಕ’ ಎಂಬಿತ್ಯಾದಿ ಘೋಷಣೆಗಳನ್ನು ಬರೆಯಲಾಗಿದೆ. ಬಿಎಂಎಸ್‌ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಕಸದ ಬುಟ್ಟಿ ಇಟ್ಟಿಲ್ಲ: ಪರಿಷೆಯಲ್ಲಿ ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಕಸದ ಬುಟ್ಟಿಇಡದ ಬಗ್ಗೆ ಜನತೆಯಿಂದ ಅಸಮಾಧಾನ ವ್ಯಕ್ತವಾಯಿತು. ಪ್ಲಾಸ್ಟಿಕ್‌, ತಿಂಡಿತಿನಿಸುಗಳ ತಟ್ಟೆಸೇರಿ ಹಲವು ತ್ಯಾಜ್ಯ ಇಡಲು ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂತು.

ದೊಡ್ಡ ಗಣೇಶನಿಗೆ 508 ಕೇಜಿ ಕಡಲೆ: ಪರಿಷೆಯ ಹಿನ್ನೆಲೆಯಲ್ಲಿ ದೊಡ್ಡ ಗಣೇಶ ಬಸವಣ್ಣ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಿತು. ಅರ್ಚಕರು ದೊಡ್ಡ ಗಣೇಶನಿಗೆ 508 ಕೇಜಿ ಕಡಲೆಕಾಯಿ ಅಭಿಷೇಕ ನೆರವೇರಿಸಿದರು. ಬಳಿಕ ಗಣೇಶನ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಗಣೇಶ ಹಾಗೂ ಬಸವಣ್ಣ ದೇವರಿಗೆ ಕಡಲೆಕಾಯಿ ಹಾರವನ್ನು ಅರ್ಪಿಸಲಾಯಿತು. ಪ್ರಸಾದ ರೂಪವಾಗಿ ಕಡಲೆಕಾಯಿ ಪಡೆದ ಭಕ್ತರು ಸಂಪ್ರದಾಯದಂತೆ ದೇವಸ್ಥಾನದ ಆವರಣದಲ್ಲೆ ಸೇವಿಸಿದರು. ದೇವರ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಎದುರು ಸುಮಾರು ನೂರು ಮೀ. ಕಬ್ಬಿಣದ ಬ್ಯಾರಿಕೇಡ್‌ ಅಳವಡಿಸಲಾದ್ದು, ಪರಿಷೆ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

ಇಂದು ನಂದಿ ತೆಪ್ಪೋತ್ಸವ: ಕಾರ್ತಿಕ ಸೋಮವಾರದಂದು ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆಯ ಪ್ರಮುಖ ಧಾರ್ಮಿಕ ವಿಧಿಗಳು ಜರುಗಲಿವೆ. ಮುಖ್ಯವಾಗಿ ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಕೋವಿಡ್‌ ನಿರ್ಬಂಧವಿಲ್ಲದ ಕಾರಣ ಎರಡು ವರ್ಷದ ಬಳಿಕ ಪರಿಷೆ ಹಿಂದಿನ ವೈಭವಕ್ಕೆ ಮರಳಿದೆ.

Follow Us:
Download App:
  • android
  • ios