Asianet Suvarna News Asianet Suvarna News

ಶ್ರೀಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ನಾಗನ ಮರ್ದನ ಮಾಡಿದ ದಿನವೇ ನಾಗರ ಪಂಚಮಿ

ನಾಗರಪಂಚಮಿಯ ವೇಳೆ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯವಾಗಿದೆ. ಈ ದಿನ ಅರಿಶಿನ ಅಥವಾ ರಕ್ತ ಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಶೇಷನಾಗ ಮತ್ತು ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಬೇಕು.

Nagar Panchami is the day when Lord Krishna killed the Kalinga Naga in the river Yamuna skr
Author
Bangalore, First Published Aug 2, 2022, 12:48 PM IST

ವಿನೋದ್‌ ಕಾಮತ್‌, ಮಂಗಳೂರು

ಶ್ರಾವಣ ಶುಕ್ಲ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿದನು. ಜನಮೇಜಯ ರಾಜನು 'ವರವನ್ನು ಕೇಳು' ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.

ಸಾತ್ವಿಕ ಗ್ರಹಿಕೆಗೆ ಉಪಯುಕ್ತ ಕಾಲ
ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಂದು ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಬೇಕು. ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ' ಎಂದು ಪ್ರಾರ್ಥಿಸಬೇಕು.

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಹಾಗೂ ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ಈ ದಿನದ ಉಪವಾಸದ ಮಹತ್ವ
5 ಯುಗಗಳ ಹಿಂದೆ ಸತ್ಯೇಶ್ವರಿ ಎಂಬ ಹೆಸರಿನ ಕನಿಷ್ಠ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. 'ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ' ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ಪ್ರಾಣ ರಕ್ಷಣೆಯಾಗುತ್ತದೆ.

ವರಮಹಾಲಕ್ಷ್ಮೀ 2022 ಯಾವಾಗ? ಪೂಜಾ ವಿಧಿ ವಿಧಾನಗಳೇನು?

ನಾಗನ ಪೂಜೆ ಹಿಂದಿನ ಶಾಸ್ತ್ರ
ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುತ್ತೇನೆ ಎಂದು ಅವಳಿಗೆ ವಚನ ನೀಡಿದನು. ಆದ್ದರಿಂದಲೇ ಆ ದಿನ ಪ್ರತಿಯೊಬ್ಬ ಮಹಿಳೆಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ನಾಗನ ಮಹಾತ್ಮೆ
ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಹೊತ್ತು ನಿಂತಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.

ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನ ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.

'ನಾಗಗಳಲ್ಲಿನ ಶ್ರೇಷ್ಠನಾದ ಅನಂತನೇ ನಾನು’ ಎಂದು ಗೀತೆಯಲ್ಲಿ (10.29) ಶ್ರೀಕೃಷ್ಣ ಹೇಳುತ್ತಾನೆ.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್‌
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ

ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ ಎಂದು ನಂಬಲಾಗಿದೆ.

Nag Panchami ನಾಗ ದೇವರ ಕೋಪಕ್ಕೆ ಗುರಿಯಾದ್ರೆ ಬೀದಿಗೆ ಬರೋದು ನಿಶ್ಚಿತ

ಪೂಜೆ ಹೇಗೆ ಮಾಡಬೇಕು?
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ.

ನಮೋ ಅಸ್ತು ಸರ್ಪೇಭ್ಯೋ ಯೇ ಕೇ ಚ ಪೃಥಿವೀ ಮನು
ಯೇ ಅಂತರಿಕ್ಷಂ ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ
ನಾಗರಾಜಾಯ ವಿದ್ಮಹೇ ಸರ್ಪರಾಜಾಯ ಧೀಮಹಿ
ತನ್ನೋ ನಾಗಃ ಪ್ರಚೋದಯಾತ್‌

ಈ ಮಂತ್ರವನ್ನು ಯಥಾಶಕ್ತಿ ಜಪ ಮಾಡಿ ನಾಗನನ್ನು ಪೂಜಿಸಬೇಕು. ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು. ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು ಎಂಬ ನಂಬಿಕೆ ಇದೆ.

Follow Us:
Download App:
  • android
  • ios