ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!
ಹಂಪಿ ಕಲಿಯುಗದಲ್ಲಿ ಅಷ್ಟೇ ಅಲ್ಲ ತ್ರೇತಾಯುಗದಲ್ಲೂ ಪಂಪಾ ಕ್ಷೇತ್ರ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿತ್ತು ಎಂದು ರಾಮಾಯಣ ಮಹಾಕಾವ್ಯದಿಂದ ತಿಳಿದು ಬರುತ್ತದೆ. ಹಂಪಿ ನೆಲ ಶ್ರೀರಾಮನ ಪಾದ ಸ್ಪರ್ಶದಿಂದ ಪುನೀತವಾದ ಕ್ಷೇತ್ರ ಎಂಬುದಾಗಿ ಹಿಂದೂ ಧರ್ಮೀಯರು ಪರಂಪರೆಯಿಂದ ನಂಬಿದ್ದಾರೆ. ಅಲ್ಲದೇ, ರಾಮಾಯಣ ಮಹಾಕಾವ್ಯದಲ್ಲಿ ಕಿಷ್ಕಿಂದಾ ಕಾಂಡ ಎಂಬ ಭಾಗವೂ ಇದೆ.
ಸೀತೆಯನ್ನು ಕಳೆದುಕೊಂಡ ರಾಮ ತನ್ನ ಸಹೋದರ ಲಕ್ಷ್ಮಣನೊಡನೆ ಸೀತೆಯನ್ನು ಹುಡುಕುತ್ತಾ ದಕ್ಷಿಣದ ಕಡೆಗೆ ಆಗಮಿಸುತ್ತಾ ತುಂಗಭದ್ರಾ ನದಿಯ ಉತ್ತರ ದಡದಲ್ಲಿರುವ ಕಿಷ್ಕಿಂದೆಗೆ ತಲುಪುತ್ತಾನೆ. ಅಲ್ಲಿ ಸುಗ್ರೀವ, ಹನುಮಂತ ಪರಿಚಯವಾಗಿ ಹನುಮಂತ ಲಂಕೆಗೆ ಹೋಗಿ ಅಶೋಕವನದಲ್ಲಿ ಸೀತೆ ಭೇಟಿ ಮಾಡಿ ನಂತರ ಲಂಕೆಯ ಅರಮನೆ ಸುಟ್ಟು ಬರುತ್ತಾನೆ. ಆ ಬಳಿಕ ರಾಮ ಪಂಪಾ ಸರೋವರದ ತಟದಲ್ಲಿರುವ ಗುಹೆಯಲ್ಲಿ ತನಗಾಗಿ ಕಾದು ಕುಳಿತ ಶಬರಿ ಆತಿಥ್ಯ ಸ್ವೀಕರಿಸಿ ಅವಳ ಸೂಚನೆಯ ಮೇರೆಗೆ ತುಂಗಭದ್ರಾ ನದಿಯ ದಕ್ಷಿಣ ತಟದಲ್ಲಿರುವ ಹಂಪೆ- ಪಂಪಾ ಕ್ಷೇತ್ರಕ್ಕೆ ಆಗಮಿಸುತ್ತಾನೆ. ಹಂಪಿ ಪ್ರದೇಶದ ಮಾಲ್ಯವಂತ ಬೆಟ್ಟದ ಮೇಲೆ ಚಾತುರ್ಮಾಸ ವ್ರತಾಚರಣೆ ನಡೆಸಲು ಮಾತಂಗ ಮುನಿಗಳಿಂದ ನಿರ್ದೇಶಿತನಾಗುತ್ತಾನೆ.
ಮಾಲ್ಯವಂತ ಬೆಟ್ಟದ ಮೇಲೆ ಲಕ್ಷ್ಮಣ ನೀರಿನ ಅನುಕೂಲಕ್ಕಾಗಿ ತನ್ನ ಬಾಣದಿಂದ ಬಾವಿ ನಿರ್ಮಿಸುತ್ತಾನೆ. ಚಾತುರ್ಮಾಸ ವ್ರತಾಚರಣೆ ಮಾಡಿದ ಬಳಿಕ ಸುಗ್ರೀವನ ಸ್ನೇಹ, ಹನುಮಂತನಂತಹ ಸೇವಕ, ಸ್ಥಳೀಯ ಜನರ ಬೆಂಬಲ, ಸುಗ್ರೀವನ ಸೈನ್ಯದ ಶಕ್ತಿ ಗಳಿಸುತ್ತಾನೆ.
ವಾನರ ಸೈನ್ಯಕ್ಕೆ ಅಗತ್ಯವಾಗಿರುವ ಆಯುಧಗಳನ್ನು ತಯಾರಿಸಲು ಸಂಡೂರು ಪ್ರದೇಶದ ಬೆಟ್ಟಗಳಲ್ಲಿ ಹುದುಗಿರುವ ಉತ್ಕೃಷ್ಟಗುಣಮಟ್ಟದ ಕಬ್ಬಿಣದ ಅದಿರನ್ನು ಬಳಕೆ ಮಾಡಲಾಗಿದೆ ಎಂಬ ವಿಷಯವೂ ಮಹತ್ವದ್ದಾಗಿದೆ.
ಚಾತುರ್ಮಾಸ ವ್ರತಾಚರಣೆ ನಂತರ ರಾಮ ಪಂಪಾ ಕ್ಷೇತ್ರದ ಅಧಿದೇವ ವಿರೂಪಾಕ್ಷ ದೇವರಿಗೆ ನಮಿಸಿ, ಪೂಜಿಸಿ ತನ್ನ ಪ್ರಯಾಣವನ್ನು ದಕ್ಷಿಣದತ್ತ ಬೆಳೆಸುತ್ತಾನೆ. ತಮಿಳುನಾಡಿನ ರಾಮೇಶ್ವರದಿಂದ ಆರಂಭಿಸಿ ಲಂಕೆಯವರೆಗೆ ಇಂದಿಗೂ ಅಸ್ತಿತ್ವದಲ್ಲಿರುವ ‘ರಾಮ ಸೇತು’ ನಿರ್ಮಿಸುತ್ತಾನೆ. ಸೇತುವೆಯ ಮೂಲಕ ಲಂಕೆಯನ್ನು ತಲುಪಿ ರಾವಣ, ಕುಂಭಕರ್ಣ, ಇಂದ್ರಜಿತ್ ವಿರುದ್ಧ ಯುದ್ಧ ನಡೆಸಿ ಅವರೆಲ್ಲರನ್ನು ಸಂಹರಿಸಿ ಸೀತೆಯನ್ನು ಪುಷ್ಪಕ ವಿಮಾನದ ಮೂಲಕ ಅಯೋಧ್ಯೆಗೆ ಕರೆತರುವ ಪ್ರಯಾಣ ಆರಂಭಿಸುತ್ತಾನೆ.
'ಜಾನಪದ ಕಲಾವಿದರಿಗೆ ಬಳ್ಳಾರಿ ಜಿಲ್ಲಾಡಳಿತ ಅವಮಾನ ಮಾಡಿದೆ'
ಮಾರ್ಗ ಮಧ್ಯದಲ್ಲಿ ಹಂಪಿಯಲ್ಲಿ ಇಳಿದ ರಾಮ ಶುಭ ಮುಹೂರ್ತದ ಕಾರಣ ತನ್ನ ಪಟ್ಟಾಭಿಷೇಕವನ್ನು ಇಲ್ಲಿಯೇ ನೆರವೇರಿಸಿಕೊಳ್ಳುತ್ತಾನೆ ಎಂದು ಮೌಖಿಕ ಪರಂಪರೆಯ ಪುರಾಣಗಾಥೆ, ಸ್ಥಳ ಪುರಾಣಗಳು ತಿಳಿಸುತ್ತವೆ.
ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖವಾಗಿರುವ ಋುಷ್ಯಮೂಕ ಪರ್ವತ ಅಂಜನಿ ಪರ್ವತ, ಗಂಧಮಾದನ ಪರ್ವತ, ಮಾಲ್ಯವಂತ ಪರ್ವತ, ಮಾತಂಗ ಪರ್ವತ, ಹೇಮಕೂಟ, ರತ್ನಕೂಟ ಪರ್ವತಗಳು ಹಂಪಿ ಕ್ಷೇತ್ರದ ತುಂಗಭದ್ರಾ ನದಿಯ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಹರಡಿವೆ.
ಅಲ್ಲದೇ, ಚಾತುರ್ಮಾಸದ ಸಂದರ್ಭದಲ್ಲಿ ಬರುವ ಪಿತೃಪಕ್ಷ ಸಂದರ್ಭದಲ್ಲಿ ರಾಮ ಲಕ್ಷ್ಮಣರು ಗತಿಸಿದ ತಮ್ಮ ತಂದೆಯಾದ ದಶರಥ ಹಾಗೂ ಅವರ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿದರು ಎಂಬ ಪೌರಾಣಿಕ ಉಲ್ಲೇಖವೂ ಇದೆ.
ಸೀತೆಯನ್ನು ಕಳೆದುಕೊಂಡು ನಿಸ್ತೇಜನಾಗಿದ್ದ ಶ್ರೀರಾಮನಿಗೆ ಹಂಪಿ ಹೊಸ ಶಕ್ತಿಯನ್ನು ತುಂಬಿ ಅವನಿಗೆ ಹೊಸ ದಿಕ್ಕು ನೀಡುತ್ತದೆ. ಇದು ಹಂಪಿಯ ಪೌರಾಣಿಕ ಮಹತ್ವ.
ಐತಿಹಾಸಿಕ ಸಂಬಂಧ
ತ್ರೇತಾಯುಗದಲ್ಲಿ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಹಂಪಿ- ಪಂಪಾ ಕ್ಷೇತ್ರಕ್ಕೆ ಆಗಮಿಸಿದ್ದ ಎಂಬ ವಿಷಯ ರಾಮಾಯಣ ಮಹಾಕಾವ್ಯದಲ್ಲಿ ವ್ಯಕ್ತವಾಗಿದೆ.
ಆರು ನೂರು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ವಿಸ್ತರಣೆಯಾಗದಂತೆ ತಡೆಯೊಡ್ಡಲು ರೂಪುಗೊಂಡ ವಿಜಯನಗರ ಸಾಮ್ರಾಜ್ಯದ ಅರಸರು ಹಂಪಿಯ ಪರಿಸರದಲ್ಲಿ ಬರುವ ವಿರೂಪಾಕ್ಷ ದೇವಾಲಯವನ್ನು ವಿಸ್ತರಿಸುತ್ತಾರೆ.
ಅಲ್ಲದೇ, ವಿಜಯನಗರ ಸಾಮ್ರಾಜ್ಯದ ತುಳುವ ವಂಶದ ರಾಜರಾದ ಶ್ರೀಕೃಷ್ಣ ದೇವರಾಯ, ಅಚ್ಯುತ ದೇವರಾಯರು ಮತ್ತಿತರ ರಾಜರು ಹಂಪಿಯಲ್ಲಿ ರಾಮನಿಗೆ ನಾಲ್ಕು ಬೃಹತ್ ದೇವಾಲಯಗಳನ್ನು ನಿರ್ಮಿಸುತ್ತಾರೆ.
ಅವುಗಳೆಂದರೆ,
1. ವರದರಾಜಮ್ಮನ ಪುರದಲ್ಲಿರುವ ಪಟ್ಟಾಭಿರಾಮ ದೇವಾಲಯ.
2. ಕಮಲಾಪುರದ ಬಳಿಯ ಮಾಲ್ಯವಂತ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಶ್ರೀ ರಘುನಾಥ ದೇವಾಲಯ.
ಅಯೋಧ್ಯೆ ಭೂಮಿಪೂಜೆ: ಉಡುಪಿಯಲ್ಲಿ ಲಕ್ಷ ತುಳಸಿ ಅರ್ಚನೆ
3. ಹಂಪೆಯ ಅರಮನೆ ಮತ್ತು ರಾಜಾಂಗಣ ಪ್ರದೇಶದಲ್ಲಿ ನಿರ್ಮಿಸಿದ ಹಜಾರ ರಾಮಚಂದ್ರ ದೇವಾಲಯ.
4. ಹಂಪಿಯ ಚಕ್ರತೀರ್ಥದ ತಟದಲ್ಲಿರುವ ಕೋದಂಡರಾಮ ದೇವಾಲಯ.
ಮಾಲ್ಯವಂತ ರಘುನಾಥ ದೇವಾಲಯ
ಹಂಪಿಯಲ್ಲಿ ನಿತ್ಯಪೂಜೆಗೊಳ್ಳುತ್ತಿರುವ ಮಾಲ್ಯವಂತ ರಘುನಾಥ ದೇವಾಲಯದಲ್ಲಿ ರಾಮ ಪೂರ್ವಾಭಿಮುಖವಾಗಿ ಪದ್ಮಾಸನದಲ್ಲಿ ಕುಳಿತು ತನ್ನ ಹೃದಯದ ಮೇಲೆ ಬಲಗೈ ಇರಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿದ್ದಾನೆ. ಇಲ್ಲಿ ಶಸ್ತ್ರಗಳಿಲ್ಲದ ರಾಮನಾಗಿ ದರ್ಶನ ನೀಡುತ್ತಾನೆ. ಈ ಬಗೆಯ ರಾಮನ ಶಿಲ್ಪ ದೇಶದ ಎಲ್ಲೂ ಇರದಿರುವುದು ವಿಶೇಷ.
ಇಲ್ಲಿ ರಾಮ ಲಕ್ಷ್ಮಣರೊಡನೆ ಅಂಜಲಿ ಹಸ್ತನಾದ ಹನುಮಂತನ ವಿಗ್ರಹವಿದೆ. ಮುಂಚೆ ರಾಮನ ಜೊತೆಯಲ್ಲಿ ಸೀತೆಯ ವಿಗ್ರಹ ಇರಲಿಲ್ಲ. ಇತ್ತೀಚೆಗೆ ಸೀತೆಯ ವಿಗ್ರಹವನ್ನು ರಾಮನ ಪಕ್ಕದಲ್ಲಿ ಕೆತ್ತಲಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ಇಲ್ಲಿ ಹಗಲು-ರಾತ್ರಿ ನಿರಂತರವಾಗಿ ಶ್ರೀ ತುಳಸಿದಾಸ್ ವಿರಚಿತ ತುಳಸಿ ರಾಮಾಯಣದ ಪಠಣ ಜರುಗುತ್ತದೆ.
ಕೋದಂಡ ರಾಮ ದೇವಾಲಯ
ಚಕ್ರತೀರ್ಥ ತಟದಲ್ಲಿರುವ ಶ್ರೀ ಕೋದಂಡ ರಾಮ ದೇವರು ಸೀತೆ, ಲಕ್ಷ್ಮಣ ಮತ್ತು ಸುಗ್ರೀವನ ಸಹಿತವಾಗಿ ಉತ್ತರಾಭಿಮುಖವಾಗಿ ನಿಂತಿದ್ದಾನೆ. ರಾಮನ ಪರಿವಾರದಲ್ಲಿ ಸುಗ್ರೀವ ಇರುವುದು ವಿಶೇಷ. ಒಂಭತ್ತು ಅಡಿಗಳಿಗಿಂತಲೂ ಎತ್ತರವಾಗಿರುವ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ಭವ್ಯವಾಗಿವೆ.
ಈ ದೇವಾಲಯ ಋುಷ್ಯಮೂಕ, ಅಂಜನಾದ್ರಿ, ಮಾಲ್ಯವಂತ, ಗಂಧಮಾದನ ಹಾಗೂ ಮಾತಂಗ ಪರ್ವತಗಳ ನಡುವೆ ನೆಲೆಸಿದ್ದು ಇಲ್ಲಿ ಅನೇಕ ಉತ್ಸವಗಳು, ರಥೋತ್ಸವ, ಫಾಲ್ಗುಣ ಮಾಸದಲ್ಲಿ ವಿರೂಪಾಕ್ಷ ಮತ್ತು ಪಂಪಾಂಬಿಕೆಯರ ಫಲಪೂಜೆ ಎಂಬ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಹಾಗೂ ಚೈತ್ರ ಮಾಸದಲ್ಲಿ ವಿವಾಹ ಮಹೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತವೆ.
ಪಟ್ಟಾಭಿರಾಮ ದೇವಾಲಯ
ಪಟ್ಟಾಭಿರಾಮ ದೇವಾಲಯ ಹಂಪಿ ಪ್ರದೇಶದ ಅತಿ ದೊಡ್ಡ ದೇಗುಲ ಸಮುಚ್ಚಯವಾಗಿದ್ದು ಇಲ್ಲಿ ಬೃಹತ್ ಗೋಪುರ, ಯಾಳಿ ಶಿಲ್ಪಗಳ ಸಹಿತ, ವಿವಿಧ ವೈಷ್ಣವ ಕೆತ್ತನೆಗಳಿರುವ ಸುಂದರ 64 ಬೃಹತ್ ಸ್ತಂಭಗಳ ಮುಖ ಮಂಟಪಗಳಿಂದ ಕಂಗೊಳಿಸುತ್ತಿದೆ.
ಹಜಾರ ರಾಮಚಂದ್ರ ದೇವಾಲಯ
ಹಜಾರ ರಾಮಚಂದ್ರ ದೇವಾಲಯವು ವಿಶಿಷ್ಟಶಿಲ್ಪಕಲೆಗಳಿಂದ ಶೋಭಿಸುತ್ತಿದ್ದು, ದೇವಾಲಯದ ಹೊರ ಗೋಡೆಯ ಮೇಲೆ ರಾಮಾಯಣ ಮಹಾಕಾವ್ಯದ ಪ್ರಮುಖ ಘಟ್ಟಗಳನ್ನು ಸುಂದರವಾಗಿ ಕೆತ್ತಲಾಗಿದೆ. ಈ ದೇವಾಲಯಕ್ಕೆ ಮೂರು ಪ್ರದಕ್ಷಿಣೆ ಮಾಡಿದರೆ ಸಂತಾನವಿಲ್ಲದ ದಶರಥ ಪುತ್ರ ಕಾಮೇಷ್ಟಿಯಾಗ ನಡೆಸಿ ಅಗ್ನಿದೇವನಿಂದ ಪ್ರಸಾದ ಸ್ವೀಕರಿಸಿ ತನ್ನ ಮೂವರು ಪತ್ನಿಯರಾದ ಕೌಸಲ್ಯಾ, ಸುಮಿತ್ರೆ ಮತ್ತು ಕೈಕೆಯಿಯರಿಗೆ ನೀಡಿದ್ದು, ರಾಮ, ಲಕ್ಷ್ಮಣ, ಭರತ ಮತ್ತು ಶತೃಘ್ನರ ಜನನ, ಅವರ ವಿದ್ಯಾಭ್ಯಾಸ, ಸೀತಾ ಪರಿಣಯ, ವನವಾಸ, ಹಂಪಿಗೆ ಸೀತೆಯನ್ನು ಹುಡುಕುತ್ತಾ ಬಂದಿದ್ದು, ಸುಗ್ರೀವ, ಹನುಮಂತರ ಭೇಟಿ, ಲಂಕೆಗೆ ಹೋಗಿದ್ದು, ರಾವಣ ಸಂಹಾರ, ಸೀತೆಯನ್ನು ಮರಳಿ ಕರೆತಂದ ಘಟನೆಗಳನ್ನು ಸುಂದರವಾದ ಕೆತ್ತನೆಗಳ ಮೂಲಕ ತಿಳಿಸಲಾಗಿದೆ.
ಹಂಪಿ ಮತ್ತು ಹನುಮಂತ
ರಾಮಾಯಣದಲ್ಲಿ ಹನುಮಂತನ ಜನ್ಮ, ಅಧ್ಯಯನ, ಅವನ ಗುಣಗಳನ್ನು ತಿಳಿಸುವ ಸುಂದರ ಕಾಂಡ ಒಂದು ಮಹತ್ವದ ದಾಖಲೆ.
ಹನುಮಂತ ಜನಿಸಿದ್ದು ಕಿಷ್ಕಿಂದೆಯ ಅಂಜನಿ ಪರ್ವತದಲ್ಲಿ. ಅವನು ಋುಷ್ಯಮೂಕ ಪರ್ವತದ ಬಳಿ ವನವಾಸಿಗಳಾದ ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಭೇಟಿ ಮಾಡಿಮುಂದೆ ರಾಮ - ಸೀತೆಯರ ಪುನರ್‌ಮಿಲನದ ರೂವಾರಿ ಆಗುತ್ತಾನೆ.
ರಾಮನ ಜನ್ಮಸ್ಥಳ ಪತ್ತೆಗೆ ನೇಪಾಳ ಉತ್ಖನನ..!
ವಿಜಯನಗರ ಸಾಮ್ರಾಜ್ಯದ ಪ್ರಮುಖ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಗುರುಗಳಾಗಿದ್ದ ಶ್ರೀ ವ್ಯಾಸರಾಜರು ಚಕ್ರತೀರ್ಥದ ತಟದಲ್ಲಿರುವ ಬೆಟ್ಟದ ಮೇಲೆ ತಪಸ್ಸನ್ನಾಚರಿಸಿ ಹನುಮಂತನನ್ನು ಯಂತ್ರೋದ್ಧಾರಕನ ರೂಪದಲ್ಲಿ ಒಲಿಸಿಕೊಳ್ಳುತ್ತಾರೆ. ಮುಂದೆ ವ್ಯಾಸರಾಜರು ಒಂದು ವರ್ಷದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಒಟ್ಟು 736 ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾರೆ. ಹಂಪಿಯ ವಿವಿಧೆಡೆಗಳಲ್ಲಿ ನೂರಾರು ಹನುಮಂತನ ವಿಗ್ರಹಗಳನ್ನು ಕಾಣಬಹುದಾಗಿದೆ.
ಹೀಗೆ ಶ್ರೀರಾಮ ಮತ್ತು ಅವನ ಪರಿವಾರದ ಬಗ್ಗೆ ನಮಗೆ ತಿಳಿಸುವ ರಾಮಾಯಣಕ್ಕೂ ಕನ್ನಡ ನೆಲದ ಹಂಪಿಗೂ ಅವಿನಾಭಾವ ಸಂಬಂಧವಿದೆ.