Mysuru Dasara 2022: ಈ ಬಾರಿ 124 ಕಿ.ಮೀ. ದಸರಾ ದೀಪಾಲಂಕಾರ
ದಸರಾ ಮಹೋತ್ಸವದ ಪ್ರಮುಖದ ಆಕರ್ಷಣೆಯಾದ ದೀಪಾಲಂಕಾರ ಜನಾಕರ್ಷಿಸಿಸಲಿದ್ದು, 124 ಕಿ.ಮೀ ರಸ್ತೆಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಸರಾ ದೀಪಾಲಂಕಾರ ಸಮಿತಿ ಉಪ ವಿಶೇಷಾಧಿಕಾರಿಯಾದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದರು.
ಮೈಸೂರು (ಸೆ.16): ದಸರಾ ಮಹೋತ್ಸವದ ಪ್ರಮುಖದ ಆಕರ್ಷಣೆಯಾದ ದೀಪಾಲಂಕಾರ ಜನಾಕರ್ಷಿಸಿಸಲಿದ್ದು, 124 ಕಿ.ಮೀ ರಸ್ತೆಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಸರಾ ದೀಪಾಲಂಕಾರ ಸಮಿತಿ ಉಪ ವಿಶೇಷಾಧಿಕಾರಿಯಾದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ದಸರಾ ದೀಪಾಲಂಕಾರ ಸಿದ್ಧತೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 100 ಕಿ.ಮೀ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 124 ಕಿ.ಮೀ ರಸ್ತೆ ದೀಪಾಲಂಕಾರ ಮಾಡಲಾಗುತ್ತಿದೆ. ಸೂರ್ಯಸ್ತಮದಿಂದ ರಾತ್ರಿ 10.30 ರವರೆಗೆ ದೀಪಾಲಂಕಾರ ಇರಲಿದೆ. ಈಗಾಗಲೇ ಸಿದ್ಧತೆ ಆರಂಭವಾಗಿದೆ ಎಂದರು.
ಸಂಸತ್ ಭವನದ ಮಾದರಿ, ನಟ ಪುನೀತ್ ರಾಜಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಲಾಗುವುದು. ಎಲ್‌ಐಸಿ ವೃತ್ತದಲ್ಲಿ ರಾಷ್ಟ್ರ ಲಾಂಛನ, ರಾಷ್ಟ್ರ ಧ್ವಜ, ಪ್ರಾಣಿ, ಪಕ್ಷಿಗಳ ಮಾದರಿ ಇರಲಿದೆ. ಕನ್ನಡದ ಜ್ಞಾನಪೀಠ ಪುರಸ್ಕೃತರ ಪ್ರತಿಕೃತಿಗಳು, ಮೈಸೂರು ಮಹಾರಾಜರು, ಕೆಂಪುಕೋಟೆ ಮತ್ತು ಸುಭಾಷ್ ಚಂದ್ರ ಬೋಸ್ ಪ್ರತಿಕೃತಿ ಇರಲಿದೆ. 96 ವೃತ್ತಗಳಲ್ಲಿ ಅಲಂಕಾರ ಮಾಡಲಾಗುವುದು. 35 ಪ್ರಾಯೋಜಕರು ಬಂದಿದ್ದಾರೆ. ಮೈಸೂರು, ನಂಜನಗೂಡು ಮತ್ತು ಟಿ. ನರಸೀಪುರದ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ವಿವರಿಸಿದರು.
Mysuru Dasara 2022: ಕುಶಾಲತೋಪು ಶಬ್ದಕ್ಕೆ ಹೊಂದಿಕೊಳ್ಳುತ್ತಿರುವ ಗಜಪಡೆ
ಜಂಬೂಸವಾರಿ ಮೆರವಣಿಗೆ ಸಂಜೆ 5.30ಕ್ಕೆ ಆರಂಭವಾಗಲಿದೆ. ಗಜಪಡೆ ದೀಪದ ಬೆಳಕಿನಲ್ಲಿ ಸಂಚರಿಸಬೇಕಿದೆ. ಅಂಬಾರಿ ಹೊತ್ತ ಆನೆ 16 ಅಡಿ ಇರುತ್ತದೆ. ಹೀಗಾಗಿ ಮೆರವಣಿಗೆ ಸಾಗುವ ಮಾರ್ಗದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡುತ್ತೇವೆ. ದೀಪಾಲಂಕರದ ಬೆಳಕಿನಲ್ಲಿ ಗಜಪಡೆಗೆ ತಾಲೀಮು ನೀಡಬೇಕಿರುವುದರಿಂದ ಮೂರು ದಿನ ಮುಂಚಿತವಾಗಿಯೇ ರಾಜಮಾರ್ಗದಲ್ಲಿ ದೀಪಾಲಂಕಾರ ಆರಂಭಗೊಳ್ಳಲಿದೆ ಎಂದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 2019ರಲ್ಲಿ ಮಹಿಷಾ ಮರ್ದಿನಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 3ಡಿ ವಿಡಿಯೋ ಮೂಲಕ ಮಹಿಷಾ ಮರ್ದಿನಿ ಪ್ರದರ್ಶನಗೊಳ್ಳಲಿದೆ ಎಂದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮೊದಲಾದವರು ಇದ್ದರು.
ವಿಮಾನ ನಿಲ್ದಾಣದಲ್ಲಿ ನಾಲ್ವಡಿ ಪ್ರತಿಕೃತಿ: ಮೈಸೂರು ವಿಮಾನ ನಿಲ್ದಾಣದಿಂದ ದೀಪಾಲಂಕಾರ ಮಾಡಲಾಗುತ್ತಿದೆ. ವಿಮಾನ ನಿಲ್ದಾಣದ ದ್ವಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ನಿರ್ಮಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ ಎಂದು ಹೆಸರು ಬರೆಯಬೇಕು. ಬನ್ನೂರು ಮತ್ತು ಎಚ್.ಡಿ. ಕೋಟೆ ರಸ್ತೆಗಳಲ್ಲೂ ದೀಪಾಲಂಕಾರ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಚಾಮುಂಡಿಬೆಟ್ಟದ ಮಳಿಗೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಪ್ರಥಮ ಬಾರಿಗೆ ದಸರಾ ಉದ್ಘಾಟಿಸಲು ರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ.
ಹೀಗಾಗಿ, ಚಾಮುಂಡಿಬೆಟ್ಟದಲ್ಲಿ ಯಾವುದೇ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ದಸರಾಗೆ 11 ದಿನಗಳು ಬಾಕಿ ಇದೆ. ಸತತವಾಗಿ ಬರುತ್ತಿರುವ ಮಳೆಯಿಂದಲೂ ಅಡಚಣೆಯಾಗಿದೆ. ಶಾಸಕರು, ಸಚಿವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಈಗಷ್ಟೇ ಸಿದ್ಧತೆಗಳು ಬಿರುಸು ಪಡೆದಿವೆ. ಈ ಬಾರಿಯ ದೀಪಾಲಂಕಾರ ವೈಭವದಿಂದ ಇರಲಿದೆ. ಮೈಸೂರು ಹೊರ ವರ್ತುಲ ರಸ್ತೆಯಲ್ಲಿ ಬೀದಿ ದೀಪ ಅಳವಡಿಕೆ ನಮ್ಮ ಆದ್ಯತೆಯಾಗಿದೆ. ಹೀಗಾಗಿ, ಕಾಮಗಾರಿಗೆ ಚಾಲನೆ ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಕೆಲಸ ಆರಂಭವಾಗಬೇಕು. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ವರ್ಷಾಂತ್ಯಕ್ಕೆ ವರ್ತುಲ ರಸ್ತೆ ಕತ್ತಲೆಯಿಂದ ಮುಕ್ತವಾಗಲಿದೆ ಎಂದರು.
Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ
124 ಕಿ.ಮೀ ದೀಪಾಲಂಕಾರ ಹೆಚ್ಚಿಸಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ವಿದ್ಯುತ ಕೊರತೆ ಇಲ್ಲ. ಆದರೆ ವಿದ್ಯುತ್ ವೆಚ್ಚ ಹೆಚ್ಚಾಗಲಿದೆ. ದೀಪಾಲಂಕಾರದ ವೆಚ್ಚವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು.
- ಜಯವಿಭವಸ್ವಾಮಿ, ಸೆಸ್ಕ್ ಎಂಡಿ