Asianet Suvarna News Asianet Suvarna News

ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ!

ತಿರುಪತಿ ತಿರುಮಲ ದೇವಸ್ಥಾನದ ವೆಂಕಟೇಶ್ವರ ಸನ್ನಿಧಿಗೆ ಚೆನ್ನೈನ ಮುಸ್ಲಿಂ ದಂಪತಿ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 

Muslim Couple From Chennai Donate Rs 1.02 Crore To Tirupati Temple skr
Author
First Published Sep 21, 2022, 10:02 AM IST

ಅಪರೂಪದ ವಿದ್ಯಮಾನದಲ್ಲಿ ಮುಸ್ಲಿಂ ದಂಪತಿಯು ಜಗತ್ಪ್ರಸಿದ್ಧ ತಿರುಪತಿ ತಿರುಮಲ ಕ್ಷೇತ್ರಕ್ಕೆ 1.02 ಕೋಟಿ ರೂಪಾಯಿಗಳ ದಾನ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. 
ಚೆನ್ನೈ ಮೂಲದ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ದಂಪತಿಯೇ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಈ ಪ್ರಮಾಣದ ದಾನ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವವರು. 
ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ತಿರುಪತಿ ಕ್ಷೇತ್ರದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಈ ದಂಪತಿಯು ಸೋಮವಾರ ತಮ್ಮ ಕೊಡುಗೆ ನೀಡಿದ್ದಾರೆ. ದೇವಸ್ಥಾನದ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ(Tirumala Tirupati Devasthanam) ಇಒ ಎವಿ ಧರ್ಮಾ ರೆಡ್ಡಿ ಅವರಿಗೆ ಡಿಡಿ ಹಸ್ತಾಂತರಿಸಿದ್ದಾರೆ. ಇದರಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ರೂ.87 ಲಕ್ಷ ಮೌಲ್ಯದ ಪೀಠೋಪಕರಣಗಳು ಮತ್ತು ಪಾತ್ರೆಗಳು, ಎಸ್‌ವಿ ಅನ್ನಪ್ರಸಾದ ಟ್ರಸ್ಟ್‌ಗೆ ರೂ.15 ಲಕ್ಷದ ಡಿಡಿಯನ್ನು ಒಳಗೊಂಡಿದೆ. 

ಬಾಲಾಜಿ ದೇವಸ್ಥಾನ ಎಂದೂ ಕರೆಯಲ್ಪಡುವ ದೇವಸ್ಥಾನಕ್ಕೆ ಅಬ್ದುಲ್ ಘನಿ ಎಂಬ ಉದ್ಯಮಿ ದೇಣಿಗೆ ನೀಡಿರುವುದು ಇದೇ ಮೊದಲೇನಲ್ಲ. 2020ರಲ್ಲಿ, ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ದೇಣಿಗೆ ನೀಡಿದ್ದರು. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತರಕಾರಿ ಸಂರಕ್ಷಿಸಿ ಸಾಗಿಸಲು ರೂ.35 ಲಕ್ಷದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.

Panchanga: ಇಂದು ಏಕಾದಶಿ, ವಿಷ್ಣು ಸಹಸ್ರನಾಮ ಪಠಿಸಿ..

ತಿರುಪತಿ ವೆಂಕಟೇಶ್ವರ(Tirupati Venkateshwara)ನ ಮೇಲೆ ನಂಬಿಕೆಯನ್ನು ಬೆಳೆಸಿಕೊಂಡಿರುವ ಈ ದಂಪತಿ, ದೇವಾಲಯದ ಸೇವಾ ಕಾರ್ಯಗಳನ್ನು ಮೆಚ್ಚಿ ಈ ಕೊಡುಗೆ ನೀಡಿದ್ದಾರೆ ಎನ್ನಲಾಗಿದೆ. 

ಅಂಬಾನಿಯಿಂದಲೂ ಬೃಹತ್ ಕೊಡುಗೆ
ಕಳೆದ ಶುಕ್ರವಾರವಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ(Mukesh Ambani) ಅವರು ದೇವಾಲಯದ ಅರ್ಚಕರು ನಡೆಸಿದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು, ಬಳಿಕ ತಿರುಮಲ ದೇವಸ್ಥಾನಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದರು. 

ವೆಂಕಟೇಶ್ವರನ ಕಟ್ಟಾ ಭಕ್ತರಾಗಿರುವ ಅಂಬಾನಿ ಅವರು ಇದಕ್ಕೂ ಮೊದಲು, 2010 ರಲ್ಲಿ ತಿರುಮಲ ದೇವಸ್ಥಾನಕ್ಕೆ 5 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದರು. ಆ ಸಮಯದಲ್ಲಿ, ಗರ್ಭಗುಡಿಗಾಗಿ ನಡೆಯುತ್ತಿದ್ದ 100 ಕೋಟಿ ರೂಪಾಯಿಗಳ ಚಿನ್ನದ ಲೇಪನ ಯೋಜನೆಯನ್ನು ಪೂರೈಸಲು ದೇಣಿಗೆ ನೀಡಲಾಗಿತ್ತು.

Navaratriಯಲ್ಲಿ ಅಖಂಡ ಜ್ಯೋತಿಯನ್ನು ಏಕೆ ಬೆಳಗಿಸಲಾಗುತ್ತದೆ?

ದಿನಕ್ಕೆಷ್ಟು ದೇಣಿಗೆ?
ವಿಶ್ವದ ಅತಿ ಶ್ರೀಮಂತ ದೇವಾಲಯಗಳಲ್ಲೊಂದಾಗಿರುವ, 6ನೇ ಶತಮಾನದಷ್ಟು ಪುರಾತನವಾದ ತಿರುಪತಿ ದೇವಾಲಯವು ಪ್ರತಿ ದಿನ ಸರಾಸರಿ 1- 2 ಕೋಟಿ ಮೌಲ್ಯದ ಕಾಣಿಕೆ, ದೇಣಿಗೆ ಹಣ ಪಡೆಯುತ್ತದೆ. ಈ ಕಾಣಿಕೆ ಹಣವು ತಿಂಗಳಿಗೆ 100 ಕೋಟಿಯನ್ನು ಮೀರುತ್ತದೆ. ದಿನಕ್ಕೆ ಸರಾಸರಿ 50,000ದಿಂದ 1 ಲಕ್ಷ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿ ವಿಶೇಷ ದಿನಗಳಲ್ಲಿ ಈ ಸಂಖ್ಯೆ 5 ಲಕ್ಷವನ್ನು ಮೀರುತ್ತದೆ. ಅಂದ ಹಾಗೆ ಪ್ರತಿ ದಿನ 80,000 ಜನರಿಗೆ ಎರಡು ಬಾರಿ ಇಲ್ಲಿ ಅನ್ನದಾನ ಕಾರ್ಯ ನಡೆಯುತ್ತದೆ. ಅಂದರೆ ಸುಮಾರು ಒಂದೂವರೆ ಲಕ್ಷ ಜನರು ಇಲ್ಲಿ ಪ್ರತಿದಿನ ಪ್ರಸಾದ ಸೇವಿಸುತ್ತಾರೆ.

ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios