Asianet Suvarna News Asianet Suvarna News

ಪುರುಷ ಭದ್ರಕೋಟೆಯನ್ನು ಬೇಧಿಸಿ ಪೌರೋಹಿತ್ಯಕ್ಕೆ ಕಾಲಿಟ್ಟ ತಾಯಿ ಮಗಳು!

ಕೇರಳದಲ್ಲಿ ಪುರೋಹಿತಶಾಹಿ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಶತಮಾನಗಳ ಪುರುಷ ಪ್ರಾಬಲ್ಯವನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ ಈ ತಾಯಿ ಮಗಳು. ಮಹಿಳೆಯರದಲ್ಲ ಎನಿಸಿಕೊಂಡ ಪೌರೋಹಿತ್ಯ ಕ್ಷೇತ್ರದಲ್ಲಿ ಈ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ. 

mother and daughter have become priests in Keralas ancient temples skr
Author
First Published May 12, 2023, 12:24 PM IST

ಹಿಂದೂ ಪುರೋಹಿತರಾಗಲಿ, ಮುಸ್ಲಿಂ ಧರ್ಮಗುರುಗಳೇ ಆಗಲಿ, ಕ್ರಿಶ್ಚಿಯನ್ ಪಾದ್ರಿಗಳಾಗಲಿ- ಸಾಮಾನ್ಯವಾಗಿ ಪುರುಷರದೇ ಈ ಜಗತ್ತು. ಈ ಸ್ಥಾನಗಳಲ್ಲಿ ಮಹಿಳೆಯರನ್ನು ಸಾಮಾನ್ಯವಾಗಿ ನೋಡಿದವರಿಲ್ಲ. ಶತಶತಮಾನಗಳಿಂದಲೂ ದೇವಸ್ಥಾನಗಳಲ್ಲಿ ಅರ್ಚಕ ಸ್ಥಾನವನ್ನು ಪುರುಷರೇ ನಿಭಾಯಿಸುತ್ತಾ ಬಂದಿದ್ದಾರೆ. ಆದರೀಗ ಈ ಜಗತ್ತಿಗೆ ಇಬ್ಬರು ಮಹಿಳಾ ಅರ್ಚಕರ ಎಂಟ್ರಿಯಾಗಿದೆ. ಅವರು ಪೌರೋಹಿತ್ಯ ಮತ್ತು ತಾಂತ್ರಿಕ ವಿದ್ಯೆ ಎರಡೂ ಕಲಿತು ಕೇರಳದ ಪುರಾತನ ದೇವಾಲಯಗಳಲ್ಲಿ ಮುಖ್ಯ ಅರ್ಚಕರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಹೌದು, 47 ವರ್ಷದ ಅರ್ಚನಾ ಕುಮಾರಿ ಮತ್ತು ಅವರ ಪುತ್ರಿ 24 ವರ್ಷದ ಜ್ಯೋತ್ಸ್ನಾ ಪದ್ಮನಾಭನ್ ಕೇರಳದ ಇರಿಂಜಲಗುಡದ ಕತ್ತೂರಿನಲ್ಲಿ ಥರನೆಲ್ಲೂರು ತೆಕಿಣಿಯಾಡತು ಮನವಿನ ಸುತ್ತಮುತ್ತದ ದೇವಾಲಯಗಳಲ್ಲಿ ಪೌರೋಹಿತ್ಯ ನಡೆಸುತ್ತಿದ್ದಾರೆ. 

ಕಂಚಿ ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯಗಳಿಂದ ವೇದಾಂತ ಮತ್ತು ಸಾಹಿತ್ಯದಲ್ಲಿ ಡಬಲ್ ಡಿಗ್ರಿ ಪಡೆದಿರುವ ಜ್ಯೋತ್ಸ್ನಾಗೆ ಬಾಲ್ಯದಿಂದಲೂ ತನ್ನ ಪೂರ್ವಜರ ದೇವಸ್ಥಾನದಲ್ಲಿ ಪೂಜೆಗಳನ್ನು ನಡೆಸುವ ಹಂಬಲ. ಇದು ಹೆಂಗಸರು ಸಾಮಾನ್ಯವಾಗಿ ಮಾಡುವ ಕೆಲಸವಲ್ಲ ಎಂದು ತಿಳಿಯುವ ಮೊದಲೇ ಅವರು ಅರ್ಚಕರಾಗುವ ಕನಸು ಕಂಡಿದ್ದರು. ಇದಕ್ಕೆ ಸಾತ್ ನೀಡಿದ್ದು ಅವರ ತಂದೆ ಪದ್ಮನಾಭನ್ ನಂಬೂತಿಪಾಡ್. 

'ನನ್ನ ತಂದೆ ಪದ್ಮನಾಭನ್ ಅವರು ಪೂಜೆ ಮತ್ತು ತಾಂತ್ರಿಕ ವಿಧಿಗಳನ್ನು ನಡೆಸುವುದನ್ನು ನೋಡಿ ಬೆಳೆದಿದ್ದೇನೆ. ಹಾಗಾಗಿ ಚಿಕ್ಕಂದಿನಿಂದಲೂ ಇದನ್ನು ಕಲಿಯುವ ಕನಸು ನನ್ನ ಮನಸ್ಸಿನಲ್ಲಿ ಚಿಗುರೊಡೆದಿದೆ. ನಾನು ನನ್ನ ಆಸೆಯನ್ನು ನನ್ನ ತಂದೆಗೆ ಹೇಳಿದಾಗ, ಅವರು ವಿರೋಧಿಸಲಿಲ್ಲ. ಅದು ನಿಜವೆಂದು ಅವರು ಭಾವಿಸಿದ್ದರಿಂದ, ಅವರು ಎಲ್ಲಾ ಬೆಂಬಲವನ್ನು ನೀಡಿದರು' ಎಂದು ಜ್ಯೋತ್ಸ್ನಾ ಪಿಟಿಐಗೆ ತಿಳಿಸಿದ್ದಾರೆ.

Baba Vanga Predictions 2023: ಮೂರು ಭವಿಷ್ಯವಾಣಿ ಸಾಬೀತು, ಭೀಕರವಾಗಿವೆ ಉಳಿದ ಭವಿಷ್ಯ

ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಜ್ಯೋತ್ಸ್ನಾ ಮತ್ತು ಅರ್ಚನಾ ಅವರು ತಮ್ಮ ಶುದ್ಧ ಭಕ್ತಿಯಿಂದ ಪುರೋಹಿತಶಾಹಿ ಜಗತ್ತನ್ನು ಪ್ರವೇಶಿಸಿದ್ದೇವೆಯೇ ಹೊರತು, ಸಮಾಜದಲ್ಲಿ ಯಾವುದೇ ಅಂಶವನ್ನು ಸಾಬೀತುಪಡಿಸಲು ಅಲ್ಲ ಎನ್ನುತ್ತಾರೆ. 

ಬಾಲ್ಯದ ಬಯಕೆ
ತಮ್ಮ ಏಳನೇ ವರ್ಷದಿಂದ ಜ್ಯೋತ್ಸ್ನಾ ಅವರು ಮಂತ್ರ ತಂತ್ರಗಳನ್ನು ಕಲಿಯಲು ಪ್ರಾರಂಭಿಸಿದರು. ಅವರ ಕುಟುಂಬದ ಹಿರಿಯ ಬ್ರಾಹ್ಮಣ ಪುರೋಹಿತರು ತಂತ್ರ ಪ್ರಪಂಚಕ್ಕೆ ದೀಕ್ಷೆ ನೀಡಿದರು. ಜ್ಯೋತ್ಸ್ನಾ ಅವರು ಭದ್ರಕಾಳಿ ದೇವಿಯ ತಾಂತ್ರಿಕ ಪ್ರತಿಷ್ಠಾಪನೆಯನ್ನು ಅವರ ತಂದೆ ಪ್ರಧಾನ ಅರ್ಚಕರಾಗಿರುವ ತಮ್ಮ ಕುಟುಂಬದ ಪೂರ್ವಜರ ಕ್ಷೇತ್ರವಾದ ಪೈಂಕನ್ನಿಕಾವು ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆಸಿದ್ದಾರೆ.ಅಷ್ಟೇ ಅಲ್ಲ, ಕಳೆದ ಹಲವಾರು ವರ್ಷಗಳಿಂದ ಇತರ ದೇವಾಲಯಗಳಲ್ಲಿ ತಾಂತ್ರಿಕ ಆಚರಣೆಗಳು, ಪ್ರತಿಷ್ಠಾಪನೆಗಳು ಮತ್ತು ವಿಗ್ರಹಗಳ ಮರುಸ್ಥಾಪನೆಗಳನ್ನು ನಡೆಸುತ್ತಿದ್ದಾರೆ. 

'ಬೇರೆ ದೇವಸ್ಥಾನಗಳಲ್ಲಿ ಪೂಜೆಗಳನ್ನು ಅಪ್ಪ ಕೇಳಿದಾಗಲೆಲ್ಲ ಮಾಡುತ್ತಿದ್ದೇನೆ. ಕೆಲವೊಮ್ಮೆ, ಅವರು ಅಲ್ಲಿಗೆ ಹೋಗಲು ಸಾಧ್ಯವಿಲ್ಲದಿದ್ದಾಗ ಧಾರ್ಮಿಕ ಕ್ರಿಯೆಗಳನ್ನು ಮಾಡಲು ನನಗೆ ನಿರ್ದೇಶಿಸುತ್ತಾರೆ,' ಎನ್ನುತ್ತಾರೆ ಜ್ಯೋತ್ನ್ಸಾ.

ಪುರೋಹಿತಶಾಹಿಯಲ್ಲಿ ಮಹಿಳೆಯರ ಪ್ರವೇಶದ ವಿರುದ್ಧ ಪಿತೃಪ್ರಧಾನ ಬ್ರಾಹ್ಮಣ ಸಮುದಾಯದಿಂದ ಯಾವುದೇ ಆಕ್ಷೇಪಣೆ ಇವರಿಗೆ ಬಂದಿಲ್ಲವಂತೆ. ಸಾಂಪ್ರದಾಯಿಕ ಸಮುದಾಯದ ಕುಟುಂಬಗಳಲ್ಲಿ ಮಹಿಳೆಯರು ‘ತೇವರಂ’, ‘ನೇದ್ಯಂ’ ಮತ್ತು ಇತರ ಆಚರಣೆಗಳನ್ನು ಮಾಡುತ್ತಾರೆ. ದೇವಸ್ಥಾನದಲ್ಲಿ ಪೂಜೆ ಮಾಡುವುದಷ್ಟೇ ಹೊಸ ವಿಷಯವಾಗಿದೆ. ಇಷ್ಟಕ್ಕೂ ಯಾವುದೇ ಪುರಾತನ ಗ್ರಂಥಗಳು ಮಹಿಳೆಯರು ಪೂಜೆ ಮಾಡಬಾರದು, ತಂತ್ರಮಂತ್ರ ಆಚರಿಸಬಾರದು ಎಂದು ಎಲ್ಲೂ ಹೇಳಿಲ್ಲ ಎನ್ನುವುದು ಅವರ ವ್ಯಾಖ್ಯಾನ. 

ಮಗಳನ್ನು ನೋಡಿ ತಾಯಿಯ ಕಲಿಕೆ
ಮಗಳು ಪೂಜೆ ಮತ್ತು ತಾಂತ್ರಿಕ ಪಾಠಗಳನ್ನು ಕಲಿಯಲು ಪ್ರಾರಂಭಿಸಿದಾಗ, ಇದುವರೆಗೆ ಗೃಹಿಣಿಯಾಗಿದ್ದ ತಾಯಿ ಅರ್ಚನಾ ಕುಮಾರಿ ಕೂಡ ಅದನ್ನು ಅನುಸರಿಸಲು ಬಯಸಿದರು. ಇದಕ್ಕೆ ಕೂಡಾ ಅವರ ಪತಿ ಸಂಪೂರ್ಣ ಬೆಂಬಲ ನೀಡಿದರಂತೆ. ಇದೀಗ ಅವರ ಕುಟುಂಬದ ದೇವಸ್ಥಾನದಲ್ಲಿ ದೈನಂದಿನ ಪೂಜೆಗಳನ್ನು ಅವರು ನಡೆಸುತ್ತಾರೆ. 

ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ: ದೇಗುಲದ ವಿಡಿಯೋ ವೈರಲ್‌

'ಜ್ಯೋತ್ಸ್ನಾ ತಾನು ಕಲಿತ ಪಾಠವನ್ನು ಮನೆಯಲ್ಲಿ ವಿವರವಾಗಿ ಚರ್ಚಿಸುತ್ತಿದ್ದಳು. ಅವಳು ಪಠಿಸುತ್ತಿದ್ದ ಮಂತ್ರಗಳನ್ನು ಕೇಳುತ್ತಾ ಮತ್ತು ತಾಂತ್ರಿಕ ಆಚರಣೆಗಳ ಮುದ್ರೆಗಳನ್ನು ನೋಡುತ್ತಾ, ತಿಳಿದೋ ಅಥವಾ ತಿಳಿಯದೆಯೋ ನಾನು ಮೂಲಭೂತ ಅಂಶಗಳನ್ನು ಅಳವಡಿಸಿಕೊಂಡಿದ್ದೇನೆ. ನನ್ನ ಮನಸ್ಸಿನಲ್ಲಿ ಇನ್ನಷ್ಟು ಕಲಿಯುವ ತೀವ್ರ ಬಯಕೆ ಮೊಳಕೆಯೊಡೆದಿದೆ,' ಎಂದು ತಾಯಿ ಅರ್ಚನಾ ಪಿಟಿಐಗೆ ತಿಳಿಸಿದ್ದಾರೆ.

ಗೃಹಿಣಿ ಹಾಗೂ ಪುರೋಹಿತರ ಕರ್ತವ್ಯಗಳನ್ನು ಸಮತೋಲನದಲ್ಲಿಡಲು ಸಮಯವನ್ನು ನಿರ್ವಹಿಸುವುದು ಕಷ್ಟಕರವಾಗಿದ್ದರೂ, ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಸಂತೋಷ ಮತ್ತು ತೃಪ್ತಿ ಸಿಗುತ್ತಿದೆ ಎನ್ನುತ್ತಾರೆ ಅರ್ಚನಾ. ಮುಟ್ಟಿನ ಸಮಯದಲ್ಲಿ, ಈ ಇಬ್ಬರೂ ಪುರೋಹಿತರ ಕರ್ತವ್ಯಗಳಿಂದ ದೂರವಿರುತ್ತಾರೆ.

ಒಟ್ಟಿನಲ್ಲಿ ಕೇರಳದಲ್ಲಿ ಪುರೋಹಿತಶಾಹಿ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಶತ ಶತಮಾನಗಳ ಪುರುಷ ಪ್ರಾಬಲ್ಯದ ಗಾಜಿನ ಗುರಾಣಿಗಳನ್ನು ಒಡೆದು ಮೌನವಾಗಿ ಇತಿಹಾಸ ಸೃಷ್ಟಿಸಿದ್ದಾರೆ ಈ ಇಬ್ಬರು ಮಹಿಳೆಯರು. 

Follow Us:
Download App:
  • android
  • ios