Asianet Suvarna News Asianet Suvarna News

ಜಂಬೂ ಸವಾರಿ ಭದ್ರತೆಗೆ 5000 ಪೊಲೀಸರ ನಿಯೋಜನೆ: ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್!

ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಇಂದು ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಜಯ ದಶಮಿಗೆ 5000 ಪೊಲೀಸರನ್ನು ನಿಯೋಜಿಸಲಾಗಿದೆ. 

more than 5000 police force will take care of mysuru jambusavari says police commissioner chandragupta gvd
Author
First Published Oct 5, 2022, 8:29 AM IST

ಮೈಸೂರು (ಅ.05): ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಇಂದು ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಜಯ ದಶಮಿಗೆ 5000 ಪೊಲೀಸರನ್ನು ನಿಯೋಜಿಸಲಾಗಿದೆ. ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ ಕಲ್ಪಿಸಲಾಗಿದ್ದು, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. 

ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1255 ಸಿಬ್ಬಂದಿ, ಹೊರ ಜಿಲ್ಲೆಯಿಂದ 3580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿದಂತೆ ಒಟ್ಟು 5485 ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮೆರಾಗಳು, ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 59 ಸಿಸಿ ಕ್ಯಾಮೆರಾ ಸೇರಿದಂತೆ ಹೆಚ್ಚುವರಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆಯುವ ಜಾಗದಲ್ಲಿ 110  ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇನ್ನು ಅನುಚಿತವಾಗಿ ವರ್ತಿಸುವವರ ವಿರುದ್ಧ ಸಿಸಿ ಕ್ಯಾಮೆರಾಗಳ ಜತೆಗೆ ಮೊಬೈಲ್‌ ಕಮಾಂಡಿಂಗ್‌ ವಾಹನದ ಮೂಲಕ ಹದ್ದಿನ ಕಣ್ಣಿಡಲಾಗಿದೆ.

ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ: ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ

ಮೊಬೈಲ್‌ ಕಮಾಂಡ್‌ ವಾಹನ ಬಳಕೆ: ದಸರಾದಲ್ಲಿ ಮೊಬೈಲ್‌ ಕಮಾಂಡ್‌ ಸೆಂಟರ್‌ನ್ನು ಬಳಲಾಗುತ್ತದೆ. ಈ ಬಸ್‌ನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿವೋರ್ನ್‌ ಕ್ಯಾಮರಾಗಳು, ಲಾಂಗ್‌ ಡಿಸ್ಟೆನ್ಸ್‌ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇರುತ್ತದೆ. ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿಪೋರ್ನ್‌ ಕ್ಯಾಮರಾ ವಿತರಿಸಲಾಗುತ್ತದೆ. ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್‌ ಕ್ಯಾಮರಾಗಳಿಂದ ಕಣ್ಗಾವಲು ನಡೆಸಲಾಗುವುದು. ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸ್‌ ಸಹಾಯ ನೀಡಲು ನಗರದ 8 ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. 

ಎರಡು ವರ್ಷಗಳ ನಂತರ ಅರಮನೆಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ಅರಮನೆಯಲ್ಲಿ ಜಟ್ಟಿ ಕೆಟ್ಟಿ ಕಾಳಗಕ್ಕೆ ಸಿದ್ದತೆ ಮಾಡಲಾಗಿದೆ. ಈಗಾಗಲೇ ಕೆಮ್ಮಣ್ಣು, ಮಟ್ಟಿಯನ್ನು ತಂದು ಸಿಬ್ಬಂದಿ ಸಿದ್ದಪಡಿಸಿದ್ದು, ಉಸ್ತಾದ್ ಮಂಜು ಜೆಟ್ಟಿ ಅವರ ಸಮ್ಮುಖದಲ್ಲಿ ನಡೆದ ಜೊತೆ ಕಟ್ಟುವಿಕೆ ಕಾರ್ಯ ನಡೆಯುತ್ತಿದೆ. ಈ ಬಾರಿ ನಾಲ್ಕು ಜಿಲ್ಲೆಗಳಿಂದ ತಲಾ ಒಬ್ಬರು ಜೆಟ್ಟಿಗಳು ಭಾಗಿಯಾಗಲಿದ್ದು, ಸಾಂಪ್ರದಾಯಿಕವಾಗಿ ನಡೆಯುವ ಜೆಟ್ಟಿಗಳ ವಜ್ರ ಮುಷ್ಟಿ ಕಾಳಗ ನಡೆಯಲಿದೆ. ಮೈಸೂರಿನ ವಿಷ್ಣು ಜೆಟ್ಟಿ, ಬೆಂಗಳೂರಿನ ತಾರಾನಾಥ್ ಜೆಟ್ಟಿ, ಚೆನ್ನಪಟ್ಟಣದ ಮನೋಜ್ ಜೆಟ್ಟಿ ಹಾಗೂ ಚಾಮರಾಜನಗರ ಜಿಲ್ಲೆಯ ಅಚ್ಯುತ್ ಜೆಟ್ಟಿ ಭಾಗಿಯಾಗಲಿದ್ದು, ಮೈಸೂರು-ಬೆಂಗಳೂರು ಹಾಗೂ ಚಾಮರಾಜನಗರ-ಚೆನ್ನಪಟ್ಟಣ ಜೆಟ್ಟಿಗಳ ನಡುವೆ ಕಾಳಗ ನಡೆಯಲಿದೆ. ಈ ಸೆಣಸಾಟದಲ್ಲಿ ಜೆಟ್ಟಿಗಳು ರಕ್ತ ಸುರಿಸಿ ನಾಡಿಗೆ ಶ್ರೇಯಸ್ಸು ಬಯಸುವ ವಿಶಿಷ್ಟ ಪದ್ದತಿಯನ್ನು ಆಚರಿಸಲಾಗುತ್ತದೆ.

Mysuru Dasara 2022: ಅಂಬಾರಿಗೆ 2ನೇ ಬಾರಿ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ!

ಇನ್ನು ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ರಾಜವಂಶಸ್ಥರ ವಿಜಯದಶಮಿ ವಿಶಿಷ್ಟ ಕಾರ್ಯಕ್ರಮದ ಆಚರಣೆ ಸಂಪ್ರದಾಯದಂತೆ ಸಾಗುತ್ತಿದೆ. ಇಂದು ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವ  ಜಟ್ಟಿ ಕಾಳಗ ನಡೆಯಲಿದ್ದು, ಮೈಸೂರು ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಚಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಇನ್ನು ಈ ಕಾಳಗದಲ್ಲಿ ತಲೆಯಲ್ಲಿ ಸಾಂಕೇತಿಕವಾಗಿ ರಕ್ತ ಚಿಮ್ಮುವ ತನಕ ಜಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಈ ಕಾಳಗದಲ್ಲಿ ವಿಜೇತರಾದವರಿಗೆ ಯದುವೀರ್ ಭಕ್ಷಿಸ್ ನೀಡಲಿದ್ದು, ಅನಾದಿ ಕಾಲದಿಂದಲೂ ರಾಜ ಪರಂಪರೆ ಇದನ್ನು ನಡೆಸಿಕೊಂಡು ಬಂದಿದೆ. ಇನ್ನು ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ತೆರಳಲಿದ್ದಾರೆ. 

Follow Us:
Download App:
  • android
  • ios