ನಾಳೆಯಿಂದ 10 ದಿನ ಮಂಗ್ಳೂರು KSRTC ದೀಪಾವಳಿ ಪ್ಯಾಕೆಜ್ ಟೂರ್!
- 21ರಿಂದ 10 ದಿನಗಳ ಕಾಲ ಮಂಗ್ಳೂರು ಕೆಎಸ್ಸಾರ್ಟಿ ದೀಪಾವಳಿ ಪ್ಯಾಕೆಜ್ ಟೂರ್
- ಮಂಗಳೂರು-ಮಡಿಕೇರಿ, ಮಂಗಳೂರು-ಶೃಂಗೇರಿ, ಉಡುಪಿ-ಹೊರನಾಡು ಪ್ರವಾಸ
ಮಂಗಳೂರು (ಅ.20) : ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ ದಸರಾ ಮಾದರಿಯಲ್ಲಿ ದೀಪಾವಳಿಗೆ ಅ.21ರಿಂದ 31ರ ವರೆಗೆ 10 ದಿನಗಳ ಕಾಲ 10 ಧಾರ್ಮಿಕ ಕೇಂದ್ರಗಳಿಗೆ ಪ್ಯಾಕೇಜ್ ಪ್ರವಾಸ ಹಮ್ಮಿಕೊಂಡಿದೆ. ಮಂಗಳೂರು, ಉಡುಪಿ ಹಾಗೂ ಕುಂದಾಪುರ ನಿಲ್ದಾಣದಿಂದ ಪ್ರತ್ಯೇಕವಾಗಿ ಪ್ಯಾಕೇಜ್ ದರ್ಶಿನಿ ಆಯೋಜಿಸಲಾಗಿದೆ. ಇದು ಒಂದು ದಿನದ ಪ್ಯಾಕೆಜ್ ಪ್ರವಾಸವಾಗಿದ್ದು, ಪ್ರವಾಸಿಗರಿಗೆ ಕೈಗೆಟಕುವ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಸಾರಿಗೆಯಲ್ಲಿ ಪ್ರವಾಸ ಏರ್ಪಡಿಸಲಾಗಿದ್ದು, ಚಾಲಕನಲ್ಲದೆ, ಓರ್ವ ಪರಿಚಾರಕ ಇರಲಿದ್ದು, ದಾರಿ ಮಧ್ಯೆ ಊಟೋಪಹಾರಕ್ಕೆ ಸಮಯಾವಕಾಶ ನೀಡಲಾಗಿದೆ.
ಮಂಗಳೂರಿನಿಂದ ಮಡಿಕೇರಿಗೆ ಪುತ್ತೂರು, ಸುಳ್ಯ ಮಾರ್ಗವಾಗಿ ಪ್ಯಾಕೆಜ್ ಟೂರ್ ಇರಲಿದೆ. ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಳಗ್ಗೆ 11 ಗಂಟೆಗೆ ಮಡಿಕೇರಿ ರಾಜಸೀಟ್, ಅಬ್ಬಿಪಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ ಬಳಿಕ ಸಂಜೆ 6.15ಕ್ಕೆ ಹೊರಟು ರಾತ್ರಿ 9.30ಕ್ಕೆ ಮಂಗಳೂರು ತಲುಪಲಿದೆ. ದಾರಿ ಮಧ್ಯೆ ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಕಬಕ, ಪುತ್ತೂರು, ಸುಳ್ಯದಿಂದಲೂ ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಟೂರ್‌ನಲ್ಲಿ ಭಾಗವಹಿಸಲು ಅವಕಾಶ ಇದೆ. ಆದರೆ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮಂಗಳೂರು-ಮಡಿಕೇರಿ ಪ್ಯಾಕೆಜ್‌ಗೆ ವಯಸ್ಕರಿಗೆ 500 ರು., ಮಕ್ಕಳಿಗೆ 450 ರು. ನಿಗದಿಪಡಿಸಲಾಗಿದೆ.
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಟು ಕದ್ರಿ ದೇವಸ್ಥಾನ, ಪಾಣೆಮಂಗಳೂರು ನಂದಾವರ ದೇವಸ್ಥಾನ, ಉಜಿರೆ ಸುರ್ಯ ದೇವಸ್ಥಾನ, ಕನ್ಯಾಡಿ ರಾಮ ಮಂದಿರ, ಧರ್ಮಸ್ಥಳ, ಸೌತಡ್ಕ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ದರ್ಶನ ನಡೆಸಲಿದ್ದು, ವಯಸ್ಕರಿಗೆ 400 ರು. ಮತ್ತು ಮಕ್ಕಳಿಗೆ 350 ರು. ದರ ಇದೆ.
ಮಂಗಳೂರು-ಕೊಲ್ಲೂರು:
ಮಂಗಳೂರಿನಿಂದ ಕೊಲ್ಲೂರಿಗೆ 450 ರು. ಹಾಗೂ 400 ರು. ದರದಲ್ಲಿ ಪ್ಯಾಕೆಜ್ ಟೂರ್ ಆಯೋಜಿಸಲಾಗಿದೆ. ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಟು ಮಾರಣಕಟ್ಟೆ, ಕೊಲ್ಲೂರು, ಕಮಲಶಿಲೆ, ಉಚ್ಚಿಲ ದೇವಸ್ಥಾನಗಳಿಗೆ ತೆರಳಿ ರಾತ್ರಿ ಮಂಗಳೂರಿಗೆ ಆಗಮಿಸಲಿದೆ. ಮಂಗಳೂರು-ಪುತ್ತೂರು ಪ್ಯಾಕೆಜ್‌ನಲ್ಲಿ ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಟು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಮೃತ್ಯುಂಜೇಶ್ವರ ದೇವಸ್ಥಾನ, ಉಮಾಮಹೇಶ್ವರ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನ, ಗೆಜ್ಜೆಗಿರಿ ಕೋಟಿ ಚೆನ್ನಯ ಸ್ಥಾನ, ಹನುಮಗಿರಿಗೆ ಭೇಟಿ ನೀಡಲಿದೆ. ಇಲ್ಲಿಗೆ ಪ್ರಯಾಣ ದರ 300 ರು. ಹಾಗೂ 250 ರು. ನಿಗದಿಪಡಿಸಲಾಗಿದೆ.
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಟು ಕುಡುಪು ದೇವಸ್ಥಾನ, ಮೂಡುಬಿದಿರೆ ಮಾರಿಯಮ್ಮ ದೇವಸ್ಥಾನ, ಸಾವಿರ ಕಂಬ ಬಸದಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ನಾಗುಂಡಿ ಫಾಲ್ಸ್, ನೆಲ್ಲಿತೀರ್ಥಕ್ಕೆ ಟೂರ್ ಇರಲಿದೆ. ಇಲ್ಲಿಗೆ ಕೂಡ 300 ರು. ಹಾಗೂ 250 ರು. ನಿಗದಿಪಡಿಸಲಾಗಿದೆ.
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಟು ಮಂಗಳಾದೇವಿ, ಪೊಳಲಿ, ಕಟೀಲು, ಉಚ್ಚಿಲ, ಬಪ್ಪನಾಡು, ಸಸಿಹಿತ್ಲು ಮೂಲಕ ಮಾರಿಯಮ್ಮ ದೇವಸ್ಥಾನವಾಗಿ ಸಂಜೆ 5 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ಇಲ್ಲಿಗೆ 300 ರು. ಹಾಗೂ 250 ರು. ನಿಗದಿಪಡಿಸಲಾಗಿದೆ.
ಉಡುಪಿ-ಶೃಂಗೇರಿ:
ಉಡುಪಿಯಿಂದ ಬೆಳಗ್ಗೆ 8 ಗಂಟೆಗೆ ಹೊರಟು ಪೆರ್ಡೂರು, ವರಂಗ ಜೈನ ಬಸದಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ದೇವಸ್ಥಾನ, ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿಕ ಸಂಜೆ 6.30ಕ್ಕೆ ಉಡುಪಿ ಬಸ್ ನಿಲ್ದಾಣ ತಲುಪಲಿದೆ. 400 ರು. ಹಾಗೂ 350 ರು. ದರ ನಿಗದಿಪಡಿಸಲಾಗಿದೆ.
ಉಡುಪಿಯಿಂದ ಬೆಳಗ್ಗೆ 8.30ಕ್ಕೆ ಹೊರಟು ಹಿರಿಯಡಕ ದೇವಸ್ಥಾನ, ಕಾರ್ಕಳ ಅನಂತಶಯನ ದೇವಸ್ಥಾನ, ಗೊಮ್ಮಟೇಶ್ವರ ಸನ್ನಿಧಿ, ಮೂಡುಬಿದಿರೆ ಸಾವಿರ ಕಂಬ ಬಸದಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಸಾಲುಮರ ತಿಮ್ಮಕ್ಕ ಉದ್ಯಾನ ಮಣಿಪಾಲ, ಕಾಪು ಲೈಟ್‌ಹೌಸ್, ಬೀಚ್, ಬೇಕಾದಲ್ಲಿ ಪಡುಕೆರೆ ಬೀಚ್ ಮಾರ್ಗ ಮೂಲಕ ಉಡುಪಿಗೆ ಮರಳಲಿದೆ. ಇಲ್ಲಿ 350 ರು. ಹಾಗೂ 300 ರು. ಟಿಕೆಟ್ ದರ ನಿಗದಿಪಡಿಸಲಾಗಿದೆ.
ಕುಂದಾಪುರದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಹಟ್ಟಿಯಂಗಡಿ ದೇವಸ್ಥಾನ, ಸೌಕೂರು ದೇವಸ್ಥಾನ, ಶಂಕರನಾರಾಯಣ ದೇವಸ್ಥಾನ, ಕಮಲಶಿಲೆ ದೇವಸ್ಥಾನ, ಕೊಲ್ಲೂರು, ಬೈಂದೂರು, ಮುರುಡೇಶ್ವರ ಆಗಿ ಕುಂದಾಪುರ ತಲುಪಲಿದೆ. ಪ್ಯಾಕೆಜ್ ದರ 400 ರು. ಮತ್ತು 350 ರು.
ಕುಂದಾಪುರದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಕೋಟಿಲಿಂಗೇಶ್ವರ, ಕುಂಭಾಶಿ, ಆನೆಗುಡ್ಡೆ, ಕೋಟ ದೇವಸ್ಥಾನ, ಸಾಲಿಗ್ರಾಮ, ಮಂದಾರ್ತಿ, ಕಮಲಶಿಲೆ, ಕೊಲ್ಲೂರು, ಬೈಂದೂರು, ಸೋಮೇಶ್ವರ ದೇವಸ್ಥಾನ ಮತ್ತು ಬೀಚ್ ಮೂಲಕ ಕುಂದಾಪುರಕ್ಕೆ ವಾಪಸ್ ಆಗಲಿದೆ. ಪ್ರಯಾಣ ದರ 350 ರು. ಮತ್ತು 300 ರು. ಇರಲಿದೆ.
ದಸರಾ ದರ್ಶಿನಿ ಯಶಸ್ಸಿನಿಂದ ಈ ಬಾರಿ ದೀಪಾವಳಿಗೂ ಪ್ಯಾಕೆಜ್ ಟೂರ್ ಆಯೋಜಿಸಲಾಗಿದೆ. 10 ದಿನಗಳ ಕಾಲ 10 ಕಡೆಗಳಿಗೆ ಧಾರ್ಮಿಕ ಪ್ರವಾಸ ಏರ್ಪಡಿಸಲಾಗಿದೆ. ಪ್ರವಾಸಿಗರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
-ರಾಜೇಶ್ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು