Asianet Suvarna News Asianet Suvarna News

ನಾಳೆಯಿಂದ ವೈಭವದ ಮಂಗಳೂರು ದಸರಾ ಮಹೋತ್ಸವ ಆರಂಭ

  • 26ರಿಂದ ವೈಭವದ ಮಂಗಳೂರು ದಸರಾ ಮಹೋತ್ಸವ
  • ಅಕ್ಟೋಬರ್‌ 5ರಂದು ಸಂಜೆ 4 ಗಂಟೆಗೆ ಅಭೂತಪೂರ್ವ ದಸರಾ ಶೋಭಾಯಾತ್ರೆ ಆರಂಭ
Mangalore Dasara Maohotsav celebrations from tomorrow rav
Author
First Published Sep 25, 2022, 12:29 PM IST

ಮಂಗಳೂರು (ಸೆ.25) : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವ ಸೆ.26ರಂದು ಆರಂಭಗೊಂಡು ಅ.6ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, 7ರಿಂದ 8.30ರವರೆಗೆ ಭಜನಾ ಕಾರ್ಯಕ್ರಮ, 8.30ರಿಂದ ಶ್ರೀ ದೇವಿ ಪುಷ್ಪಾಲಂಕಾರ ಪೂಜೆ, ಅನ್ನದಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವರ ಬಲಿ ಉತ್ಸವಗಳು ನಡೆಯಲಿವೆ ಎಂದರು.

ಕೆಎಸ್‌ಆರ್‌ಟಿಸಿಯಿಂದ ‘ಮಂಗಳೂರು ದಸರಾ ದರ್ಶನ’ ಪ್ಯಾಕೇಜ್‌ ಟೂರ್‌

ಪೂಜಾರಿ ಚಾಲನೆ: ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಸೆ.26ರಂದು ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನ, ಕಲಶ ಪತ್ರಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭ ದೀಪ ಬೆಳಗುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಕೇಂದ್ರದ ಮಾಜಿ ವಿತ್ತ ಸಚಿವ, ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯ್ಕ ಹಾಗೂ ಶಾಸಕರು, ಗಣ್ಯರು ಉಪಸ್ಥಿತರಿರುವರು ಎಂದು ಹೇಳಿದರು.

ಸೆ. 27ರಂದು ಬೆಳಗ್ಗೆ 10ಕ್ಕೆ ದುರ್ಗಾಹೋಮ, ಸೆ.28ರಂದು ಬೆಳಗ್ಗೆ 10ಕ್ಕೆ ಆರ್ಯ ದುರ್ಗಾಹೋಮ, ಸೆ.29ರಂದು ಬೆಳಗ್ಗೆ 10ಕ್ಕೆ ಅಂಬಿಕಾ ದುರ್ಗಾ ಹೋಮ, ಸೆ.30ರಂದು ಬೆಳಗ್ಗೆ 10.00ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ), ಸಾಮೂಹಿಕ ಚಂಡಿಕಾ ಹೋಮ, ಅ.1ರಂದು ಬೆಳಗ್ಗೆ 10ಕ್ಕೆ ಕುಮಾರಿ ದುರ್ಗಾ ಹೋಮ, ಅ.2ರಂದು ಬೆಳಗ್ಗೆ 10ಕ್ಕೆ ಮಹಿಷಮರ್ದಿನಿ ದುರ್ಗಾ ಹೋಮ, ಅ.3ರಂದು ಬೆಳಗ್ಗೆ 10ಕ್ಕೆ ಚಂಡಿಕಾಹೋಮ, ಹಗಲೋತ್ಸವ, ದುರ್ಗಾಷ್ಟಮಿ, ಅ.4ರಂದು ಬೆಳಗ್ಗೆ 10ರಿಂದ ಸರಸ್ವತಿ ದುರ್ಗಾಹೋಮ, 11.30ಕ್ಕೆ ಶತಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಭವ್ಯ ಶೋಭಾಯಾತ್ರೆ: ಅ.5ರಂದು ಬೆಳಗ್ಗೆ 10ರಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ, ಸಂಜೆ 4ರಿಂದ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.6ರಂದು ಪ್ರಾತಃಕಾಲ 4ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ. ರಾತ್ರಿ 7ರಿಂದ 8ರತನಕ ಭಜನಾ ಕಾರ್ಯಕ್ರಮ, 8ರಿಂದ ಗುರುಪೂಜೆ ನಡೆಯಲಿದೆ ಎಂದು ಹರಿಕೃಷ್ಣ ಬಂಟ್ವಾಳ್‌ ಹೇಳಿದರು.

4 ಗಂಟೆಗೆ ಶೋಭಾಯಾತ್ರೆ ಆರಂಭ: ಅ.5ರಂದು 4ಕ್ಕೆ ಸರಿಯಾಗಿ ಕುದ್ರೋಳಿ ಕ್ಷೇತ್ರದಿಂದ ಅಭೂತಪೂರ್ವವಾದ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ ಆರಂಭವಾಗಲಿದ್ದು, ಈ ಮೆರವಣಿಗೆಗೆ ರಾಜ್ಯದ ನಾನಾ ಕಡೆಯಿಂದ ಕಲಾತಂಡಗಳು, ಹುಲಿವೇಷ ಹಾಗೂ ಇತರ ವೇಷದ ಟ್ಯಾಬ್ಲೋಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರುಗು ನೀಡಲಿವೆ ಎಂದು ಹೇಳಿದರು.

ಕುದ್ರೋಳಿ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಟ್ರಸ್ಟಿಗಳಾದ ರವಿಶಂಕರ್‌ ಮಿಜಾರ್‌, ಕೆ. ಮಹೇಶ್ಚಂದ್ರ, ಎಂ. ಶೇಖರ್‌ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಅನಸೂಯ ಬಿ.ಟಿ. ಸಾಲಿಯಾನ್‌, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಚಿತ್ತರಂಜನ್‌ ಗರೋಡಿ, ರಮಾನಾಥ ಕಾರಂದೂರು, ಜತಿನ್‌ ಅತ್ತಾವರ, ಗೌರವಿ ಪಿ.ಕೆ., ಕೀಶೋರ್‌ ದಂಡೆಕೇರಿ, ಲೀಲಾಕ್ಷ ಕರ್ಕೇರ ಇದ್ದರು.

ಮಂಗಳೂರು ದಸರಾಕ್ಕೆ ಈ ಬಾರಿಯೂ ಕೊರೋನಾ ಕರಿನೆರಳು?

ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ

ದಸರಾ ಮಹೋತ್ಸವ ಮೆರವಣಿಗೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಪಾರ್ಕಿಂಗ್‌ ವ್ಯವಸ್ಥೆ ಮಾತ್ರವಲ್ಲದೆ ಒಟ್ಟು 7ಕಡೆಗಳಲ್ಲಿ 500ಕ್ಕೂ ಅಧಿ​ಕ ವಾಹನಗಳಿಗೆ ಪಾರ್ಕಿಂಗ್‌ ಮಾಡುವಷ್ಟುವ್ಯವಸ್ಥೆಯನ್ನು ಕ್ಷೇತ್ರದ ಭಕ್ತಾದಿಗಳಿಂದ ಸಹಕಾರದಿಂದ ಮಾಡಲಾಗಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾ​ಧಿಕಾರಿ ಪದ್ಮರಾಜ್‌ ಆರ್‌. ತಿಳಿಸಿದ್ದಾರೆ.

ಮುಖ್ಯಮಂತ್ರಿಗೆ ಆಹ್ವಾನ: ಕುದ್ರೋಳಿ ದಸರಾ ಮೆರವಣಿಗೆ ಉದ್ಘಾಟನೆಗೆ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಅವರು ಆಗಮಿಸುವ ನಿರೀಕ್ಷೆಯಿದೆ ಎಂದು ಹರಿಕೃಷ್ಣ ಬಂಟ್ವಾಳ್‌ ಹೇಳಿದರು.

Follow Us:
Download App:
  • android
  • ios