MahaShivratri 2023: ಐತಿಹಾಸಿಕ ಭೋಗನಂದೀಶ್ವರ ರಥೋತ್ಸವಕ್ಕೆ ದಿನಗಣನೆ

ಮಹಾಶಿವರಾತ್ರಿಗೆ ಜಾಗರಣೆಗೆ ಸಿದ್ಧತೆ
ಶಿವರಾತ್ರಿ ಮಾರನೇ ದಿನ ನಡೆಯುವ ಜಾತ್ರೆ
ಶಿವನ ಆರಾಧನೆ, ಭಜನೆ ಸೇರಿದಂತೆ ವಿವಿಧ ಗೀತ ಗಾಯನ ಕಾರ್ಯಕ್ರಮ

MahaShivratri 2023 preparations are going on for Bhoga Nandeeshwar brahma ratotsav skr

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಐತಿಹಾಸಿಕ, ಪುರಾಣ ಪ್ರಸಿದ್ದ ಭೋಗನಂದೀಶ್ವರ ಬ್ರಹ್ಮರಥೋತ್ಸವಕ್ಕೆ ದಿನಗಣನೆ ಶುರುವಾಗಿದೆ.. ಮಹಾಶಿವರಾತ್ರಿ ಪ್ರಯುಕ್ತ ನಡೆಯುವ ಈ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ದೇವಸ್ಥಾನದ ಬಳಿ ರಥವನ್ನು ಸಿದ್ಧ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿ ಇರೋ ಭೋಗನಂದೀಶ್ವರ ದೇವಾಲಯದ ಬಳಿ ಸಾಕಷ್ಟು ಸ್ವಚ್ಚತೆಯನ್ನು ಕೂಡ ಮಾಡಲಾಗುತ್ತಿದೆ. ದೇವಸ್ಥಾನ ಆಡಳಿತ ಮಂಡಳಿ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಭರದ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಶಿವರಾತ್ರಿ ಮಾರನೇ ದಿನ ನಡೆಯುವ ಈ ರಥೋತ್ಸವಕ್ಕೆ ಅಕ್ಕ ಪಕ್ಕದ ಜಿಲ್ಲೆಗಳು ಮಾತ್ರವಲ್ಲದೇ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಬಂದು ಇಲ್ಲಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಾರೆ. 

ಶಿವರಾತ್ರಿ ಮಾರನೇ ದಿನ ನಡೆಯುವ ಜಾತ್ರೆ
ಶಿವರಾತ್ರಿ ಹಬ್ಬದ ಮರು ದಿನ ನಡೆಯೋ ಭೋಗನಂದೀಶ್ವರನ ಜಾತ್ರೆ ಎಲ್ಲರ ಆಕರ್ಷಣೆಯಾಗಿರುತ್ತದೆ. ಸಾವಿರಾರು ವರ್ಷಗಳಿಂದ ಈ ಈ ಜಾತ್ರೆ ನಡೆದುಕೊಂಡು ಬರುತ್ತಿದ್ದು, ಸಾವಿರಾರು ಜನರು ಬಂದು ಈ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ದೇವಾಲಯದ ಸುತ್ತು ಹಾಕುವ ಮೂಲಕ ಈ ರಥೋತ್ಸವ ಮುಕ್ತಾಯವಾಗಲಿದೆ.

Kumbh Sankranti 2023: ಈ ದಿನ ಈ ಒಂದು ಕೆಲಸದಿಂದ ಸಾಡೇಸಾತಿಯ ದುಷ್ಪರಿಣಾಮ ತಗ್ಗುತ್ತೆ..

ಶಿವರಾತ್ರಿ ಪ್ರಯಕ್ತ ಸಾವಿರಾರು ಭಕ್ತರಿಂದ ಜಾಗರಣೆ
ಶಿವರಾತ್ರಿ ಹಬ್ಬ ಅಂದರೇನೆ ಜಾಗರಣೆ ವಿಶೇಷ. ಅದರಂತೆಯೇ ಭೋಗನಂದೀಶ್ವರ ದೇವವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು ಆಗಮಿಸಿ ಜಾಗರಣೆ ಮಾಡಲಿದ್ದಾರೆ. ಶಿವನ ಆರಾಧನೆ, ಭಜನೆ ಸೇರಿದಂತೆ ವಿವಿಧ ಗೀತ ಗಾಯನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. ನೆರೆಯ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಕಲಾವಿದರು ಆಗಮಿಸಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ರಾತ್ರಿಯಿಡಿ ದೇವಾಲಯದಲ್ಲಿ ವಿಶೇಷ ಪೂಜೆ
ಶಿವರಾತ್ರಿ ಹಬ್ಬದ ಪ್ರಯುಕ್ತ ಭೋಗನಂದೀಶ್ವರನ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಿವನಿಗೆ ವಿಶೇಷ ಅಭಿಷೇಕಗಳು ನಡೆಯಲಿದೆ. ರಾತ್ರಿಯಿಡಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ.

ರಥೋತ್ಸವ ದಿನದಂದು ನಂದಿಬೆಟ್ಟಕ್ಕೆ ಮೆಟ್ಟಿಲು ಸೇವೆ
ಭೋಗನಂದೀಶ್ವರನ ಬ್ರಹ್ಮರಥೋತ್ಸವ ದಿನದಂದು ಇಲ್ಲಿಗೆ ಬರೋ ಬಹುತೇಕ ಭಕ್ತರು  ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹೋಗಲಿದ್ದು, ಬೆಟ್ಟದ ಮೇಲಿನ ಯೋಗನಂದೀಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ ಮುಗಿಸಿಕೊಂಡು ಮತ್ತೆ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿಯಲಿದ್ದಾರೆ. ಈ ವೇಳೆ ಬೆಟ್ಟ ಹತ್ತುವ ಮಾರ್ಗದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಹೆಸರು ಬೇಳೆ ಸೇರಿದಂತೆ ಪ್ರಸಾದ ವಿತರಣೆಯು ನಡೆಯಲಿದೆ. 

MahaShivratri 2023: ಶಿವನ ಕುರಿತ ಈ ಆಸಕ್ತಿಕರ ಕತೆಗಳನ್ನು ಕೇಳಿದ್ದೀರಾ?
   
ಪರಿಷೆಗಾಗಿ ಸ್ಟಾಲ್ ಗಳ ನಿರ್ಮಾಣ
ರಥೋತ್ಸವ, ಜಾತ್ರೆ ಅಂದ್ರೆನೆ ಅಲ್ಲಿ ಹೈಲೆಟ್ ಆಗೋದು ಪರಿಷೆ. ನಂದಿ ಗ್ರಾಮದಲ್ಲಿ ನಡೆಯಲಿರುವ ಈ ಪರಿಷೆ ಎಲ್ಲರ ಆಕರ್ಷಣೆ. ವಿವಿಧ ತಿಂಡಿ ತಿನಿಸು, ಮಕ್ಕಳ ಆಟದ ಸಾಮಾನುಗಳು, ಹಾಗೂ ಸ್ಫರ್ಧೆಗಳು ಎಲ್ಲರನ್ನು ಮನಸೆಳೆಯುವಂತೆ ಮಾಡಲಿದ್ದು, ದೇವಸ್ಥಾನದ ಸುತ್ತ ಸಾಕಷ್ಟು ಮಾರಾಟ ಮಳಿಗೆಗೆಳನ್ನು ತೆರಯಲಾಗುವುದು.

Latest Videos
Follow Us:
Download App:
  • android
  • ios