Asianet Suvarna News Asianet Suvarna News

ಮಾಘ ಮಾಸದ ಸಂಕಷ್ಟಿ ಚತುರ್ಥಿಯ ವಿಶೇಷ – ಮಹತ್ವ...!

ಶ್ರದ್ಧಾ – ಭಕ್ತಿಯಿಂದ ಸಂಕಷ್ಟಿ ವ್ರತವನ್ನು ಆಚರಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಪ್ರತಿ ಸಂಕಷ್ಟಿಯ ದಿನಗಳಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಉಪವಾಸ ವ್ರತವನ್ನು ಮಾಡಬೇಕು. ನಂತರ ರಾತ್ರಿ ಚಂದ್ರನನ್ನು ನೋಡಿ ವ್ರತವನ್ನು ಮುಗಿಸುವ ರೂಢಿ ಇದೆ. ಹಾಗೆಯೆ ಮಾಘಮಾಸದ ಸಂಕಷ್ಟಿ ವ್ರತಕ್ಕೆ ವಿಶೇಷವಾದ ಮಹತ್ವವಿದೆ. ಮಾಘ ಮಾಸದ ಸಂಕಷ್ಟಿ ವ್ರತದ ಬಗ್ಗೆ ತಿಳಿಯೋಣ..

Magha month Sankashti chaturti specialities
Author
Bangalore, First Published Jan 31, 2021, 1:46 PM IST

ಹಿಂದೂ ಧರ್ಮದಲ್ಲಿ ಸಂಕಷ್ಟಿಗೆ ವಿಶೇಷವಾದ ಮಹತ್ವವಿದೆ. ಅದರಲ್ಲೂ ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನದಂದು ಸಂಕಷ್ಟಿಯ ವ್ರತವನ್ನು ಕೈಗೊಂಡರೆ ಇಪ್ಪತ್ತೊಂದು ಸಂಕಷ್ಟಿ ವ್ರತ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೆ ಮಾಘ ಮಾಸದಲ್ಲಿ ಬರುವ ಸಂಕಷ್ಟಿಗೂ ವಿಶೇಷವಾದ ಮಹತ್ವವಿದೆ.

ಮಾಘ ಮಾಸ, ಕೃಷ್ಣ ಪಕ್ಷದ ತೃತೀಯ ತಿಥಿಯಂದು ಸಂಕಷ್ಟಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಇದೇ ಜನವರಿ 31ರಂದು ಆಚರಣೆ ಮಾಡಲಾಗುತ್ತದೆ. ಮಕ್ಕಳ ದೀರ್ಘಾಯಸ್ಸು ಮತ್ತು ಸುಖ ಜೀವನ, ಸಕಲ ಸಂಪತ್ತಿಗಾಗಿ ಈ ವ್ರತವನ್ನು ಮಾಡಲಾಗುತ್ತದೆ. ಇದು ಗಣೇಶನಿಗೆ ಸಮರ್ಪಿತವಾದ ವ್ರತವಾಗಿದೆ. ವಿಧಿವಿಧಾನಗಳಿಂದ ಪೂಜೆ ಮಾಡಿ ಎಳ್ಳಿನ ಲಡ್ಡು ಸೇರಿದಂತೆ ಗಣೇಶನಿಗೆ ಪ್ರಿಯವಾದ ತಿನಿಸುಗಳನ್ನು ನೈವೇದ್ಯಕ್ಕೆ ಇಡಲಾಗುತ್ತದೆ. 

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸಿದ ಬುಧಗ್ರಹ –ಹನ್ನೆರಡು ರಾಶಿಗಳ ಫಲಾಫಲಗಳು...! 

ಸಂಕಷ್ಟ ಚತುರ್ಥಿಯ ಮಹತ್ವ

ಸಂತಾನ ಪ್ರಾಪ್ತಿ ಹಾಗೂ ಖುಷಿ ಜೀವನ ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ, ಇದರಿಂದ ನಮ್ಮ ಇಷ್ಟಾರ್ಥಗಳು ಪೂರೈಸುತ್ತದೆ ಎಂದೂ ಹೇಳಲಾಗುತ್ತದೆ. ಸಂಕಟವನ್ನು ನಿವಾರಿಸುವ ಗಣೇಶ ಚತುರ್ಥಿ ಎಂದೇ ಇದನ್ನು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಅನುಸಾರ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಪೂಜೆ ಕೈಗೊಂಡ ಬಳಿಕ ರಾತ್ರಿ ಚಂದ್ರನಿಗೆ ಅರ್ಘ್ಯ ಕೊಟ್ಟು ವ್ರಥವನ್ನು ಸಮಾಪ್ತಿಗೊಳಿಸಲಾಗುತ್ತದೆ. ಈ ಸಂಕಷ್ಟ ವ್ರತವನ್ನು ಮಾಡುವುದರಿಂದ ಗ್ರಹಗಳ ದೋಷವಿದ್ದರೂ ನಿವಾರಣೆಯಾಗಲಿದೆ. ವಿಘ್ನನಿವಾರಕ ಅದನ್ನು ದೂರ ಮಾಡಲಿದ್ದಾನೆ ಎಂದೂ ಹೇಳಲಾಗುತ್ತದೆ.

ಪೂಜಾ ವಿಧಿವಿಧಾನ

ಪ್ರಾತಃ ಕಾಲದಲ್ಲಿ ಸ್ನಾನ ಮಾಡಿ ಶುಚಿಯಾಗಿ ಗಣೇಶನ ಪೂಜೆ ಮಾಡಬೇಕು. ಸೂರ್ಯಾಸ್ತದ ನಂತರ ಮತ್ತೊಮ್ಮೆ ಸ್ನಾನ ಮಾಡಿ ಸ್ವಚ್ಛ ವಸ್ತ್ರವನ್ನು ಧರಿಸಬೇಕು. ಗಣೇಶನ ಮೂರ್ತಿಯ ಹತ್ತಿರ ಒಂದು ಕಲಶದಲ್ಲಿ ನೀರು ತುಂಬಿಡಬೇಕು. ನಂತರ ಧೂಪ, ದೀಪ, ನೈವೇದ್ಯ, ಹೂವು-ಹಣ್ಣು, ಬೆಲ್ಲ, ತುಪ್ಪ, ಕಲ್ಲುಸಕ್ಕರೆ ಸೇರಿದಂತೆ ಇತರ ವಸ್ತುಗಳನ್ನು ಸಮರ್ಪಿಸಬೇಕು. ಗಣೇಶನಿಗೆ ಪ್ರಿಯವಾದ ದೂರ್ವೆ (ಗರಿಕೆ)ಯನ್ನು ಅರ್ಪಿಸಬೇಕು. ನಂತರ ಗಣೇಶ ಚಾಲೀಸ, ಗಣೇಶ ಸ್ತುತಿ ಮತ್ತು ಗಣೇಶ ಸ್ತೋತ್ರವನ್ನು ಪಠಿಸಬೇಕು. ಚಂದ್ರೋದಯದ ನಂತರ ಚಂದ್ರನನ್ನು ನೋಡಿ ಚಂದ್ರನಿಗೆ ಅರ್ಘ್ಯ ಕೊಟ್ಟು ವ್ರತವನ್ನು ಸಂಪನ್ನಗೊಳಿಸಲಾಗುವುದು. 

ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..! 

ಸಂಕಷ್ಟ ಚತುರ್ಥಿಯಂದು ಧನ ಪ್ರಾಪ್ತಿಗೆ ಹೀಗೆ ಮಾಡಿ
- ಹಳದಿ ಬಣ್ಣದ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕು.
- ಮೋದಕವನ್ನು ನೈವೇದ್ಯ ಮಾಡಬೇಕು.
- ಹಳದಿ ಬಣ್ಣದ ಆಸನದ ಮೇಲೆ ಕುಳಿತು 108 ಬಾರಿ “ಓಂ ಹೇರಂಬಾಯ ನಮಃ” ಜಪವನ್ನು ಮಾಡಬೇಕು. ಇದನ್ನು ಸಂಕಷ್ಟಿಯಂದು ಮಾತ್ರವಲ್ಲದೆ  27 ದಿನಗಳ ಕಾಲ ಜಪ ಮಾಡಿದರೆ ಇಷ್ಟಾರ್ಥಗಳು ಲಭಿಸುತ್ತದೆಂದು ಹೇಳಲಾಗುತ್ತದೆ.
- ಇದರಿಂದ ಧನಪ್ರಾಪ್ತಿಯಾಗುತ್ತದೆ.
- ಸಂಕಷ್ಟ ಚತುರ್ಥಿಯ ದಿನದಂದು  27 ಗರಿಕೆಯನ್ನು ಒಂದು ದಾರದಲ್ಲಿ ಕಟ್ಟಿ ಅದನ್ನು 11 ದಿನಗಳ ವರೆಗೆ ಪ್ರತಿದಿನ ಗಣೇಶನಿಗೆ ಅರ್ಪಿಸಿದರೆ ಮನೋವಾಂಛಿತ ಫಲ ಸಿದ್ಧಿಸುತ್ತದೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ! 

ಮಾಘ ಮಾಸದ ಮಹತ್ವ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೊಂದನೇ ಮಾಸ ಮಾಘ ಮಾಸ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ಶ್ರೇಷ್ಠವಾದ ಮಾಸವೆಂದು ಹೇಳಲಾಗುತ್ತದೆ. ಪ್ರತಿ ವರ್ಷ ಮಾಘಮಾಸದಲ್ಲಿ ಬರುವ ಚತುರ್ಥಿ(ಚೌತಿ) ತಿಥಿಯು ಅತ್ಯಂತ ವಿಶೇಷವಾದದ್ದು. ಈ ದಿನ ಗಣೇಶನನ್ನು ಇಟ್ಟು ಪೂಜಿಸುವ ರೂಢಿ ಕೆಲವೆಡೆ ನಡೆದು ಬಂದಿದೆ. ಮಾಘಮಾಸದ ಚತುರ್ಥಿಯಂದು ಒಂದೂವರೆ ದಿನ ಗಣೇಶನ ಮಣ್ಣಿನ ಮೂರ್ತಿಯನ್ನು ಮಾಡಿ ಪೂಜಿಸಲಾಗುತ್ತದೆ. ಹಾಗಾಗಿ ಮಾಘ ಮಾಸದ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸುವುದರಿಂದ ವಿಶೇಷವಾದ ಪುಣ್ಯಫಲವನ್ನು ಪಡೆಯಬಹುದಾಗಿದೆ.

Follow Us:
Download App:
  • android
  • ios