ಶಿವ ಅನ್ನುವುದು ರೊಚ್ಚಿಗೆ, ತೀವ್ರತೆಗೆ ಇನ್ನೊಂದು ಹೆಸರು. ಶಿವನ ಈ ಗುಣಗಳ ಮೇಲೆ ಎಷ್ಟೋ ಸಿನಿಮಾಗಳೂ ಬಂದಿವೆ. ಸಿನಿಮಾದ ಹೀರೋ ಹೆಸರು ಶಿವ ಅಂತಾದ್ರೆ ಅಲ್ಲೊಬ್ಬ ವೀರ ಇದ್ದಾನೆ ಅಂತಲೇ ಅರ್ಥ. ಬ್ರಹ್ಮಾಂಡಕ್ಕೇ ಈಶ್ವರನಾದ ಶಿವನಿಂದ ನಾವು ಕಲಿಯಬಹುದಾದ ಪಾಠಗಳು ಸಾಕಷ್ಟಿವೆ.

ಏಕಾಗ್ರತೆಯಲ್ಲಿ ಶಿವನನ್ನು ಮೀರಿಸುವವರಿಲ್ಲ. ಈತ ಆದಿ ಯೋಗಿ
ಒಂದು ಧ್ಯಾನಸ್ಥ ಸ್ಥಿತಿಗೆ, ಏಕಾಗ್ರತೆಗೆ ಶಿವ ಮಾದರಿ. ಶಿವ ಒಮ್ಮೆ ಧ್ಯಾನಕ್ಕೆ ಕೂತರೆ ಮುಗಿಯಿತು. ಪುನಃ ಆತ ಸಹಜ ಸ್ಥಿತಿಗೆ ಬರಬೇಕಾದರೆ ಎಷ್ಟೋ ಕಾಲ ಬೇಕು. ಅದಕ್ಕೇ ಶಿವ ಆದಿ ಯೋಗಿ. ಒಮ್ಮೆ ಶಿವನ ಘನ ಘೋರ ತಪಸ್ಸನ್ನು ಮುರಿಯಲು ಮನ್ಮಥ ಹೂವಿನ ಬಾಣ ಬಿಟ್ಟು ಸುಟ್ಟು ಭಸ್ಮವಾದ ಕತೆ ನಮಗೆಲ್ಲ ತಿಳಿಯದ್ದಲ್ಲ. ಈ ಮಟ್ಟಿನ ಏಕಾಗ್ರತೆ ಹುಲು ಮಾನವರಾದ ನಮಗೆ ಬರಲು ಸಾಧ್ಯವಿಲ್ಲ. ಆದರೆ ಒಂದು ಮಟ್ಟಿನ ಏಕಾಗ್ರತೆಯಂತೂ ಬೇಕೇ ಬೇಕು. ಅದಿಲ್ಲವಾದರೆ ಬದುಕಿನಲ್ಲಿ ಏನೇನನ್ನೂ ಸಾಧಿಸಲು ಸಾಧ್ಯವಿಲ್ಲ.

ಶಿವನ ಬಗ್ಗೆ ಇರೋ ತಮಾಷೆ ಕತೆಗಳು ನಿಮಗೆ ಗೊತ್ತಾ?

ಪ್ರೀತಿಗೆ ರೂಪಕ ಶಿವ
ಪತ್ನಿಗೆ ತನ್ನ ದೇಹದ ಅರ್ಧಭಾಗವನ್ನೇ ನೀಡಿ ಅರ್ಧ ನಾರೀಶ್ವರ ಎನಿಸಿಕೊಂಡವನು ಶಿವ. ಗೌರಿ ಎನ್ನಿ, ಪಾರ್ವತಿ ಎನ್ನಿ, ಸತಿ ಎನ್ನಿ ಎಲ್ಲವೂ ಶಿವ ಸತಿಯ ನಾನಾ ಹೆಸರುಗಳು. ಆಕೆಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಶಿವನ ಬಗ್ಗೆ ಅನೇಕ ಕತೆಗಳಿವೆ. ದಾಕ್ಷಾಯಿಣಿ ಶಿವನ ಸತಿ. ದಕ್ಷನ ಮಗಳಾದ ಆಕೆ ಸರ್ವಸ್ವವನ್ನೂ ತ್ಯಜಿಸಿ ಶಿವನಿಗಾಗಿ ಕಠಿಣ ತಪಸ್ಸು ಮಾಡಿ ಕೊನೆಗೆ ಅವನ ಪತ್ನಿಯಾದವಳು. ಈ ದಾಕ್ಷಾಯಿಣಿ ಒಮ್ಮೆ ತನ್ನ ತವರಿನಲ್ಲಿ ಶಿವನಿಗಾದ ಅವಮಾನ ತಡೆಯಲಾರದೇ ಅಗ್ನಿ ಕುಂಡಕ್ಕೆ ಹಾರಿ ಜೀವ ಕಳೆದುಕೊಳ್ಳುತ್ತಾಳೆ. ಕೂಡಲೇ ಧಾವಿಸಿ ಬರುವ ಶಿವ ಅವಳ ಅರೆಬೆಂದ ಕಳೇಬರವನ್ನು ಹೊತ್ತು ಅಖಂಡ ವಿಶ್ವವನ್ನು ಸುತ್ತುತ್ತಾನೆ. ಕೊಳೆತ ಅವಳ ಕಳೇಬರದಿಂದ ಒಂದೊಂದೇ ಅಂಗಗಳು ಕಳಚಿಬಿದ್ದರೂ ಅವನಿಗೆ ಪರಿವೆಯೇ ಇಲ್ಲ. ಬೇರೆ ಯಾವ ಪುರಾಣ ಪುರುಷನಲ್ಲೂ ಪತ್ನಿಯ ಬಗ್ಗೆ ಇಂಥಾ ಪ್ರೀತಿ ಕಾಣಲು ಸಾಧ್ಯವಿಲ್ಲ. ಮುಂದೆ ಪಾರ್ವತಿಯು ಪೂಸಿದ ಗಂಧ ಅವನ ಮೂಗಿಗೆ ಬಡಿದಾಗಲೇ ಅವನ ವಿರಹ ಆರಿದ್ದು ಎನ್ನುತ್ತಾರೆ. ಕಾಮವನ್ನು ಸುಟ್ಟು ಶಿವ ಪ್ರೇಮಿಯಾದ ಎನ್ನುತ್ತವೆ ಪುರಾಣಗಳು.

 ಜ್ಞಾನದ ಆಗರ ಈ ಈಶ್ವರ
ಶಿವನನ್ನು ಆದಿಗುರು ಎನ್ನುತ್ತಾರೆ. ಎಲ್ಲ ಕಲೆಗಳಿಗೂ ಎಲ್ಲ ಶಾಸ್ತ್ರಗಳಿಗೂ ಶಿವನೇ ಆದಿ. ಈತ ಜ್ಞಾನದ ಭಂಡಾರ. ಎಷ್ಟೋ ಸಾವಿರ ವರ್ಷಗಳ ತಪಸ್ಸಿನಲ್ಲಿ ಕಂಡುಕೊಂಡ ಜ್ಞಾನವನ್ನು ಋಷಿಗಳಿಗೆ ಕರುಣಿಸುತ್ತಿದ್ದ. ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದಾತನೇ ಶಿವ. ನಮಗೆ ಜ್ಞಾನವಂತೂ ಬೇಕೇ ಬೇಕು. ಶಿವನನ್ನು ಏಕಾಗ್ರಚಿತ್ತ ಪೂಜಿಸುತ್ತಾ ಜ್ಞಾನಾರ್ಜನೆಯಲ್ಲಿ ತೊಡಗಿದರೆ ನಾವೂ ಜ್ಞಾನಿಗಳಾಬಹುದು ಎನ್ನುತ್ತವೆ ಆದಿ ಗ್ರಂಥಗಳು. ಭರತಮುನಿಗೆ ನಾಟ್ಯವನ್ನು ಕಲಿಸಿದವ ಶಿವ. ಇವತ್ತಿಗೂ ಯಾವುದೇ ಕಲೆಯ ಅಭ್ಯಾಸ ಮಾಡುವಾಗ ನಾಟ್ಯಮಾಡುವ ಶಿವನ ಪುತ್ಥಳಿಯನ್ನು ಪೂಜಿಸಿಯೇ ಕಲಾ ಕಲಿಕೆ ಶುರು ಮಾಡುತ್ತಾರೆ.

ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

ಈ ಅಪಾರ ಜ್ಞಾನಿ ಮುಗ್ಧತೆಯಲ್ಲಿ ಮಗು
ಶಿವ ಎಷ್ಟು ಜ್ಞಾನಿಯೋ ಅಷ್ಟೇ ಮುಗ್ಧನೂ ಹೌದು. ನಿಜ ಜ್ಞಾನಕ್ಕೆ ಉದಾಹರಣೆ ಈತ. ನಿಜ ಜ್ಞಾನ ಪಡೆದವ ಎಂದೂ ಅಹಂಕಾರಿಯಾಗಲಾರ. ಆತ ಮಗುವಿನಷ್ಟೇ ಮುಗ್ಧನಾಗಿರುತ್ತಾನೆ. ಅಂಥಾ ಮುಗ್ಧತೆ ಇದ್ದರೆ ಮಾತ್ರ ವ್ಯಕ್ತಿಗೆ ಭಗವಂತ ಒಲಿಯುವುದು. ಅಹಂಕಾರವನ್ನು ಕಳೆಯದೇ ನಮಗೆ ಯಾವ ವಿದ್ಯೆ ಕೖ ವಶವಾದರೂ ಪ್ರಯೋಜನವಿಲ್ಲ. ವಿದ್ಯೆ, ಜ್ಞಾನದ ಸಾರ ಅರಿಯಬೇಕಾದರೆ ಆ ಮಗುತನ ಮುಗ್ಧತೆ ಬೇಕು. ಇದಕ್ಕೇ ಶಿವನಿಗೆ ಭೋಳೇ ಶಂಕರ ಎಂಬ ಅಡ್ಡ ಹೆಸರೂ ಇದೆ.