ಪಾಂಡವರ ಕಡೆ ನಿಂತು ಹೋರಾಡಿದ ಏಕೈಕ ಕೌರವನೀತ!
ಮಹಾಭಾರತದಲ್ಲಿ ಕುರುಕ್ಷೇತ್ರ ಮಹಾಯುದ್ಧ ನಡೆದಾಗ, ಅದರಲ್ಲಿ ಭಾಗವಹಿಸಿದ ಅನೇಕ ವೀರರಿಗೆ, ಪಾಂಡವರು ಹಾಗೂ ಕೌರವರ ಕಡೆ ಎಲ್ಲಿ ಸೇರುವುದು ಎಂಬ ಸಂದಿಗ್ಧ ನಡೆದೇ ಇತ್ತು. ಕೆಲವರು ಅಳೆದು ತೂಗಿ ಕೌರವರ ಪಕ್ಷಕ್ಕೆ ಸೇರಿದರು; ಇನ್ನು ಹಲವರು ಪಾಂಡವರ ಪಕ್ಷ ಸೇರಿಕೊಂಡರು. ಇದರಲ್ಲಿ ಯುಯುತ್ಸುವಿನ ಕತೆ ಕುತೂಹಲಕರವಾಗಿದೆ.
ಮಹಾಭಾರತದಲ್ಲಿ ಕುರುಕ್ಷೇತ್ರ ಮಹಾಯುದ್ಧ ನಡೆದಾಗ, ಅದರಲ್ಲಿ ಭಾಗವಹಿಸಿದ ಅನೇಕ ವೀರರಿಗೆ, ಪಾಂಡವರು ಹಾಗೂ ಕೌರವರ ಕಡೆ ಎಲ್ಲಿ ಸೇರುವುದು ಎಂಬ ಸಂದಿಗ್ಧ ನಡೆದೇ ಇತ್ತು. ಕೆಲವರು ಅಳೆದು ತೂಗಿ ಕೌರವರ ಪಕ್ಷಕ್ಕೆ ಸೇರಿದರು; ಇನ್ನು ಹಲವರು ಪಾಂಡವರ ಪಕ್ಷ ಸೇರಿಕೊಂಡರು. ಇದರಲ್ಲಿ ಯುಯುತ್ಸುವಿನ ಕತೆ ಕುತೂಹಲಕರವಾಗಿದೆ.
ಯುಯುತ್ಸು ಕೌರವನೇ. ಅಂದರೆ ದುರ್ಯೋಧನ ಸೇರಿದಂತೆ ನೂರೊಂದು ಮಂದಿ ಕುರುಪುತ್ರರಲ್ಲಿ ಇವನೂ ಒಬ್ಬ. ಧೃತರಾಷ್ಟ್ರನ ಮಗ. ಆದರೆ ಇವನು ಧೃತರಾಷ್ಟ್ರನಿಂದ ಗಾಂಧಾರಿಯಲ್ಲಿ ಜನಿಸಿದ ಪುತ್ರನಲ್ಲ. ಬದಲಾಗಿ, ಸುಗಂಧಿ ಎಂಬ ದಾಸಿಯಲ್ಲಿ ಧೃತರಾಷ್ಟ್ರನಿಂದ ಜನಿಸಿದ ಮಗ. ಈತನೂ ಕೌರವರ ಜೊತೆಗೇ ಬೆಳೆದ. ಪಾಂಡವರ ಜೊತೆಗೂ ಆಡಿ ಹಾಡಿ ಬೆಳೆದು ದೊಡ್ಡವನಾಗಿ ಅವರ ಜೊತೆಯೇ ಶಿಕ್ಷಣ ಪಡೆದ. ಗುರು ದ್ರೋಣರಿಂದ ಯುದ್ಧಕಲೆ ಕಲಿತ. ಆದರೆ ದುರ್ಯೋಧನನ ಪಾಂಡವದ್ವೇಷ, ಶಕುನಿಯ ನರಿಬುದ್ಧಿ ಇವನಿಗೆ ಇಷ್ಟವಾಗುತ್ತಿರಲಿಲ್ಲ. ಭೀಮಸೇನನನ್ನು ಕೊಲ್ಲಿಸಲು ದುರ್ಯೋಧನ ನಾನಾ ಕುತಂತ್ರಗಳನ್ನು ಮಾಡಿದಾಗ, ಅವುಗಳ ಸೂಚನೆಯನ್ನು ಮೊದಲೇ ಪಾಂಡವರಿಗೆ ನೀಡಿ, ಅವರು ಪಾರಾಗುವಂತೆ ಮಾಡಿದವನು ಇವನು. ಅಂಥ ಕುತಂತ್ರಗಳ ಮಾಹಿತಿಯನ್ನು ಇವನು ವಿದುರನ ಮೂಲಕ ಪಾಂಡವರಿಗೆ ತಲುಪಿಸುತ್ತಿದ್ದ ಎಂದು ಹೇಳಲಾಗುತ್ತದೆ. ಮುಂದೆ ಪಾಂಡವರ- ಕೌರವ ವೈಷಮ್ಯ ಉಲ್ಬಣಿಸಿ ಇಬ್ಬರ ನಡುವೆ ದ್ಯೂತ ನಡೆದು, ರಾಜಸಬೆಯಲ್ಲಿ ದ್ರೌಪದಿಯ ಸೀರೆ ಸೆಳೆದು ಅವಮಾನ ಮಾಡಿದಾಗ, ಅದನ್ನು ಪ್ರತಿಭಟಿಸಿವರಲ್ಲಿ ಇವನೂ ಒಬ್ಬ. ದುರ್ಯೋಧನನ ತಮ್ಮ ವಿಕರ್ಣ ದ್ರೌಪದಿ ವಸ್ತ್ರಾಪಹಾರವನ್ನು ಪ್ರತಿಭಟಿಸಿದಾಗ, ಆತನನ್ನು ಬೆಂಬಲಿಸಿದವನು ಯುಯುತ್ಸು.
ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?
ಮುಂದೆ ಕುರುಕ್ಷೇತ್ರ ಯುದ್ಧ ಆರಂಭವಾಯಿತು. ಆಗ ಭೀಷ್ಮಾಚಾರ್ಯರು ಉಭಯ ಸೇನೆಗಳನ್ನು ಉದ್ದೇಶಿಸಿ ಹೀಗೆ ಹೇಳಿದರು: ಅನಿವಾರ್ಯವಾಗಿ ಯುದ್ಧ ಸಂಘಟಿಸಿದೆ. ಪಾಂಡವರ ಅನ್ನ ತಿಂದವರು ಪಾಂಡವರ ಕಡೆಯಿಂದಲೂ, ಕೌರವರ ಅನ್ನ ತಿಂದವರು ಕೌರವರ ಕಡೆಯಿಂದಲೂ ಯುದ್ಧ ಮಾಡಲಿದ್ದಾರೆ. ಆದರೆ, ಈಗಲೂ, ತಾನು ಆಚೆ ಕಡೆ ಇರಬೇಕಿತ್ತು ಅಂತ ಕೆಲವರಿಗಾದರೂ ಅನ್ನಿಸುತ್ತಿರಬಹುದು. ಧರ್ಮ ಯಾವ ಕಡೆಯಲ್ಲಿದೆ, ನ್ಯಾಯ ಯಾವ ಕಡೆಯಲ್ಲಿದೆ ಎಂದು ನಾವು ಭಾವಿಸುತ್ತೇವೋ ಆ ಕಡೆಯಲ್ಲಿದ್ದು ಹೋರಾಡುವುದು, ಗೆಲ್ಲುವುದು ಅಥವಾ ಮಡಿಯುವುದು ನ್ಯಾಯವಾದುದು. ಈಗಲೂ ಅದಕ್ಕೆ ಅವಕಾಶವಿದೆ. ಯಾರಾದರೂ ಪಾಂಡವರ ಕಡೆಯಿಂದ ಇತ್ತ ಬರಬೇಕು ಎಂದುಕೊಂಡಿದ್ದರೆ ಅವರಿಗೆ ಸ್ವಾಗತವಿದೆ. ಇನ್ಯಾರಾದರೂ ಇಲ್ಲಿಂದ ಪಾಂಡವರ ಕಡೆ ಹೋಗಬೇಕು ಎಂದುಕೊಂಡಿದ್ದರೆ ಅವರನ್ನೂ ಬೀಳ್ಕೊಡಲಾಗುತ್ತದೆ. ಇದು ಈ ಯುಗದ ಕೊನೆಯ ಯುದ್ಧ. ಇಲ್ಲಿ ನಿಮ್ಮ ಮನಸ್ಫೂರ್ತಿಯಾಗಿ ಹೋರಾಟ ಮಾಡಿ, ಅರೆಮನಸ್ಸಿನಿಂದ ಹೋರಾಡಬೇಡಿ.
ಈ ಮಾತುಗಳನ್ನು ಕೇಳಿ, ಯುಯುತ್ಸು ಮುಂದೆ ಬಂದ. ''ಧರ್ಮರಾಯನ ಕಡೆ ನ್ಯಾಯವಿದೆಯೆಂದು ನಾನು ತಿಳಿದಿದ್ದೇನೆ. ಪಾಂಡವರಿಂದ ದ್ಯೂತದಲ್ಲಿ ಅಪಹರಿಸಿದ ಭೂಮಿಯನ್ನು ಅವರಿಗೆ ಕೊಡಬೇಕಾದ್ದು ನ್ಯಾಯ. ದುರ್ಯೋಧನ ಹಾಗೆ ಮಾಡದೆ ಇರುವುದರಿಂದ ಈ ಪಕ್ಷದಲ್ಲಿ ಅನ್ಯಾಯವಿದೆ; ಧರ್ಮರಾಯನ ಪಕ್ಷ ಧರ್ಮಪಕ್ಷವಾಗಿದೆ. ಅಲ್ಲಿ ಶ್ರೀಕೃಷ್ಣನಿದ್ದಾನೆ. ಆದ್ದರಿಂದ ನಾನು ಪಾಂಡವರ ಕಡೆ ಸೇರುತ್ತೇನೆ.''
ಯುಗಯುಗಾಂತರಗಳಷ್ಟು ಹಿರಿಯಾಕೆಯನ್ನು ಬಲರಾಮ ಮದುವೆಯಾಗಿದ್ದೇಕೆ?
ಭೀಷ್ಮಾಚಾರ್ಯರು ಆತನನ್ನು ಕಳಿಸಿಕೊಟ್ಟರು. ಪಾಂಡವರು ಆತನನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಮುಂದೆ ಹದಿನೆಂಟು ದಿನ ಈತ ಪಾಂಡವರ ಪರ ಹೋರಾಡಿ, ಬದುಕುಳಿದ. ಯುದ್ಧದ ಕೊನೆಯಲ್ಲಿ ಉಳಿದ ಬೆರಳೆಣಿಕೆಯ ಮಂದಿಯಲ್ಲಿ ಇವನೂ ಒಬ್ಬ. ಮುಂದೆ ಧರ್ಮರಾಯ ಪಟ್ಟವೇರಿ ಮೂವತ್ತಾರು ವರ್ಷ ರಾಜ್ಯಭಾರ ಮಾಡುತ್ತಾನೆ. ಆತನಿಗೆ ಯುಯುತ್ಸು ಸಹಾಯಕನಾಗಿ ಇದ್ದ. ಧರ್ಮರಾಯ ರಾಜ್ಯವನ್ನು ತೊರೆದು ಸ್ವರ್ಗಾರೋಹಣಕ್ಕೆ ಹೊರಟಾಗ, ಹಸ್ತಿನಾಪುರವನ್ನು ನೋಡಿಕೊಳ್ಳುವ ಹೊಣೆಯನ್ನು ಯುಯುತ್ಸುವಿಗೆ ಹೊರಿಸುತ್ತಾನೆ. ನಂತರ ಸುಭದ್ರೆಯ ಮಗ ಪರೀಕ್ಷಿತ ರಾಜನಾಗುವವರೆಗೂ ರಾಜ್ಯವನ್ನು ಯುಯುತ್ಸು ಚೆನ್ನಾಗಿ ನೋಡಿಕೊಳ್ಳುತ್ತಾನೆ.
ವಿಕರ್ಣನೂ ಯುಯುತ್ಸುವಿನಂತೆಯೇ ರಾಜಸಭೆಯಲ್ಲಿ ದ್ರೌಪದಿಗೆ ಆದ ಅವಮಾನವನ್ನು ವಿರೋಧಿಸಿದ್ದ. ಆದರೆ ಆತ ಯುದ್ಧದ ಸಂದರ್ಭದಲ್ಲಿ ಕೌರವರ ಕಡೆಗೇ ಇದ್ದು ಹೋರಾಡಿ, ಭೀಮನ ಕೈಯಲ್ಲಿ ಮೃತನಾದ. ವಿಕರ್ಣನಿಗೆ ಸಹೋದರ ಧರ್ಮ ಮಖ್ಯವಾಗಿತ್ತು. ಯುಯುತ್ಸುವಿಗೆ ಧರ್ಮವೇ ಮುಖ್ಯವಾಗಿತ್ತು. ಇದೇ ಇವರಿಬ್ಬರ ನಡುವಿನ ಪ್ರಮುಖ ವ್ಯತ್ಯಾಸ.
ನಿಮ್ಮ ರಾಶಿಗೆ ಯಾವುದರಿಂದ ಮೃತ್ಯುಭಯ? ಪರಿಹಾರವೇನು?