ಶೃಂಗೇರಿ: ಎಲೆಚುಕ್ಕಿ ರೋಗ ನಿವಾರಣೆಗೆ ಕೋಟಿ ಕುಂಕುಮಾರ್ಚನೆ
ಎಲೆ ಚುಕ್ಕಿ ರೋಗ ನಿವಾರಣೆಗೆ ಶಾರದೆ ಸನ್ನಿಧಿಯಲ್ಲಿ ಕೋಟಿ ಕುಂಕುಮಾರ್ಚನೆ
ಹತ್ತು ದಿನಗಳಲ್ಲಿ 1 ಕೋಟಿ ಲಲಿತಾ ಸಹಸ್ರನಾಮಾವಳಿಯನ್ನು ಪಠಿಸುತ್ತ ಕುಂಕುಮಾರ್ಚನೆ
ಶೃಂಗೇರಿಯಲ್ಲಿ ಸಹಸ್ರ ಮೋದಕ ಗಣಪತಿ ಹೋಮ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು : ವಾತಾವರಣದಲ್ಲಿ ಉಂಟಾದ ಬದಲಾವಣೆಯ ಜೊತೆಗೆ ವಾಡಿಕೆಗಿಂತ ಅತಿಯಾದ ಮಳೆಯಿಂದ ಮಲೆನಾಡಿನ ಭಾಗದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಎಲೆ ಚುಕ್ಕಿ ರೋಗದಿಂದಾಗಿ ರೈತರ ಜೀವನ ಸಂಕಷ್ಟಕ್ಕೆ ಈಡಾಗಿದೆ. ಮಲೆನಾಡಿನಲ್ಲಿ ರೈತರಿಗೆ ಸಂಕಷ್ಠಕ್ಕೀಡು ಮಾಡಿರುವ ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಅಡಿಕೆ ಸಂಕಷ್ಟ ಪರಿಹಾರ ಸಮಿತಿ ವತಿಯಿಂದ ಆಯೋಜಿಸಿರುವ ಕೋಟಿ ಕುಂಕುಮಾರ್ಚನೆ ಶಾರದಾ ದೇವಿಯ ಸನ್ನಿಧಿಯಲ್ಲಿ ಆರಂಭವಾಗಿದೆ.
ಹತ್ತು ದಿನಗಳ ಕಾಲ ನಡೆಯುವ ಪೂಜೆ
ಕೋಟಿ ಕುಂಕುಮಾರ್ಚನೆಗೆ ಶಾರದಾ ಮಠದ ಗುರುಗಳಾದ ಪರಮಪೂಜ್ಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ಸಂಕಲ್ಪ ನೆರವೇರಿಸಿ ಚಾಲನೆ ನೀಡಿದರು. ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಇದೇ ತಿಂಗಳು 27ರಂದು ಕೋಟಿ ಕುಂಕುಮಾರ್ಚನೆಯ ಪೂರ್ವಭಾವಿಯಾಗಿ ಸಹಸ್ರ ಮೋದಕ ಗಣಪತಿ ಹೋಮ ನಡೆಯಿತು. ಕೋಟಿ ಕುಂಕುಮಾರ್ಚನೆಯಲ್ಲಿ ಲಲಿತಾ ಸಹಸ್ರನಾಮ ಹೇಳುತ್ತ ಕುಂಕುಮಾರ್ಚನೆ ಮಾಡಲಾಗುತ್ತಿದೆ. ಮಠದಲ್ಲಿ ಲಿಲಿತಾ ಹೋಮ ಮತ್ತು ಬೆಟ್ಟದ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ರುದ್ರಹೋಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿದ್ದು, ಹತ್ತು ದಿನಗಳಲ್ಲಿ 1 ಕೋಟಿ ಲಲಿತಾ ಸಹಸ್ರನಾಮಾವಳಿಯನ್ನು ಪಠಿಸುತ್ತ ಕುಂಕುಮಾರ್ಚನೆ ನಡೆಯುತ್ತದೆ. 11ನೇ ದಿನ ಲಲಿತಾ ಹೋಮದ ಪೂರ್ಣಾಹುತಿಯ ಮೂಲಕ ಕೋಟಿ ಕುಂಕುಮಾರ್ಚನೆ ಪೂರ್ಣವಾಗಲಿದೆ.
Saturday Remedies: ಶನಿಯ ವಿಶೇಷ ಆಶೀರ್ವಾದಕ್ಕಾಗಿ ಈ ದಿನ ಹೀಗೆ ಮಾಡಿ..
55 ಋತ್ವಿಜರ ನೇತೃತ್ವದಲ್ಲಿ ಕೋಟಿ ಕುಂಕುಮಾರ್ಚನೆ
ದೇಶದ ನಾನಾ ಭಾಗಗಳಿಂದ ಬಂದಿರುವ 55 ಋತ್ವಿಜರ ನೇತೃತ್ವದಲ್ಲಿ ಕೋಟಿ ಕುಂಕುಮಾರ್ಚನೆ ಧಾರ್ಮಿಕ ಕಾರ್ಯ ನಡೆಯುತ್ತಿದೆ. ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದಿಂದ ಬೆಳೆಗಾರರ ಪರಿಸ್ಥಿತಿ ಅತಂತ್ರವಾಗಿದ್ದು ಮೊದಲೇ ಹಳದಿ ಎಲೆ ರೋಗದಿಂದ ಕಂಗಾಲಾಗಿರುವ ಬೆಳೆಗಾರರಿಗೆ ಎಲೆ ಚುಕ್ಕಿರೋಗ ಬರ ಸಿಡಿಲಿನಂತೆ ಕಾಣ್ಣುಸಿಕೊಂಡಿದೆ.ಇದರಿಂದ ತೀವ್ರ ಸಂಕಷ್ಟಕ್ಕೆ ಅಡಿಕೆ ಬೆಳೆಗಾರರು ಸಿಲುಕಿದ್ದಾರೆ.ಎಲೆಚುಕ್ಕಿರೋಗದ ಕಾರಣದಿಂದ ತೋಟವನ್ನು ನೋಡಲಾಗದೇ ಕೆಲ ಬೆಳಗಾರರು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳಿವೆ.ಈ ಹಿನ್ನೆಲೆ ವಿಜ್ಞಾನಿಗಳು ಸಂಶೋಧನೆಯನ್ನು ಒಂದಡೆ ಮುಂದುವರಿಸುತ್ತಿದ್ದರೆ ಮತ್ತೊಂದೆಡೆ ಬೆಳಗಾರರು ದೇವರ ಮೊರೆ ಹೋಗಿದ್ದಾರೆ. ಶೃಂಗೇರಿ ನಡೆಯುತ್ತಿರುವ ಕೋಟಿ ಕುಂಕುಮಾರ್ಚನೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ, ಮಠದ ಆಡಳಿತಾಧಿಕಾರಿ ವಿ.ಆರ್ ಗೌರಿಶಂಕರ್, ಅಡಿಕೆ ಸಂಕಷ್ಟ ಪರಿಹಾರ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಹುಳಿ, ವಿಜಯರಂಗ ಕೋಟೆ ತೋಟ, ಪ್ರಭಾಕರ್, ಹೆಚ್ಚಿಗೆ ರಾಮಚಂದ್ರರಾವ್ ಮತ್ತು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಇದ್ದರು.