Asianet Suvarna News Asianet Suvarna News

ಯಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ.. ಇದು ಹಾವೇರಿಯ ಮೈ ನವಿರೇಳಿಸೋ ಹೋರಿ ಹಬ್ಬ!

ಅಲಂಕಾರಗೊಂಡಿರೋ ಹೋರಿಗಳು.. ಹೋರಿಗಳ ಕೊರಳಲ್ಲಿ ಕಾಣೋ ಕೊಬ್ಬರಿ ಹಾರ.. ಜನರ ನಡುವೆ ಓಡ್ತಿರೋ ಹೋರಿಗಳು.. ಸಾವಿರಾರು ಸಂಖ್ಯೆಯಲ್ಲಿ ಸೇರಿರೋ ಜನರು.. ಇದು ಮೈ ಝುಮ್ಮೆನ್ನಿಸೋ ಕೊಬ್ರಿ ಹೋರಿ ಓಟ..

Kobri Hori Bull Catching Sport in Haveri during diwali skr
Author
First Published Oct 26, 2022, 4:52 PM IST

ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಕ್ಯಾಮರಾಮನ್ ರಾಜು 

ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ  ಉಂಟಾಗಿದೆ. ಆದ್ರೆ ಅಲ್ಲಿನ ರೈತರು ನೋವಿನಲ್ಲಿಯೂ ಎಲ್ಲಿಲ್ಲದ ಸಂಭ್ರಮಕ್ಕೆ ಮುಂದಾಗಿದ್ದಾರೆ. ದೀಪಾವಳಿ ಹಬ್ಬ ಬಂದ್ರೆ ಅವರ  ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕೊಬ್ಬರಿ ಹೋರಿ ಓಡಿಸೋ ಸ್ಫರ್ಧೆ ಶುರು ಆಗುತ್ತದೆ. ಈ ಬಾರಿ ಪ್ರವಾಹದಿಂದ ನಲುಗಿದ್ರೂ ಹೋರಿ ಹಬ್ಬ ಮಾತ್ರ ಬಿಟ್ಟಿಲ್ಲ. ಆ ಸ್ಪರ್ಧೆ ನೋಡುವುದಕ್ಕೆ ಮೈ ಜಲ್ ಅನ್ನುವಂತಿದೆ. ಅರೆ!ಅದೇನು ಹೋರಿ ಹಬ್ಬ ಅಂತೀರಾ? ಈ ಸ್ಟೋರಿ ನೋಡಿ..

ಏ ನಮ್ ಹೋರಿ ಹಿಡೀರಲೇ ತಾಕತ್ ಇದ್ರ..
ಏ ನಿನ್ ಹೋರಿ ಬಿಡಲೇ ತಾಕತ್ ಇದ್ರ.. 
ಎಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ... 
ಏನ್ ಹಬ್ಬ, ಏನ್ ಅಲಂಕಾರಲೇ ಆ ಹೋರಿಗೆ? 
ಹೀಗೆ ಒಂದಾ ಎರಡಾ ಜನರ ಮಾತು, ಕೇಕೆ, ಹಾರಾಟ, ತೂರಾಟ, ಪಟಾಕಿ ಸದ್ದು! ದೀಪಾವಳಿ ಅಂದರೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ  ಪಟಾಕಿ ಹೊಡೆದು ಸಿಹಿ ತಿನ್ನೋ ಹಬ್ಬ ಅಲ್ಲವೇ ಅಲ್ಲ. ಅದು ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ. ಹೋರಿ ತಿವಿದರೆ ಯಮನ ಪಾದವೇ ಗತಿ. ಉಸೇನ್ ಬೋಲ್ಟ್ ಮೀರಿಸೋ ರೇಂಜಿಗೆ ಹೋರಿಗಳು ಅಖಾಡದಲ್ಲಿ ಓಡ್ತಾ ಇದ್ರೆ ಅದರ ಖದರ್ ಬೇರೆನೇ ಇರುತ್ತೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಹೋರಿ ಬೆದರಿಸೋ ಸ್ಪರ್ಧೆಗೆ ಹೆಸರುವಾಸಿ.

ಅಲಂಕಾರಗೊಂಡಿರೋ ಹೋರಿಗಳು. ಹೋರಿಗಳ ಕೊರಳಲ್ಲಿ ಕಾಣೋ ಕೊಬ್ಬರಿ ಹಾರ. ಹೋರಿಗಳ ಬಳಿ ರಾರಾಜಿಸೋ ವಿಭಿನ್ನ ಹೆಸರುಗಳು, ಜನರ ನಡುವೆ ಓಡ್ತಿರೋ ಹೋರಿಗಳು.. ಸಾವಿರಾರು ಸಂಖ್ಯೆಯಲ್ಲಿ ಸೇರಿರೋ ಜನರು.. ಈ ದೃಶ್ಯ ಕಂಡು ಬಂದಿದ್ದು ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ. ದೀಪಾವಳಿ ಹಬ್ಬದ ಸಮಯದಲ್ಲಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ. ದೀಪಾವಳಿ ಪಾಡ್ಯದ ದಿನ ಕೊಬ್ಬರಿ ಹೋರಿ ಸ್ಪರ್ಧೆ ನಡೆಯುತ್ತದೆ. ನಗರದಲ್ಲಿ ನಡೆಯೋ ಕೊಬ್ಬರಿ ಹೋರಿ ಸ್ಪರ್ಧೆ ನಂತರದ ದಿನಗಳಲ್ಲಿ ಇಡಿ ಜಿಲ್ಲಾಯಾದ್ಯಂತ ವ್ಯಾಪಿಸುತ್ತದೆ. ಈ ಬಾರಿ ಮಳೆಯಿಂದಾಗಿ   ಹೋರಿ ಸ್ಪರ್ಧೆ ನಡೆಯುವುದೇ ಡೌಟ್ ಅನ್ನಲಾಗಿತ್ತು. ಅದ್ರೆ ರೈತರು ಕಷ್ಟಪಟ್ಟು ಸಾಕಿ ಹೋರಿಗಳನ್ನ ಹಬ್ಬಕ್ಕಾಗಿ ತಯಾರು ಮಾಡಿದ್ದಾರೆ. ಹಾಗಾಗಿ, ಹೋರಿ ತಂದು ಸ್ಪರ್ಧೆ ಮಾಡಿದ್ದಾರೆ. ಹೋರಿಗಳ ಕೊರಳಲ್ಲಿ ಕೊಬ್ಬರಿ ಹಾರ, ಹಣೆಗೆ ಬಲೂನ್, ಹೆಗಲ ಮೇಲೆ ಡಿಸೈನ್ ಡಿಸೈನ್ ಬಟ್ಟೆ ಅಲಂಕಾರ, ಹೀಗೆ ತರಹೇವಾರಿ ರಿಬ್ಬನ್ ಹಾಕಿ ಹೋರಿಗಳನ್ನು ಅಲಂಕಾರ ಮಾಡಲಾಗಿರುತ್ತದೆ. ಹೀಗೆ ಅಲಂಕಾರಗೊಂಡ ಹೋರಿಗಳನ್ನ  ಓಡಿಸ್ತಾರೆ. ಈ ಹಬ್ಬವನ್ನ ಎಂತಹ ಕಷ್ಟ ಬಂದ್ರೂ ಬಿಡುವುದಿಲ್ಲ ಅಂತಾರೆ ಹೋರಿ ಮಾಲೀಕರು.

ಹೋರಿ ಓಟ ಹೀಗೆ..
ಹೋರಿ ಮಾಲೀಕರು ಹುರುಳಿ, ಹಿಂಡಿ, ಮೊಟ್ಟೆ ಸೇರಿದಂತೆ ವಿವಿಧ ಧಾನ್ಯಗಳನ್ನ ತಿನ್ನಿಸಿ ಹೋರಿಯನ್ನ ಭರ್ಜರಿಯಾಗಿ ತಯಾರು ಮಾಡಿರ್ತಾರೆ. ಸಂಘಟಕರು ನಿಗದಿಪಡಿಸಿದ ಸಮಯದಲ್ಲಿ ಹೋರಿ ಯಾರ ಕೈಗೂ ಸಿಗದಂತೆ ದೂರಕ್ಕೆ ಓಡಬೇಕು. ಹೋರಿಯನ್ನ ಓಡಿಸ್ತಿದ್ದಂತೆ ಹೋರಿ ಹಿಡಿಯೋರು ಹೋರಿ ಹಿಂದೆಯೇ ಓಡ್ತಾರೆ. ಯಾರ ಕೈಗೂ ಸಿಗದಂತೆ ಓಡುವ ಹೋರಿಗೆ ಬಹುಮಾನ ನೀಡಲಾಗುತ್ತೆ. ಹೋರಿ ಹಿಡಿದವರಿಗೂ ಬಹುಮಾನ ನೀಡಲಾಗುತ್ತದೆ. ಹೀಗಾಗಿ ಭರ್ಜರಿ ಓಟ ಕಿತ್ತೋ ಹೋರಿಗಳನ್ನ ಹಿಡಿಯಲು ಪ್ರಾಣದ ಹಂಗು ತೊರೆದು ಪೈಲ್ವಾನರು ಪ್ರಯತ್ನಿಸುತ್ತಾರೆ.

ಇವತ್ತು ನಡೆದ  ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಬಹುಮಾನ ನೀಡೋದಿಲ್ಲ. ಇಂದಿನಿಂದ ಅಧಿಕೃತವಾಗಿ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ಶುರುವಾಗುತ್ತದೆ. ಒಟ್ಟಾರೆ ಕೆಲವೊಂದು ಬಾರಿ ಡೇಂಜರ್ ಅನ್ನಿಸೋ ಕೊಬ್ಬರಿ ಹೋರಿ ಸ್ಪರ್ಧೆಯನ್ನ ಉತ್ತರ ಕರ್ನಾಟಕದ ರೈತರು ಮನರಂಜನೆ ಹಬ್ಬವಾಗಿ ಆಚರಿಸಿಕೊಂಡು ಬರ್ತಿದ್ದಾರೆ.

Follow Us:
Download App:
  • android
  • ios