Asianet Suvarna News Asianet Suvarna News

Sankranti Horoscope: ಸೂರ್ಯನ ಚಲನೆ ನಿಮ್ಮ ರಾಶಿಗೆ ಯಾವ ಫಲ ನೀಡಲಿದೆ ನೋಡಿ..

ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಿದ್ದು, ಶನಿ ಕೂಡಾ ಮಕರದಲ್ಲೇ ಇದ್ದಾನೆ. ಈ ಸಂಕ್ರಮಣ ಕಾಲ ನಿಮ್ಮ ರಾಶಿಗೆ ಯಾವೆಲ್ಲ ಶುಭ ಲಾಭಗಳನ್ನು ತರಲಿದೆ ಎಂಬುದನ್ನು ವಿವರವಾಗಿ ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ. 

Know the Makar Sankranti impact on your zodiac sign
Author
Bangalore, First Published Jan 13, 2022, 5:54 PM IST

ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳಲ್ಲಿ ಸಂಚರಿಸುವ ಕಾಲವನ್ನೇ ಸಂಕ್ರಮಣ ಕಾಲ ಎನ್ನುತ್ತಾರೆ. ಹೀಗಾಗಿ ಪ್ರತಿ ತಿಂಗಳೂ ಸಂಕ್ರಮಣವಾಗುತ್ತದೆ. ಆದರೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ಕಾಲ ತುಂಬ ಗಮನಾರ್ಹವಾದ ಸಂಕ್ರಮಣವಾಗಿದೆ. ಅದಕ್ಕೆ ಕಾರಣ ಸೂರ್ಯನ ಉತ್ತರದ ನಡಿಗೆ.

ದಕ್ಷಿಣ ಗೋಲಾರ್ಧದ ಕಡೆಯಿಂದ ಉತ್ತರದ ಗೋಲಾರ್ಧದ ಕಡೆಗೆ ಸಾಗುವ ಬೆಳಕಿನ ಪಥವಾದ್ದರಿಂದ ಇದು ಅತ್ಯಂತ ಶ್ರೇಷ್ಠ ಕಾಲ ಎಂದು ಪರಿಗಣಿಸಲ್ಪಟ್ಟಿದೆ. ವಾಸ್ತವವಾಗಿ ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದ್ದರೂ ಭೂಮಿ(earth)ಯಲ್ಲಿ ನಿಂತಿರುವ ನಮಗೆ ಸೂರ್ಯ(Sun)ನೇ ಸುತ್ತುವಂತೆ ಭಾಸವಾಗುತ್ತಾನೆ. ಅಂತೂ ಒಂದು ಭ್ರಮಣ ಕಾರ್ಯ ನಡೆಯುತ್ತಿದೆ. ಆಕಾಶಕಾಯದಲ್ಲಿ ನಕ್ಷತ್ರಗಳ ನಡಿಗೆಯ ಮೇಲೆ ಸೂರ್ಯ ಸಂಕ್ರಮಣವಾದಾಗ 12 ರಾಶಿಗಳ(Zodiac signs) ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ? ಸೂರ್ಯನ ಸಂಕ್ರಮಣ ನಮ್ಮ ಬದುಕಲ್ಲೂ ಹೊಸ ಬದಲಾವನೆಗೆ ಕಾರಣವಾಗುತ್ತದೆಯಾ? ಸೂರ್ಯನ ಸಂಚಾರದ ಫಲಾಫಲಗಳೇನು? ತಿಳಿಯೋಣ.

ಸಂಕ್ರಾಂತಿ ಫಲ 

ಮೇಷ(Aries)
ಸೂರ್ಯ ಕರ್ಮ ಸ್ಥಾನವನ್ನು ಪ್ರವೇಶಿಸಿದ್ದಾನೆ. ಹೀಗಾಗಿ ವೃತ್ತಿಯಲ್ಲಿ ಬಲ. ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಿದೆ. ಗುರುಬಲವೂ ಇದೆ. ಹೀಗಾಗಿ ಸಮೃದ್ಧಿಯ ಫಲಗಳಿದ್ದಾವೆ. ರಾಶ್ಯಾಧಿಪತಿ ಕುಜನ ಬಲವೂ ಇರುವುದರಿಂದ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು. 
ಪರಿಹಾರ: ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ(Taurus) 
ಸೂರ್ಯ ಭಾಗ್ಯಸ್ಥಾನಕ್ಕೆ ಪ್ರವೇಶಿಸಿರುವುದರಿಂದ ಅಸಮಾಧಾನದ ಫಲಗಳಿದ್ದಾವೆ. ತಂದೆ-ಮಕ್ಕಳಲ್ಲಿ ಸ್ವಲ್ಪ ಅಸಮಾಧಾನ ಇರಲಿದೆ. ಪೂಜೆ-ಪುನಸ್ಕಾರಗಳಲ್ಲಿ ಅಸಕ್ತಿ ಕಳೆಯುತ್ತದೆ. ವೃತ್ತಿಯಲ್ಲಿ ಬಲವಿದೆ, ಕಾರ್ಯಗಳು ನೆರವೇರುತ್ತವೆ. ಆರೋಗ್ಯ ಹಾಗೂ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದಾವೆ. ಅನ್ಯ ಚಿಂತೆ ಮಾಡದೆ ಕಾಯಕವೇ ಕೈಲಾಸ ಅಂತ ಭಾವಿಸಿದವರಿಗೆ ಶುಭ ಫಲಗಳಿವೆ.
ಪರಿಹಾರ: ಮಹಾಲಕ್ಷ್ಮೀ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ.

ಮಿಥುನ(Gemini) 
ಸೂರ್ಯ ಅಷ್ಟಮ ಸ್ಥಾನಕ್ಕೆ ಪ್ರವೇಶಿಸಿದ್ದಾನೆ. ವಾತ - ಉಷ್ಣ ಸಂಬಂಧಿ ತೊಂದರೆಗಳಿದ್ದಾವೆ. ಆದರೆ ಗುರುಬಲ ಇರುವುದರಿಂದ ಮನೆಯಲ್ಲಿ ಮಂಗಳ ಕಾರ್ಯಗಳು ಏರ್ಪಾಡಾಗಲಿವೆ. ಸಂಕ್ರಾಂತಿ ನಿಮ್ಮ ಪಾಲಿಗೆ ಸಂತಸದ ವಾತಾವರಣವನ್ನು ತರಲಿದೆ. ಆತಂಕ ಬೇಡ. ಕೊಂಚ ಮಟ್ಟಿಗೆ ಸಹೋದರರ ಅಸಹಕಾರ ಇರಲಿದೆ. ವ್ಯಾಪಾರ-ವಹಿವಾಟಿನಲ್ಲಿ ನಷ್ಟ ಸಂಭವ ಇದೆ. ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಫೆಬ್ರುವರಿ ನಂತರ ಅನುಕೂಲ ಇರಲಿದೆ.
ಪರಿಹಾರ: ಆದಿತ್ಯ ಹೃದಯ ಪಠಿಸಿ

ಕರ್ಕಾಟಕ(cancer) 
ರವಿ ನಿಮ್ಮ ರಾಶಿಯಿಂದ ಸಪ್ತಮಕ್ಕೆ ಬಂದಿದ್ದಾನೆ. ಹೀಗಾಗಿ ವ್ಯಾಪಾರಿಗಳಿಗೆ ಅಸಮಾಧಾನದ ಫಲ, ಹಣಕಾಸಿಗೆ ಸಮಸ್ಯೆ, ಅಷ್ಟಮದ ಗುರುವಿನಿಂದ ಮಾನಸಿಕ ಅಸಮಧಾನ ಇರಲಿದೆ, ಕುಜ ಗ್ರಹ ಪರಿವರ್ತನೆಯಾಗುವವರೆಗೆ ಸ್ವಲ್ಪ ಸಮಾಧಾನ ಇರಲಿ. ಕಷ್ಟ ದಾಟಲಿಕ್ಕೆ ಕುಜನೇ ಸಹಾಯಕವಾಗುತ್ತಾನೆ. ಮಾರ್ಚ್ ನಂತರ ಅನುಕೂಲ ಫಲಗಳು ಉಂಟಾಗಲಿವೆ. ತಾಳ್ಮೆ ಇರಲಿ.
ಪರಿಹಾರ: ಶಿವನ ಆರಾಧನೆ ಮಾಡಿ

ಸಿಂಹ(Leo) 
ಸೂರ್ಯ ಶತ್ರುರಾಶಿಯನ್ನು ಪ್ರವೇಶಿಸಿರುವುದರಿಂದ ಶತ್ರುಗಳಿಂದ ಬಾಧೆ ಉಂಟಾಗುವ ಸಾಧ್ಯತೆ, ಸಾಲ ಬಾಧೆಯೂ ಇರಲಿದೆ. ಈ ಸಂಕ್ರಮಣ ಕಾಲದಲ್ಲಿ ಹೊರಗಿನ ಬೆಳಕಷ್ಟೇ ಅಲ್ಲ, ಅಂತರಂಗದ ಬೆಳಕೂ ಬೇಕಾಗಿದೆ. ಹೀಗಾಗಿ ಸೂರ್ಯ ಪ್ರಾರ್ಥನೆ ಮಾಡಿ. ಗುರು ಗ್ರಹದ ಅನುಕೂಲ ಇರುವುದರಿಂದ ಸಂಗಾತಿ ಸಹಕಾರ, ದಾಂಪತ್ಯ ಜೀವನದಲ್ಲಿ ಸಂತಸ ಇರಲಿದೆ. ಆರೋಗ್ಯದಲ್ಲಿ ಕೊಂಚ ಏರುಪೇರು ಆಗಲಿದೆ, ಎಚ್ಚರ ವಹಿಸಿ.
ಪರಿಹಾರ: ಸೂರ್ಯ ಪ್ರಾರ್ಥನೆ ಮಾಡಿ.

ಕನ್ಯಾ(Virgo) 
ವ್ಯಯಾಧಿಪತಿ ಪಂಚಮ ಸ್ಥಾನಕ್ಕೆ ಪ್ರವೇಶಿಸಿರುವುದರಿಂದ ಮಕ್ಕಳ ವಿಷಯದಲ್ಲಿ ಆತಂಕ ತರಲಿದೆ. ಮಕ್ಕಳಿಂದ ವಿರೋಧ ಉಂಟಾಗಲಿದೆ. ಆರೋಗ್ಯವೂ ಹಾಳಾಗುವ ಸಾಧ್ಯತೆ ಇದೆ. ಹೊಟ್ಟೆ ಸಂಬಂಧಿ ತೊಂದರೆ ಇರಲಿದೆ. ಕುಜ ಗ್ರಹದ ಅನುಗ್ರಹ ಇರುವುದರಿಂದ ಅನುಕೂಲ ಫಲಗಳೂ ಇರಲಿವೆ. ಆತಂಕ ಬೇಡ. ಮುಖ್ಯವಾಗಿ ಧೈರ್ಯದಿಂದ ಕಷ್ಟವನ್ನು ದಾಟುವ ಶಕ್ತಿಯನ್ನು ಕುಜ ತಂದು ಕೊಡುತ್ತಾನೆ.
ಪರಿಹಾರ: ಶಿವ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ.

ತುಲಾ(Libra) 
ಲಾಭಾಧಿಪತಿಯಾದ ಸೂರ್ಯ ನಿಮ್ಮ ರಾಶಿಯಿಂದ ಚತುರ್ಥ ಸ್ಥಾನಕ್ಕೆ ಬಂದಿದ್ದಾನೆ. ಶತ್ರುವಿನ ಮನೆಯಲ್ಲಿ ರವಿಯ ಸಂಚಾರ ಇರುವುದರಿಂದ ಸ್ವಲ್ಪ ಅಸಮಧಾನದ ಫಲಗಳೇ ಇರಲಿದೆ. ತಾಳ್ಮೆ ಇರಲಿ, ಧನಾಧಿಪತಿ ಬಲವಾಗಿರುವುದರಿಂದ ಹಣಕ್ಕೆ ತೊಂದರೆ ಆಗುವುದಿಲ್ಲ, ಗುರುಬಲವೂ ಇದೆ. ಹೀಗಾಗಿ ಮಂಗಳಕರ ವಾತಾವರಣ ಇರಲಿದೆ. ವಿಳಂಬವಾಗಿ ಕಾರ್ಯಗಳಿಗೆ ಫಲ ಸಿಗಲಿದೆ.  
ಪರಿಹಾರ: ಲಲಿತಾ ಸಹಸ್ರನಾಮ ಪಠಿಸಿ.

Makar Sankranti: ಯಾವ ರಾಶಿಯವರು ಏನು ದಾನ ಮಾಡಿದರೆ ಒಳ್ಳೆಯದು?

ವೃಶ್ಚಿಕ(Scorpio) 
ಕರ್ಮಾಧಿಪತಿಯಾದ ರವಿಯು ಪ್ರಸ್ತುತ ತೃತೀಯಕ್ಕೆ ಬಂದಿದ್ದಾನೆ. ಹೀಗಾಗಿ ಧೈರ್ಯ ಇರಲಿದೆ. ಕಷ್ಟಪಟ್ಟಾದರೂ ಸಾಧಿಸುವ ಛಲ ಇರಲಿದೆ. ಜನ್ಮಾಧಿಪತಿಯಾದ ಕುಜನೂ ಬಲವಾಗಿರುವುದರಿಂದ ಸಾಹಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಗುರು ಗ್ರಹದಿಂದ ಸೌಖ್ಯ, ತಾಯಿಯಿಂದ ಶುಭ ಆಶೀರ್ವಾದ ಇರಲಿದೆ. ಸಂಕ್ರಾಂತಿ ನಿಮ್ಮ ಪಾಲಿಗೆ ಸುಗ್ಗಿ ಕಾಲವೇ ಆಗಿರಲಿದೆ. ರಾಹುವಿನಿಂದ ವ್ಯಾಪಾರ-ದಾಂಪತ್ಯದ ವಿಷಯಗಳಲ್ಲಿ ಕೊಂಚ ಅಸಮಾಧಾನದ ಫಲಗಳಿದ್ದಾವೆ. 
ಪರಿಹಾರ: ನಾಗ ಪ್ರಾರ್ಥನೆ ಹಾಗೂ ಅಮ್ಮನವರ ಪ್ರಾರ್ಥನೆ ಮಾಡಿ.

ಧನಸ್ಸು (Sagitarius) 
ಸೂರ್ಯ ಧನ ಸ್ಥಾನವನ್ನು ಪ್ರವೇಶಿಸಿರುವುದರಿಂದ ಹಣಕಾಸಿನ ಸಮಸ್ಯೆಗಳುಂಟಾಗುತ್ತವೆ. ತಂದೆ- ತಾಯಿಯರ ಆರೋಗ್ಯದ ಸಲುವಾಗಿ ಹಣವ್ಯಯ. ಮಾತು ಒರಟಾಗಲಿದೆ. ಕುಟುಂಬದಲ್ಲಿ ಘರ್ಷಣೆಗಳುಂಟಾಗುವ ಸಾಧ್ಯತೆ ಇದೆ. ತಾಳ್ಮೆ ಬೇಕು. ಗುರುವಿನ ಅನುಗ್ರಹವೂ ಇಲ್ಲ. ಹೀಗಾಗಿ ಗೋಧಿ ಧಾನ್ಯವನ್ನು ಶಿವನಿಗೆ ಸಮರ್ಪಿಸಿ. ಕರ್ಮಾಧಿಪತಿ ಅನುಕೂಲವಾಗಿದ್ದಾನೆ. ಹೀಗಾಗಿ ವೃತ್ತಿಯಲ್ಲಿ ಅನುಕೂಲ ಇರಲಿದೆ. ಆತಂಕ ಬೇಡ. ಖರ್ಚನ್ನು ತೂಗಿಸುವ ಶಕ್ತಿ ಬರಲಿದೆ.
ಪರಿಹಾರ: ಈಶ್ವರ ಪ್ರಾರ್ಥನೆ ಮಾಡಿ.

Mistakes In Daily Pooja: ದೇವರ ಪೂಜೆಯಲ್ಲಿ ನೀವು ಮಾಡುತ್ತಿರಬಹುದಾದ 12 ತಪ್ಪುಗಳು..

ಮಕರ(Capricorn) 
ಅಷ್ಟಮಾಧಿಪತಿ ಸೂರ್ಯ ಜನ್ಮಕ್ಕೆ ಬಂದಿರುವುದರಿಂದ ಆರೋಗ್ಯ ಬಾಧೆ ತರಲಿದೆ. ಆರೋಗ್ಯದ ವಿಷಯದಲ್ಲಿ ಭಯವನ್ನು ಉಂಟು ಮಾಡಲಿದೆ. ಉಷ್ಣ-ವಾತ ಸಂಬಂಧಿ ತೊಂದರೆಗಳಾಗುವ ಸಾಧ್ಯತೆ ಇರಲಿದೆ. ಧಾನ್ಯ ಸಮೃದ್ಧಿ ಇರಲಿದೆ, ಗುರುಬಲದಿಂದ ಮಂಗಳ ಕಾರ್ಯಗಳೂ ನಡೆಯಲಿವೆ. ಆರೋಗ್ಯ ಬಾಧೆ ಇರುವುದರ ಜೊತೆಗೆ ವೃತ್ತಿಯಲ್ಲೂ ಸ್ವಲ್ಪ ಅಸಮಾಧಾನ ಇರಲಿದೆ. ಕಾರ್ಯಗಳು ಸಂಪೂರ್ಣವಾಗುವುದಿಲ್ಲ. ತಾಳ್ಮೆ ಕಳೆದುಕೊಳ್ಳಬೇಡಿ.
ಪರಿಹಾರ: ಲಲಿತಾ ಪರಮೇಶ್ವರಿ ಪ್ರಾರ್ಥನೆ / ಗೋಧಿ ದಾನ ಮಾಡಿ.

ಕುಂಭ (Aquarius) 
ಸಪ್ತಮಾಧಿಪತಿ ವ್ಯಯ ಸ್ಥಾನಕ್ಕೆ ಬಂದಿರುವುದರಿಂದ ದಾಂಪತ್ಯ ಜೀವನ ದುರ್ಬಲವಾಗುತ್ತದೆ. ಮನೆಯ ಹಿರಿಯರ ಹಾಗೂ ಕಿರಿಯರ ವಿಷಯದಲ್ಲಿ ಕಹಿಯಾದ ವಾತಾವರಣ ಏರ್ಪಾಡಾಗುತ್ತದೆ. ಸ್ವಲ್ಪ ಅಸಮಾಧಾನ ವಾತಾವರಣ ಇರಲಿದೆ, ಖರ್ಚು(spendings) ಹೆಚ್ಚಾಗಲಿದೆ. ಆದರೆ ವೃತ್ತಿಯಲ್ಲಿ ಬಲವಿದೆ ಆತಂಕ ಬೇಡ. ಆಟೋಮೊಬೈಲ್ಸ್, ಎಲೆಕ್ಟ್ರಾನಿಕ್ಸ್ ಇಂಥ ಕ್ಷೇತ್ರದವರಿಗೆ ಅನುಕೂಲ ಇದೆ. ಖರ್ಚಿನ ಬಗ್ಗೆ ಎಚ್ಚರ ಇರಲಿ.
ಪರಿಹಾರ: ಸೂರ್ಯ ಪ್ರಾರ್ಥನೆ ಮಾಡಿ / ಈಶ್ವರ ಪ್ರಾರ್ಥನೆ ಮಾಡಿ.

ಮೀನ(pieces) 
ಏಕಾದಶ ಸ್ಥಾನದ ರವಿಯಿಂದ ಲಾಭ ಫಲವಿದೆ. ಭಾಗ್ಯ ಸಮೃದ್ಧಿಯಾಗಲಿದೆ. ಸಂಕ್ರಾಂತಿ ನಿಮ್ಮ ಪಾಲಿಗೆ ಶುಭಫಲ ತರಲಿದೆ. ಆರೋಗ್ಯ(health)ದಲ್ಲಿ ಕೊಂಚ ಏರುಪೇರು ಉಂಟಾಗಲಿದೆ. ಹೀಗಾಗಿ ಸ್ವಲ್ಪ ಎಚ್ಚರವಾಗಿರಿ. ಮುಂದಿನ ದಿನಗಳಲ್ಲಿ ಸ್ವಲ್ಪ ಸಾಲ ಬಾಧೆಗೆ ತುತ್ತಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೊಂಚ ಎಚ್ಚರವಾಗಿರಿ.
ಪರಿಹಾರ: ಗುರು ಪ್ರಾರ್ಥನೆ / ಈಶ್ವರ ಪ್ರಾರ್ಥನೆ ಮಾಡಿ

Follow Us:
Download App:
  • android
  • ios