ಧನತೇರಸ್ ಅಥವಾ ದೀಪಾವಳಿಯಲ್ಲಿ ಲಕ್ಷ್ಮಿ-ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ. ಪೂಜೆಗೆ ಮೊದಲು ಈ ಮೂರ್ತಿಗಳನ್ನು ಖರೀದಿ ಮಾಡುವವರು ನೀವಾಗಿದ್ದರೆ, ಮೂರ್ತಿ ಖರೀದಿಗೆ ಮೊದಲು ಕೆಲ ವಿಷ್ಯಗಳನ್ನು ನೆನಪಿಡಿ.
ದೀಪಾವಳಿ ಮತ್ತು ಧನತೇರಸ್ ಹಬ್ಬದ ಸಂದರ್ಭದಲ್ಲಿ ಮನೆಗೆ ಹೊಸ ಲಕ್ಷ್ಮಿ-ಗಣೇಶ ಮೂರ್ತಿಯನ್ನು ತರುವುದು ಶುಭಕರ ಎಂದು ನಂಬಲಾಗಿದೆ. ದೀಪಾವಳಿ ಪೂಜೆಯಲ್ಲಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಆದರೆ ಮೂರ್ತಿ ಖರೀದಿಸುವಾಗ ಅದರ ಗಾತ್ರ, ಬಣ್ಣ ಮತ್ತು ಭಂಗಿಯ ಬಗ್ಗೆ ವಿಶೇಷ ಗಮನ ನೀಡಬೇಕು.
ಲಕ್ಷ್ಮಿ-ಗಣೇಶ ಮೂರ್ತಿಯ ಭಂಗಿ ಹೇಗಿರಬೇಕು?
ಕಮಲದ ಹೂವಿನ ಮೇಲೆ ಆಸೀನವಾಗಿರುವ ಲಕ್ಷ್ಮಿ ಮೂರ್ತಿಯನ್ನು ಖರೀದಿ ಮಾಡುವುದು ಶುಭಕರ. ನಿಂತಿರುವ ಭಂಗಿಯಲ್ಲಿರುವ ಲಕ್ಷ್ಮಿ ದೇವಿಯ ಮೂರ್ತಿಗಿಂತ ಕುಳಿತಿರುವ ಭಂಗಿಯ ಮೂರ್ತಿಯನ್ನು ಖರೀದಿಸುವುದು ಉತ್ತಮ ಎಂಬ ನಂಬಿಕೆಯಿದೆ. ಲಕ್ಷ್ಮಿ ದೇವಿಯ ಕೈಯಿಂದ ಚಿನ್ನದ ನಾಣ್ಯಗಳು ಬೀಳುತ್ತಿರುವ ಧನ ವರ್ಷಾ ಭಂಗಿಯ ಮೂರ್ತಿಗೂ ಆದ್ಯತೆ ನೀಡಬಹುದು. ಇನ್ನು ಗಣೇಶನ ಮೂರ್ತಿಯನ್ನು ಖರೀದಿಸುವಾಗ ಸೊಂಡಿಲು ಎಡಭಾಗಕ್ಕೆ ತಿರುಗಿರುವ ವಾಮಮುಖಿ ಗಣೇಶನ ಮೂರ್ತಿಯನ್ನು ಆಯ್ಕೆ ಮಾಡಬೇಕು. ಗೃಹಸ್ಥರಿಗೆ ಇಂತಹ ಮೂರ್ತಿ ಶುಭಕರ ಎಂದು ನಂಬಲಾಗಿದೆ.
ಲಕ್ಷ್ಮಿ-ಗಣೇಶ ಮೂರ್ತಿಯ ಬಣ್ಣ ಯಾವುದು?
ಮೂರ್ತಿಯ ಬಣ್ಣಕ್ಕೂ ವಾಸ್ತುವಿನಲ್ಲಿ ಮಹತ್ವ ನೀಡಲಾಗುತ್ತದೆ. ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳಿಗೆ ಗುಲಾಬಿ, ಗೋಲ್ಡನ್ ಬಣ್ಣ ಅಥವಾ ತಿಳಿ ಹಳದಿ ಬಣ್ಣವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಕಪ್ಪು ಅಥವಾ ಗಾಢ ಬಣ್ಣದ ಮೂರ್ತಿಗಳನ್ನು ಆಯ್ಕೆ ಮಾಡದಿರುವುದು ಉತ್ತಮ ಎಂಬುದು ವಾಸ್ತು ನಂಬಿಕೆ. ದೇವರ ಮೂರ್ತಿಗಳು ಕೆಂಪು, ಗುಲಾಬಿ ಅಥವಾ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿರುವಂತಿದ್ದರೆ ಶುಭಕರ.
ಮೂರ್ತಿಯ ಗಾತ್ರ ಎಷ್ಟಿರಬೇಕು?
ಮನೆಯ ಪೂಜಾ ಮಂದಿರದಲ್ಲಿ ಪ್ರತಿಷ್ಠಾಪಿಸುವ ಲಕ್ಷ್ಮಿ-ಗಣೇಶ ಮೂರ್ತಿಗಳು ಚಿಕ್ಕದಾಗಿರುವುದು ಉತ್ತಮ. ಮೂರ್ತಿಯ ಗಾತ್ರ 1ರಿಂದ 9 ಇಂಚುಗಳ ಒಳಗಿರಬೇಕು. ಇದಕ್ಕಿಂತ ದೊಡ್ಡ ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ಸೇರಿದಂತೆ ಕೆಲವು ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಅವುಗಳನ್ನು ಮನೆಯಲ್ಲಿಯೇ ಸರಿಯಾಗಿ ನಿರ್ವಹಿಸುವುದು ಕಷ್ಟವಾಗಬಹುದು. ಹೀಗಾಗಿ ದೊಡ್ಡ ಮೂರ್ತಿಗಳನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಮೂರ್ತಿ ಒಡೆದಿರಬಾರದು
ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳನ್ನು ಖರೀದಿಸುವಾಗ ಅವುಗಳಲ್ಲಿ ಯಾವುದೇ ಬಿರುಕು, ಮುರಿತ ಅಥವಾ ಹಾನಿ ಇರಬಾರದು. ಸಣ್ಣದಾದರೂ ಬಿರುಕು ಅಥವಾ ಗೀರುಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು. ಹಾನಿಗೊಳಗಾದ ಮೂರ್ತಿಗಳನ್ನು ಪೂಜೆಗೆ ಆಯ್ಕೆ ಮಾಡಬಾರದು.
ಲಕ್ಷ್ಮಿ-ಗಣೇಶನ ಮೂರ್ತಿಗಳು ಪ್ರತ್ಯೇಕವಾಗಿರಲಿ
ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳನ್ನು ಖರೀದಿಸುವಾಗ ಅವು ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳಬೇಕು. ಎರಡೂ ದೇವರ ಮೂರ್ತಿಗಳು ಒಂದೇ ಆಕೃತಿಯಲ್ಲಿ ಬೆಸೆದುಕೊಂಡಿರುವ ಮೂರ್ತಿಗಳ ಬದಲಿಗೆ ಪ್ರತ್ಯೇಕ ಮೂರ್ತಿಗಳನ್ನು ಆಯ್ಕೆ ಮಾಡುವುದು ಉತ್ತಮ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ದೇವರ ವಾಹನಗಳಿಗೂ ಇರಲಿ ಗಮನ
ಗಣೇಶನ ಮೂರ್ತಿಯೊಂದಿಗೆ ಆತನ ವಾಹನವಾದ ಮೂಷಿಕ (ಇಲಿ) ಇರಬೇಕು. ಹಾಗೆಯೇ ಲಕ್ಷ್ಮಿ ದೇವಿಯ ಮೂರ್ತಿಯೊಂದಿಗೆ ಗೂಬೆ ಅಥವಾ ಆನೆಯ ಚಿತ್ರಣವಿದೆಯೇ ಎಂಬುದನ್ನೂ ಗಮನಿಸಬಹುದು. ಇವು ದೇವರ ವಾಹನಗಳ ಸಂಕೇತಗಳಾಗಿವೆ.






