ಕೊಡಗು: ಮದ್ದು ಪುಟ್ಟು, ಮದ್ದು ಪಾಯಸ ಸೇವಿಸಿ ಕಕ್ಕಡ ಹಬ್ಬ ಆಚರಿಸಿದ ಕೊಡವರು..!
ಕೊಡಗು ಜಿಲ್ಲೆ ಸಾಕಷ್ಟು ಮಳೆ ಸುರಿಯುವ, ಹಾಗೇ ವಿಪರೀತ ಚಳಿಯ ಹವಾಮಾನ ಹೊಂದಿದೆ. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆ ಸುರಿಯುತ್ತದೆ. ಆಗಸ್ಟ್ ತಿಂಗಳಲ್ಲಿ ಗದ್ದೆಗಳ ನಾಟಿಯನ್ನು ಮಾಡುವುದರಿಂದ ಈ ಶೀತ ವಾತಾವರಣದಲ್ಲಿ ತಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಕಕ್ಕಡ ಸೊಪ್ಪಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಲಾಗುತ್ತದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಆ.02): ಕೊಡಗು ಜಿಲ್ಲೆ ಅಂದರೆ ಎಲ್ಲಾ ರೀತಿಯಿಂದಲೂ ವೈಶಿಷ್ಟ್ಯವೇ. ಇಲ್ಲಿನ ಆಚಾರ, ವಿಚಾರ, ಹಬ್ಬ, ಹರಿದಿನ. ಅಷ್ಟೇ ಏಕೆ ಇಲ್ಲಿನ ಆಹಾರ ಪದ್ಧತಿಗಳೂ ವಿಶಿಷ್ಟವೇ. ಇಂತಹ ವಿಶಿಷ್ಟ ಹಬ್ಬ, ಆಚರಣೆಗಳಲ್ಲಿ ಕಕ್ಕಡ ಪದಿನೆಟ್ಟು ಕೂಡ ಒಂದು. ಆ.2 ಕ್ಕೆ ಮದ್ದು ಸೊಪ್ಪಿಗೆ ವಿಶೇಷ ಔಷಧಿ ಗುಣ ಬರುವುದರಿಂದ ಆ ಸೊಪ್ಪಿನಿಂದ ವಿಶೇಷ ಪಾಯ, ಪುಟ್ಟುಗಳನ್ನು ಮಾಡಿ ಸವಿಯುತ್ತಾರೆ.
ಹೀಗೆ ಸೇವಿಸುವುದಕ್ಕೂ ಒಂದು ಹಿನ್ನೆಲೆ ಇದೆ. ಹೌದು, ಕೊಡಗು ಜಿಲ್ಲೆ ಸಾಕಷ್ಟು ಮಳೆ ಸುರಿಯುವ, ಹಾಗೇ ವಿಪರೀತ ಚಳಿಯ ಹವಾಮಾನ ಹೊಂದಿದೆ. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆ ಸುರಿಯುತ್ತದೆ. ಆಗಸ್ಟ್ ತಿಂಗಳಲ್ಲಿ ಗದ್ದೆಗಳ ನಾಟಿಯನ್ನು ಮಾಡುವುದರಿಂದ ಈ ಶೀತ ವಾತಾವರಣದಲ್ಲಿ ತಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಕಕ್ಕಡ ಸೊಪ್ಪಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಲಾಗುತ್ತದೆ.
ನಾಯಿ ಮೂತ್ರ ಮಾಡಿದ ಔಷಧಿ ಕೊಡುವ ಮಡಿಕೇರಿ ಜಿಲ್ಲಾಸ್ಪತ್ರೆ: ಜನರ ಜೀವದ ಜೊತೆಗೆ ಚೆಲ್ಲಾಟ
ಹೌದು, ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಇಂದು(ಬುಧವಾರ) ಮಡಿಕೇರಿ ಹೊರವಲಯದಲ್ಲಿ ಕಕ್ಕಡ ಪದಿನೆಟ್ಟು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮೊದಲು ಕೊಡವರು, ದುಡಿಕೊಟ್ಟು ಪಾಟ್ ಬಡಿಯುತ್ತಾ, ಹದ ಮಾಡಿದ್ದ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿದರು. ನಂತರ ತಮ್ಮ ಪೂಜ್ಯನೀಯ ಆಯುಧವಾಗಿರುವ ಕೋವಿಯಿಂದ ಒಂದು ಸುತ್ತು ಗುಂಡು ಹಾರಿಸಿದರು. ಗುಂಡು ಹಾರಿಸುತ್ತಿದ್ದಂತೆ ನೆರೆದಿದ್ದ ಕೊಡವರು ಭತ್ತದ ಸಸಿಗಳನ್ನು ನಾಟಿ ಮಾಡಲು ಆರಂಭಿಸಿದರು. ದುಡಿಕೊಟ್ಟು ಪಾಟ್ ಬಡಿಯುತ್ತಾ, ಭೂತಾಯಿಯನ್ನು ನೆನೆಯುತ್ತಾ ನಾಟಿ ಮುಗಿಸಿದರು. ಇದಕ್ಕೂ ಮೊದಲು ಆಟಿ ಸೊಪ್ಪಿನಿಂದ ಮಾಡಿದ್ದ ವಿಶೇಷ ಪಾಯಸ ಸೇವಿಸಿದರು. ಇದರ ಜೊತೆಗೆ ಬಿದಿರಿನ ಕಣಿಲೆ ಖಾದ್ಯ, ನಾಟಿಕೋಳಿ ಸಾರು, ಕಡುಂಬಟ್ಟು ಮತ್ತು ಪಂದಿಕರಿ ಸೇರಿದಂತೆ ವಿವಿಧ ವಿಶೇಷ ಖಾದ್ಯಗಳನ್ನು ಸೇವಿಸಿದರು. ಈ ಸಂದರ್ಭ ಮಾತನಾಡಿದ ಪ್ರಕೃತಿಯ ನಡುವೆ ಬಾಳಿ ಬದುಕಿದ ಕೊಡವರು ಕಕ್ಕಡ ಪದಿನೆಟ್ಟು, ಕಾವೇರಿ ಚಂಗ್ರಾಂದಿ, ಹುತ್ತರಿ ಸೇರಿದಂತೆ ನಮ್ಮದೇ ವಿವಿಧ ಹಬ್ಬ ಆಚರಣೆಗಳನ್ನು ಆಚರಿಸುತ್ತಿದ್ದೇವೆ. ಆ ಮೂಲಕ ನಮ್ಮ ಪೂರ್ವಜರಿಂದಲೂ ನಡೆದುಕೊಂಡು ಬಂದಿರುವ ನಮ್ಮ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಕೊಡವ ನ್ಯಾಷನಲ್ ಕೌನಿಲ್ಸ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಇನ್ನು ಮೀನಾ ಅವರು ಮಾತನಾಡಿ ಕಕ್ಕಡ ಪದಿನೆಟ್ಟು ಅಂದರೆ ಆ ಸೊಪ್ಪಿಗೆ 18 ಔಷಧಿ ಗುಣಗಳು ಬಂದಿರುತ್ತವೆ. ಆಟಿ ಸೊಪ್ಪಿನಲ್ಲಿ ಪಾಯಸ ಮತ್ತು ವಿವಿಧ ಸಿಹಿ ಖಾದ್ಯ ಮುಂತಾದವುಗಳನ್ನು ಮಾಡುತ್ತೇವೆ. ಅದನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಲಿದೆ. ಹೀಗಾಗಿ ಕಕ್ಕಡ ಪದಿನೆಟ್ಟು ವಿಶೇಷವಾದ ಹಬ್ಬ ಎಂದರು. ಗದ್ದೆ ನಾಟಿ ಮುಗಿಸಿ ಬಂದ ಬಳಿಕ ಕೊಡವ ಕೌನಿಲ್ಸ್ ಸಭೆ ನಡೆಯಿತು. ಸಭೆಯಲ್ಲಿ ಕೊಡವರ ಪ್ರಮುಖವಾದ ಬೇಡಿಕೆಗಳಾದ ಸ್ವಾಯತ್ತ ಭೂ ರಾಜಕೀಯ, ಸ್ವಯಂ ನಿರ್ಣಯದ ಹಕ್ಕು, ಕೊಡವ ಸ್ವಾಯತ್ತತೆ, ಕೊಡವ ಭಾಷೆಯನ್ನು ಸಂಮಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಬೇಕು. ಕೊಡವರಿಗೆ ಎಸ್ಟಿ ಮೀಸಲಾತಿ ನೀಡಬೇಕು ಸೇರಿದಂತೆ ಸಾಕಷ್ಟು ಹಕ್ಕೊತ್ತಾಯಗಳನ್ನು ಮಂಡಿಸಿದರು. ಈ ನಿರ್ಣಯಗಳಿಗೆ ಸಭೆಯಲ್ಲಿದ್ದ ಎಲ್ಲರೂ ಒಮ್ಮತ ಒಪ್ಪಿಗೆ ಸೂಚಿಸಿದರು. ಒಟ್ಟಿನಲ್ಲಿ ಎಲ್ಲರೂ ಒಂದೆಡೆ ಸೇರಿ ಸಾಮೂಹಿಕವಾಗಿ ಕಕ್ಕಡ ಹಬ್ಬ ಆಚರಿಸುವ ಮೂಲಕ ಸಂಭ್ರಮಿಸಿದರು.