Rudraksha guide: ರುದ್ರಾಕ್ಷಿ ಧರಿಸುವ ಮುನ್ನ ಈ ವಿಷಯಗಳು ಗೊತ್ತಿರಲಿ..
ರುದ್ರಾಕ್ಷಿಯು ಪರಶಿವನ ಪರಮ ಇಷ್ಟದ ಆಭರಣ. ರುದ್ರಾಕ್ಷಿಯನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಅಥವಾ ಆಭರಣದಂತೆ ಕೊರಳಲ್ಲಿ ಇಲ್ಲವೇ ಕೈಲಿ ಧರಿಸುವುದರಿಂದ ಹಲವು ಲಾಭಗಳಿವೆ. ಆದರೆ, ಹಾಗೆ ಧರಿಸುವ ಮುಂಚೆ ಕೆಲ ನಿಯಮಗಳು ಗೊತ್ತಿರಬೇಕು.
ಶಿವನ ನೆಚ್ಚಿನ ಆಭರಣವಾದ ರುದ್ರಾಕ್ಷಿಯನ್ನು ಪರಮ ಪವಿತ್ರವೆಂದು ಭಾವಿಸುತ್ತೇವೆ. ಇದಕ್ಕೆ ಕಾರಣ ರುದ್ರಾಕ್ಷಿಯು ಸಾಕ್ಷಾತ್ ಶಿವನ ಅಂಶವೇ ಎಂಬ ನಂಬಿಕೆ. ಹೌದು, ಶಿವನ ಕಣ್ಣೀರಿನಿಂದ ರುದ್ರಾಕ್ಷಿಯನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ. ಸತಿಯ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಕಣ್ಣೀರು ಭೂಮಿಯ ಮೇಲೆ ಹಲವು ಕಡೆ ಬಿದ್ದು ಅವೆಲ್ಲ ರುದ್ರಾಕ್ಷಿಯಾಯಿತೆಂದು ಹೇಳಲಾಗುತ್ತದೆ.
ದೇವರ ಕಣ್ಣೀರು ಎಂದರೆ ಅದು ಶಕ್ತಿಯುತವಾಗಿರಲೇಬೇಕಲ್ಲ.. ರುದ್ರಾಕ್ಷಿಯೂ ಅಷ್ಟೇ, ಮನೆಯಲ್ಲಿಟ್ಟು ಪೂಜಿಸಿದರೆ ಮನೆಯ ನಕಾರಾತ್ಮಕ ಶಕ್ತಿ(negative energy)ಗಳೆಲ್ಲ ಓಡಿ ಹೋಗುವುವು. ಕತ್ತು ಅಥವಾ ಕೈಲಿ ಧರಿಸುವುದರಿಂದ ಗ್ರಹಗಳ ಚಲನೆಯಿಂದಾಗುವ ಏರುಪೇರುಗಳೆಲ್ಲ ಸರಿಯಾಗುವುದು, ಆರೋಗ್ಯ ಚೆನ್ನಾಗಿರುವುದು ಎನ್ನಲಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಕ್ಕೆ ರಾಮಬಾಣ ರುದ್ರಾಕ್ಷಿ ಧಾರಣೆ ಎನ್ನಲಾಗುತ್ತದೆ. ಮನಸ್ಸಿನ ಆರೋಗ್ಯ ಚೆನ್ನಾಗಿರಲು ರುದ್ರಾಕ್ಷಿ ಧಾರಣೆ ಸಹಾಯಕ. ವೈಜ್ಞಾನಿಕವಾಗಿಯೂ ರುದ್ರಾಕ್ಷಿಯಿಂದ ಆರೋಗ್ಯ ಲಾಭ(benefit)ಗಳಿವೆ ಎಂಬುದು ಸಾಬೀತಾಗಿದೆ. ಲಿಂಗ, ಸಂಸ್ಕೃತಿ, ಜಾತಿ ಮತ ಭೇದವಿಲ್ಲದೆ ಎಲ್ಲರೂ ರುದ್ರಾಕ್ಷವನ್ನು ಧರಿಸಬಹುದು. ಆದರೆ, ರುದ್ರಾಕ್ಷಿ ಧರಿಸುವ ಮುನ್ನ ಕೆಲ ನಿಯಮಗಳನ್ನು ಪಾಲಿಸಬೇಕು. ಅವು ನಿಯಮಗಳಿಗನುಗುಣವಾಗಿಲ್ಲದಿದ್ದರೆ ಅದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹಾಗಿದ್ದರೆ ರುದ್ರಾಕ್ಷಿ(Rudraksha) ಧಾರಣೆಗೆ ಮುನ್ನ ನೀವು ತಿಳಿದುಕೊಂಡಿರಬೇಕಾದ ವಿಷಯಗಳೇನು ನೋಡೋಣ.
- ರುದ್ರಾಕ್ಷಿಯನ್ನು ಯಾವತ್ತೂ ಕಪ್ಪು ದಾರದಲ್ಲಿ ಕಟ್ಟಬಾರದು. ಕೆಂಪು(red) ಅಥವಾ ಹಳದಿ ಬಣ್ಣದ ದಾರ(thread)ದಲ್ಲಿ ಪೋಣಿಸಿದ ರುದ್ರಾಕ್ಷಿಯನ್ನು ಮಾತ್ರ ಧರಿಸಬೇಕು.
- ರುದ್ರಾಕ್ಷಿಯು ಬಹಳ ಪವಿತ್ರವಾದುದು. ಹಾಗಾಗಿ, ಕೊಳಕಾದ, ತೊಳೆಯದ ಕೈಗಳಲ್ಲಿ ಅದನ್ನು ಮುಟ್ಟಬಾರದು. ಸ್ನಾನ ಮಾಡಿದ ನಂತರವೇ ರುದ್ರಾಕ್ಷಿ ಮುಟ್ಟಬೇಕು.
- ರುದ್ರಾಕ್ಷಿ ಧರಿಸುವ ಸಂದರ್ಭದಲ್ಲಿ ಶಿವ(Lord Shiva)ನನ್ನೇ ಧ್ಯಾನಿಸುತ್ತಿರಬೇಕು. 'ಓಂ ನಮಃ ಶಿವಾಯ' ಎಂದು ಹೇಳಿಕೊಳ್ಳುತ್ತಾ ಧರಿಸಿಕೊಳ್ಳಬೇಕು.
- ನೀವು ಹಾಕಿದ ರುದ್ರಾಕ್ಷಿಯನ್ನು ಮತ್ತೊಬ್ಬರಿಗೆ ಧರಿಸಲು ಕೊಡಬಾರದು.
- ಯಾವಾಗಲೂ ಬೆಸ ಸಂಖ್ಯೆ(odd number)ಯಲ್ಲಿ ಜೋಡಿಸಿದ ರುದ್ರಾಕ್ಷಿ ಮಾಲೆಯನ್ನಷ್ಟೇ ಧರಿಸಬೇಕು. ಸಮ ಸಂಖ್ಯೆಯ ರುದ್ರಾಕ್ಷಿ ಒಳ್ಳೆಯದಲ್ಲ.
- ನಿಮ್ಮ ಕೊರಳಿಗೆ ಧರಿಸುವ ರುದ್ರಾಕ್ಷಿ ಮಾಲೆಯಲ್ಲಿ 27ಕ್ಕಿಂತಾ ಕಡಿಮೆ ರುದ್ರಾಕ್ಷಿ ಇರಕೂಡದು.
- ರುದ್ರಾಕ್ಷಿಯನ್ನು ಕೆಂಪು ಅಥವಾ ಹಳದಿ ದಾರದಲ್ಲಿ ಪೋಣಿಸಿದ್ದು ಬಿಟ್ಟರೆ ಬೆಳ್ಳಿ(silver) ಅಥವಾ ಬಂಗಾರ(gold)ದ ಸರದಲ್ಲಿ ಸೇರಿಸಿ ಕೂಡಾ ಧರಿಸಬಹುದು.
- ಯಾವುದೋ ಒಂದು ಕನಸಿನ ಈಡೇರಿಕೆಗಾಗಿ ರುದ್ರಾಕ್ಷಿಯನ್ನು ಧರಿಸುತ್ತಿದ್ದೀರಾದರೆ, ಈ ವಿಷಯದಲ್ಲಿ ತಜ್ಞರನ್ನು ಸಂಪರ್ಕಿಸಿ ವಿಚಾರಿಸಿಯೇ ಧರಿಸಿರಿ.
- ರುದ್ರಾಕ್ಷಿ ಜಪಮಾಲೆ ಧರಿಸುವಾಗ ಆಹಾರ ಅಗಿಯುತ್ತಿರುವುದು, ಓಲಾಡುತ್ತಿರುವುದು ಮಾಡಬಾರದು.
- ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ರುದ್ರಾಕ್ಷಿಗಳ ಮಾರಾಟವಾಗುತ್ತದೆ. ಕೇವಲ ನಂಬಿಕಸ್ಥ ಅಂಗಡಿಗಳಿಂದ ಮಾತ್ರ ರುದ್ರಾಕ್ಷಿ ಖರೀದಿಸಿರಿ. ನಕಲಿ ರುದ್ರಾಕ್ಷಿ ಧಾರಣೆಯಿಂದ ಪ್ರಯೋಜನವಿಲ್ಲ.
- ಮನೆಯಲ್ಲಿ ಶಿಶುವಿನ ಜನನವಾದಾಗ ರುದ್ರಾಕ್ಷಿ ಧರಿಸುವಂತಿಲ್ಲ. ಹನ್ನೊಂದು ದಿನಗಳವರೆಗೆ ಅಶೌಚವಿರುವ ಕಾರಣ ಆ ಸಮಯದಲ್ಲಿ ರುದ್ರಾಕ್ಷಿ ಧಾರಣೆ ನಿಷಿದ್ಧವಾಗಿದೆ. ಹಾಗೆಯೇ ಸಾವಿನ ಸೂತಕವಿರುವ ಸಂದರ್ಭದಲ್ಲಿ ಕೂಡಾ ರುದ್ರಾಕ್ಷಿಯನ್ನು ಧರಿಸಕೂಡದು. ಇದರಿಂದ ರುದ್ರಾಕ್ಷಿ ತೇಜಸ್ಸು ಕಳೆದುಕೊಳ್ಳುತ್ತದೆ. ಮಹಿಳೆಯರು ಮುಟ್ಟಾದ ದಿನಗಳಲ್ಲಿ ರುದ್ರಾಕ್ಷಿ ಮುಟ್ಟಕೂಡದು.
- ಮಲಗುವಾಗ ರುದ್ರಾಕ್ಷಿಯನ್ನು ತೆಗೆದು ದಿಂಬಿನ ಕೆಳಗಿಟ್ಟು ಮಲಗಬೇಕು. ಇದರಿಂದ ಆಧ್ಯಾತ್ಮಿಕ ಶಾಂತಿ ದೊರೆಯುತ್ತದೆ ಮತ್ತು ಕೆಟ್ಟ ಕನಸುಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. ಜೊತೆಗೆ, ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಕೂಡಾ ರುದ್ರಾಕ್ಷಿ ತೆಗೆದಿರಿಸಬೇಕು.
- ರುದ್ರಾಕ್ಷಿಯನ್ನು ಧರಿಸುವವರು ಮಾಂಸಾಹಾರವನ್ನು, ಮದ್ಯಪಾನ ಮಾಡುವುದು ನಿಷಿದ್ಧ. ಆದರೂ ರುದ್ರಾಕ್ಷಿಯನ್ನು ಧರಿಸುವವರು ತಾಮಸ ಭೋಜನ ಮಾಡುವ ಸಮಯದಲ್ಲಿ ತೆಗೆದಿಡಬೇಕು. ಮದ್ಯಪಾನ ಮಾಡುವಾಗಲೂ ಇದನ್ನು ಧರಿಸಿರುವುದು ಅಶುಭ ಫಲವನ್ನು ನೀಡುತ್ತದೆ.