Maha Shivaratri: ಇನ್ನೂ ಸಮಯವಿದೆ, ನಾಲ್ಕು ಯಾಮಗಳಲ್ಲಿ ಮಾಡಿ ಶಿವನ ಪೂಜೆ
ಶಿವರಾತ್ರಿಯ ದಿನ ಕಳೆದು ಹೋಯಿತು, ಶಿವನ ಆರಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಬೇಸರ ಬೇಡ. ಸಂಜೆ 6ರ ಬಳಿಕ ಆರಂಭವಾಗುವ ನಾಲ್ಕು ಯಾಮಗಳಲ್ಲಿ ಶಿವನ ಆರಾಧನೆಯನ್ನು ಮಾಡಬಹುದು. ಬೆಳಗಿನವರೆಗೂ ಆರಾಧನೆ ಮಾಡಲು ಸಮಯವಿದೆ.
ಇಂದು ಮಹಾಶಿವರಾತ್ರಿಯ (Maha Shivaratri) ಮಹಾದಿನ. ಶುದ್ಧ ಮನಸ್ಸಿನಿಂದ ಭಗವಾನ್ ಶಿವನ (Shiva) ಆರಾಧನೆ, ಉಪಾಸನೆ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ ಎನ್ನುವುದು ನಮ್ಮೆಲ್ಲರ ಗಾಢ ನಂಬಿಕೆ. ಶಿವ ಭಗವಂತ ಭಕ್ತರ ಕಷ್ಟಗಳನ್ನು ದೂರ ಮಾಡುವುದಲ್ಲದೆ, ಮನೋಕಾಮನೆಗಳನ್ನು ಈಡೇರಿಸುತ್ತಾನೆ.
ಪ್ರತಿವರ್ಷ ಫಾಲ್ಗುಣ (Phalguna) ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ದೇವಾಧಿದೇವ ಈಶ್ವರನ ಪೂಜೆ ಮಾಡಿ, ಕೃತಾರ್ಥರಾಗಲು ಮಹಾಶಿವರಾತ್ರಿಯೊಂದು ಅನುಪಮ ಅವಕಾಶ. ಇದೊಂದು ಮಹತ್ವಪೂರ್ಣ (Important) ಸನ್ನಿವೇಶ. ಇಂದಿನ ದಿನ ಮುಗಿದೇಹೋಯಿತು, ಇನ್ನೇನು ಶಿವನ ಆರಾಧನೆ ಮಾಡುವುದು ಎನ್ನುವ ಬೇಸರ ಬೇಡ. ಶಿವರಾತ್ರಿಯಂದು ರಾತ್ರಿಯಡೀ ಶಿವನ ಉಪಾಸನೆ ಮಾಡಲು ಸಮಯವಿದೆ. ಅಲ್ಲದೆ, ನಾಲ್ಕು ಯಾಮ (Time)ಗಳಲ್ಲಿ ಶಿವನ ಆರಾಧನೆ ಇಂದು ನಡೆಯುತ್ತದೆ. ಹೀಗಾಗಿಯೇ ಶಿವರಾತ್ರಿಯಂದು ಜಾಗರಣೆಗೆ ಅತ್ಯಂತ ಮಹತ್ವವಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಚಂದ್ರನು (Moon) ಸೂರ್ಯನ (Sun) ಸಮೀಪದಲ್ಲಿರುತ್ತಾನೆ. ಈ ಸಮಯದಲ್ಲಿ ಚಂದ್ರನಿಗೆ ಸೂರ್ಯನೊಂದಿಗೆ ಯೋಗಮಿಲನವಾಗುತ್ತದೆ ಎನ್ನಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಇಂದಿನ ಚತುರ್ದಶಿ ತಿಥಿಯಂದು ಭೂಮಿಗೆ ಚಂದ್ರನು ಅತ್ಯಂತ ಕ್ಷೀಣವಾಗಿ ಗೋಚರಿಸುತ್ತಾನೆ. ನಿಮಗೆ ಗೊತ್ತೇ ಇದೆ, ಚಂದ್ರನನ್ನು ಶಿವನು ತನ್ನ ತಲೆಯಲ್ಲಿ ಧರಿಸಿದ್ದಾನೆ. ಈಶ್ವರನನ್ನು ಪೂಜಿಸಿದರೆ ವ್ಯಕ್ತಿಗತವಾದ ಸದೃಢತೆ ನಿಮ್ಮದಾಗುತ್ತದೆ. ಚಂದ್ರನು ಮನೋಕಾರಕನಾಗಿದ್ದು, ಶಿವನ ಪೂಜೆಯಿಂದ ಮನೋಶಕ್ತಿ, ಇಚ್ಛಾಶಕ್ತಿ ಹೆಚ್ಚು ಪ್ರಖರವಾಗುತ್ತದೆ.
ಇಂದು ಶಿವರಾತ್ರಿಯನ್ನು ನಾಲ್ಕು ಯಾಮಗಳಲ್ಲಿ ಆಚರಿಸಬಹುದು. ಮೊದಲ ಯಾಮ ಸಂಜೆ 6.21ಕ್ಕೆ ಆರಂಭವಾಗುತ್ತದೆ. ಅಲ್ಲಿಂದ 9.27ರವರೆಗೆ ಪ್ರಥಮ ಯಾಮವಿದೆ. ಈ ಸಮಯದಲ್ಲಿ ಶಿವನನ್ನು ಉಪಾಸನೆ ಮಾಡಬಹುದು.
Mahashivratri 2022: ಇಂದು ಈ ಕೆಲಸಗಳನ್ನು ಮಾಡಿದ್ರೆ ಇಷ್ಟಾರ್ಥ ಸಿದ್ಧಿ
ಇನ್ನು, ದ್ವಿತೀಯ ಯಾಮ 9.27ರಿಂದ 12.33ರವರೆಗೆ ಇರುತ್ತದೆ. ಈ ಸಮಯದ ಆರಾಧನೆಯೂ ಶ್ರೇಷ್ಠವಾದುದೇ ಆಗಿದೆ. ರಾತ್ರಿ 12.33ರಿಂದ ಬೆಳಗಿನ ಜಾವ 3.39ರವರೆಗೆ ತೃತೀಯ ಯಾಮದ ಸಮಯ. ಹಾಗೂ 3.39ರಿಂದ ಬೆಳಗ್ಗೆ 6.45ವರೆಗೆ ನಾಲ್ಕನೇ ಯಾಮದ ಅವಧಿಯಾಗಿದ್ದು, ಈ ಸಮಯದಲ್ಲಿ ಶಿವನನ್ನು ಆರಾಧನೆ ಮಾಡುವುದು ಅತ್ಯಂತ ಮಂಗಲಕರ ಎನ್ನಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫಾಲ್ಗುಣ ಮಾಸದ, ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ವಿಶಿಷ್ಟವಾದ ಸಂಯೋಗವೂ ಇದೆ. ಧನಿಷ್ಠಾ ನಕ್ಷತ್ರದಲ್ಲಿ ಜನಿಸಿದವರಿಗೆ ಇಂದು ಪರಿಧಿ ಯೋಗವಿದೆ. ಧನಿಷ್ಠಾ ಬಳಿಕ ಶತಭಿಷಾ ನಕ್ಷತ್ರ ಬರುತ್ತದೆ. ಪರಿಧಿಯ ಬಳಿಕ ಶಿವ ಯೋಗವೂ ಇರುತ್ತದೆ. ಸೂರ್ಯ ಮತ್ತು ಚಂದ್ರರು ಕುಂಭ ರಾಶಿಯಲ್ಲಿರುತ್ತಾರೆ. ಹೀಗಾಗಿ, ಈ ಚತುರ್ದಶಿಯಂದು ಶಿವಪೂಜೆ ಮಾಡುವುದರಿಂದ ಭಕ್ತರ ಅಭೀಷ್ಟೆ ಈಡೇರುತ್ತದೆ. ಬಯಸಿದ್ದೆಲ್ಲ ದೊರೆಯುತ್ತದೆ ಎನ್ನಲಾಗಿದೆ. ಮಹಾಶಿವರಾತ್ರಿಯ ವ್ರತವನ್ನು ವ್ರತಗಳ ರಾಜ ಎಂದೇ ಪರಿಗಣಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಇಂದು ಉಪವಾಸದೊಂದಿಗೆ ಯಾರು ವ್ರತ ಮಾಡುತ್ತಾರೋ, ಮಹಾರುದ್ರಾಭಿಷೇಕದಲ್ಲಿ ಪಾಲ್ಗೊಳ್ಳುತ್ತಾರೋ ಅವರಿಗೆ ಶಿವನ ಸಾನಿಧ್ಯ ದೊರೆಯುತ್ತದೆ.
ಶಿವನ ಸೃಷ್ಟಿ ಹೇಗಾಯಿತು... ಇಲ್ಲಿದೆ ಸುಂದರ ಕತೆ
ಹಿಂದೆಲ್ಲ ಶಿವರಾತ್ರಿಯಂದು ಸಾಮಾನ್ಯವಾಗಿ ಶಿವನಾಮ ಸ್ಮರಣೆ ಮಾಡುತ್ತಲೋ, ಭಜನೆ, ಶಿವಲೀಲೆಗೆ ಸಂಬಂಧಿಸಿದ ನಾಟಕಗಳನ್ನು ನೋಡುತ್ತಲೋ ಜಾಗರಣೆ ಮಾಡಲಾಗುತ್ತಿತ್ತು. ಜಾಗರಣೆ ಮಾಡುವವರು ಇಂದೂ ಮಾಡುತ್ತಾರೆ, ವಿಧಾನಗಳು ಬದಲಾಗಿರಬಹುದು ಅಷ್ಟೆ. ಶಿವರಾತ್ರಿಯಂದು ಉಪವಾಸ (fasting) ಹಾಗೂ ಜಾಗರಣೆ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಶಿವರಾತ್ರಿಯ ವ್ರತಾಚರಣೆಯಿಂದ ದೇಹದ ಎಲ್ಲ ಪ್ರಾಣ ಅಥವಾ ವಾಯು ಪ್ರಕಾರಗಳು ಶುದ್ಧಿಗೊಳ್ಳುತ್ತವೆ. ಐದು ಪ್ರಕಾರದ ವಾಯುವನ್ನು ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂದು ಗುರುತಿಸಲಾಗಿದೆ. ಈ ಎಲ್ಲ ಪ್ರಕಾರಗಳ ಪ್ರಾಣಗಳು ಸಮತೋಲನದಿಂದ ಕೂಡಿರುವವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಸದೃಢ ಆರೋಗ್ಯವನ್ನು ಹೊಂದಿರುತ್ತಾರೆ.