ತಿರುಪತಿ ಹುಂಡಿ ಸಂಗ್ರಹದಲ್ಲಿ ತೀವ್ರ ಕುಸಿತ: ತಿಮ್ಮಪ್ಪ ದೇಗುಲಕ್ಕೆ ಹೋಗೋ ಭಕ್ತರ ಸಂಖ್ಯೆಯೇ ಕಡಿಮೆಯಾಯ್ತಾ?
ಬೇಸಿಗೆ ರಜೆ ಆರಂಭವಾಗಿದ್ದರೂ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಗ್ರಹವಾಗಿರುವ ಹುಂಡಿ ಹಣ 2.85 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇದು ಸಾಮಾನ್ಯವಾಗಿ ಸಂಗ್ರಹವಾಗುವ ಮೊತ್ತಕ್ಕಿಂತ ಅತಿ ಕಡಿಮೆ ಮೊತ್ತ ಎಂದು ಹೇಳಲಾಗಿದೆ.
ತಿರುಪತಿ (ಏಪ್ರಿಲ್ 23, 2023): ಇದು ದೇಶದ ಅತ್ಯಂತ ಶ್ರೀಮಂತ ದೇವಾಲಯ. ಪ್ರತಿದಿನ ಕೋಟ್ಯಂತರ ರೂ. ಹುಂಡಿ ಹಣ ಸಂಗ್ರಹವಾಗುತ್ತದೆ ಹಾಗೂ ತಿಂಗಳಿಗೆ ಸಾವಿರ ಕೋಟಿ ರೂ. ಸನಿಹ ಹಾಗೂ ಒಮ್ಮೊಮ್ಮೆ ಅದಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತಿರುತ್ತದೆ. ಸದ್ಯ, ದೇಶದ ಹಲವೆಡೆ ಬೇಸಿಗೆ ರಜೆ ಆರಂಭವಾಗಿದೆ. ಆದರೂ, ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹಾಗೂ ಹುಂಡಿ ಸಂಗ್ರಹ ಕಡಿಮೆಯಾಗಿದೆ.
ಹೌದು, ದೇಶದ ಹಲವೆಡೆ ಬೇಸಿಗೆ ರಜೆ ಆರಂಭವಾಗಿದ್ದರೂ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಗ್ರಹವಾಗಿರುವ ಹುಂಡಿ ಹಣ 2.85 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇದು ಸಾಮಾನ್ಯವಾಗಿ ಸಂಗ್ರಹವಾಗುವ ಮೊತ್ತಕ್ಕಿಂತ ಅತಿ ಕಡಿಮೆ ಮೊತ್ತ ಎಂದು ಹೇಳಲಾಗಿದೆ. ಅಲ್ಲದೆ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವು ಕಡಿಮೆ ಭಕ್ತರ ಭೇಟಿಗೂ ಸಾಕ್ಷಿಯಾಗಿದೆ ಮತ್ತು ಈ ಕಾರಣಕ್ಕಾಗಿ ಕಳೆದ ಕೆಲವು ದಿನಗಳಿಂದ ಹುಂಡಿ ಹಣ ಸಂಗ್ರಹಣೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ತಿರುಪತಿಗೆ ಇನ್ನು ವಂದೇ ಭಾರತ್ ರೈಲು: ಇಂದು ಪ್ರಧಾನಿ ಮೋದಿ ಚಾಲನೆ
ಕಳೆದ ವರ್ಷ ಏಪ್ರಿಲ್‌ನಲ್ಲಿ ತಿರುಪತಿ ತಿರುಮಲ ಬೆಟ್ಟದ ದೇವಸ್ಥಾನದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ರದ್ದು ಮಾಡಿದ ನಂತರ, ಶನಿವಾರದ 2.85 ಕೋಟಿ ಹುಂಡಿ ಸಂಗ್ರಹವು ಕಳೆದ ಒಂದು ವರ್ಷದಲ್ಲಿ ತಿರುಮಲ ದೇವಸ್ಥಾನಕ್ಕೆ ಬಂದ ಅತ್ಯಂತ ಕಡಿಮೆ ಹುಂಡಿ ಸಂಗ್ರಹವಾಗಿದೆ ಎಂದೂ ವರದಿಯಾಗಿದೆ. ದೇಶದ ಹಲವು ಭಾಗಗಳಲ್ಲಿ ಬೇಸಿಗೆ ರಜೆಯನ್ನು ಘೋಷಿಸಲಾಗಿದ್ದರೂ, ತಿರುಮಲ ದೇವಸ್ಥಾನಕ್ಕೆ ಕಳೆದ ವಾರ ಬಂದ ಭಕ್ತರ ಸಂಖ್ಯೆ ಬಹಳ ಕಡಿಮೆಯಂತೆ.
ಟಿಟಿಡಿಯ ದಾಖಲೆಗಳ ಪ್ರಕಾರವೂ, ಕಳೆದ ಒಂದು ವಾರದಲ್ಲಿ ತಿರುಮಲ ದೇವಸ್ಥಾನದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಮತ್ತು ಹುಂಡಿ ಹಣ ಸಂಗ್ರಹವು ದೈನಂದಿನ ಸರಾಸರಿಗಿಂತ ಕಡಿಮೆಯಾಗಿದೆ. ಇನ್ನು, ಏಪ್ರಿಲ್ ಕೊನೆಯ ವಾರದಿಂದ ತಿರುಮಲಕ್ಕೆ ಹೆಚ್ಚು ಭಕ್ತರು ಧಾವಿಸುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಟ್ರಸ್ಟ್ ನಿರೀಕ್ಷಿಸುತ್ತದೆ.
ಇದನ್ನೂ ಓದಿ: ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್ ರೆಕಗ್ನಿಷನ್; ದರ್ಶನ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಜಾರಿ: ಟಿಟಿಡಿ ಘೋಷಣೆ
ಈ ಮಧ್ಯೆ, ಟಿಟಿಡಿ ಟ್ರಸ್ಟ್ ತಿರುಮಲ ದೇವಸ್ಥಾನದಲ್ಲಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸಲು ಅನುಕೂಲ ಮಾಡಿಕೊಡುವ ನೆಪದಲ್ಲಿ ಭಕ್ತರನ್ನು ವಂಚಿಸಿದ ಒಂದೇ ರೀತಿಯ 41 ವೆಬ್‌ಸೈಟ್‌ಗಳನ್ನು ಬಂದ್ ಮಾಡಿತ್ತು. ಅಲ್ಲದೆ, ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ದೇವಾಲಯದ ಟ್ರಸ್ಟ್ ತಿರುಪತಿ ತಿರುಮಲ ವೆಂಕಟೇಶ್ವರನ ಭಕ್ತರಿಗೆ ಮನವಿ ಮಾಡಿದೆ.
ಇನ್ನೊಂದೆಡೆ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಟ್ರಸ್ಟ್ ಬೋರ್ಡ್ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಡಿಸೆಂಬರ್ ಅಂತ್ಯದ ವೇಳೆಗೆ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದ ತಯಾರಿಕೆಗೆ ಸಂಪೂರ್ಣ ಸ್ವಯಂ ಚಾಲಿತ ಯಂತ್ರವನ್ನು ಬಳಸುವ ಯೋಜನೆ ರೂಪಿಸಲಾಗಿದೆ. ದಿನಕ್ಕೆ 6 ಲಕ್ಷ ಲಡ್ಡು ತಯಾರಿಸಬಲ್ಲ 50 ಕೋಟಿ ರೂ. ವೆಚ್ಚದ ಯಂತ್ರವನ್ನು ರಿಲಯನ್ಸ್ ಕಂಪನಿಯು ದೇಗುಲಕ್ಕೆ ನೀಡಲಿದೆ.
ಇದನ್ನೂ ಓದಿ: ಇನ್ಮುಂದೆ ಯಂತ್ರದಲ್ಲಿ ತಯಾರಾಗಲಿವೆ ತಿರುಪತಿ ಲಡ್ಡು: 50 ಕೋಟಿ ರೂ. ವೆಚ್ಚದ ಯಂತ್ರ ನೀಡಲು ರಿಲಯನ್ಸ್ ಸಜ್ಜು