ನಾವೆಲ್ಲರೂ ಒಂದಿಲ್ಲೊಂದು ದ್ವಾದಶ ರಾಶಿಗಳಿಗೆ ಸೇರಿದ್ದೇವೆ. ಅವುಗಳ ಪ್ರಕಾರ, ನಮಗೆಲ್ಲ ಒಂದೊಂದು ಬಗೆಯ ಸ್ವಭಾವವಿದೆ. ಅದರ ಪ್ರಕಾರ, ನಾವು ಹೇಗೆ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎನ್ನುವುದನ್ನು ನೋಡಿಕೊಳ್ಳಿ.
ಕೆಲಸ (Work), ಕೆಲಸ, ಕೆಲಸ....ಇದು ಎಲ್ಲರ ಮಂತ್ರ. ಈ ನಡುವೆಯೂ ನಾವು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ನೆಮ್ಮದಿಯಾಗಿರುವುದನ್ನು ಕಲಿತುಕೊಳ್ಳಬೇಕು. ಆದರೂ ಅದು ಹೇಗೆಂದು ಎಷ್ಟೋ ಬಾರಿ ಅರಿವಿಗೆ ಬರುವುದಿಲ್ಲ. ನೆಮ್ಮದಿ ಹಾಗೂ ಖುಷಿ(Happiness)ಗಾಗಿ ಏನೇನೋ ಪ್ರಯತ್ನ ಮಾಡುವ ಬದಲು, ನಮ್ಮ ರಾಶಿಗೆ ಅನುಗುಣವಾಗಿ ಏನು ಸೂಕ್ತವಾಗುತ್ತದೆಯೋ ಅದನ್ನು ಮಾಡಿದರೆ ಹೆಚ್ಚು ಅನುಕೂಲ.
ಹೌದು, ನೀವು ಯಾವ ರಾಶಿ (Zodiac Sign) ಎನ್ನುವುದರ ಮೇಲೆ, ಹೇಗೆ ಖುಷಿಯಾಗಿರಲು ಸಾಧ್ಯ ಎಂದು ನೋಡಿಕೊಳ್ಳಿ.
• ಮೇಷ (Aries): ಇವರು ಸಾಹಸಿ ಪ್ರವೃತ್ತಿಯವರು, ಧೈರ್ಯವುಳ್ಳವರು. ಅದಕ್ಕೆ ಪೂರಕವಾದ ಅದಮ್ಯ ಚೈತನ್ಯ ಇವರಲ್ಲಿರುತ್ತದೆ. ಇಂತಹ ಚೈತನ್ಯದ ಫಲವಾಗಿ ಇವರು ಕೆಲವೊಮ್ಮೆ ಪ್ರಸ್ತುತ ಬದುಕಿನ ಸೊಗಸನ್ನು ಕಾಣಲು ಸೋಲುತ್ತಾರೆ. ಹೀಗಾಗಿ, ಎಷ್ಟೋ ಬಾರಿ ಕಠಿಣವಾಗಿ ವರ್ತಿಸುತ್ತಾರೆ. ಇವರು ಧನಾತ್ಮಕವಾಗಿರಲು ಬದುಕಿನ ಖುಷಿಯ ಅಥವಾ ಸುಖದ ದಿನಗಳನ್ನು ಮೆಚ್ಚಿಕೊಳ್ಳಬೇಕು. ಒಂದು ಡೈರಿಯಲ್ಲಿ ಸಂತಸದ ಸಂಗತಿಗಳನ್ನು ಬರೆಯುತ್ತ ಸಾಗಬೇಕು. ಖುಷಿಯ ವಿಚಾರವನ್ನೇ ಹೆಚ್ಚಾಗಿ ನೆನಪಿಸಿಕೊಳ್ಳಬೇಕು.
• ವೃಷಭ (Taurus) : ಇವರು ಸ್ವಲ್ಪ ಮುಂಗೋಪಿಗಳು. ಅಂತರ್ಮುಖಿಗಳು. ತಮ್ಮ ಕಂಫರ್ಟ್ ವಲಯದಲ್ಲೇ ಇರಲು ಬಯಸುತ್ತಾರೆ. ಸುರಕ್ಷತೆ, ಸ್ಥಿರತೆ ಬಯಸುವ ಇವರು ಯಾವಾಗಲೂ ಅನುಮಾನ ಮತ್ತು ಅಪನಂಬಿಕೆಗಳಿಂದ ತೊಳಲುವುದು ಹೆಚ್ಚು. ಈ ರಾಶಿಗೆ ಸೇರಿದವರು ನೀವಾಗಿದ್ದರೆ ಬದುಕನ್ನು ಸ್ವಲ್ಪ ಈಸಿಯಾಗಿ ತೆಗೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು. “ಹೋಗಲಿ ಬಿಡು’ ಎನ್ನುವ ಮನಸ್ಥಿತಿ ರೂಢಿಸಿಕೊಳ್ಳುವುದು, ಪರಿಸ್ಥಿತಿ ಹೇಗೆ ಬಂತೋ ಹಾಗೆ ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಂಡರೆ ನೆಮ್ಮದಿ ಸಿಗುತ್ತದೆ.
• ಮಿಥುನ (Gemini): ಮಿಥುನ ರಾಶಿಯವರು ಎಲ್ಲರ ಸ್ನೇಹಕ್ಕೆ ಸಿಗುವಂಥವರು. ಇವರಿಗೆ ಜನರ ಸ್ನೇಹ, ಉತ್ತಮ ಮಾತುಕತೆ ನಡೆಸುವುದೆಂದರೆ ಇಷ್ಟ. ಸಾಮಾಜಿಕವಾಗಿ ಬಹಳ ಸಕ್ರಿಯವಾಗಿರುತ್ತಾರೆ. ಹೀಗಿದ್ದಾಗ್ಯೂ ಇವರಿಗೆ ಉತ್ತೇಜನ ಬೇಕಿರುತ್ತದೆ. ನೀವು ಇದೇ ರಾಶಿಗೆ ಸೇರಿದ್ದರೆ ನಿಮ್ಮ ಸುತ್ತಲಿನ ಜನರೇ ನಿಮ್ಮ ಶಕ್ತಿ ಎನ್ನುವುದನ್ನು ಅರಿತುಕೊಳ್ಳಿ. ನಿಮ್ಮ ಸ್ನೇಹಿತರು, ಕುಟುಂಬ ಹಾಗೂ ಪ್ರೀತಿಪಾತ್ರರೊಂದಿಗೆ ಆಗಾಗ ಬೆರೆಯುವುದರಿಂದ ರಿಲ್ಯಾಕ್ಸ್ ಆಗುತ್ತೀರಿ.
• ಕರ್ಕಾಟಕ(Cancer): ಈ ರಾಶಿಯವರು ತುಂಬ ಚೆನ್ನಾಗಿ ಪೋಷಣೆ ಮಾಡಬಲ್ಲರು. ತಮ್ಮವರ ಬಗ್ಗೆ ಕಾಳಜಿ ವಹಿಸುವುದು ಇವರ ಗುಣ. ಹಾಗಿದ್ದರೂ, ತಮ್ಮ ಭಾವನೆಗಳನ್ನು ಇನ್ನೊಬ್ಬರಿಗೆ ಸರಿಯಾಗಿ ಹೇಳಿಕೊಳ್ಳುವುದಿಲ್ಲ. ಹೊಯ್ದಾಟದ ಸಮಯದಲ್ಲಿ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು, ಸಮಸ್ಯೆ ಹಾಗೂ ಕ್ಲೇಶಗಳನ್ನು ಹೇಳಿಕೊಳ್ಳುವುದರಿಂದ ಸಮಾಧಾನ ಸಿಗುತ್ತದೆ.
• ಸಿಂಹ(Leo): ಸಿಂಹ ರಾಶಿಯವರದ್ದು ಅದ್ಭುತ ವ್ಯಕ್ತಿತ್ವ. ಇವರು ವಿನೋದಪ್ರಿಯರು, ಕ್ರಿಯಾಶೀಲರು. ಆದರೆ, ಸ್ಪರ್ಧಾತ್ಮಕತೆ ಇವರಲ್ಲಿ ಅಸೂಯೆ, ಕೋಪ ಉಕ್ಕಿಸುತ್ತದೆ. ಹೀಗಾಗಿ, ಇವರು ತಮ್ಮಷ್ಟಕ್ಕೇ ತಾವು ಶಾಂತವಾಗುವುದನ್ನು ಕಲಿತುಕೊಳ್ಳಬೇಕು. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಆಗ ಮಾತ್ರ ನೆಮ್ಮದಿಯಾಗಿರಬಲ್ಲರು.
• ಕನ್ಯಾ (Virgo): ಈ ರಾಶಿಯವರು ನಿಖರತೆ ಬಯಸುತ್ತಾರೆ. ಜನರನ್ನು ವಿಮರ್ಶೆ ಮಾಡುತ್ತಾರೆ, ಹಾಗೆಯೇ ಅವರಿಂದ ಉತ್ತಮ ಕೆಲಸವನ್ನೂ ಮಾಡಿಸುತ್ತಾರೆ. ಸ್ನೇಹಿತರು, ಆಪ್ತರೊಂದಿಗೆ ಸಲಹೆ ಪಡೆದುಕೊಳ್ಳುವ ಮೂಲಕ, ಲಾಭನಷ್ಟಗಳ ಲೆಕ್ಕಾಚಾರದ ಮೂಲಕ ಕೆಲಸ ನಿರ್ವಹಿಸುವುದನ್ನು ಕಲಿತುಕೊಂಡರೆ ಇವರು ಸುಖಿ.
• ತುಲಾ (Libra): ಅಪಾರ ಆಶಾವಾದಿಗಳು. ಈ ಗುಣದಿಂದಾಗಿ ತುಂಬ ಜನ ಇವರನ್ನು ಟೇಕನ್ ಫಾರ್ ಗ್ರಾಂಟೆಡ್ ಥರ ನಡೆಸಿಕೊಳ್ಳುತ್ತಾರೆ. ಆದರೆ, ಇವರೂ ಮನುಷ್ಯರೇ. ಎಲ್ಲರಂತೆ ಇವರಿಗೂ ನೋವು, ದುಃಖ, ಒತ್ತಡ ಇರುತ್ತವೆ. ನೀವು ತುಲಾರಾಶಿಯವರಾಗಿದ್ದರೆ ನಿಮಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ನಿಮಗೂ ಮಹತ್ವ ಕೊಟ್ಟುಕೊಳ್ಳಿ. ಆಗ ಖುಷಿಯಾಗಿರುತ್ತೀರಿ. ಜನರು ನಿಮ್ಮಿಂದ ಅತ್ಯುತ್ತಮವಾದದ್ದನ್ನೇ ಬಯಸುತ್ತಾರೆ ಎಂಬ ಕಾರಣಕ್ಕೆ ನಿಮ್ಮ ಮನಸ್ಸಿನ ಆರೋಗ್ಯ ಮತ್ತು ಶಾಂತಿಯನ್ನು ಕಳೆದುಕೊಳ್ಳಬಾರದು.
ಇದನ್ನೂ ಓದಿ: Makar Sankranti: ಯಾವ ರಾಶಿಯವರು ಏನು ದಾನ ಮಾಡಿದರೆ ಒಳ್ಳೆಯದು?
• ವೃಶ್ಚಿಕ (Scorpio) : ಈ ರಾಶಿಯವರು ಅತ್ಯಂತ ಆಶಾವಾದಿಗಳೂ, ಅತಿ ನಿರಾಶಾವಾದಿಗಳೂ ಆಗಿರಬಲ್ಲರು. ಇವೆರಡರ ಸಮತೋಲನ ಇವರಿಂದ ಸಾಧ್ಯವಿಲ್ಲ. ಎಲ್ಲರನ್ನೂ ಕ್ಷಮಿಸಲು ಹಾಗೂ ಬದುಕನ್ನು ಹಗುರವಾಗಿ ಪರಿಗಣಿಸುವುದನ್ನು ಕಲಿತುಕೊಂಡರೆ ಖುಷಿಯಾಗಿ ಇರಬಲ್ಲರು.
• ಧನು (Sagittarius) : ಇವರು ಸಾಹಸ ಇಷ್ಟಪಡುತ್ತಾರೆ. ಗೊತ್ತಿಲ್ಲದೆ ಇರುವುದರ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ರೋಮಾಂಚಕ ಹಾದಿಯಲ್ಲಿ ಸಾಗಲು ಹಿಂದೇಟು ಹಾಕುವುದಿಲ್ಲ. ಇವರ ಸ್ಫೂರ್ತಿಯೊಂದಿಗೆ ಇತರರಿಗೆ ಸುಲಭವಾಗಿ ಹೊಂದಾಣಿಕೆ ಆಗುವುದಿಲ್ಲ. ಏಕಾಂಗಿತನ ಎಲ್ಲರಿಗೂ ಬೇಕು, ಧನು ರಾಶಿಯವರಿಗೆ ಇನ್ನೂ ಹೆಚ್ಚು ಬೇಕು. ಕೆಲವು ಬಾರಿ ನಿಮ್ಮದೇ ನಿಯಮ ಮುರಿಯುವುದು, ನಿಮಗೆ ಸಹಾಯ ಮಾಡಲು ಮುಂದಾಗುವವರನ್ನು ಒಪ್ಪಿಕೊಳ್ಳುವುದರಿಂದ ಸಂತಸವಾಗಿರಬಲ್ಲಿರಿ.
• ಮಕರ (Caprocorn): ಅತ್ಯಂತ ಶ್ರಮಜೀವಿಗಳು. ಮಹತ್ವಾಕಾಂಕ್ಷಿಯಾಗಿರುವ ಇವರಿಗೆ ತಮ್ಮ ಬಗ್ಗೆ ಅಪಾರ ನಂಬುಗೆ. ಕೆಲಸದ ಮೇಲೆ ಅತಿಯಾದ ಬದ್ಧತೆ, ವಿಚಿತ್ರ ಮಹತ್ವಾಕಾಂಕ್ಷೆ ನಿಮ್ಮನ್ನು ಅಲ್ಲಾಡಿಸಬಹುದು. ಹಾಗೆಯೇ ಏಕಾಂಗಿಯನ್ನಾಗಿಸಬಹುದು. ಹೀಗಾಗಿ, ನೀವು ಯಾವಾಗಲಾದರೂ ಕ್ರಿಯಾಶೀಲ ಹಾಗೂ ಹಗುರವಾದ ಮಾತುಕತೆಯಲ್ಲಿ ಖುಷಿ ಕಾಣಬಹುದು.
ಇದನ್ನೂ ಓದಿ:Party Lovers: ಈ ಆರು ರಾಶಿಯವರನ್ನು ಪಾರ್ಟಿಗೆ ಕರೆದರೆ ಅದು ಫ್ಲಾಪ್ ಆಗೋ ಚಾನ್ಸೇ ಇಲ್ಲ!
• ಕುಂಭ (Aquarius): ಸಿನಿಕತನ ಮೈಗೂಡಿಸಿಕೊಳ್ಳುತ್ತಾರೆ. ತಾವೇ ಚಿತ್ರಿಸಿಕೊಂಡ ಜಗತ್ತಿನ ಕಲ್ಪನೆಯನ್ನು ನಂಬುತ್ತಾರೆ. ತಮ್ಮದೇ ನಿಯಮ, ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಮನಸ್ಸನ್ನು ರಿಲ್ಯಾಕ್ಸಾಗಿಸಿಕೊಳ್ಳಲು ಯೋಗ, ಧ್ಯಾನಗಳು ಇವರಿಗೆ ಸಹಕಾರಿ.
• ಮೀನ (Pisces): ಈ ರಾಶಿಯವರು ಉತ್ತಮ ಕೇಳುಗರು. ವಾಗ್ವಾದ ತಡೆದುಕೊಳ್ಳುವುದಿಲ್ಲ. ದಯಾಮಯವಾದ ಇವರು ಇತರರಿಗೆ ನೋವುಂಟುಮಾಡುವುದಿಲ್ಲ. ಆದರೆ, ಈ ಭರದಲ್ಲಿ ತಾವೇ ಗಂಭೀರವಾಗಿ ನೋವುಣ್ಣುತ್ತಾರೆ. ಈ ಅಭ್ಯಾಸ ಬಿಟ್ಟುಬಿಟ್ಟರೆ ಇವರು ಹ್ಯಾಪಿ.
